*ಟೌನ್‌ಹಾಲ್‌ನಿಂದ ಪ್ರತಿಭಟನಾ ರಾರಯಲಿ*ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು*ಜ.5ಕ್ಕೆ ಮುಂದಿನ ಹೋರಾಟದ ರೂಪುರೇಷೆ: ವಾಟಾಳ್
ಬೆಂಗಳೂರು: ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಕ್ಕೆ (Ban MES) ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಶುಕ್ರವಾರ ನಗರದ ಟೌನ್‌ಹಾಲ್‌ನಿಂದ (Town Hall) ಪ್ರತಿಭಟನಾ ರ‍್ಯಾಲಿ ನಡೆಸಿದವು. ಮುಖ್ಯಮಂತ್ರಿಗಳ ಮನವಿ ಮೇರೆಗೆ ಕರ್ನಾಟಕ ಬಂದ್ ಕೈಬಿಟ್ಟು ಬೆಂಗಳೂರಿನಲ್ಲಿ ರ‍್ಯಾಲಿ ಮಾತ್ರ ಹಮ್ಮಿಕೊಳ್ಳಲಾಗಿತ್ತು. ಕನ್ನಡ ಹೋರಾಟಗಾರರಾದ ಸಾ.ರಾ.ಗೋವಿಂದು, ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೆಳಗ್ಗೆ 11ಕ್ಕೆ ಟೌನ್‌ಹಾಲ್ ಕನ್ನಡ ಒಕ್ಕೂಟಗಳ ಕಾರ್ತಕರ್ತರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದರು. ರಾಜ್ಯದ ಗಡಿಯಲ್ಲಿ ಪುಂಡಾಟ ನಡೆಸುತ್ತಿರುವ ಎಂಇಎಸ್ ಮತ್ತು ಶಿವಸೇನೆ ವಿರುದ್ಧ ಧಿಕ್ಕಾರ ಕೂಗಿದರು. ರಾರಯಲಿ ಆರಂಭವಾಗುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮುಖಂಡರನ್ನು ವಶಕ್ಕೆ ಪಡೆದರು. ಪ್ರತಿಭಟನಾ ಸ್ಥಳದಲ್ಲಿ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಹಾಜರಿದ್ದರು.
ರ‍್ಯಾಲಿ ಆರಂಭಕ್ಕೂ ಮುನ್ನ ಮಾತನಾಡಿದ ವಾಟಾಳ್ ನಾಗರಾಜ್, ಮುಖ್ಯಮಂತ್ರಿಗಳ ಮಾತಿಗೆ ಬೆಲೆ ಕೊಟ್ಟು ಬಂದ್ ಮುಂದೂಡಿದ್ದೇವೆ. ಬೊಮ್ಮಾಯಿ ಅವರ ಮೇಲೆ ನಮಗೆ ಭರವಸೆ ಇದೆ. ಎಂಇಎಸ್ ನಿಷೇಧ ಮಾಡದಿದ್ದರೆ ಮತ್ತೆ ಹೋರಾಟ ಮಾಡುತ್ತೇವೆ. ಆಗ ಮುಖ್ಯಮಂತ್ರಿ ಕರೆದರೂ ನಾವು ಹೋಗುವುದಿಲ್ಲ. ಜನವರಿ 22ರವರೆಗೆ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ್ದೇವೆ ಎಂದರು.
ಒಂದು ಲಕ್ಷ ಕನ್ನಡ ಹೋರಾಟಗಾರರನ್ನು ಸೇರಿಸಿ ಬೃಹತ್ ಮೇಳ!
ಬೆಳಗಾವಿಯಲ್ಲಿ ಒಂದು ಲಕ್ಷ ಕನ್ನಡ ಹೋರಾಟಗಾರರನ್ನು ಸೇರಿಸಿ ಬೃಹತ್ ಮೇಳವನ್ನು ಆಯೋಜಿಸುತ್ತೇವೆ. ಅದರ ಬಗ್ಗೆ ಸದ್ಯದಲ್ಲಿಯೇ ಮಾಹಿತಿ ನೀಡುತ್ತೇವೆ. ಜನವರಿ 5ರಂದು ಕನ್ನಡ ಸಂಘಟನೆಗಳ ಸಭೆ ಇದೆ. ಸಭೆ ಬಳಿಕ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಸಾ.ರಾ ಗೋವಿಂದ್ ಮಾತನಾಡಿ, ಎಂಇಎಸ್ ನಿಷೇಧಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸ್ವಲ್ಪದಿಂದ ಕಾಲಾವಕಾಶ ಕೇಳಿದ್ದಾರೆ. ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಎಂಇಎಸ್ ಉಳಿಯಬಾರದು. ನಿಷೇಧ ಆಗೋವರೆಗೆ ನಮ್ಮ ಹೋರಾಟ ಮುಂದುವರೆಯುತ್ತೆ. ಇನ್ನು ಜನವರಿ 22ಕ್ಕೆ ಬಂದ್ ಮಾಡುವ ಕುರಿತು ಚರ್ಚೆ ನಡೆಯುತ್ತಿದ್ದು, ಒಂದು ವೇಳೆ ಬಂದ್ ನಿಗದಿಯಾದರೆ ಎಲ್ಲರನ್ನೂ ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಸ್ವಾಭಿಮಾನಿ ಕನ್ನಡ ಅಭಿಮಾನಿಗಳು ನಮ್ಮ ಹೋರಾಟಗಳಿಗೆ ಬೆಂಬಲ ಕೊಡುತ್ತಾರೆ ಎಂದರು.
ಕರವೇಯಿಂದ ರಾಜ್ಯಪಾಲರ ಭೇಟಿ
ಗುರುವಾರ ರಾಜಭವನ ಚಲೋ ಬಳಿಕ ಮತ್ತೆ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ನಿಯೋಗವು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ, ಎಂಇಎಸ್ ಮತ್ತು ಶಿವಸೇನೆ ನಿಷೇಧ ಅಧಿಕಾರ ಕೇಂದ್ರ ಸರ್ಕಾರದ ಬಳಿ ಹೆಚ್ಚಿದೆ. ಕೇಂದ್ರದ ಗಮನ ಸೆಳೆಯುವ ಉದ್ದೇಶದಿಂದ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡಿದ್ದೇವೆ. ಕಳೆದ ಎರಡು ವಾರಗಳಿಂದ ರಾಜ್ಯದ ಗಡಿಯಲ್ಲಿ ಎಂಇಎಸ್ ಮತ್ತು ಶಿವಸೇನೆ ಪುಂಡರು ನಡೆಸುತ್ತಿರುವ ಪುಂಡಾಟಗಳನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ಅವರೂ ಕೂಡಾ ಕೇಂದ್ರ ಗೃಹ ಸಚಿವರ ಗಮಕ್ಕೆ ತರುತ್ತೇನೆ ಎಂದು ಆಶ್ವಾಸನೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:
1) ಇಷ್ಟವಿದ್ರೆ ಕೆಲ್ಸ ಮಾಡಿ, ಇಲ್ಲಾಂದ್ರೆ ಬೇರೆ ದಾರಿ ನೋಡ್ಕೊಳ್ಳಿ: ಅತಿಥಿ ಉಪನ್ಯಾಸಕರಿಗೆ ಸಚಿವ ನಾಗೇಶ್ ತರಾಟೆ!
2) Covid 19 Variant: ಮಹಾರಾಷ್ಟ್ರದಲ್ಲಿ ಒಮಿಕ್ರೋನ್ ಸೋಂಕಿತ ಸಾವು: ದೇಶದಲ್ಲೇ ಮೊದಲು!
3) Tax Returns: ಆದಾಯ ತೆರಿಗೆ ಪಾವತಿ ಗಡುವು ವಿಸ್ತರಣೆ ಇಲ್ಲ: ಕೇಂದ್ರ
