ವಿದ್ಯುತ್‌ ದರ ಹೆಚ್ಚಳ ಖಂಡಿಸಿ ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಘಟನೆ ಗುರುವಾರ ಕರೆ ನೀಡಿದ್ದ ರಾಜ್ಯ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಧಾರವಾಡ, ಬಳ್ಳಾರಿ ಸೇರಿ ಉತ್ತರ ಮತ್ತು ಮಧ್ಯ ಕರ್ನಾಟಕದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಾಣಿಜ್ಯೋದ್ಯಮ ಚಟುವಟಿಕೆಗಳು ಬಂದ್‌ ಆಗಿದ್ದವು. 

ಕಲಬುರಗಿ (ಜೂ.23): ವಿದ್ಯುತ್‌ ದರ ಹೆಚ್ಚಳ ಖಂಡಿಸಿ ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಘಟನೆ ಗುರುವಾರ ಕರೆ ನೀಡಿದ್ದ ರಾಜ್ಯ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಧಾರವಾಡ, ಬಳ್ಳಾರಿ ಸೇರಿ ಉತ್ತರ ಮತ್ತು ಮಧ್ಯ ಕರ್ನಾಟಕದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಾಣಿಜ್ಯೋದ್ಯಮ ಚಟುವಟಿಕೆಗಳು ಬಂದ್‌ ಆಗಿದ್ದವು. ಕೈಗಾರಿಕೋದ್ಯಮಿಗಳು, ವರ್ತಕರು ತಮ್ಮ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿ ಬಂದ್‌ನಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ, ನಗರ ಪ್ರದೇಶಗಳ ಮುಖ್ಯ ಬೀದಿಗಳಲ್ಲಿನ ಉದ್ದಿಮೆ, ವಹಿವಾಟು ಸಂಪೂರ್ಣ ಬಂದ್‌ ಆಗಿತ್ತು.

ಬಂದ್‌ ಹಿನ್ನೆಲೆಯಲ್ಲಿ ಪ್ರಮುಖ ನಗರಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ವಾಣಿಜ್ಯೋದ್ಯಮಿಗಳು, ಆಯಾ ಜಿಲ್ಲಾಧಿಕಾರಿ, ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಿ, ವಿದ್ಯುತ್‌ ದರ ಇಳಿಕೆಗೆ ಆಗ್ರಹಿಸಿದರು. ಶಾಲಾ-ಕಾಲೇಜು, ಸಾರಿಗೆ ಸಂಪರ್ಕ ಸೇರಿದಂತೆ ನಿತ್ಯ ಅವಶ್ಯಕ ಸೇವೆಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿತ್ತು. ಇದರಿಂದಾಗಿ ಜನಸಾಮಾನ್ಯರಿಗೆ ಯಾವುದೇ ತೊಂದರೆ ಉಂಟಾಗಲಿಲ್ಲ. ಆದರೆ, ವರ್ತಕರು ನಷ್ಟಅನುಭವಿಸಿದರು. ಬಂದ್‌ ಎಲ್ಲೆಡೆ ಶಾಂತಿಯುತವಾಗಿತ್ತು.

ಅಕ್ಕಿಭಾಗ್ಯ ಕಾಂಗ್ರೆಸ್‌ ಸ್ವಯಂಕೃತ ಅಪರಾಧ, ಕೇಂದ್ರದ ಮೇಲೆ ಗೂಬೆ ಕೂರಿಸಲೆತ್ನ: ಎಚ್‌ಡಿಕೆ

ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆ, ಕಲ್ಯಾಣ ಕರ್ನಾಟಕ ವಾಣಿಜ್ಯ ಉದ್ಯಮ ಸೇರಿದಂತೆ ಉತ್ತರ ಕರ್ನಾಟಕ ಭಾಗದ 22ಕ್ಕೂ ಹೆಚ್ಚು ವಾಣಿಜ್ಯೋದ್ಯಮ ಸಂಸ್ಥೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದವು. ಜೊತೆಗೆ, ಪ್ರತಿಪಕ್ಷ ಬಿಜೆಪಿ ಹಾಗೂ ಸಿಪಿಎಂಗಳು ಸಹ ಬಂದ್‌ಗೆ ಬೆಂಬಲ ನೀಡಿದ್ದವು. ಆದರೆ, ಎಫ್‌ಕೆಸಿಸಿಐ ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದ ವಿವಿಧ ವಾಣಿಜ್ಯ ಸಂಘಟನೆಗಳು ಬಂದ್‌ನಲ್ಲಿ ಭಾಗವಹಿಸಿರಲಿಲ್ಲ. ಅಲ್ಲದೆ, ಎಫ್‌ಕೆಸಿಸಿಐ ತನ್ನ ಜಿಲ್ಲಾ ಘಟಕಗಳಿಗೂ ಬಂದ್‌ನಲ್ಲಿ ಭಾಗವಹಿಸದಂತೆ ಮನವಿ ಮಾಡಿತ್ತು. ಹೀಗಾಗಿ, ದಕ್ಷಿಣ ಕರ್ನಾಟಕ ಭಾಗದಲ್ಲಿ ಬಂದ್‌ ಇರಲಿಲ್ಲ.

ಉತ್ಪಾದನಾ ಘಟಕ ಬಂದ್‌: ಗದಗ, ವಿಜಯಪುರ, ಬೆಳಗಾವಿ, ಬಳ್ಳಾರಿ, ಧಾರವಾಡ, ಮಂಡ್ಯ, ಕೊಪ್ಪಳ, ಕಲಬುರಗಿ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹುಬ್ಬಳ್ಳಿ, ಮಂಡ್ಯದಲ್ಲಿ ಎಪಿಎಂಸಿಯಲ್ಲಿ ಹಲವು ಅಂಗಡಿಗಳು ಬಂದ್‌ ಆಗಿದ್ದವು. ಬಂದ್‌ ಬೆಂಬಲಿಸಿ ಕೆಲ ಅಂಗಡಿಗಳ ಬಾಗಿಲುಗಳ ಮೇಲೆ ‘ವಿದ್ಯುತ್‌ ಶಕ್ತಿ ಶಾಕ್‌’ ಎಂದು ಘೋಷಣಾ ಫಲಕ ಹಾಕಲಾಗಿತ್ತು. ಬೆಳಗಾವಿಯಲ್ಲಿ ಉದ್ಯಮಬಾಗ, ಮಚ್ಛೆ ಕೈಗಾರಿಕಾ ಪ್ರದೇಶಗಳ ಉತ್ಪಾದನಾ ಘಟಕಗಳ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಬಳ್ಳಾರಿಯಲ್ಲಿ ಜೀನ್ಸ್‌, ಕಾಟನ್‌ ಮಿಲ್‌ಗಳು, ಸಿನಿಮಾ ಮಂದಿರಗಳು ಮುಚ್ಚಿದ್ದವು.

ಗದಗ, ಧಾರವಾಡ, ಕಲಬುರಗಿ ಜಿಲ್ಲೆಗಳ ಕೈಗಾರಿಕಾ ಪ್ರದೇಶಗಳಲ್ಲಿ ಉತ್ಪಾದನಾ ಘಟಕಗಳ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ರೆಸ್ಟೋರೆಂಟ್‌ಗಳು, ದಿನಸಿ ಅಂಗಡಿ, ಟ್ರೇಡರ್ಸ್‌, ಜ್ಯುವೆಲ​ರ್‍ಸ್, ಬ್ಯಾಂಕ​ರ್‍ಸ್, ಬಟ್ಟೆಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳ ಬಾಗಿಲು ಮುಚ್ಚಿದ್ದರು. ಕೆಲ ಮಾರುಕಟ್ಟೆಪ್ರದೇಶಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಗದಗದಲ್ಲಿ ಬೈಕ್‌ ರಾರ‍ಯಲಿ ನಡೆಸಿದ ಪ್ರತಿಭಟನಾಕಾರರು, ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಹುಬ್ಬಳ್ಳಿಯಲ್ಲಿ ಕೆಸಿಸಿ ಬ್ಯಾಂಕ್‌ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರಿನಲ್ಲಿಯೂ ಪ್ರತಿಭಟನಾ ರಾರ‍ಯಲಿ ನಡೆಸಿದ ವಾಣಿಜ್ಯೋದ್ಯಮಿಗಳು, ಕೆಇಆರ್‌ಸಿಯ ಅಣುಕು ಶವಯಾತ್ರೆ ನಡೆಸಿದರು.

ಈ ಜಿಲ್ಲೆಗಳಲ್ಲಿ ಬಂದ್‌: ಹಾವೇರಿ, ವಿಜಯನಗರ, ಬಳ್ಳಾರಿ, ಬೀದರ್‌, ಬೆಳಗಾವಿ, ಕಲಬುರಗಿ, ಉತ್ತರ ಕನ್ನಡ, ಕೊಪ್ಪಳ, ವಿಜಯಪುರ, ಮಂಡ್ಯ, ಧಾರವಾಡ, ಗದಗ.

ಬಂದ್‌ ಬೆಂಬಲಿಸಿ ಪ್ರತಿಭಟನೆ: ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು.

ವಿದ್ಯುತ್‌ ಬಿಲ್‌ ದರ ಹೆಚ್ಚಳ: ಡಿಕೆಶಿ ಸ್ವ ಕ್ಷೇತ್ರ​ದಲ್ಲಿ ಬೆಸ್ಕಾಂ ಕಚೇ​ರಿಗೆ ಮುತ್ತಿಗೆ

ಉದ್ಯಮಿಗಳ ಜತೆ ಇಂದು ಸಿಎಂ ಸಭೆ: ವಿದ್ಯುತ್‌ ದರ ಹೆಚ್ಚಳ ಹಾಗೂ ಪೂರೈಕೆ ಸಮಸ್ಯೆ ನಿವಾರಿಸುವಂತೆ ಕೋರಲು ಶುಕ್ರವಾರ ಎಫ್‌ಕೆಸಿಸಿಐ ಹಾಗೂ ಕಾಸಿಯಾ ಪ್ರತಿನಿಧಿಗಳ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದೆ. ಮುಖ್ಯಮಂತ್ರಿ ಕಚೇರಿಯು ಬಜೆಟ್‌ ಬಗ್ಗೆ ಚರ್ಚೆಗೆ ಆಹ್ವಾನ ನೀಡಿದ್ದು, ಈ ಸಂದರ್ಭದಲ್ಲೇ ದರ ಹೆಚ್ಚಳ ಬಗ್ಗೆ ನಿಯೋಗ ಚರ್ಚಿಸಲಿದೆ ಎಂದು ಮೂಲಗಳು ತಿಳಿಸಿವೆ.