Asianet Suvarna News Asianet Suvarna News

ರಾತ್ರಿ ವೇಳೆ ಧ್ವನಿವರ್ಧಕ ಬಳಕೆ ನಿಷೇಧ: ಮಾರ್ಗಸೂಚಿ ಉಲ್ಲಂಘಿಸಿದ್ರೆ ಕಠಿಣ ಕ್ರಮ: ಸಚಿವ ಆರಗ

*  ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಬಳಸುವಂತಿಲ್ಲ, ಇತರೆ ಸಮಯದಲ್ಲಿ ಬಳಕೆಗೆ ಅನುಮತಿ ಕಡ್ಡಾಯ
*  ಮಾರ್ಗಸೂಚಿ ಉಲ್ಲಂಘಿಸಿದರೆ ಮಸೀದಿ, ಚರ್ಚೆ, ದೇಗುಲವೆಂಬ ತಾರತಮ್ಯವಿಲ್ಲದೆ ಧ್ವನಿವರ್ಧಕ ತೆರವು
*  ಅಗತ್ಯಬಿದ್ದರೆ ಈಶ್ವರಪ್ಪಗೂ ನೋಟಿಸ್‌
 

Prohibition of Loudspeaker Use At Night in Karnataka Says Home Minister Araga Jnanendra grg
Author
Bengaluru, First Published May 12, 2022, 5:58 AM IST

ಬೆಂಗಳೂರು(ಮೇ.12):  ಶಬ್ದ ಮಾಲಿನ್ಯ(Noise Pollution) ನಿಯಂತ್ರಣ ಕಾನೂನಿನ ಕಟ್ಟುನಿಟ್ಟಿನ ಜಾರಿಗೆ ಕ್ರಮ ಕೈಗೊಳ್ಳಲಾಗುವುದು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಯಾವುದೇ ಧ್ವನಿವರ್ಧಕ ಬಳಕೆಗೆ ಅವಕಾಶವಿಲ್ಲ. ಬೇರೆ ಸಮಯದಲ್ಲಿ ಧ್ವನಿವರ್ಧಕಗಳ ಬಳಕೆಗೆ ಅನುಮತಿ ಪಡೆದಿರಬೇಕು. 15 ದಿನದಲ್ಲಿ ಅನುಮತಿ ಪಡೆಯದಿದ್ದರೆ ಚರ್ಚ್‌, ಮಸೀದಿ, ದೇವಾಲಯ ಎಂಬ ತಾರತಮ್ಯವಿಲ್ಲದೆ ಧ್ವನಿವರ್ಧಕ ಕಿತ್ತು ಹಾಕಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಹೇಳಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧ್ವನಿವರ್ಧಕಗಳ(Loudspeaker) ಬಳಕೆಗೆ ಸುಪ್ರೀಂ ಕೋರ್ಟ್‌(Supreme Court) ಆದೇಶದ ಅನ್ವಯ ಸ್ಪಷ್ಟ ಮಾರ್ಗಸೂಚಿ ಪ್ರಕಟಿಸಿದ್ದು, ಪ್ರತಿಯೊಬ್ಬರೂ ಪಾಲಿಸುವಂತೆ ಮಾಡಲಾಗುವುದು. ಮಾರ್ಗಸೂಚಿ(Guidelines) ಉಲ್ಲಂಘಿಸಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದಲ್ಲೀಗ ಆಜಾನ್ VS ಸುಪ್ರಭಾತ: ಯಾವ ಜಿಲ್ಲೆಯಲ್ಲಿ ಹೇಗಿದೆ ಪರಿಸ್ಥಿತಿ? ಇಲ್ಲಿದೆ ವಿವರ

ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಯಾವುದೇ ಧ್ವನಿವರ್ಧಕ ಬಳಕೆಗೆ ಅವಕಾಶವಿಲ್ಲ. ಬೇರೆ ಸಮಯದಲ್ಲಿ ಧ್ವನಿವರ್ಧಕಗಳಿಂದ ಉತ್ಪತ್ತಿಯಾಗುವ ಶಬ್ದದ ಪ್ರಮಾಣ ಎಷ್ಟಿರಬೇಕು ಎಂಬ ಬಗ್ಗೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಕೈಗಾರಿಕಾ ವಲಯ, ವಸತಿ ಪ್ರದೇಶಗಳು, ವಾಣಿಜ್ಯ ವಲಯ ಹಾಗೂ ನಿಶ್ಶಬ್ದ ವಲಯಗಳಲ್ಲಿ ಯಾವ ಪ್ರಮಾಣದಲ್ಲಿರಬೇಕು ಎಂಬುದೂ ತಿಳಿಸಲಾಗಿದೆ. ಯಾವ ದರ್ಜೆಯ ಅಧಿಕಾರಿಗಳು ಧ್ವನಿವರ್ಧಕಗಳಿಗೆ ಅನುಮತಿ ನೀಡಬಹುದು ಹಾಗೂ ಕಾನೂನು ಬಾಹಿರವಾಗಿ ಇರುವ ಧ್ವನಿವರ್ಧಕಗಳನ್ನು ತೆಗೆದು ಹಾಕುವುದು ಯಾರ ಜವಾಬ್ದಾರಿ ಎಂಬುದರ ಬಗ್ಗೆಯೂ ಉಲ್ಲೇಖಿಸಲಾಗಿದೆ. ಹೀಗಾಗಿ ಧ್ವನಿವರ್ಧಕ ಉಪಯೋಗಿಸುವವರು 15 ದಿನದೊಳಗಾಗಿ ಸಂಬಂಧಪಟ್ಟಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ತಾರತಮ್ಯವಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಎಸ್‌ಐ ಅಕ್ರಮದಲ್ಲಿ ಕಾಂಗ್ರೆಸ್ಸಿಗರೇ ಹೆಚ್ಚಿದ್ದಾರೆ: ಆರಗ ಜ್ಞಾನೇಂದ್ರ

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಯಾವ ಪಕ್ಷದವರ ತಪ್ಪಿದ್ದರೂ ಕ್ರಮ ಖಚಿತ. ಪ್ರಮುಖ ಕಿಂಗ್‌ಪಿನ್‌ಗಳನ್ನು ಈಗಾಗಲೇ ಹಿಡಿಯುತ್ತಿದ್ದೇವೆ. ಕಾಂಗ್ರೆಸ್‌ನ ಇಬ್ಬರು ಕಿಂಗ್‌ಪಿನ್‌ಗಳನ್ನು ಹಿಡಿದಿದ್ದು, ಈ ಪ್ರಕರಣದಲ್ಲಿ ರಾಜ್ಯಾದ್ಯಂತ ಅವರೇ ಹೆಚ್ಚಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಪ್ರತಿಯೊಬ್ಬರನ್ನೂ ಸಾಕ್ಷ್ಯಾಧಾರಗಳ ಸಮೇತ ಹಿಡಿಯುತ್ತಿದ್ದೇವೆ. ಪಕ್ಷ, ಪಂಗಡಕ್ಕಿಂತ ಯಾರು ತಪ್ಪು ಮಾಡಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದರು.

ಕಾಫಿನಾಡಿನಲ್ಲಿ ನಮಾಜ್ ವೇಳೆ ದೇವಸ್ಥಾನದಲ್ಲಿ ಮೊಳಗಿದ ಸುಪ್ರಭಾತ!

ಗೃಹ ಖಾತೆಯಲ್ಲಿ ಎಕ್ಸ್‌ಪರ್ಟ್‌ ಆಗಿದ್ದೇನೆ

ನಾನು ಈಗ ಗೃಹ ಖಾತೆಯಲ್ಲಿ ಎಕ್ಸ್‌ಪರ್ಚ್‌ ಆಗಿದ್ದೇನೆ. ನನಗೆ ಈ ಖಾತೆ ಸಾಕು (ಸಾಕಿನ್ನು) ಎಂದೆನಿಸಿಲ್ಲ. ಏನೇ ಆದರೂ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧನಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸಚಿವ ಸಂಪುಟ ಪುನಾರಚನೆ(Cabinet Expansion), ವಿಸ್ತರಣೆಯ ಬಗ್ಗೆ ಮಾಹಿತಿ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬದಲಾಗುತ್ತಾರೆ ಎಂಬುದೂ ನನಗೆ ಗೊತ್ತಿಲ್ಲ. ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ನಾನು ಕಮೆಂಟ್‌ ಮಾಡಲ್ಲ. ಎಲೆಕ್ಷನ್‌ ವರ್ಷ ಬರುತ್ತಿದೆ. ಎಲ್ಲಾ ಪಕ್ಷಗಳು ಸಿದ್ಧವಾಗಿರಬೇಕು, ಹೀಗಾಗಿ ಎಲ್ಲ ಪಕ್ಷಗಳೂ ಪ್ರಯತ್ನ ಮಾಡುತ್ತಿರುತ್ತವೆ ಎಂದರು.

ಅಗತ್ಯಬಿದ್ದರೆ ಈಶ್ವರಪ್ಪಗೂ ನೋಟಿಸ್‌:

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಎಸ್‌. ಈಶ್ವರಪ್ಪ(KS Eshwarappa) ರಾಜೀನಾಮೆ ನೀಡಿದ್ದರೂ ಅವರಿಗೆ ಪೊಲೀಸರು ನೋಟಿಸ್‌ ನೀಡದ ಬಗ್ಗೆ ಪ್ರತಿಕ್ರಿಯಿಸಿ, ನೋಟಿಸ್‌ ನೀಡುವ ಬಗ್ಗೆ ಪೊಲೀಸರು ನಿರ್ಧಾರ ಮಾಡುತ್ತಾರೆ. ಅಗತ್ಯಬಿದ್ದರೆ ಅವರಿಗೂ ನೋಟಿಸ್‌ ನೀಡುತ್ತಾರೆ. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯಿಲ್ಲ ಎಂದು ಸ್ಪಷ್ಟಪಡಿಸಿದರು.
 

Follow Us:
Download App:
  • android
  • ios