ಪಿಎಸ್‌ಐ ಪರೀಕ್ಷೆ ಅಕ್ರಮ ದಿವ್ಯಾ ಹಾಗರಗಿ ಸೇರಿ 6 ಮಂದಿಗೆ ಕಠಿಣ ವಾರಂಟ್‌!

* ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ತಲೆಮರೆಸಿಕೊಂಡಿರುವ ಮುಖ್ಯ ಆರೋಪಿ

* ದಿವ್ಯಾ ಹಾಗರಗಿ ಸೇರಿ 6 ಮಂದಿಗೆ ಕಠಿಣ ವಾರಂಟ್‌

* ವಾರದೊಳಗೆ ಶರಣಾಗುವಂತೆ ತಾಕೀತು

* ಬಂಧನ ಸನ್ನಿಹಿತ ಇಲ್ಲದಿದ್ದರೆ ಆಸ್ತಿ ಜಪ್ತಿ

Karnataka SI exam scam Arrest warrant against ex BJP functionary pod

ಕಲಬುರಗಿ(ಏ.27): ಮಹತ್ವದ ಬೆಳವಣಿಗೆಯೊಂದರಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ತಲೆಮರೆಸಿಕೊಂಡಿರುವ ಮುಖ್ಯ ಆರೋಪಿ, ಅಕ್ರಮ ನಡೆದಿರುವ ಕಲಬುರಗಿ ಪರೀಕ್ಷಾ ಕೇಂದ್ರ ಜ್ಞಾನಜ್ಯೋತಿ ಶಾಲೆಯ ಒಡತಿ ದಿವ್ಯಾ ಹಾಗರಗಿ ಸೇರಿ ಆರು ಜನರ ಬಂಧನಕ್ಕಾಗಿ ಕೋರ್ಚ್‌ ವಾರಂಟ್‌ ಜಾರಿಗೊಳಿಸಿದೆ. ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಜಾರಿಯಾಗುವ ಕಠಿಣ ಮಾದರಿಯ ವಾರಂಟ್‌ ಇದಾಗಿದ್ದು, ಒಂದು ವಾರದೊಳಗೆ ಆರೋಪಿಗಳು ಶರಣಾಗದೇ ಹೋದಲ್ಲಿ ಕಾನೂನಿನನ್ವಯ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವಿದೆ.

ಹಗರಣದ ಮಾಸ್ಟರ್‌ ಮೈಂಡ್‌ ಎಂದೇ ಹೇಳಲಾಗುವ ದಿವ್ಯಾ ಹಾಗರಗಿ, ಮಂಜುನಾಥ್‌ ಮೇಳಕುಂದಿ, ರವೀಂದ್ರ ಮೇಳಕುಂದಿ, ಅರ್ಚನಾ, ಕಾಶಿನಾಥ್‌, ಶಾಂತಿಬಾಯಿಗೆ ಕಲಬುರಗಿಯ 3ನೇ ಜೆಎಂಎಫ್‌ಸಿ ನ್ಯಾಯಾಲಯದಿಂದ ಈ ಬಂಧನ ವಾರಂಟ್‌ ಮಂಗಳವಾರ ಜಾರಿಯಾಗಿದೆ. ಈ ಬೆಳವಣಿಗೆಯೊಂದಿಗೆ 3 ವಾರದಿಂದ ತಲೆ ಮರೆಸಿಕೊಂಡಿರುವ ಅಕ್ರಮದ ಮುಖ್ಯ ಆರೋಪಿ ದಿವ್ಯಾ ಸೇರಿದಂತೆ 6 ಆರೋಪಿಗಳೆಲ್ಲರಿಗೂ ಹೊಸ ಸಂಕಷ್ಟಎದುರಾಗಿದೆ. ನ್ಯಾಯಾಲಯದಿಂದ ಈ ವಾರಂಟ್‌ ಪಡೆದಿರುವ ಸಿಐಡಿ ಇವರು ಎಲ್ಲಿದ್ದರೂ ಯಾವುದೇ ಕ್ಷಣ ಬಂಧಿಸಬಹುದಾಗಿದೆ.

ಸೋಮವಾರವಷ್ಟೇ ದಿವ್ಯಾ ನಿರೀಕ್ಷಣಾ ಜಾಮೀನಿಗೆ ಸಿಐಡಿ ತನ್ನ ಆಕ್ಷೇಪಣಾ ಅರ್ಜಿಯನ್ನು ಕೋರ್ಚ್‌ಗೆ ಸಲ್ಲಿಸಿತ್ತು. ಮಂಗಳವಾರ ವಿಚಾರಣೆ ನಡೆಸಿರುವ ನ್ಯಾಯಾಲಯ ದಿವ್ಯಾ ಹಾಗರಗಿ ಒಳಗೊಡಂತೆ ಈ ಆರು ಆರೋಪಿಗಳಿಗೆ ಬಂಧನ ವಾರಂಟ್‌ ಜಾರಿ ಮಾಡಿದೆ.

ಅಪರೂಪದ ಪ್ರಕರಣ: ಕರ್ನಾಟಕದ ಅಪರಾಧ ಪ್ರಕರಣಗಳಲ್ಲಿ ಇಂತಹ ಬಂಧನ ವಾರಂಟ್‌ ಜಾರಿ ಆಗುವುದು ಬಲು ಅಪರೂಪ ಎನ್ನಲಾಗಿದೆ. ತನಿಖಾ ಹಂತದಲ್ಲಿ ಜಾರಿ ಮಾಡಲಾಗುವ ಇಂತಹ ಬಂಧನ ವಾರೆಂಟ್‌ ಅನ್ವಯ ಆರೋಪಿಗಳು ಎಲ್ಲಿದ್ದರೂ ಬಂದು ಶರಣಾಗಲೇಬೇಕು. ಒಂದು ವಾರದೊಳಗಡೆ ಆರೋಪಿಗಳು ಶರಣಾಗತಿ ಆಗದೆ ಹೋದಲ್ಲಿ ಉದ್ಘೋಷಿತ ಅಪರಾಧಿ ಎಂದು ಇವರನ್ನೆಲ್ಲ ಘೋಷಿಸಿ, ಅವರಿಗೆ ಸೇರಿರುವ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ ಕಾನೂನಿನಡಿಯಲ್ಲಿದೆ. ವಾರಂಟ್‌ ಪಡೆದ ಮರುಕ್ಷಣದಿಂದಲೇ ಆರೋಪಿಗಳ ಬಂಧನಕ್ಕಾಗಿ ಸಿಐಡಿ ಶೋಧಕಾರ್ಯ ತೀವ್ರಗೊಳಿಸಿದೆ.

ಕಿಂಗ್‌ಪಿನ್‌ ರುದ್ರಗೌಡನ ‘ಫಲಾನುಭವಿ’ ಬಂಧನ!

ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಿಐಡಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿದ್ದ ನಗರ ನಿವಾಸಿ ಎನ್‌.ವಿ.ಸುನೀಲ್‌ ಕುಮಾರ್‌ ಬಂಧಿತ. ಈ ಪರೀಕ್ಷೆಯಲ್ಲಿ ಇಲೆಕ್ಟ್ರಾನಿಕ್‌ ಉಪಕರಣ ಬಳಸಿ ಅಕ್ರಮವೆಸಗಿರುವ ಆರೋಪ ಮತ್ತು ಹಗರಣದಲ್ಲಿ ಬಂಧಿತನಾಗಿರುವ ಕಿಂಗ್‌ಪಿನ್‌ ರುದ್ರಗೌಡ ಪಾಟೀಲ್‌ಗೆ 40 ಲಕ್ಷ ರು. ನೀಡಿರುವ ಬಗ್ಗೆ ಶಂಕೆಯಿದೆ.

ಅಕ್ರಮಕ್ಕೆ ಸಂಬಂಧಿಸಿದಂತೆ ಒಎಂಆರ್‌ ಶೀಟ್‌, ಹಾಲ್‌ಟಿಕೆಟ್‌ ಮತ್ತಿತರ ದಾಖಲೆಗಳ ಪರಿಶೀಲನೆಗೆ ಸುನೀಲ್‌ ಕುಮಾರ್‌ಗೆ ಬೆಂಗಳೂರು ಸಿಐಡಿ ಕಚೇರಿಯಿಂದ ಬುಲಾವ್‌ ಬಂದಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಬೆಂಗಳೂರಿನ ಸಿಐಡಿ ಕಚೇರಿಗೂ ತೆರಳಿದ್ದು ದಾಖಲೆ ಪರಿಶೀಲನೆ ವೇಳೆ ಅಕ್ರಮ ನಡೆದ ಬಗ್ಗೆ ಅಧಿಕಾರಿಗಳಿಗೆ ಸಂದೇಹ ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಅಧಿಕಾರಿಗಳು ಸ್ಥಳದಲ್ಲೇ ವಶಕ್ಕೆ ಪಡೆದಿದ್ದರು. ನಂತರ ಸಿಐಡಿ ಅಧಿಕಾರಿಗಳ ತಂಡ ಮಂಗಳವಾರ ಸುನೀಲ್‌ ಕುಮಾರನನ್ನು ಕಲಬುರಗಿಗೆ ಕರೆ ತಂದಿದೆ.

ಇಡೀ ಹಗರಣದಲ್ಲಿ ಅಕ್ರಮ ನಡೆದಿದೆ ಎಂದು ಇದುವರೆಗೂ ಸುದ್ದಿಯಲ್ಲಿರುವ ಕಲಬುರಗಿ ನಗರದ ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರದಲ್ಲಿಯೇ ಸುನೀಲ ಕುಮಾರ್‌ ಪರೀಕ್ಷೆ ಬರೆದಿದ್ದ. ಈ ಪರೀಕ್ಷೆಯಲ್ಲಿ ಇಲೆಕ್ಟ್ರಾನಿಕ್‌ ಉಪಕರಣ ಬಳಸಿ ಪಾಸಾಗಿರುವ ಆರೋಪ ಈತನ ಮೇಲಿದೆ. ಜೊತೆಗೆ ಹಗರಣದಲ್ಲಿ ಈಗಾಗಲೇ ಬಂಧಿತನಾಗಿರುವ ಅಫಜಲ್ಪುರದ ರುದ್ರಗೌಡ ಪಾಟೀಲ್‌ ಮುಖಾಂತರವೇ ಸುನೀಲ್‌ ಕುಮಾರ್‌ ಅಕ್ರಮದ ಫಲಾನುಭವಿಯಾಗಿದ್ದ. ಜೊತೆಗೆ ಈತನನ್ನು ಪಾಸು ಮಾಡಿದ್ದು ನಾನೇ ಎಂದು ರುದ್ರೇಗೌಡ ಪಾಟೀಲ್‌ ವಿಚಾರಣೆ ವೇಳೆ ತಿಳಿಸಿರುವುದಾಗಿ ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಪಿ ಸುನೀಲ್‌ ಕುಮಾರ್‌ ಹಗರಣದಲ್ಲಿ ಈಗಾಗಲೇ ಬಂಧಿತನಾಗಿರುವ ರುದ್ರಗೌಡ ಪಾಟೀಲ್‌ಗೆ .40 ಲಕ್ಷ ರುಪಾಯಿ ಹಣ ನೀಡಿದ್ದಾನೆಂಬ ಶಂಕೆ ಬಲವಾಗಿದೆ. ಈ ಬಗ್ಗೆ ವಿಚಾರಣೆ ನಡೆದಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

 

Latest Videos
Follow Us:
Download App:
  • android
  • ios