ದಸರಾ ಕವಿಗೋಷ್ಠಿ ಪಟ್ಟಿಯಿಂದ ಪ್ರೊ. ಭಗವಾನ್‌ಗೆ ಕೊಕ್: ರಾಜೇಂದ್ರರಿಂದ ಚಾಲನೆ
ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಒಕ್ಕಲಿಗ ಸಮುದಾಯದ ಪ್ರತಿಭಟನೆ ತೀವ್ರವಾದ ಹಿನ್ನೆಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ದಸರಾ ಕವಿಗೋಷ್ಠಿಯಿಂದ ಭಗವಾನ್ ಅವರ ಹೆಸರು ಕೈಬಿಟ್ಟಿದೆ.
ಮೈಸೂರು (ಅ.16) : ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಒಕ್ಕಲಿಗ ಸಮುದಾಯದ ಪ್ರತಿಭಟನೆ ತೀವ್ರವಾದ ಹಿನ್ನೆಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ದಸರಾ ಕವಿಗೋಷ್ಠಿಯಿಂದ ಭಗವಾನ್ ಅವರ ಹೆಸರು ಕೈಬಿಟ್ಟಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದಸರಾ ಕವಿಗೋಷ್ಠಿಯನ್ನು ನಗರದ ವಿಜಯನಗರ ಮೊದಲ ಹಂತದಲ್ಲಿರುವ ಕಸಪಾ ಭವನದಲ್ಲಿ ಅ.16ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿತ್ತು. ಕವಿಗೋಷ್ಠಿಗೆ ಪ್ರೊ.ಭಗವಾನರು ಚಾಲನೆ ನೀಡಬೇಕಿತ್ತು.
ಅ.13ರಂದು ನಗರದಲ್ಲಿ ನಡೆದ ಮಹಿಷ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಭಾಷಣದ ವೇಳೆ ಒಕ್ಕಲಿಗರ ಭಾವನೆಗಳಿಗೆ ಧಕ್ಕೆ ತರುವ ರೀತಿ ಹೇಳಿಕೆ ನೀಡಿದ್ದಾರೆ ಎಂದು ಭಗವಾನ್‌ರ ವಿರುದ್ಧ ತಿರುಗಿ ಬಿದ್ದಿರುವ ಸಮುದಾಯದ ಮುಖಂಡರು ಯುವ ದಸರಾ ಕವಿಗೋಷ್ಠಿ ಸಮಿತಿಗೆ ಪತ್ರ ಬರೆದು ಭಗವಾನರ ಹೆಸರು ಕೈಬಿಡುವಂತೆ ಕೋರ ಲಾಗಿತ್ತು ಎನ್ನಲಾಗಿದೆ. ಈ ಪತ್ರಕ್ಕೆ ಮನ್ನಣೆ ನೀಡಿದ ಸಮಿತಿಯು ಉದ್ಘಾಟಕರಾಗಿ ಪಾಲ್ಗೊಳ್ಳಬೇಕಿದ್ದ ಭಗವಾನ್ ಹೆಸರನ್ನು ಕೈಬಿಟ್ಟು ಅವರ ಬದಲಿಗೆ ಜನಪದ ತಜ್ಞರಾದ ಡಾ.ಡಿ.ಕೆ.ರಾಜೇಂದ್ರ ಅವರ ಹೆಸರನ್ನು ಸೇರಿಸಲಾಗಿದ್ದು, ಅವರು ಸೋಮವಾರ ನಡೆಯುವ ದಸರಾ ಕವಿಗೋಷ್ಠಿಗೆ ಚಾಲನೆ ನೀಡಲಿದ್ದಾರೆ.