ಒಬ್ಬ ರಾಜಕಾರಣಿಯ ಕಣ್ಣು ಮುಂದಿನ ಚುನಾವಣೆಯ ಮೇಲಿರುತ್ತದೆ. ಒಬ್ಬ ಮುತ್ಸದ್ದಿಯ ಕಣ್ಣು ಮುಂದಿನ ಜನಾಂಗದ ಮೇಲಿರುತ್ತದೆ. ಅಂಥ ಒಬ್ಬ ಮುತ್ಸದ್ದಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ.
ಬೆಂಗಳೂರು (ಜೂ.21): ಒಬ್ಬ ರಾಜಕಾರಣಿಯ ಕಣ್ಣು ಮುಂದಿನ ಚುನಾವಣೆಯ ಮೇಲಿರುತ್ತದೆ. ಒಬ್ಬ ಮುತ್ಸದ್ದಿಯ ಕಣ್ಣು ಮುಂದಿನ ಜನಾಂಗದ ಮೇಲಿರುತ್ತದೆ. ಅಂಥ ಒಬ್ಬ ಮುತ್ಸದ್ದಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ. ಸೋಮವಾರ ನಗರದ ಹೊರವಲಯದ ಕೊಮ್ಮಘಟ್ಟದಲ್ಲಿ ಪ್ರಧಾನಿ ಮೋದಿ ಅವರು ಕೊಂಕಣ ರೈಲು ಮಾರ್ಗ ವಿದ್ಯುದೀಕರಣ, ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್, ಬೆಂಗಳೂರು ಸಬ್‌ಅರ್ಬನ್ ರೈಲು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಬೊಮ್ಮಾಯಿ ಅವರು ಮೋದಿ ಅವರನ್ನು ಹಾಡಿ ಹೊಗಳಿದರು.
ಅವರ ಆಶೀರ್ವಾದದಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆ. ಮೋದಿ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಮುನ್ನಡೆಯುತ್ತಿದೆ ಎಂದರು. ಮೋದಿ ಅವರು ದೇಶದ ಅಮೃತ ಮಹೋತ್ಸವಕ್ಕೆ ಒಂದು ಹೊಸ ಶಕ್ತಿ ತುಂಬಿದ್ದಾರೆ. 2047ಕ್ಕೆ ಅಮೃತ ಕಾಲವನ್ನು ಘೋಷಿಸಿ ವಿವಿಧ ಯೋಜನೆಗಳನ್ನು ರೂಪಿಸಿದ್ದಾರೆ. ಇಡೀ ವಿಶ್ವದಲ್ಲಿ ಅತ್ಯಂತ ಶ್ರೇಷ್ಠವಾದ, ನಂಬರ್ ಒನ್ ರಾಷ್ಟ್ರವಾಗುವ ನಿಟ್ಟಿನಲ್ಲಿ ಕಾರ್ಯಸೂಚಿ, ದಿಕ್ಸೂಚಿಯನ್ನು ನೀಡಿದ್ದಾರೆ. ಇವತ್ತು ರಾಜ್ಯದ ಪ್ರಗತಿಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನವಾಗಿದೆ. ಯೋಜನೆಗಳಿಗೆ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವ ಕಾರಣ.
ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ!
ಮೋದಿಯವರ ದೂರ ದೃಷ್ಟಿಯಿಂದ ಈ ಯೋಜನೆಗಳು ಕೇಂದ್ರ ಸರ್ಕಾರದ ನೆರವಿನ ಸಹಾಯ ಹಸ್ತದಿಂದ ಜಾರಿಯಾಗಿವೆ ಎಂದು ಹೇಳಿದರು. ನಮ್ಮೆಲ್ಲರ ಬಹಳ ದಿನಗಳ ಕನಸಾದ ಸಬ್‌ಅರ್ಬನ್ ರೈಲು ಯೋಜನೆ ನೆನೆಗುದಿಗೆ ಬಿದ್ದಿತ್ತು. ಪ್ರಧಾನಿಗಳು ಕೇಂದ್ರದ ಸಹಾಯ ನೀಡಿದ್ದರಿಂದ ಯೋಜನೆ ನೆರವೇರಿದೆ. ನಾಲ್ಕು ದಿಕ್ಕಿನಲ್ಲಿ ಬೆಂಗಳೂರಿನ ವಿವಿಧ ಭಾಗಗಳನ್ನು ಸಂಪರ್ಕ ಮಾಡುವ ಅದ್ಭುತವಾದ ಯೋಜನೆ ಪ್ರಾರಂಭವಾಗಿದೆ. ಪ್ರಧಾನಿ ಮಹತ್ವಾಕಾಂಕ್ಷಿ, ದೂರದೃಷ್ಟಿಯ ಫಲವಾಗಿ ಹಲವಾರು ರಸ್ತೆಗಳು ಮತ್ತು ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುವಲ್ಲಿ ಈ ಯೋಜನೆ ನೆರವಾಗಲಿದೆ ಎಂದು ತಿಳಿಸಿದರು.
ಪಿಎಂ ಸ್ವನಿಧಿ ಯೋಜನೆಯ ಪ್ರಯೋಜನವನ್ನು 1.45 ಲಕ್ಷ ಬೀದಿ ವ್ಯಾಪಾರಿಗಳು ಪಡೆದಿದ್ದಾರೆ. ದೇಶದಲ್ಲಿ ಮೊದಲು ಒಂದು ಕಿ.ಮೀ. ಆಗುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಈಗ ಪ್ರತಿದಿನ 16-17 ಕಿ.ಮೀ. ಆಗುತ್ತಿದೆ. 67 ವಿಮಾನ ನಿಲ್ದಾಣಗಳು ಎಂಟು ವರ್ಷದಲ್ಲಿ ನಿರ್ಮಾಣವಾಗಿವೆ. ಐದು ನಗರಗಳಿಗೆ ಮೆಟ್ರೋ ವಿಸ್ತರಣೆ ಆಗಿದೆ. ಸಾಗರ ಮಾಲಾ ಯೋಜನೆಯಡಿ 194 ಯೋಜನೆಗಳಿಗೆ ಅನುಮೋದನೆ ದೊರೆತಿದೆ. ದೇಶದಲ್ಲಿ 596 ಹೊಸ ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಿದ್ದು, ಈ ಪೈಕಿ ರಾಜ್ಯಕ್ಕೆ ನಾಲ್ಕು ವೈದ್ಯಕೀಯ ಕಾಲೇಜುಗಳು ಸಿಕ್ಕಿವೆ. ಮೋದಿ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಮುನ್ನಡೆಯುತ್ತಿದೆ ಎಂದರು.
ಸುತ್ತೂರು ಮಠ ಅನ್ನ, ಅಕ್ಷರ ದಾಸೋಹಕ್ಕೆ ಪ್ರಸಿದ್ಧಿ, ಕರ್ನಾಟಕ ಮಠದ ಶ್ರೇಷ್ಠತೆ ವಿವರಿಸಿದ ಮೋದಿ!
ರಾಜ್ಯದ ಜಿಡಿಪಿ 2% ಹೆಚ್ಚಳ ನಿರೀಕ್ಷೆ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಾದ ಐದು ಟ್ರಿಲಿಯನ್ ಆರ್ಥಿಕತೆಗೆ ರಾಜ್ಯದಿಂದ 1.2 ಟ್ರಿಲಿಯನ್ ಡಾಲರ್‌ಗಳನ್ನು ಕೊಡುಗೆ ನೀಡುವ ಗುರಿಯನ್ನು ಹೊಂದಲಾಗಿದೆ. ಈಗ ಚಾಲನೆ ನೀಡಿರುವ 33 ಸಾವಿರ ಕೋಟಿ ರು. ವೆಚ್ಚದ ವಿವಿಧ ಯೋಜನೆಗಳು ಪೂರ್ಣಗೊಂಡ ಬಳಿಕ ಕರ್ನಾಟಕದ ಜಿಡಿಪಿ ಶೇ.2ರಷ್ಟು ಹೆಚ್ಚಳವಾಗಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
