Asianet Suvarna News Asianet Suvarna News

ಪ್ರಾಧ್ಯಾಪಕರ ನೇಮಕಾತಿ ಅಕ್ರಮ: ದೂರು ಬಂದ್ರೂ 22 ದಿನ ಸೈಲೆಂಟಾಗಿದ್ದ ಪ್ರಾಧಿಕಾರ..!

*  ಪದವಿ ಕಾಲೇಜು ಪ್ರಾಧ್ಯಾಪಕರ ನೇಮಕಾತಿಯಲ್ಲಿ ಪರೀಕ್ಷಾ ಪ್ರಾಧಿಕಾರವೂ ಭಾಗಿ ಅನುಮಾನ
*  ಮಾ.30ರಂದೇ ಅಭ್ಯರ್ಥಿಗಳು ದೂರು ಕೊಟ್ಟರೂ ಪೊಲೀಸ್‌ ಮೊರೆ ಹೋಗಿದ್ದು ಏ.22ರಂದು
*  ಈ ಬಗ್ಗೆಯೂ ತನಿಖೆ ನಡೆಸಲು ಅಭ್ಯರ್ಥಿಗಳ ಆಗ್ರಹ
 

KEA Did Not Take Action on Professor Recruitment Illegal Case grg
Author
Bengaluru, First Published Apr 27, 2022, 6:46 AM IST

ಬೆಂಗಳೂರು(ಏ.27):  ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕರ ನೇಮಕಾತಿ(Professor Recruitment)  ಅಕ್ರಮದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಭಾಗಿಯಾಗಿದ್ದಾರೆಯೇ? ಈ ಅಕ್ರಮದ ಒಳಸುಳಿ ಪ್ರಾಧಿಕಾರದ ಆವರಣವನ್ನು ಆವರಿಸಿಕೊಂಡಿದೆಯೇ?

ಸಕಾರಣವನ್ನು ಮುಂದಿಟ್ಟು ಇಂತಹದೊಂದು ಅನುಮಾನ ವ್ಯಕ್ತಪಡಿಸತೊಡಗಿದ್ದಾರೆ ಅಭ್ಯರ್ಥಿಗಳು(Candidates). ಈ ಶಂಕೆಗೆ ಅವರು ನೀಡುವ ಕಾರಣ- ಪರೀಕ್ಷಾ ಅಕ್ರಮ ನಡೆದಿದೆ ಎಂದು ವಿದ್ಯಾರ್ಥಿಗಳು ದೂರು ಸಲ್ಲಿಸಿದರೂ ಪ್ರಾಧಿಕಾರ ಸುಮಾರು 22 ದಿನ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಏಕೆ? ವಿಷಯ ಮಾಧ್ಯಮಗಳಲ್ಲಿ ದೊಡ್ಡದಾದ ಬಳಿಕ ಹಾಗೂ ಅಭ್ಯರ್ಥಿಗಳು ದೂರನ್ನು ದೊರೆವರೆಗೂ ಅರ್ಥಾತ್‌ ಮುಖ್ಯಮಂತ್ರಿಯವರೆಗೂ ಒಯ್ದ ನಂತರವೇ ಎಚ್ಚೆತ್ತಿದ್ದು ಏಕೆ?

Professor Recruitment ಸಹಾಯಕ ಪ್ರಾಧ್ಯಾಪಕರ ನೇಮಕ: ಅಕ್ರಮಕ್ಕೆ ಕಡಿವಾಣ ಹಾಕಲು ಮುಂದಾದ ಪ್ರಾಧಿಕಾರ

ಭೂಗೋಳಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಮೊದಲು ಆರು ಮಂದಿ ಅಭ್ಯರ್ಥಿಗಳ ಗಮನಕ್ಕೆ ಬರುತ್ತದೆ. ಈ ಆರು ಮಂದಿ ಕೆಇಎಯನ್ನು ನಂಬಿ ಮಾರ್ಚ್‌ 30ರಂದು ತಮ್ಮ ಬಳಿ ಇದ್ದ ಹಲವು ದಾಖಲೆ, ಮಾಹಿತಿಗಳ ಸಹಿತ ದೂರು ಸಲ್ಲಿಸಿದ್ದಾರೆ.

ಪ್ರಸ್ತುತ ಪೊಲೀಸರು(Police) ಬಂಧಿಸಿ ವಿಚಾರಣೆ ನಡೆಸುತ್ತಿರುವ ಸೌಮ್ಯಾ ಎಂಬ ಅತಿಥಿ ಪ್ರಾಧ್ಯಾಪಕಿಯ ಮೊಬೈಲ್‌ನಿಂದ 18 ಪ್ರಶ್ನೆಗಳು ಹಾಗೂ ಅವುಗಳಿಗೆ ಉತ್ತರವನ್ನೊಳಗೊಂಡ 4 ಲಿಖಿತ ಪುಟಗಳು ವಾಟ್ಸ್‌ಆ್ಯಪ್‌ ಮೂಲಕ ಹಂಚಿಕೆಯಾಗಿರುವ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಮಾ. 30ರಂದೇ ಈ ಆರು ಮಂದಿ ಕೆಇಎಗೆ ನೀಡಿರುತ್ತಾರೆ. ಆದರೆ, ಮುಂದಿನ 22 ದಿನಗಳ ಕಾಲ ಕೆಇಎ ಯಾವ ಕ್ರಮ ಕೈಗೊಳ್ಳುವುದಿಲ್ಲ. ಅಂತಿಮವಾಗಿ ಪ್ರಾಧಿಕಾರದ ಅಧಿಕಾರಿಗಳು ಅಭ್ಯರ್ಥಿಗಳ ದೂರನ್ನೇ ಆಧರಿಸಿ ಪ್ರಕರಣದ ತನಿಖೆ ನಡೆಸುವಂತೆ ಪೊಲೀಸರಿಗೆ ಏಪ್ರಿಲ್‌ 22ರಂದು ದೂರು ನೀಡುತ್ತಾರೆ. ಇದು ದೂರು ಸ್ವೀಕರಿಸಿರುವ ಮಲ್ಲೇಶ್ವರಂ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲೇ(FIR) ನಮೂದಾಗಿದೆ.

ಹಾಗಾದರೆ ಪ್ರಾಧಿಕಾರದ ಅಧಿಕಾರಿಗಳು ಉದ್ದೇಪೂರ್ವಕವಾಗಿ 22 ದಿನಗಳ ಕಾಲ ಇಂತಹ ಗಂಭೀರ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದರಾ ಎಂಬುದು ಅಭ್ಯರ್ಥಿಗಳ ಪ್ರಶ್ನೆಯಾಗಿದೆ. ಸರ್ಕಾರ ಈ ಬಗ್ಗೆಯೂ ಗಮನ ಹರಿಸಬೇಕು ಎಂದು ಆಗ್ರಹಿಸುತ್ತಾರೆ ಹೆಸರೇಳಲಿಚ್ಛಿಸದ ನೊಂದ ಅಭ್ಯರ್ಥಿಗಳು.

ಸಿಎಂಗೆ ದೂರು ಬಳಿಕ ಎಚ್ಚೆತ್ತರಾ?:

ಪ್ರಾಧ್ಯಾಪಕರ ನೇಮಕಾತಿ ಪರೀಕ್ಷಾ ಅಕ್ರಮದ ಬಗ್ಗೆ ಏಪ್ರಿಲ್‌ 19ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರಿಗೂ ದೂರು ಹೋಗುತ್ತದೆ. ದೂರು ನೀಡಿ ಪ್ರಕರಣವನ್ನು ಸಿಐಡಿ(CID) ತನಿಖೆಗೆ ವಹಿಸುವಂತೆ ಒತ್ತಾಯಿಸಿರುವ ಸಾಮಾಜಿಕ ಹೋರಾಟಗಾರ ಮರಿಲಿಂಗನಗೌಡ ಮಾಲಿ ಪಾಟೀಲ್‌ ಅವರು ತಮ್ಮ ದೂರಿನಲ್ಲಿ ಮಾರ್ಚ್‌ 30ರಂದೇ ನೊಂದ ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಕೆಇಎI(KEA) ಅಧಿಕಾರಿಗಳಿಗೆ ದೂರು ನೀಡಿದ್ದರೂ ಇದುವರೆಗೂ ಯಾವುದೇ ಕ್ರಮ, ನ್ಯಾಯ ಸಿಗದಿರುವುದು ವ್ಯವಸ್ಥೆಯ ದುರಂತವೇ ಸರಿ ಎಂದು ಪ್ರಾಧಿಕಾರದ ನಿರ್ಲಕ್ಷ್ಯದ ಬಗ್ಗೆ ಉಲ್ಲೇಖಿಸಿದ್ದಾರೆ. ಇದಾದ ಬಳಿಕ ಪೊಲೀಸ್‌ ತನಿಖೆಗಾಗಿ ಮಲ್ಲೇಶ್ವರಂ ಠಾಣೆಯಲ್ಲಿ ಏ.22ರಂದು ಲಿಖಿತ ದೂರು ದಾಖಲಾಗಿರುವುದು ಕಂಡುಬಂದಿದೆ.

ಪ್ರಾಧ್ಯಾಪಕರ ನೇಮಕಾತಿ ಹಗರಣ: ಅತಿಥಿ ಉಪನ್ಯಾನಕಿ ಸೌಮ್ಯಾ ವಶಕ್ಕೆ, ಈಕೆಯೇ ಕಿಂಗ್‌ಪಿನ್.?

ಅಧಿಕಾರಿಗಳು ಹೇಳೋದೇನು?

ಪ್ರಕರಣವನ್ನು ಪೊಲೀಸ್‌ ತನಿಖೆಗೆ ವಹಿಸಲು ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪವನ್ನು ಕೆಇಎ ಅಧಿಕಾರಿಗಳು ನಿರಾಕರಿಸುತ್ತಾರೆ. ಏಪ್ರಿಲ್‌ 11ರಂದೇ ಈ ಬಗ್ಗೆ ನಾವು ಪೊಲೀಸರಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಸಂಬಂಧ ವಿಚಾರಣೆಗೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳುತ್ತಾರೆ.

ಈ ಸಂಬಂಧ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ರಮ್ಯಾ ಅವರನ್ನು ‘ಕನ್ನಡಪ್ರಭ’ ಸಂಪರ್ಕಿಸಿದಾಗ, ಪೊಲೀಸರಿಗೆ ದೂರು ಸಲ್ಲಿಸುವಲ್ಲಿ ಯಾವುದೇ ವಿಳಂಬ ಆಗಿಲ್ಲ. ಪ್ರಕರಣವನ್ನು ಪೊಲೀಸರಿಗೆ ವರ್ಗಾಯಿಸುವ ಮುನ್ನ ಪ್ರಾಧಿಕಾರದಿಂದಲೂ ವಿಚಾರಣೆ ನಡೆಸಲಾಗಿದೆ. ಅಭ್ಯರ್ಥಿಗಳ ದೂರಿನ ಆಧಾರದ ಮೇಲೆ ಆರೋಪಿತರನ್ನು ಕರೆಸಿ ವಿಚಾರಣೆ ನಡೆಸಲಾಯಿತು. ಆದರೆ, ಆಂತರಿಕ ಪರಿಶೀಲನೆಯಲ್ಲಿ ಪ್ರಶ್ನೆ ಪತ್ರಿಕೆ ಆರೋಪಕ್ಕೆ ಸಾಕ್ಷ್ಯಾಧಾರಗಳು ಕಂಡುಬರಲಿಲ್ಲ. ಹಾಗಾಗಿ ಹೆಚ್ಚಿನ ವಿಚಾರಣೆಗೆ ಪೊಲೀಸರಿಗೆ ಏ.11ರಂದು ದೂರು ಸಲ್ಲಿಸಲಾಯಿತು ಎಂದು ತಿಳಿಸಿದರು. ಆದರೆ, ಕೆಇಎ ಮೂಲಗಳು ಹೇಳುವ ಪ್ರಕಾರ ಆಂತರಿಕ ಪರಿಶೀಲನೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದಲೇ ಪೊಲೀಸರಿಗೆ ದೂರು ನೀಡಲಾಗಿದೆ.
 

Follow Us:
Download App:
  • android
  • ios