ವಿದ್ಯುತ್ ಬಿಲ್ ದರ ಹೆಚ್ಚಳ: ಡಿಕೆಶಿ ಸ್ವ ಕ್ಷೇತ್ರದಲ್ಲಿ ಬೆಸ್ಕಾಂ ಕಚೇರಿಗೆ ಮುತ್ತಿಗೆ
ವಿದ್ಯುತ್ ಬಿಲ್ ದರ ಹೆಚ್ಚಳ ವಿರೋಧಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ವ ಕ್ಷೇತ್ರ ಕನಕಪುರದಲ್ಲಿ ರೈತ ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕನಕಪುರ (ಜೂ.22): ನಗರದ ಅಯ್ಯಪ್ಪಸ್ವಾಮಿ ದೇವಾಲಯದ ಮುಂದೆ ಸೇರಿದ ನೂರಾರು ಕಾರ್ಯಕರ್ತರು ಎಂ.ಜಿ.ರಸ್ತೆಯ ಮೂಲಕ ಚನ್ನಬಸಪ್ಪ ಹಾಗೂ ಕೆ.ಎನ್.ಎಸ್ ವೃತ್ತದ ಮೂಲಕ ಕೋಡಿಹಳ್ಳಿ ರಸ್ತೆಯಲ್ಲಿ ತೆರಳಿ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಒಳ ನುಗ್ಗಲು ಯತ್ನಿಸಿದರು. ಬಂದೋಬಸ್ತಿನಲ್ಲಿದ್ದ ಪೊಲೀಸರು ಪ್ರತಿಭಟನಾಕಾರರು ಕಚೇರಿಯೊಳಗೆ ನುಗ್ಗದಂತೆ ತಡೆದು ನಿಲ್ಲಿಸಿದರು.
ಇದರಿಂದ ಆಕ್ರೋಶಗೊಂಡ ಹೋರಾಟಗಾರರು ವಿದ್ಯುತ್ ಬಿಲ್ ದರ ಹೆಚ್ಚಳವನ್ನು ಕೂಡಲೇ ಕೈಬಿಡಬೇಕೆಂದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಧರಣಿ ಕುಳಿತರು. ಗ್ಯಾರೆಂಟಿ ಮತ್ತು ವಾರೆಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ಒಂದು ತಿಂಗಳ ಅವಧಿಯಲ್ಲಿಯೇ ಅವೈಜ್ಞಾನಿಕ ವಿದ್ಯುತ್ ಬಿಲ್ ದರವನ್ನು ಮನಸ್ಸೋ ಇಚ್ಚೆ ಏರಿಕೆ ಮಾಡಿ ರೈತರಿಗೆ ಬರೆ ಎಳೆಯುವ ಕೆಲಸ ಮಾಡಿದೆ. ತಾವು ನುಡಿದಂತೆ ನಡೆಯದೆ ರಾಜ್ಯ ಸರ್ಕಾರ ರೈತರು ಮತ್ತು ಜನರಿಗೆ ಅನ್ಯಾಯ ಎಸಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಘೋಷಣೆ ಮಾಡಿದ ಯೋಜನೆ ಜಾರಿಗೆ ಸರ್ಕಾರ ನಿರಂತರ ಪ್ರಯತ್ನ: ಸಚಿವ ಶಿವಾನಂದ ಪಾಟೀಲ್
ಚುನಾವಣೆಗೂ ಮುನ್ನ ಹೇಳುವುದೊಂದು ಮಾಡುವುದು ಮತ್ತೊಂದು ಎನ್ನುವ ರೀತಿ ಜನರನ್ನು ದಿಕ್ಕುತಪ್ಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಜನರ ಕಿವಿಗೆ ಹೂವು ಮುಡಿಸುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರ ಹಿಡಿದು ತಿಂಗಳೊಳಗಾಗಿ ವಿದ್ಯುತ್ ದರ ಏರಿಸಿರುವುದರಿಂದ ಇದನ್ನು ಕಂಡ ಗ್ರಾಹಕರು ಬೆಚ್ಚಿಬಿದ್ದು ಹೃದಯ ಆಘಾತಕ್ಕೂ ಒಳಗಾಗುವಂತೆ ಮಾಡಿದ್ದಾರೆ. ಈ ಜನರ ಶಾಪ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ತಟ್ಟದೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಬಜೆಟ್‌ನಲ್ಲಿ ಹೆಚ್ಚಿನ ಬದಲಾವಣೆ ಮಾಡದೇ ಹೊಸ ರೂಪ: ಡಿ.ಕೆ.ಶಿವಕುಮಾರ್
ನಿಜವಾಗಿಯೂ ರಾಜ್ಯ ಸರ್ಕಾರಕ್ಕೆ ಜನರ ಮೇಲೆ ಕಾಳಜಿ ಇದ್ದರೆ, ಜನ ದಂಗೆ ಏಳುವ ಮುಂಚೆ ಕೂಡಲೇ ವಿದ್ಯುತ್ ದರವನ್ನು ಕಡಿಮೆ ಮಾಡಬೇಕು ಇಲ್ಲವಾದಲ್ಲಿ ಬೆಸ್ಕಾಂ ಕಚೇರಿಯ ಮುಂದೆ ಸಾಮೂಹಿಕ ನಿರಂತರ ಧರಣಿ ಮಾಡುವ ಮೂಲಕ ಇಲ್ಲೇ ವಾಸ್ತವ್ಯ ಹೂಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಜಯ ಕರ್ನಾಟಕ ಸಂಘಟನೆ ಮುಖಂಡ ಕುಮಾರಸ್ವಾಮಿ, ರೈತ ಸಂಘ ಮುಖಂಡ ಸಂಪತ್, ದೇವರಾಜು, ಕೆಆರ್‌ಎಸ್ ಪಕ್ಷದ ಪ್ರಶಾಂತ್, ಮಲ್ಲಿಕಾರ್ಜುನ್, ಎ.ಪಿ.ಕೃಷ್ಣಪ್ಪ, ಭಾಸ್ಕರ್, ಉಯ್ಯಂಬಳ್ಳಿ ಸತೀಶ್, ದುಂಡಯ್ಯ, ಬಿ.ಎಂ.ಪ್ರಕಾಶ್, ಶಿವರಾಜು, ಶ್ರೀನಿವಾಸ್, ಹೊನ್ನೇಗೌಡ, ಕನ್ನಡ ಪರ ಸಂಘಟನೆಯ ವೀರೇಶ್, ಜಯಸಿಂಹ, ಶ್ರೀನಿವಾಸ್, ಬಿಎಸ್ಪಿ ಮಾಜಿ ಕಾರ್ಯದರ್ಶಿ ಮಲ್ಲಿಕಾರ್ಜುನ್, ಕೆ.ಆರ್.ಸುರೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.