Asianet Suvarna News Asianet Suvarna News

Professor Recruitment Golmal: ಪ್ರತಿ ಪ್ರಾಧ್ಯಾಪಕ ಹುದ್ದೆಗೆ 80 ಲಕ್ಷ ರು. ಡೀಲ್‌..!

*  ಅಚ್ಚರಿ ಹುಟ್ಟಿಸಿದ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ ಕೇಸ್‌ಡೀಲ್‌ ಮೊತ್ತ
*  ನಾರಾಯಣನನ್ನು ನಂಬಿ ಹಣ ನೀಡಿ ಎನ್ನುವ ಗೋಲ್ಮಾಲ್‌ ಏಜೆಂಟರು
*  ಶೇ.30ರಷ್ಟು ಹಣ ಆರಂಭದಲ್ಲಿ, ಉಳಿದ ಶೇ.70 ಪಟ್ಟಿ ಪ್ರಕಟದ ಬಳಿಕ
 

Professor Recruitment Golmal in Karnataka grg
Author
Bengaluru, First Published Apr 28, 2022, 8:39 AM IST | Last Updated Apr 28, 2022, 8:58 AM IST

ಬೆಂಗಳೂರು(ಏ.28):  ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕರ ನೇಮಕಾತಿಗೆ(Professor Recruitment) ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ(Competitive Examination) ನಡೆದಿದೆ ಎನ್ನಲಾಗುತ್ತಿರುವ ಪ್ರತಿ ಹುದ್ದೆ ಡೀಲ್‌ನ ಮೊತ್ತ ಎಷ್ಟು ಗೊತ್ತಾ? ಒಂದೊಂದು ಹುದ್ದೆಗೆ ಕನಿಷ್ಠ 40 ರಿಂದ 50 ಲಕ್ಷ ರು. ಇನ್ನು ಕೆಲವೊಂದು ಪ್ರಮುಖ ವಿಭಾಗದ ಹುದ್ದೆಗಳಿಗೆ ಗರಿಷ್ಠ 80 ಲಕ್ಷ ರು. ವರೆಗೆ ಮಧ್ಯವರ್ತಿಗಳ ಮೂಲಕ ವ್ಯಾಪಾರ ಕುದುರಿಸಲಾಗಿದೆ ಎಂದು ಅಭ್ಯರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.

ಉನ್ನತ ಶಿಕ್ಷಣ ಇಲಾಖೆಯ(Department of Higher Education) ಪ್ರಾಧ್ಯಾಪಕರ ನೇಮಕಾತಿ ಪರೀಕ್ಷಾ ಅಕ್ರಮ, ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮಕ್ಕಿಂತ ದೊಡ್ಡದು. ಸಮರ್ಪಕ ತನಿಖೆ(Investigation)  ನಡೆದರೆ ಅಕ್ರಮದ ವಿಶ್ವರೂಪ ಬಹಿರಂಗಕ್ಕೆ ಬರಲಿದೆ. ಸರ್ಕಾರ ಪಿಎಸ್‌ಐ ಪರೀಕ್ಷಾ(PSI Recruitment Scam) ಅಕ್ರಮದಂತೆ ಈ ಪ್ರಕರಣವನ್ನು ತಕ್ಷಣ ಸಿಐಡಿ(CID) ಅಥವಾ ಇನ್ಯಾವುದೇ ಉನ್ನತ ತನಿಖೆಗೆ ವಹಿಸಬೇಕು ಎಂದು ಸಾರ್ವಜನಿಕ ವಲಯದಲ್ಲೂ ಒತ್ತಾಯ ಕೇಳಿಬರುತ್ತಿದೆ.

ಪ್ರಾಧ್ಯಾಪಕರ ನೇಮಕಾತಿ ಅಕ್ರಮ: ದೂರು ಬಂದ್ರೂ 22 ದಿನ ಸೈಲೆಂಟಾಗಿದ್ದ ಪ್ರಾಧಿಕಾರ..!

ಮಧ್ಯವರ್ತಿಗಳೇ ಆಧಾರ:

ಸರ್ಕಾರದ ನೇಮಕಾತಿ, ಸೌಲಭ್ಯಗಳ ಹಂಚಿಕೆಯಲ್ಲಿ ನಡೆಯುವ ಎಲ್ಲ ಅಕ್ರಮಗಳಿಗೂ ಸಹಜವಾಗಿ ಮಧ್ಯವರ್ತಿಗಳೇ ಆಧಾರ. ಸಾಮಾನ್ಯವಾಗಿ ಸಂಬಂಧಪಟ್ಟ ಇಲಾಖೆ ಹಾಗೂ ಪರೀಕ್ಷೆ ನಡೆಸುವ ಪ್ರಾಧಿಕಾರದ ಅಧಿಕಾರಿಗಳು ಕೈಜೋಡಿಸದೆ ಇಂತಹ ಮಧ್ಯವರ್ತಿಗಳು ಪ್ರವೇಶ ಮಾಡಲು ಸಾಧ್ಯವೇ ಇಲ್ಲ. ಇಲ್ಲೂ ಆಗಿರುವುದು ಅದೇ ಎನ್ನುತ್ತಾರೆ ಅಭ್ಯರ್ಥಿಗಳು.

‘ಕನ್ನಡಪ್ರಭ’ಗೆ(Kannada Prabha) ಕರೆ ಮಾಡಿದ್ದ ಸಮಾಜಶಾಸ್ತ್ರ ಪರೀಕ್ಷೆ ಬರೆದ ಮಂಡ್ಯ ಮೂಲಕ ಮಹಿಳಾ ಅಭ್ಯರ್ಥಿಯೊಬ್ಬರು, ತಮಗೆ ತನ್ನ ಸ್ನೇಹಿತರೊಬ್ಬರು ಸಿಕ್ಕಾಗ 40 ಲಕ್ಷ ರು. ನೀಡಿದರೆ ಪ್ರಾಧ್ಯಾಪಕರಾಗಿ ನೇಮಕಾತಿ ಪಕ್ಕಾ ಆಗಲಿದೆ ಎಂದು ಆಮಿಷ ತೋರಿದರು. ತಾವೂ ಹಣ ನೀಡುತ್ತಿರುವುದಾಗಿ ಹೇಳಿದರು. ಆದರೆ, ನಾವು ಬಡವರು ಕೊಡಲಿಕ್ಕೆ ಹಣವೂ ಇರಲಿಲ್ಲ. ಸರ್ಕಾರಿ ಹುದ್ದೆಗಳನ್ನೆಲ್ಲಾ ಈ ರೀತಿ ಹಣಕ್ಕೆ ಡೀಲ್‌ ಮಾಡಿದರೆ ಪ್ರಮಾಣಿಕರು, ಹಗಲು ರಾತ್ರಿ ಕಷ್ಟಪಟ್ಟು ಓದಿದ ನಮ್ಮಂತರಹವರ ಗತಿ ಏನು. ಅದಕ್ಕಿಂತ ಹೆಚ್ಚು ದೇಶದ ಶಿಕ್ಷಣ ವ್ಯವಸ್ಥೆ ಏನಾಗಬಹುದು ಎಂದು ಬೇಸರ ವ್ಯಕ್ತಪಡಿಸಿದರು.

ಮಂಗಳೂರಿನ(Mangaluru) ವಾಣಿಜ್ಯ ಶಾಸ್ತ್ರ ವಿಭಾಗದ ಅಭ್ಯರ್ಥಿಯೊಬ್ಬರು ಹೇಳುವ ಪ್ರಕಾರ, ಅವರ ಸ್ನೇಹಿತರೊಬ್ಬರು ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಹುದ್ದೆಯೊಂದಕ್ಕೆ ತಾವು 80 ಲಕ್ಷ ರು. ನೀಡಿರುವುದಾಗಿ ಹೇಳಿದರಂತೆ. ಅಷ್ಟೂಹಣ ಒಟ್ಟಿಗೆ ಕೊಟ್ಟಿರಾ ಎಂದು ಕೇಳಿದ್ದಕ್ಕೆ. ಇಲ್ಲ ನಮಗೆ ಗೊತ್ತಿರುವ ಏಜೆಂಟ್‌ ಒಬ್ಬರು ಮೊದಲು ಶೇ.30ರಷ್ಟುಹಣ ಪಡೆದಿದ್ದಾರೆ. ಉಳಿದ ಹಣ ಆಯ್ಕೆ ಪಟ್ಟಿಬಂದ ಬಳಿಕ ನೀಡಲು ಸೂಚಿಸಿದ್ದಾರೆ ಎಂದು ಹೇಳಿದರು. ಇದನ್ನೆಲ್ಲಾ ಬಹಿರಂಗವಾಗಿ ಹೇಳಲು, ದೂರು ಕೊಡಲು ನಮ್ಮ ಬಳಿ ಶಕ್ತಿ, ಧೈರ್ಯ ಇಲ್ಲ. ಆದರೆ, ಪ್ರಮಾಣಿಕವಾಗಿ ಅಧ್ಯಯನ ಮಾಡಿ ಪರೀಕ್ಷೆ ಬರೆದ ನಾವು ಸುಮ್ಮನಿರಲೂ ಆಗುತ್ತಿಲ್ಲ ಎಂದು ನೋವು ತೋಡಿಕೊಂಡರು.

Recruitment Scam ಪ್ರಾಧ್ಯಾಪಕ ಪರೀಕ್ಷೆ ಅಕ್ರಮ, ಕವಿವಿ ರಿಜಿಸ್ಟ್ರಾರ್‌ಗೂ ಕಂಟಕ!

ಹುದ್ದೆಗೆ ಇಷ್ಟೊಂದು ಹಣ ಕೊಡೋದ್ಯಾಕೆ?

ಪದವಿ ಕಾಲೇಜು ಪ್ರಾಧ್ಯಾಪಕರಿಗೆ ಯುಜಿಸಿ ವೇತನ ಶ್ರೇಣಿ ಅನುಸಾರ ಆರಂಭದಿಂದಲೇ ಮಾಸಿಕ ಲಕ್ಷಗಟ್ಟಲೆ ವೇತನ ಬರುವುದೇ ಪ್ರಾಧ್ಯಾಪಕ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಇಷ್ಟುದೊಡ್ಡ ಮಟ್ಟದ ಅಕ್ರಮಕ್ಕೆ ಕಾರಣವಾಗಿದೆ. ಸಹಾಯಕ ಪ್ರಾಧ್ಯಾಪಕನಾಗಿ ನೇಮಕಗೊಂಡ ಆರಂಭಿಕ ತಿಂಗಳಿಂದಲೇ ಅಭ್ಯರ್ಥಿಗೆ 51 ಸಾವಿರಕ್ಕೂ ಹೆಚ್ಚು ಮೂಲವೇತನ ಇತರೆ ಭತ್ಯೆಗಳು ಸೇರಿ ಸುಮಾರು 90 ಸಾವಿರಕ್ಕೂ ಹೆಚ್ಚು ವೇತನ ದೊರೆಯುತ್ತದೆ. ಇದು ಸೇವಾ ಜೇಷ್ಠತೆ ಹೆಚ್ಚಾದಂತೆ ಲಕ್ಷಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಒಬ್ಬ ಪ್ರಾಧ್ಯಾಪಕ ತನ್ನ ನಿವೃತ್ತಿ ಹಂತದ ವೇಳೆಗೆ ಮಾಸಿಕ ನಾಲ್ಕು ಲಕ್ಷ ರು. ವರೆಗೆ ವೇತನ ಪಡೆಯುತ್ತಾನೆ. ಹೀಗಾಗಿ ನೇಮಕಕ್ಕೆ ಈ ಪ್ರಮಾಣದಲ್ಲಿ ಹಣ ನೀಡಲು ಜನ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

‘ನಾರಾಯಣ’ ದೇವರ ನಂಬಿ ಎನ್ನುತ್ತಾರೆ ಏಜೆಂಟರು

ಅಭ್ಯರ್ಥಿಗಳನ್ನು ಸಂಪರ್ಕಿಸುವ ಡೀಲರ್‌ಗಳು ಪರೀಕ್ಷೆಗೆ ಒಂದು ದಿನ ಮೊದಲೇ ನಿಮಗೆ ಪ್ರಶ್ನೆ ಪತ್ರಿಕೆ ನೀಡುವುದಾಗಿ ಆಮಿಷ ಒಡ್ಡಿ ಹಣ ಪಡೆದಿದ್ದಾರೆ ಎನ್ನಲಾಗುತ್ತಿದೆ. ತಾವು ನಿಗದಿಪಡಿಸಿದ ಮೊತ್ತವೇ ಅಂತಿಮ ಕಡಿಮೆ ಮಾಡಲು ಚೌಕಾಸಿ ಮಾಡಿದರೆ ಒಂದು ಕ್ಷಣವೂ ಕೂರಲು ಬಿಡುವುದಿಲ್ಲ. ಪಡೆದ ಎಲ್ಲ ಹಣವನ್ನೂ ನಾವೇ ಇಟ್ಟುಕೊಳ್ಳುವುದಿಲ್ಲ. ನಮಗೆ ಸಿಗುವುದು ಇದರಲ್ಲಿ ಒಂದೆರಡು ಪರ್ಸೆಂಟ್‌ ಮಾತ್ರ. ಉಳಿದ ಹಣ ‘ಉನ್ನತ’ ಮಟ್ಟದವರೆಗೂ ಹಂಚಿಕೆಯಾಗುತ್ತದೆ. ಒಂದು ವೇಳೆ ಇಷ್ಟೆಲ್ಲಾ ಮಾಡಿ ನಮ್ಮ ಹೆಸರು ಆಯ್ಕೆ ಪಟ್ಟಿಯಲ್ಲಿ ಬರದಿದ್ದರೆ ಏನು ಗತಿ ಎಂದರೆ ಆ ‘ನಾರಾಯಣ’ ದೇವರನ್ನು ನಂಬಿ ಕೆಲಸ ಮಾಡುತ್ತಿದ್ದೇವೆ. ಮೋಸ ಆಗುವುದಿಲ್ಲ. ನೀವೂ ನಂಬುವುದಾದರೆ ನಂಬಿ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಏಜೆಂಟರು ಹೇಳುತ್ತಾರೆಂದು ಅಭ್ಯರ್ಥಿಯೊಬ್ಬರು(Candidate) ಸೂಕ್ಷ್ಮವಾಗಿ ಹೇಳಿದರು.
 

Latest Videos
Follow Us:
Download App:
  • android
  • ios