ಪ್ರೊ.ಕೆಎಸ್ ಭಗವಾನ್‌ರನ್ನು ಬಂಧಿಸದಿದ್ದರೆ ತೀವ್ರ ಹೋರಾಟ; ಸರ್ಕಾರಕ್ಕೆ ಒಕ್ಕಲಿಗರ ಸಂಘ ಎಚ್ಚರಿಕೆ
‘ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಾಹಿತಿ ಭಗವಾನ್ ಅವರನ್ನು ಸರ್ಕಾರ ತಕ್ಷಣ ಭಗವಾನ್ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು’ ಎಂದು ರಾಜ್ಯ ಒಕ್ಕಲಿಗರ ಸಂಘ ಎಚ್ಚರಿಕೆ ನೀಡಿದೆ.
ಬೆಂಗಳೂರು (ಅ.17): ‘ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಾಹಿತಿ ಭಗವಾನ್ ಅವರನ್ನು ಸರ್ಕಾರ ತಕ್ಷಣ ಭಗವಾನ್ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು’ ಎಂದು ರಾಜ್ಯ ಒಕ್ಕಲಿಗರ ಸಂಘ ಎಚ್ಚರಿಕೆ ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಹನುಮಂತಯ್ಯ, ಪ್ರಚಾರಕ್ಕಾಗಿ ನೀಡಿರುವ ಹೇಳಿಕೆ ಬಗ್ಗೆ ಕೂಡಲೇ ಸಮುದಾಯದ ಕ್ಷಮೆ ಕೇಳಬೇಕು ಅಥವಾ ಸರ್ಕಾರ ಭಗವಾನ್ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ದಸರಾ ಕವಿಗೋಷ್ಠಿ ಪಟ್ಟಿಯಿಂದ ಪ್ರೊ. ಭಗವಾನ್‌ಗೆ ಕೊಕ್: ರಾಜೇಂದ್ರರಿಂದ ಚಾಲನೆ
ಬೆಂಗಳೂರು ನಿರ್ಮಾತೃ ಕೆಂಪೇಗೌಡರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಒಕ್ಕಲಿಗ ಸಮುದಾಯದವರೇ. ರಾಜ್ಯ ಸರ್ಕಾರ ಭಗವಾನ್ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳದಿದ್ದರೆ ಸಂಘದ ಆಡಳಿತ ಮಂಡಳಿಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಮುಂದಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಸಂಘದ ಗೌರವಾಧ್ಯಕ್ಷ ಬಿ.ಕೆಂಚಪ್ಪಗೌಡ ಮಾತನಾಡಿದರು.ಸಂಘದ ಉಪಾಧ್ಯಕ್ಷ ಎಲ್.ಶ್ರೀನಿವಾಸ್, ಕಾರ್ಯಾಧ್ಯಕ್ಷ ಎಲುವಳ್ಳಿ ರಮೇಶ್, ಕೆಂಪೇಗೌಡ ಆಸ್ಪತ್ರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ನೆಲ್ಲಿಗೆರೆ ಬಾಲು, ಸಂಘದ ನಿರ್ದೇಶಕ ಬಿ.ಪಿ.ಮಂಜೇಗೌಡ ಮತ್ತಿತರರು ಮಾತನಾಡಿದರು. ಸಂಘದ ಖಚಾಂಚಿ ಸಿ.ಎಂ.ಮಾರೇಗೌಡ, ಸಹಾಯಕ ಕಾರ್ಯದರ್ಶಿ ವೆಂಕಟರಾಮೇಗೌಡ, ನಿರ್ದೇಶಕ ಡಾ.ವಿ.ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಚುಂಚನಗಿರಿ ಸ್ವಾಮೀಜಿ ಬಳಿ ಭಗವಾನ್ ಕ್ಷಮೆ ಯಾಚಿಸಲಿ:
ಹಾಸನ: ಮೈಸೂರಿನ ಪುರಭವನದಲ್ಲಿ ನಡೆದ ಮಹಿಷ ಉತ್ಸವ ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ಪುರಾಣ ಪುರುಷ ಶ್ರೀರಾಮಚಂದ್ರ ಮತ್ತು ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಭಗವಾನ್ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬಳಿ ಕ್ಷಮೆ ಯಾಚಿಸಬೇಕು. ಇಲ್ಲವಾದರೇ ರಾಜ್ಯಾದ್ಯಂತ ಚಳವಳಿ ನಡೆಸುವುದಾಗಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾ ಘಟಕದ ಜಿಲ್ಲಾ ಗೌರವಾಧ್ಯಕ್ಷ ಪುಟ್ಟಸ್ವಾಮಿಗೌಡ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಸಾಹಿತ್ಯ ಬರೆಯುವುದಕ್ಕೆ ಮತ್ತು ಅಧಿಕಾರಕ್ಕೆ ಯಾವ ಜಾತಿಯಿಲ್ಲ. ಪ್ರೊಫೆಸರ್ ಆಗಿ ಒಂದು ಮಗುವಿಗೆ ಈ ದೇಶದ ಸಂವಿಧಾನ ಮತ್ತು ಜಾತಿಹೀನ ಹೇಳಿಕೊಡುವ ಪ್ರೊಫೆಸರ್ ಆಗಿದ್ದರೇ ಅವರ ಯಾವುದೇ ಕೆಲಸಗಳಿಗೆ ಪ್ರೋತ್ಸಾಹ ಕೊಡುವುದು ಬೇಡ. ಇಲ್ಲಿ ಯಾವ ಜಾತಿ ಇಲ್ಲ. ಮನುಷ್ಯ ಜಾತಿ. ಬೆಳೆ ಬೆಳೆಯುವ ರೈತ ಎಂದರೇ ಒಕ್ಕಲಿಗ. ಇಡೀ ದೇಶಕ್ಕೆ ಅನ್ನ ಕೊಡವವನು. ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಬಾಲಗಂಗಾಧರನಾಥ ಸ್ವಾಮೀಜಿ ನಂತರ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಇದ್ದು, ಕೂಡಲೇ ಹೋಗಿ ಕ್ಷಮೆ ಕೇಳಿದರೇ ಮಾತ್ರ ಭಗವಾನ್ ಉಳಿದುಕೊಳ್ಳಬಹುದು. ಇಲ್ಲವಾದರೇ ರಾಜ್ಯಾದ್ಯಂತ ಚಳವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಿವೃತ್ತ ಪ್ರೊಫೆಸರ್ ಭಗವಾನ್ ಹಲವಾರು ಬಾರಿ ಹಿಂದೂ ಧರ್ಮ ಸೇರಿದಂತೆ ವಿವಿಧ ವಿಚಾರಗಳಲ್ಲಿ ಜನರ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ. ಇತ್ತೀಚಿಗೆ ಮೈಸೂರಿನಲ್ಲಿ ನಡೆದ ಮಹಿಷ ಉತ್ಸವ ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ಪುರಾಣ ಪುರುಷ ಶ್ರೀರಾಮಚಂದ್ರ ಹಾಗೂ ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಇದು ಒಕ್ಕಲಿಗ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ. ಆದ್ದರಿಂದ ನಮ್ಮ ಸಮುದಾಯದ ಪೀಠಾಧ್ಯಕ್ಷರಾದ ನಿರ್ಮಾಲಾನಂದನಾಥ ಸ್ವಾಮೀಜಿ ಅವರಿಗೆ ಕ್ಷಮಾಪಣಾ ಪತ್ರ ಹಾಗೂ ಬಹಿರಂಗ ಕ್ಷಮೆಯಾಚನೆ ಮಾಡಬೇಕೆಂದು ಒತ್ತಾಯಿಸಿದರು. ಇವರ ತಮ್ಮ ಜನಪ್ರಿಯತೆಗೋಸ್ಕರ ನಾನಾ ಸಮುದಾಯಗಳ ವ್ಯಕ್ತಿಗಳು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಯನ್ನು ಪದೇ ಪದೇ ನೀಡುತ್ತಿರುವುದು ಸರಿಯಲ್ಲ. ಇಂತಹ ಹೇಳಿಕೆಗಳನ್ನು ನಾವು ಖಂಡಿಸುತ್ತೇವೆ. ಮುಂದಾದರೂ ಇಂತಹ ಹೇಳಿಕೆ ಹೇಳುವುದನ್ನು ಬಿಡಬೇಕೆಂದರು. ಪ್ರೊ. ಭಗವಾನ್ ವಿರುದ್ಧ ಕ್ರಮಕೈಗೊಳ್ಳುವಂತೆ ಅಖಿಲ ಕರ್ನಾಟಕ ಒಕ್ಕಲಿಗೆ ಸಂಘದಿಂದ ಈ ಬಗ್ಗೆ ಜಿಲ್ಲಾಧಿಕಾರಿ ಅವರಿಗೂ ದೂರನ್ನು ಕೊಡುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಒಕ್ಕಲಿಗೆ ಸಂಘದ ಪ್ರಧಾನ ಕಾರ್ಯದರ್ಶಿ ರಂಗೇಗೌಡ, ಜಿಲ್ಲಾಧ್ಯಕ್ಷ ಸುರೇಶ್, ಹರೀಶ್ ಗೌಡ, ಮಂಜುನಾಥ್, ತಿಮ್ಮೇಗೌಡ, ಬೇಲೂರು ತಾಲೂಕು ನಳಿನಾಕ್ಷಿ, ಇತರರು ಉಪಸ್ಥಿತರಿದ್ದರು.