ಪಿಎಸ್‌ಐ ಹಗರಣ ಆರೋಪಿಗಳಿಗೆ ಬೇಲ್: ಪ್ರಿಯಾಂಕ್ ಖರ್ಗೆ ಕಿಡಿ
ಪೊಲೀಸ್ ಇಲಾಖೆಯ ಪಿಎಸ್‌ಐ ಪರೀಕ್ಷೆಯಲ್ಲೇ ಭಾರಿ ಅಕ್ರಮ ಎಸಗಿರುವ ಕುಳಗಳಿಗೆಲ್ಲ ಜಾಮೀನು ಸಿಗುತ್ತದೆ, ಜಾಮೀನು ಪಡೆದಿರೋ ಕಿಂಗ್‌ಪಿಎನ್ ಆರ್‌ಡಿ ಪಾಟೀಲ್ ತಲೆ ಮರೆಸಿಕೊಂಡಿದ್ದಾನೆ.
ಕಲಬುರಗಿ (ಜ.07): ಪೊಲೀಸ್ ಇಲಾಖೆಯ ಪಿಎಸ್‌ಐ ಪರೀಕ್ಷೆಯಲ್ಲೇ ಭಾರಿ ಅಕ್ರಮ ಎಸಗಿರುವ ಕುಳಗಳಿಗೆಲ್ಲ ಜಾಮೀನು ಸಿಗುತ್ತದೆ, ಜಾಮೀನು ಪಡೆದಿರೋ ಕಿಂಗ್‌ಪಿಎನ್ ಆರ್‌ಡಿ ಪಾಟೀಲ್ ತಲೆ ಮರೆಸಿಕೊಂಡಿದ್ದಾನೆ. ಸರ್ಕಾರ ಅದೆಂತಹ ವಕೀಲರನ್ನು ನೇಮಿಸಿದೆಯೋ? ಸಾವಿರಾರು ಅಭ್ಯರ್ಥಿಗಳ ಭವಿಷ್ಯದ ಮೇಲೆ ಕಲ್ಲು ಹಾಕಿದವರಿಗೆ ಬೇಲ್ ಸಿಗುತ್ತಿದೆ ಎಂದರೆ ಹೇಗೆ? ಎಂದು ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರಶ್ನಿಸಿಸುವ ಮೂಲಕ ಪಿಎಸ್‌ಐ ಹಗರಣದ ಪ್ರಮುಖರಿಗೆ ಬೇಲ್ ಸಿಕ್ಕಿರುವುದರ ಬಗ್ಗೆ ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಯೊಬ್ಬ ಆತಂಕದಲ್ಲಿ ಗೃಹ ಸಚಿವರನ್ನು ಭೇಟಿ ಮಾಡಿ ನಮ್ಮ ಭವಿಷ್ಯದ ಜೊತೆ ಆಟ ಆಡಿದವರೆಲ್ಲರಿಗೂ ಬೇಲ್ ಸಿಕ್ತು ಎಂದಾಗ ಗೃಹ ಸಚಿವರು ಅದೇನೋ ಟೆಕ್ನಿಕಲ್ ಸಂಗತಿಯಿಂದಾಗಿ ಬೇಲ್ ಸಿಕ್ಕೆದೆಯಂತೆ ನಾನೂ ನೋಡುತ್ತಿರುವೆ ಎಂದು ಅಸಹಾಯಕರಂತೆ ಹೇಳಿದ್ದಾರೆ. ಅದೆಂತಹ ವಕೀಲರನ್ನು ಪಿಎಸ್‌ಐ ಹಗರಣಲ್ಲಿ ಸರ್ಕಾರದ ಪರ ವಾದ ಮಂಡಿಸಲು ನೇಮಕ ಮಾಡಲಾಯ್ತೋ ಎಂದು ಖರ್ಗೆ ಅಚ್ಚರಿ ಹೊರಹಾಕಿದರು. ತಾವು ಈಗಾಗಲೇ ಪಿಎಸ್‌ಐ ಸೇರಿದಂತೆ ರಾಜ್ಯದಲ್ಲಿನ ಹತ್ತು ಹಲವು ನೇಮಕಾತಿಗಳಲ್ಲಿ ಹುದ್ದೆ ಮಾರಾಟವಾಗಿರುವ ವಿಚಾರದಲ್ಲಿ ಖಾಸಗಿಯಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹಾಕಿದ್ದು ಅದರ ಬಗ್ಗೆ ತುಂಬಾ ಗಂಭೀರವಾಗಿರೋದಾಗಿ ಹೇಳಿದ ಖರ್ಗೆ ಯುವಕರ ಭವಿಷ್ಯ ಮುಗಿಸುವ ಇಂತಹ ಸಮಾಜ ಘಾತುಕರ ವಿರುದ್ಧ ತಾವು ಹೋರಾಡೋದಾಗಿ ಹೇಳಿದರು.
ಬಿಜೆಪಿಯರಿಂದ ವಿಧಾನಸೌಧ ವರ್ಲ್ಡ್ ಬಿಗ್ಗೆಸ್ಟ್ ಶಾಪಿಂಗ್ ಮಾಲ್ ಆಗಿದೆ: ಪ್ರಿಯಾಂಕ್ ಖರ್ಗೆ
ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆಂದು ಬಂದಿರುವ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಈ ರಾಜ್ಯದಲ್ಲಿ ತಿರುಗುತ್ತಿದ್ದಾರೆ ಈ ಬಗ್ಗೆಯೂ ಗಮನ ಹರಿಸಲಿ ಎಂದರು. ಬಿಜೆಪಿಯವರು ಭ್ರಷ್ಟಾಚಾರ ಮಾಡುವುದಿಲ್ಲ ನಾ ಖಾವೂಂಗಾ ನಾ ಖಾನೇದೂಂಗಾ ಎನ್ನುವ ಮೋದಿ ಮಾತಿನಂತೆ ನಡೆಯುತ್ತೇವೆ ಎನ್ನುವವರು ಈ ಪ್ರಕರಣವನ್ನು ಸಿಬಿಐಗೆ ಕೊಡಲಿ. ತನಿಖೆಯಿಂದ ಸತ್ಯ ಹೊರಬರಲಿದೆ ಎಂದರು. ಕೆಡಿಪಿ ಪದೇ ಪದೇ ಮಂದೂಡಿದ್ದಕ್ಕೆ ಆಕ್ಷೇಪ: ಪದೇ ಪದೇ ಕೆಡಿಪಿ ಮುಂದೂಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಖರ್ಗೆ ಅವರು ಜಿಲ್ಲಾಡಳಿತಕ್ಕೆ ಕೆಡಿಪಿ ಹೇಗೆ ನಡೆಸಬೇಕು ಎನ್ನುವುದು ತಿಳಿದಿದೆಯೋ ಹೇಗೆ ಗೊತ್ತಿಲ್ಲ. ಆರು ದಿನಗಳ ಹಿಂದೆ ಕೆಡಿಪಿ ನಡೆಸುವುದಾಗಿ ಹೇಳಿ ನೋಟಿಸು ಕೊಟ್ಟು ಇಂದು ನಿಗದಿ ಮಾಡಲಾಗಿತ್ತು. ಆದರೆ ಈಗ ಏಕಾಏಕಿ ನಾಳೆಗೆ ಮುಂದೂಡಲಾಗಿದೆ.
ಇದನ್ನು ಗಮನಸಿದರೆ ಕಾಟಾಚಾರದ ಸಭೆ ಕರೆಯುತ್ತಿದ್ದಾರೆ ಎನಿಸುತ್ತದೆ. ಈ ಕೆಡಿಪಿಗೆ ನಾವು ಹೋಗಬೇಕಾ ಅಥವಾ ಬೇಡವಾ ಗೊತ್ತಾಗುತ್ತಿಲ್ಲ. ಕೇವಲ ಬಿಜೆಪಿಗರಿಗೆ ಅಥವಾ ಸಚಿವರಿಗೆ ಮಾತ್ರ ಕೆಲಸವಿದೆ ನಮಗೆ ಇಲ್ಲವಾ? ಎಂದು ಪ್ರಿಯಾಂಕ್ ಹೇಳಿದರು. ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಾಡಿ ಎಂದರೆ ವಿದೇಶಿ ಪ್ರವಾಸಕ್ಕೆ ಹೋಗಲು ರೆಡಿಯಾಗಿದ್ದಾರೆ. ಅದರಂತೆ ಟ್ರಾವೆಲಿಂಗ್ ಏಜೆನ್ಸಿಯರಿಗೆ ಈಗಾಗಲೇ ಕೆಕೆಆರ್ಡಿಬಿ ಯಿಂದ ಒಂದು ಕೋಟಿ ಹಣ ಜಮಾ ಆಗಿದೆ. ತೊಗರಿ ನೆಟೆರೋಗದ ಬಗ್ಗೆ ಚರ್ಚೆ ಮಾಡಲು ಸರ್ಕಾರಕ್ಕೆ ಆಸಕ್ತಿ ಇಲ್ಲ. ಏನಾದರೂ ಮಾಡಿಕೊಳ್ಳಲಿ ಮುಂದಿನ ನಾಲ್ಕು ತಿಂಗಳಲ್ಲಿ ಚುನಾವಣೆ ನಡೆಯಲಿದೆ ನಾವು ಜನರ ಮುಂದೆ ವಿವರ ಹೇಳಲಿದ್ದೇವೆ.
ಕಲಬುರಗಿ ಬಂದ್‌ಗೆ ಕಾಂಗ್ರೆಸ್ ಬೆಂಬಲ: ನಾನು ಸಿಎಂ ಅವರಿಗೆ ಭೇಟಿಯಾಗಿ ನೆಟೆರೋಗದ ಪರಿಹಾರ ಬಿಡುಗಡೆ ಮಾಡುವಂತೆ ವಿನಂತಿ ಮಾಡಿದ್ದೇನೆ. ಆರ್ಥಿಕ ಇಲಾಖೆ ಜತೆ ಚರ್ಚೆ ನಡೆಸಿ ಪರಿಹಾರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಒಂದು ವೇಳೆ ಬಿಡುಗಡೆ ಮಾಡದಿದ್ದರೆ ನಾವು ಹೋರಾಟ ಮಾಡುತ್ತೇವೆ. ಜ.17ರ ಕಲಬುರಗಿ ಬಂದ್ ಗೆ ನಮ್ಮ ಬೆಂಬಲವಿದೆ. ರೈತರ ಪರ ಹೋರಾಟ ಮಾಡುವ ಯಾರೇ ಆಗಲಿ ಅವರ ಪರ ನಾವಿರುತ್ತೇವೆ ಎಂದು ಘೋಷಿಸಿದರು. ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪನವರಿಗೆ ಒಂದೇ ಒಂದು ಬಾರಿ ವಿಚಾರಣೆಗೆ ಕರೆಯದೆ ಕ್ಲೀನ್ ಚೀಟ್ ಕೊಟ್ಟಿದ್ದಾರೆ.
ಬಾದಾಮಿ, ವರುಣಾ, ಕೋಲಾರದಿಂದ ಸ್ಪರ್ಧೆಗೆ ಅರ್ಜಿ ಹಾಕಿದ್ದೇನೆ: ಸಿದ್ದರಾಮಯ್ಯ
ಈಗ ಅರವಿಂದ ಲಿಂಬಾವಳಿ ಕೇಸಲ್ಲಿ ಕೂಡಾ ಅದೇ ಆಗುತ್ತದೆ. ನಾವು ಈಗಾಗಲೇ ಅವರ ಕುಟುಂಬ ವರ್ಗದವರನ್ನು ಭೇಟಿ ಮಾಡಿ ಏನು ಹೇಳಬೇಕೋ ಅದನ್ನೇ ಹೇಳಿದ್ದೇವೆ. ಮಣಿಕಂಠ ರಾಠೋಡ್ ಮಾಡುತ್ತಿರುವ ಆಪಾದನೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ನನ್ನ ಮೇಲೆ ಆರೋಪ ಮಾಡುತ್ತಿದ್ದರೆ ಅದನ್ನು ಸಾಬೀತು ಮಾಡುವ ಜವಾಬ್ದಾರಿಯೂ ಕೂಡ ಅವರಿಗೆ ಸೇರಿದೆ. ಖರ್ಗೆ ಕುಟುಂಬದ್ದು 50 ವರ್ಷಗಳ ರಾಕೀಯ ಇತಿಹಾಸವಿದೆ, ಆರೋಪ ಮಾಡೋರದ್ದು 5 ತಿಂಗಳ ಇತಿಹಾಸವಿದೆ ಎಂದು ಕುಟುಕಿದರು.