PSI Recruitment Scam: ಪೊಲೀಸರ ತಳ್ಳಿ ಪಿಎಸ್‌ಐ ಹಗರಣ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಎಸ್ಕೇಪ್
ಪೊಲೀಸ್ ಇಲಾಖೆಯ 545 ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಪ್ರಮುಖ ಆರೋಪಿ, ಸದ್ಯ ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ಅಫಜಲ್ಪುರದ ಆರ್.ಡಿ.ಪಾಟೀಲ್ ಸಿಐಡಿ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾನೆ.
ಕಲಬುರಗಿ (ಜ.21): ಪೊಲೀಸ್ ಇಲಾಖೆಯ 545 ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಪ್ರಮುಖ ಆರೋಪಿ, ಸದ್ಯ ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ಅಫಜಲ್ಪುರದ ಆರ್.ಡಿ.ಪಾಟೀಲ್ ಸಿಐಡಿ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾನೆ. ನ್ಯಾಯಾಲಯದ ಆದೇಶ ಉಲ್ಲಂಘನೆ ಮತ್ತು ಸಿಐಡಿ ಅಧಿಕಾರಿಗಳ ನೋಟಿಸ್‌ಗೂ ಕ್ಯಾರೆ ಅನ್ನದ ಪಾಟೀಲ್‌ನನ್ನು ಗುರುವಾರ ಸಿಐಡಿ ಅಧಿಕಾರಿಗಳು ಬೇರೊಂದು ಪ್ರಕರಣದಲ್ಲಿ ಕಳೆದ ರಾತ್ರಿ ಬಂಧಿಸಿ ವಿಚಾರಣೆ ನಡೆಸಲು ದಾಳಿ ನಡೆಸಿದ ವೇಳೆ ಆರ್.ಡಿ.ಪಾಟೀಲ ಸಿಐಡಿ ಅಧಿಕಾರಿಗಳನ್ನು ತಳ್ಳಿ ಓಡಿ ಹೋಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ತುಮಕೂರು ಕ್ಯಾತ್ಸಂದ್ರ ಠಾಣೆಯಲ್ಲಿ ದಾಖಲಾಗಿದ್ದ ಪಿಎಸ್ಸೈ ಅಕ್ರಮ ಪ್ರಕರಣದ ದೂರಿನ ಹಿನ್ನೆಲೆಯಲ್ಲಿ ಆರ್‌ಡಿ ಪಾಟೀಲ್ ವಿರುದ್ಧ ಅಲ್ಲಿನ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿತ್ತು. ಇದರನ್ವಯ ಅಲ್ಲಿನ ಪೊಲೀಸ್ ತಂಡ ಪಾಟೀಲ್ ಬಂಧನಕ್ಕೆ ಕಲಬುರಗಿಗೆ ಆಗಮಿಸಿತ್ತು. ಇದೇ ವೇಳೆ ಇಲ್ಲಿನ ಅಕ್ಕಮಹಾದೇವಿ ಕಾಲೋನಿಯಲ್ಲಿರುವ ಆರ್‌ಡಿ ಪಾಟೀಲ್ ಮನೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ನಡೆಸಿ ಹೊರ ಹೋದ ಬೆನ್ನಲ್ಲೆ , ಸಿಐಡಿ ಪೊಲೀಸರು ಆತನ ಬಂಧನಕ್ಕೆಂದು ತೆರಳಿದ್ದಾರೆ. ಆರ್‌ಡಿ ಪಾಟೀಲ್ ತನ್ನ ಬಂಧನ ವಾರಂಟ್ ಜೊತೆಗೆ ಬಂದಿರುವ ತುಮಕೂರು ಸಿಪಿಐ ಆನಂದ ಹಾಗೂ ತಂಡ ಮನೆಗೆ ಬರುತ್ತಲೇ ಅವರನ್ನು ತಳ್ಳಿಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈತನ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
PSI Recruitment Scam: ಕಿಂಗ್‌ಪಿನ್ ದಿವ್ಯಾ ಹಾಗರಗಿ ಸೇರಿ 26 ಮಂದಿಗೆ ಬೇಲ್
ದಿವ್ಯಾ ಹಾಗರಗಿ ಸೇರಿ 5 ಮನೆ ಮೇಲೆ ಇ.ಡಿ.ದಾಳಿ: ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಪ್ರಮುಖ ಐವರು ಆರೋಪಿಗಳ ನಿವಾಸದ ಮೇಲೆ ಇ.ಡಿ. ದಾಳಿ ಮಾಡಿದೆ. ಎರಡು ತಂಡಗಳಲ್ಲಿ, ನೆರೆಯ ತೆಲಂಗಾಣ ರಾಜ್ಯದ ನಾಮಫಲಕ ಹೊಂದಿದ ವಾಹನದಲ್ಲಿ ಬಂದಿಳಿದ ಅಧಿಕಾರಿಗಳು ನಗರದ ವಿವಿಧ ಬಡಾವಣೆಗಳಲ್ಲಿರುವ ಆರೋಪಿಗಳಾದ ಆರ್.ಡಿ.ಪಾಟೀಲ, ಮಹಾಂತೇಶ ಪಾಟೀಲ, ದಿವ್ಯಾ ಹಾಗರಗಿ, ಮಂಜುನಾಥ ಮೇಳಕುಂದಿ ಮತ್ತು ಕಾಶಿನಾಥ ಚಿಲ್ಲಾ ಅವರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಹಣದ ದಾಖಲೆಗಳು, ಇತರೆ ಮಾಹಿತಿ ಕಲೆ ಹಾಕಿ ಪರಿಶೀಲಿಸಿದರು.
ಎಸ್‌ಐ ಹರೀಶ್‌ಗೆ ಜಾಮೀನಿಲ್ಲ: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಅಕ್ರಮ ನೇಮಕಾತಿ ಪ್ರಕರಣದ ಆರೋಪಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಕೆ. ಹರೀಶ್‌ಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಜಾಮೀನು ಕೋರಿ ನ್ಯಾಯಾಂಗ ಬಂಧನದಲ್ಲಿರುವ ಪ್ರಕರಣದ 34ನೇ ಆರೋಪಿ ಕೆ. ಹರೀಶ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ನ್ಯಾಯಮೂರ್ತಿ ಎಂ.ಜಿ. ಉಮಾ ಅವರ ನ್ಯಾಯಪೀಠ ಆದೇಶಿಸಿದೆ. ವಿಚಾರಣೆ ವೇಳೆ ಸಿಐಡಿ ಪರ ವಿಶೇಷ ಅಭಿಯೋಜಕ ಪಿ. ಪ್ರಸನ್ನಕುಮಾರ್, ಪಿಎಸ್‌ಐ ನೇಮಕಾತಿ ಅಕ್ರಮ ಮಧ್ಯಪ್ರದೇಶದ ವ್ಯಾಪಂ ಮಾದರಿಯ ಹಗರಣವಾಗಿದೆ. ಸರ್ಕಾರಿ ಅಧಿಕಾರಿಗಳು, ಹಿರಿಯ ಐಪಿಎಸ್ ಅಧಿಕಾರಿಗಳು ಸೇರಿದಂತೆ ಅತ್ಯಂತ ಪ್ರಭಾವಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಸ್ಟ್ರಾಂಗ್ ರೂಂನಲ್ಲಿದ್ದ ಸೇಫ್ಟಿಲಾಕರ್ ತೆರೆದು, ಉತ್ತರ ಪತ್ರಿಕೆಗಳನ್ನು ತಿದ್ದಿದ್ದಾರೆ. ಈ ಪರಿಸ್ಥಿತಿಯಲ್ಲಿ ಅರ್ಜಿದಾರ ಆರೋಪಿಗೆ ಜಾಮೀನು ದೊರೆತರೆ ತನಿಖೆಯಲ್ಲೂ ಹಸ್ತಕ್ಷೇಪ ಮಾಡಬಹುದು ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಪಿಎಸ್‌ಐ ಹಗರಣ ಆರೋಪಿಗಳಿಗೆ ಬೇಲ್: ಪ್ರಿಯಾಂಕ್ ಖರ್ಗೆ ಕಿಡಿ
ಸಿಐಡಿ ವಾದವನ್ನು ಪುರಸ್ಕರಿಸಿದ ಹೈಕೋರ್ಟ್ ಅರ್ಜಿದಾರನಿಗೆ ಜಾಮೀನು ನಿರಾಕರಿಸಿದೆ. ಅರ್ಜಿದಾರ ಹರೀಶ್ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿದ್ದರು. ಪರೀಕ್ಷೆಯಲ್ಲಿ ಸಹಾಯ ಮಾಡುವುದಾಗಿ ಭರವಸೆ ನೀಡಿ ಪ್ರಕರಣದ 14ನೇ ಆರೋಪಿ ಆರ್. ಮಧು ಹಾಗೂ 16ನೇ ಆರೋಪಿ ದಿಲೀಪ್ ಕುಮಾರ್ (ಅಭ್ಯರ್ಥಿಗಳು) ಅವರಿಂದ ತಲಾ 30 ಲಕ್ಷ ರು. ಸ್ವೀಕರಿಸಿದ್ದರು. 29ನೇ ಆರೋಪಿಯಾದ ನೇಮಕಾತಿ ವಿಭಾಗದ ಪ್ರಥಮ ದರ್ಜೆ ಸಹಾಯಕ ಡಿ. ಹರ್ಷನಿಗೆ ಅಭ್ಯರ್ಥಿಗಳ ಕಾರ್ಬನ್ ಒಎಂಆರ್ ಹಾಗೂ ಹಣ ಶೀಟ್ ತಲುಪಿಸಿದ್ದರು. 14 ಹಾಗೂ 16ನೇ ಆರೋಪಿಗಳ ಒಎಂಆರ್ ಶೀಟ್ ತಿದ್ದಿರುವುದು ಎಫ್‌ಎಸ್‌ಎಲ್ ವರದಿಯಲ್ಲಿ ಸಾಬೀತಾಗಿದೆ ಎಂದು ಸಿಐಡಿಯ ದೋಷಾರೋಪಪಟ್ಟಿಯಲ್ಲಿ ಉಲ್ಲೇಖವಾಗಿದೆ.