ತುಮಕೂರಿನಲ್ಲಿ ಮಾತನಾಡಿದ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ, ಆರೆಸ್ಸೆಸ್ ಒಂದು ನೋಂದಣಿ ಆಗದ ರಾಜಕೀಯ ಸಂಘಟನೆ ಎಂದು ವಾಗ್ದಾಳಿ ನಡೆಸಿದರು. ಸಚಿವ ಪ್ರಿಯಾಂಕ್ ಖರ್ಗೆಗೆ ಬಂದಿರುವ ಜೀವ ಬೆದರಿಕೆಯನ್ನು ಖಂಡಿಸಿದರು ತಮ್ಮನ್ನು ಸಿದ್ದರಾಮಯ್ಯನವರ ಉತ್ತರಾಧಿಕಾರಿ ಎಂಬ ಹೇಳಿಕೆಗೆ ವೈಯಕ್ತಿಕ ಅಭಿಪ್ರಾಯ ಎಂದರು.

ತುಮಕೂರು (ಅ.18): ಆರೆಸ್ಸೆಸ್ ನೋಂದಣಿ ಆಗದ ಸಂಘಟನೆಯಾಗಿದೆ. ಅವರ ಯಾರು, ಅವರ ಅನುಯಾಯಿಗಳು ಯಾರು ಎಂಬುದು ಯಾರಿಗೂ ಗೊತ್ತಿಲ್ಲ ಎಂದು ಆರೆಸ್ಸೆಸ್ ವಿರುದ್ಧ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇಂದು ತುಮಕೂರು ನಗರದ‌ ಗ್ರಂಥಾಲಯದ, ಕರ್ನಾಟಕ ಸಮಾಜಿಕ ಶೈಕ್ಷಣಿಕ ಕಾರ್ಯಕ್ರಮದ ವಿಚಾರಗೋಷ್ಟಿಯಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು

ದೇಶಕ್ಕೊಂದು ಆರೆಸ್ಸೆಸ್‌ಗೆ ಒಂದು ಕಾನೂನು ಮಾಡೋಕಾಗುತ್ತಾ?

ಆರೆಸ್ಸೆಸ್ ನೋಂದಣಿ ಆಗಿಲ್ಲ, ಇನ್ನು ಅವರಲ್ಲಿ ಯಾವ್ಯಾವ ಸಂಘಟನೆಗಳಿವೆಯೋ ಗೊತ್ತಿಲ್ಲ ಆದ್ರೂ ಕೂಡ ಅವರು ಸಾರ್ವಜನಿಕ ಸ್ಥಳಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ತಮ್ಮ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ದಲಿತ ಸಂಘಟನೆ ಸೇರಿದಂತೆ ಬೇರೆ ಯಾವುದೇ ಸಂಘಟನೆಗಳಿರಲಿ ಈ ರೀತಿ ಪೂರ್ವಾನುಮತಿ ಪಡೆಯದೇ ಯಾವುದೇ ಕಾರ್ಯಕ್ರಮ ನಡೆಸೋದು ಸರಿನಾ? ಎಂದು ಪ್ರಶ್ನಿಸಿದರು. ಇಡೀ ದೇಶಕ್ಕೊಂದು ಕಾನೂನು ಆರೆಸ್ಸೆಸ್‌ಗೆ ಒಂದು ಕಾನೂನಾ? ಆ ರೀತಿ ಮಾಡೋಕಾಗಲ್ಲ. ಎಲ್ಲರಿಗೊಂದೇ ಕಾನೂನು. ಆರೆಸ್ಸೆಸ್ ನವರು ಯಾವುದೇ ಕಾರ್ಯಕ್ರಮ ಮಾಡಬೇಕಾದ್ರೂ ಉದ್ದೇಶ ತಿಳಿಸಬೇಕು. ಅನುಮತಿ ಪಡೆಯಬೇಕು. ಆಮೇಲೆ ಕಾರ್ಯಕ್ರಮ ನಡೆಸಬೇಕು ಎಂದರು.

ಆರೆಸ್ಸೆಸ್ ರಾಜಕೀಯ ಸಂಘಟನೆ:

ಆರೆಸ್ಸೆಸ್ ರಾಜಕೀಯ ಸಂಘಟನೆ ಅಲ್ಲ ಅಂತಾ ಯಾರೇ ಹೇಳಬಹುದು. ಆದರೆ ಅದೊಂದು ರಾಜಕೀಯ ಸಂಘಟನೆಯಾಗಿದೆ. ರಾಜಕೀಯ ಪಕ್ಷಕ್ಕೋಸ್ಕರ ಕೆಲಸ ಮಾಡುತ್ತಿರುವಂತಹ ಸಂಸ್ಥೆಯಾಗಿದೆ. ನಿರ್ಧಿಷ್ಟವಾದ ಸಿದ್ಧಾಂತ ಇಟ್ಕೊಂಡು ಅದನ್ನ ಹರಡಬೇಕು ಅಂತಾ ಕೆಲಸ ಮಾಡ್ತಿರುವಂತ ಸಂಸ್ಥೆಗೆ ಸಂಪೂರ್ಣ ಸ್ವಾತಂತ್ರ್ಯ ಕೊಡೋದಕ್ಕೆ ಆಗೋಲ್ಲ. ಹೀಗಾಗಿ ಬೇರೆ ಸಂಸ್ಥೆಗಳಿಗೆ ಯಾವ ಕಾನೂನು ಅನ್ವಯಿಸುತ್ತೋ ಅದೇ ಇವರಿಗೂ ಅನ್ವಯ ಆಗುತ್ತೆ ಎಂದರು.

ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕುವವರು ಸಂಸ್ಕೃತಿ ರಕ್ಷಕರಾ?

ಇನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೀ ಕರೆ ಬಂದಿರುವ ವಿಚಾರ ಪ್ರಸ್ತಾಪಿಸಿ ಅವರು, ಇವ್ರು ಹೇಳ್ತಿರ್ತಾರೆ ನಾವು ಸಂಸ್ಕೃತಿ ರಕ್ಷಕರೆಂದು. ಆದ್ರೆ ಇವತ್ತು ನಮ್ಮ ಸಚಿವರಾದಂತ ಪ್ರಿಯಾಂಕ ಖರ್ಗೆಗೆ ಬಂದಿರುವ ಬೆದರಿಕೆ ಕರೆಗಳನ್ನ ನೋಡುದ್ರೆ ಇವ್ರು ಎಂಥಾ ಕಪಟಿಗಳು ಅಂತ ಗೊತ್ತಾಗುತ್ತೆ.. ಸಂಸ್ಕೃತಿಯ ರಕ್ಷಕರು ಅಂತ್ಹೇಳಿ ಎಂಥ ಕೆಟ್ಟ ನೀಚ ಪದಗಳನ್ನ ಉಪಯೋಗಿಸಿದ್ದಾರೆ ಅಂತ. ಇವರು ಯಾವತ್ತೂ ಸಂಸ್ಕೃತಿ ರಕ್ಷಕರಲ್ಲ. ಕೇವಲ ಒಂದು ಸಮುದಾಯದ ರಕ್ಷಕರು ಎಂದು ಕಟುವಾಗಿ ಟೀಕಿಸಿದರು.

ಸಿದ್ದರಾಮಯ್ಯ ಉತ್ತರಾಧಿಕಾರಿ ಯತೀಂದ್ರ?

ಸಿದ್ದರಾಮಯ್ಯನವರ ಉತ್ತರಾಧಿಕಾರಿ ಯತೀಂದ್ರ ಸಿದ್ದರಾಮಯ್ಯ ಎಂಬ ರಾಜಣ್ಣರ ಹೇಳಿಕೆ ವಿಚಾರಕ್ಕೂ ಪ್ರತಿಕ್ರಿಯಿಸಿದ ಯತೀಂದ್ರರು, ಅದು ರಾಜಣ್ಣನವರ ವೈಯಕ್ತಿಕ ಅಭಿಪ್ರಾಯ. ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಅವ್ರು ಮುಖ್ಯಮಂತ್ರಿ ಆಗಿರೋವರೆಗೂ ನನ್ನ ಮಂತ್ರಿ ಮಾಡೋದಿಲ್ಲ ಅಂತ ಹಾಗಾಗಿ ಆ ಪ್ರಶ್ನೆ ಉದ್ಭವಿಸಲ್ಲ‌‌. ರಾಜಣ್ಣ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬುದು ನಮ್ಮೆಲ್ಲರ ಆಶಯ. ಯಾಕಂದ್ರೆ ರಾಜಣ್ಣ ಅವರು ಹಿರಿಯರು, ಮುಖಂಡರು, ಬಹಳ ಹೋರಾಟ ಮಾಡಿಕೊಂಡು ಮೇಲೆ ಬಂದವರು. ರಾಜಣ್ಣ ಹೈಕಮಾಂಡ್‌ಗೆ ಪತ್ರ ಬರೆದಿರುವ ವಿಚಾರ ನಮಗೆ ಗೊತ್ತಿಲ್ಲ. ಹೈಕಮಾಂಡ್ ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಯಾರಾದ್ರೂ ರಾಜಣ್ಣ ಪರ ಇರುವಂತವರು ಅಲ್ಲಿಗೆ ಹೋಗಿ ಖುದ್ದಾಗಿ ಭೇಟಿ ಮಾಡಿ ವಸ್ತುಸ್ಥಿತಿ ತಿಳಿಸಬೇಕು ಎಂದರು.