PSI Recruitment Scam: ದಿವ್ಯಾ ಹಾಗರಗಿ ನಿರೀಕ್ಷಣಾ ಜಾಮೀನಿಗೆ ಸಿಐಡಿ ತಕರಾರು
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಆರೋಪಿ ದಿವ್ಯಾ ಹಾಗರಗಿ ನಿರೀಕ್ಷಣಾ ಜಾಮೀನು ಕೋರಿದ್ದು, ಅವರ ನಿರೀಕ್ಷಣಾ ಜಾಮೀನು ಅರ್ಜಿಗೆ ಸಿಐಡಿ ತಕರಾರು ಅರ್ಜಿ ಸಲ್ಲಿಸಿದೆ. ಅಲ್ಲದೇ ಕಲಬುರಗಿ ಜಿಲ್ಲಾ ನ್ಯಾಯಾಲಯ ಈ ಬಗೆಗಿನ ವಿಚಾರಣೆಯನ್ನು ಏ.29ಕ್ಕೆ ಮುಂದೂಡಿದೆ.
ವರದಿ: ಶರಣಯ್ಯ ಹಿರೇಮಠ, ಏಷ್ಯಾನೇಟ್ ಸುವರ್ಣ ನ್ಯೂಸ್, ಕಲಬುರಗಿ
ಕಲಬುರಗಿ (ಏ.27): ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ (PSI Recruitment Scam) ಆರೋಪಿ ದಿವ್ಯಾ ಹಾಗರಗಿ (Divya Hagargi) ನಿರೀಕ್ಷಣಾ ಜಾಮೀನು (Bail) ಕೋರಿದ್ದು, ಅವರ ನಿರೀಕ್ಷಣಾ ಜಾಮೀನು ಅರ್ಜಿಗೆ ಸಿಐಡಿ (CID) ತಕರಾರು ಅರ್ಜಿ ಸಲ್ಲಿಸಿದೆ. ಅಲ್ಲದೇ ಕಲಬುರಗಿ (Kalaburagi) ಜಿಲ್ಲಾ ನ್ಯಾಯಾಲಯ ಈ ಬಗೆಗಿನ ವಿಚಾರಣೆಯನ್ನು ಏ.29ಕ್ಕೆ ಮುಂದೂಡಿದೆ. ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ನಡೆಸುತ್ತಿರುವ ತನಿಖೆ ತೀವ್ರಗೊಂಡಿದೆ. ಈಗಾಗಲೇ 16 ಜನ ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಈ ನಡುವೆ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸೇರಿದಂತೆ ಹಲವರು ಕಳೆದ 16 ದಿನಗಳಿಂದ ತಲೆ ಮರೆಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ನಿರೀಕ್ಷಣಾ ಜಾಮೀನು ಕೋರಿ ದಿವ್ಯಾ ಆಂಡ್ ಟೀಂ ನಿರೀಕ್ಷಣಾ ಜಾಮೀನು ಕೋರಿ ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗೆ ಸಿಐಡಿ ಪರ ವಕೀಲರು ಇಂದು ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಪಿಎಸ್ಐ ಪರೀಕ್ಷೆ ಅಕ್ರಮ ದಿವ್ಯಾ ಹಾಗರಗಿ ಸೇರಿ 6 ಮಂದಿಗೆ ಕಠಿಣ ವಾರಂಟ್!
ಪ್ರಮುಖ ಆರೋಪಿ ದಿವ್ಯಾ ಹಾಗರಗಿ, ಜ್ಞಾನ ಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್, ಅದೇ ಶಾಲೆಯ ಶಿಕ್ಷಕಿಯರಾದ ಅರ್ಚನಾ ಹೊನಗೇರಿ, ಸುನಂದಾ ಹಾಗೂ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಮಂಜುನಾಥ್ ಮೇಳಕುಂದಿ ಅವರ ನೀರೀಕ್ಷಣಾ ಜಾಮೀನು ಅರ್ಜಿಗೆ ಸಿಐಡಿ ತಕರಾರು ಅರ್ಜಿ ಸಲ್ಲಿಸಿದೆ. ಇದು ಸಂಘಟಿಕ ಅಪರಾಧ. ಜಾಮೀನು ಕೊಟ್ಟರೆ ಸಾಕ್ಷಿ ನಾಶ ಪಡಿಸುವ ಸಾಧ್ಯತೆ ಇದೆ. ಕಾರಣ ಈ ಐವರಿಗೆ ನಿರೀಕ್ಷಣಾ ಜಾಮೀನು ನೀಡಬೇಡಿ ಎಂದು ಸಿಐಡಿ ಪರ ವಕೀಲರು ಇಂದು ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.
8 ದಿನ ಸಿಐಡಿ ಕಸ್ಟಡಿಗೆ: ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದಲ್ಲಿ ಅಕ್ರಮ ನಡೆಸಿದ ಆರೋಪದ ಮೇಲೆ ಅಭ್ಯರ್ಥಿ ಎನ್.ವಿ ಸುನೀಲ್ ಕುಮಾರ ಎಂಬುವನನ್ನು ಸಿಐಡಿ ಮಂಗಳವಾರ ಬಂಧಿಸಿದ್ದು, ಆತನನ್ನು ಇಂದು 8 ದಿನಗಳ ಕಾಲ ನ್ಯಾಯಾಲಯ ಸಿಐಡಿ ವಶಕ್ಕೆ ನೀಡಿದೆ. ಅಕ್ರಮದಲ್ಲಿ ಭಾಗಿಯಾಗಿದ್ದ 16 ನೇ ಆರೋಪಿ ಎನ್ ವಿ ಸುನೀಲ್ ಎಂಟು ದಿನ ಸಿಐಡಿ ಕಸ್ಟಡಿಗೆ ಒಪ್ಪಿಸಿ ಕಲಬುರಗಿಯ 3 ನೇ ಜೆಎಮ್ಎಫ್ಸಿ ನ್ಯಾಯಾಲಯ ಇಂದು ಆದೇಶ ನೀಡಿದೆ. ಬೆಂಗಳೂರಿಗೆ ತೆರಳಿ ತನ್ನ ದಾಖಲಾತಿಗಳ ಪರಿಶೀಲನೆಗಾಗಿ ಸಿಐಡಿ ಕಛೇರಿಗೆ ತೆರಳಿದ್ದ ಸಂದರ್ಭದಲ್ಲಿ ಸುನೀಲ್ ಸಿಐಡಿ ಬಲೆಗೆ ಬಿದ್ದಿದ್ದ.
ದಿವ್ಯಾ ವಿರುದ್ಧ ಅರೆಸ್ಟ್ ವಾರೆಂಟ್: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಆರೋಪ ಎದುರಿಸುತ್ತಿರುವ ದಿವ್ಯಾ ಹಾಗರಗಿ & ಟೀಂಗೆ ಅರೆಸ್ಟ ವಾರೆಂಟ್ ಜಾರಿ ಮಾಡಲಾಗಿದೆ. ವಾರದೊಳಗೆ ಶರಣಾಗದಿದ್ರೆ ಆಸ್ತಿ ಜಪ್ತಿಯ ಎಚ್ಚರಿಕೆ ನೀಡಲಾಗಿದ್ದು, ಇದು ತಲೆ ಮರೆಸಿಕೊಂಡಿರುವ ದಿವ್ಯಾ ಹಾಗರಗಿಗೆ ತೀವ್ರ ನಡುಕ ಸೃಷ್ಟಿಸುವಂತದ ಆದೇಶವಾಗಿದೆ.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ವಿಚಾರಣೆ ತೀವ್ರಗೊಳಿಸಿರುವ ಸಿಐಡಿ, ನಾಪತ್ತೆಯಾಗಿರುವವರ ಪತ್ತೆಗೆ ಬಿಗಿ ಕ್ರಮಕ್ಕೆ ಮುಂದಾಗಿದೆ. ಈ ಪ್ರಕರಣದ ಪ್ರಮುಖ ಆರೋಪ ಎದುರಿಸುತ್ತಿರುವ ಕಲಬುರಗಿಯ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಮತ್ತು ಶಾಲೆಯ ಕೆಲಸ ನೌಕರರು ಕಳೆದ 16 ದಿನಗಳಿಂದ ನಾಪತ್ತೆಯಾಗಿದ್ದಾರೆ. ಅವರ ಬಂಧನಕ್ಕೆ ಸಿಐಡಿ ಎಲ್ಲಾ ಪ್ರಯತ್ನ ನಡೆಸಿದ್ರೂ ಪತ್ತೆಯಾಗಿಲ್ಲ. ಇವರ ಬಂಧನಕ್ಕಾಗಿಯೇ ಸಿಐಡಿ ಆರು ತಂಡ ರಚಿಸಿ ಹಗಲಿರುಳು ಶೋಧ ನಡೆಸುತ್ತಿದ್ರೂ ದಿವ್ಯಾ ಹಾಗರಗಿ ಆಂಡ್ ಟೀಂ ಸುಳಿವು ಸಿಕ್ಕಿಲ್ಲ.
ಡಿಕೆಶಿ ಜತೆಗೆ ದಿವ್ಯಾ ಹಾಗರಗಿ ಫೋಟೋ ವೈರಲ್: ಸಾಮಾಜಿಕ ಜಾಲತಾಣದಲ್ಲಿ ಬಿಸಿ-ಬಿಸಿ ಚರ್ಚೆ
ಇದರಿಂದಾಗಿ ನಾಪತ್ತೆಯಾದವರ ವಿರುದ್ಧ ಬಿಗಿ ಕ್ರಮಕ್ಕೆ ಮುಂದಾಗಿರುವ ಸಿಐಡಿ, ನ್ಯಾಯಾಲಯದ ಮೂಲಕ ಅರೆಸ್ಟ್ ವಾರೆಂಟ್ ಜಾರಿ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಇವರು ಸಂಘಟಿತ ಅಪರಾಧಿಗಳು, ಇವರಿಗೆ ಜಾಮೀನು ನೀಡಬಾರದು. ಜೊತೆಗೆ ದಿವ್ಯಾ ಸೇರಿ 6 ಆರೋಪಿಗಳ ವಿರುದ್ಧ ಅರೆಸ್ಟ್ ವಾರೆಂಟ್ ಇಸ್ಯೂ ಮಾಡಬೇಕು ಎಂದು ಸಿಐಡಿ ಕಲಬುರಗಿ ಜಿಲ್ಲಾ ಮೂರನೇ ಸಸೆನ್ಸ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತ್ತು. ಸಿಐಡಿ ಮನವಿ ಪುರಸ್ಕರಿಸಿದ ನ್ಯಾಯಾಲಯ, ದಿವ್ಯಾ ಹಾಗರಗಿ ಮತ್ತು ಐವರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ.