- ಪ್ರಶ್ನೆಪತ್ರಿಕೆ ರಚನೆ ಸಮಿತಿಯಲ್ಲಿರುವ ಪ್ರೊ.ನಾಗರಾಜ್‌ ವಿಚಾರಣೆ- ಆರೋಪಿ ಸೌಮ್ಯಾಗೆ ಪಿಎಚ್‌ಡಿ ಗೈಡ್‌ ಕೂಡ ಆಗಿರುವ ನಾಗರಾಜ್‌- ಸೌಮ್ಯಾ ಜತೆ ನಾಗರಾಜ್‌ರನ್ನು ಮೈಸೂರಿಗೆ ಕರೆದೊಯ್ದು ತಪಾಸಣೆ 

ಬೆಂಗಳೂರು(ಏ.27): ಸಹಾಯಕ ಪ್ರಾಧ್ಯಾಪಕರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಬೆಂಗಳೂರಿನ ಮಲ್ಲೇಶ್ವರ ಠಾಣೆ ಪೊಲೀಸರು, ಮೈಸೂರಿನಲ್ಲಿರುವ ಆರೋಪಿ ಸೌಮ್ಯಾ ಹಾಗೂ ಆಕೆಗೆ ಪಿಎಚ್‌ಡಿ ಮಾರ್ಗದರ್ಶಕರೂ ಆಗಿರುವ ಹಾಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಪ್ರೊ.ನಾಗರಾಜ್‌ ಅವರ ಮೈಸೂರು ವಿಳಾಸದಲ್ಲಿ ತಪಾಸಣೆ ನಡೆಸಿದ್ದಾರೆ.

ನಾಗರಾಜ್‌ ಅವರು ಪ್ರಸಕ್ತ ಸಹಾಯಕ ಪ್ರಾಧ್ಯಾಪಕ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕಾ ರಚನಾ ಸಮಿತಿಯ ಸದಸ್ಯರೂ ಆಗಿರುವುದರಿಂದ ಹಗರಣದಲ್ಲಿನ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಹೊತ್ತಿರುವ ಸೌಮ್ಯಾ ಹಾಗೂ ನಾಗರಾಜ್‌ ಅವರನ್ನು ಪೊಲೀಸರು ಪ್ರಶ್ನೆ ಸೋರಿಕೆ ಮೂಲ ಪತ್ತೆ ಸಲುವಾಗಿ ಮೈಸೂರಿಗೆ ಕರೆದೊಯ್ದಿದ್ದಾರೆ. ಮೈಸೂರಿನಲ್ಲಿ ತಪಾಸಣೆ ಬಳಿಕ ಧಾರವಾಡದಲ್ಲಿರುವ ಪ್ರೊ.ನಾಗರಾಜ್‌ ಅವರ ಮನೆ ಹಾಗೂ ಕಚೇರಿಯನ್ನು ಕೂಡಾ ತನಿಖಾ ತಂಡ ಪರಿಶೀಲಿಸಲಿದೆ ಎಂದು ತಿಳಿದು ಬಂದಿದೆ.

ಪಿಎಸ್ಐ ಪರೀಕ್ಷೆ ಅಕ್ರಮಕ್ಕಾಗಿ ಸತ್ತವರ ಹೆಸರಿನ ಸಿಮ್ ಬಳಕೆ: ಖತರನಾಕ್ ಗ್ಯಾಂಗ್‌ ಇದು..!

ನೋಟಿಸ್‌ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ತಮ್ಮ ಮುಂದೆ ಹಾಜರಾದ ನಾಗರಾಜ್‌ ಅವರನ್ನು ತೀವ್ರವಾಗಿ ಪ್ರಶ್ನಿಸಿ ಹೇಳಿಕೆ ದಾಖಲಿಸಿಕೊಂಡ ಅಧಿಕಾರಿಗಳು, ಹೆಚ್ಚಿನ ತನಿಖೆ ಸಲುವಾಗಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿ ಸೌಮ್ಯಾ ಹಾಗೂ ನಾಗರಾಜ್‌ ಅವರನ್ನು ಒಟ್ಟಿಗೆ ಮಧ್ಯಾಹ್ನ ಮೈಸೂರಿಗೆ ಕರೆದೊಯ್ದಿದ್ದಾರೆ. ಮೈಸೂರಿನಲ್ಲಿ ಬುಧವಾರ ದಿನವಿಡೀ ತಪಾಸಣೆ ನಡೆಸಲಿರುವ ಪೊಲೀಸರು, ಗುರುವಾರ ಧಾರವಾಡಕ್ಕೆ ಕರೆದೊಯ್ಯುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.

ಭೂಗೋಳ ಶಾಸ್ತ್ರದ ಹಿರಿಯ ಪ್ರಾಧ್ಯಾಪಕರಾಗಿದ್ದಾಗ ನಾಗರಾಜ್‌ ಅವರು ಸೌಮ್ಯಾಳಿಗೆ ಪಿಎಚ್‌ಡಿ ಮಾರ್ಗದರ್ಶಕರಾಗಿದ್ದರು. ಅಲ್ಲದೆ ಸಹಾಯಕ ಪ್ರಾಧ್ಯಾಪಕ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕಾ ರಚನಾ ಸಮಿತಿಯಲ್ಲಿ ಸಹ ಅವರು ಸದಸ್ಯರಾಗಿದ್ದರು. ಗುರು-ಶಿಷ್ಯೆಯ ಬಾಂಧವ್ಯದ ಹಿನ್ನೆಲೆಯಲ್ಲಿ ಸೌಮ್ಯಾಳಿಗೆ ಪರೀಕ್ಷೆಗೂ ಮುನ್ನ ಕೆಲವು ಪ್ರಶ್ನೆಗಳನ್ನು ನಾಗರಾಜ್‌ ನೀಡಿದ್ದರು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಅಭ್ಯರ್ಥಿಗಳು ಸಲ್ಲಿಸಿದ ದೂರಿನಲ್ಲಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ನಾಗರಾಜ್‌ ಅವರನ್ನು ಪೊಲೀಸರು ತನಿಖೆಗೊಳಪಡಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಸುತ್ತ ನಾಗರಾಜ್‌ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಆಗಿದ್ದಾರೆ ಎನ್ನಲಾಗಿದೆ.

ವಿಚಾರಣೆ ವೇಳೆ ಯಾವುದೇ ಮಾಹಿತಿಯನ್ನು ಆರೋಪಿ ಬಾಯ್ಬಿಡುತ್ತಿಲ್ಲ. ಆಕೆಯ ವಾಟ್ಸ್‌ಆ್ಯಪ್‌ನಿಂದ ಯಾರಾರ‍ಯರಿಗೆ ಪತ್ರಿಕೆ ಹೋಗಿದೆಯೋ ಅವರನ್ನೆಲ್ಲ ವಿಚಾರಣೆಗೆ ಕರೆಯಲಾಗಿದ್ದು, ಇವರಲ್ಲಿ ಕೆಲವರು ತನಿಖಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಲಭ್ಯವಾದ ಮಾಹಿತಿ ಆಧರಿಸಿ ಮುಂದಿನ ತನಿಖೆ ನಡೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Recruitment Scam 8 ಹುದ್ದೆಗೆ ನಡೆದ ಪರೀಕ್ಷೆಯಲ್ಲೇ ಅಕ್ರಮ,ಬಾಕಿ ಕತೆ?

ಪ್ರಶ್ನೆ ಪತ್ರಿಕಾ ರಚನಾ ಸಮಿತಿಗೆ ನೋಟಿಸ್‌
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಪ್ರಶ್ನೆ ಪತ್ರಿಕಾ ರಚನಾ ಸಮಿತಿಗೆ ಕೂಡ ಮಲ್ಲೇಶ್ವರ ಪೊಲೀಸರ ತನಿಖೆ ಬಿಸಿ ತಟ್ಟಲಿದ್ದು, ಸಮಿತಿಯ ಮುಖ್ಯಸ್ಥರು ಹಾಗೂ ಸದಸ್ಯರಿಗೆ ವಿಚಾರಣೆಗೆ ಬರುವಂತೆ ನೋಟಿಸ್‌ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಗೆ ಪ್ರಶ್ನೆ ಪತ್ರಿಕಾ ರಚನೆ ಸಮಿತಿ ಮೂಲಕವೇ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಸಮಿತಿಯಲ್ಲಿದ್ದವರ ವಿಚಾರಣೆಗೆ ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.