ಆರ್‌ಎಸ್‌ಎಸ್ ನಿಷೇಧಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿಲ್ಲ. ಸರ್ಕಾರಿ ಜಾಗ, ಸಾರ್ವಜನಿಕ ಪ್ರದೇಶದಲ್ಲಿ ಆರ್‌ಎಸ್‌ಎಸ್‌ನ ಚಟುವಟಿಕೆ ಮಾಡುವುದು ಸರಿಯಲ್ಲ ಎಂದಷ್ಟೇ ಹೇಳಿದ್ದಾರೆ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.
ಬಳ್ಳಾರಿ (ಅ.16): ಆರ್‌ಎಸ್‌ಎಸ್ ನಿಷೇಧಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿಲ್ಲ. ಸರ್ಕಾರಿ ಜಾಗ, ಸಾರ್ವಜನಿಕ ಪ್ರದೇಶದಲ್ಲಿ ಆರ್‌ಎಸ್‌ಎಸ್‌ನ ಚಟುವಟಿಕೆ ಮಾಡುವುದು ಸರಿಯಲ್ಲ ಎಂದಷ್ಟೇ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗೆ ಪ್ರಿಯಾಂಕ್ ಪತ್ರ ಬರೆದಿದ್ದಾರೆ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆರ್‌ಎಸ್‌ಎಸ್ ವಿಚಾರವಾಗಿ ಪ್ರಿಯಾಂಕ್ ಖರ್ಗೆ ಹೇಳಿಕೆ ಹಾಗೂ ಪತ್ರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರೆಫರ್ ಮಾಡಿದ್ದಾರೆ.
ಆರ್‌ಎಸ್‌ಎಸ್ ಪ್ರಶ್ನಿಸಿದ್ದಕ್ಕೆ ಬೆದರಿಕೆ ಕರೆಗಳು ಬರುತ್ತಿರುವುದರಿಂದ ಸರ್ಕಾರ ಸೂಕ್ತ ಭದ್ರತೆ ನೀಡಿದೆ ಎಂದರು. ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಇಲ್ಲ ಎಂದು ಮುಖ್ಯಮಂತ್ರಿಯೇ ಸ್ಪಷ್ಟಪಡಿಸಿದ್ದಾರೆ. ಸಿಎಂ ಕರೆದ ಔತಣಕೂಟದಲ್ಲಿ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ. ಸಿಎಂ ಬದಲಾವಣೆ ಮಾಧ್ಯಮಗಳ ಸೃಷ್ಟಿಯಷ್ಟೇ. ಆ ರೀತಿಯ ಯಾವ ಚರ್ಚೆಗಳು ನಡೆದಿಲ್ಲ ಎಂದು ತಿಳಿಸಿದರು. ಸಂಡೂರಿನಲ್ಲಿ ₹300 ಕೋಟಿ ವೆಚ್ಚದಲ್ಲಿ ಕೌಶಲ್ಯ ಪಾರ್ಕ್‌ನ್ನು ಸ್ಥಾಪಿಸಲಾಗುತ್ತಿದೆ.
ಈ ಭಾಗದ ಯುವಕರಿಗೆ ಉದ್ಯೋಗಕ್ಕೆ ಸಂಬಂಧಿಸಿದಂತೆ ತರಬೇತಿಯನ್ನು ಪಾರ್ಕ್ ನಿರ್ಮಾಣ ಮಾಡಲಾಗುವುದು. ರಾಜ್ಯದಲ್ಲಿನ ಕಿರಿಯ ತಾಂತ್ರಿಕ ತರಬೇತಿ ಕಾಲೇಜುಗಳಲ್ಲಿ (ಜೆಟಿಟಿಸಿ) ಈವರೆಗೆ 2500 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿತ್ತು. ಅದನ್ನು ವಾರ್ಷಿಕ ಆರು ಸಾವಿರಗಳಿಗೆ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಇನ್ನು ಜೆಟಿಟಿಸಿ ಕಾಲೇಜುಗಳನ್ನು ತೆರೆಯಲಾಗುವುದು. ಬಹು ಕೌಶಲ್ಯಾಧಾರಿತ ಅಭಿವೃದ್ಧಿ ಕೇಂದ್ರಗಳನ್ನು ಬಳ್ಳಾರಿ, ಕೊಪ್ಪಳ, ಮೈಸೂರು ಹಾಗೂ ಕಲಬುರಗಿಯಲ್ಲಿ ಆರಂಭಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಡಿಸೆಂಬರಲ್ಲಿ ಬಳ್ಳಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ
ಡಿಸೆಂಬರ್ ತಿಂಗಳಲ್ಲಿ ಬಳ್ಳಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಆರ್.ಪಾಟೀಲ ತಿಳಿಸಿದರು. ನಗರದ ಸುಧಾ ಕ್ರಾಸ್ ಬಳಿಯ ಬಳ್ಳಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ, ಬಾಕಿ ಕಾಮಗಾರಿಗಳ ಕುರಿತು ವೈದ್ಯಾಧಿಕಾರಿಗಳೊಂದಿಗೆ ಸಭೆ ಜರುಗಿಸಿ ಅವರು ಮಾತನಾಡಿದರು. 450 ಹಾಸಿಗೆಯುಳ್ಳ ಈ ಆಸ್ಪತ್ರೆಯು 2008ರಲ್ಲಿ ಮಂಜೂರಾಗಿತ್ತು. ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದ ಆಸ್ಪತ್ರೆಯನ್ನು 2018ರಲ್ಲಿ ಮರು ಟೆಂಡರ್ ಕರೆಯಲಾಗಿತ್ತು. ಈಗ ನಮ್ಮ ಸರ್ಕಾರಾವಧಿಯಲ್ಲೇ ಪೂರ್ಣಗೊಳಿಸಿ ಡಿಸೆಂಬರ್ ತಿಂಗಳಲ್ಲಿ ಉದ್ಘಾಟನೆಗೊಳಿಸಿ ಸಾರ್ವಜನಿಕರಿಗೆ ಅರ್ಪಿಸಲಾಗುವುದು ಎಂದರು.
ಮೊದಲ ಹಂತದ ಕಾಮಗಾರಿ ಶೇ.97 ಪೂರ್ಣಗೊಂಡಿದೆ. ಎರಡನೇ ಹಂತದ ಕಾಮಗಾರಿ ಸಹ ಶೇ.96ರಷ್ಟು ಮುಗಿದಿದೆ. ಈ ತಿಂಗಳ ಕೊನೆಯ ಹಂತದಲ್ಲಿ ವಿದ್ಯುತ್ ಕಾಮಗಾರಿ ಸೇರಿದಂತೆ ಬಾಕಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು. ಕಾರ್ಡಿಯಾಲಜಿ, ಪ್ಲಾಸ್ಟಿಕ್ ಸರ್ಜರಿ, ಡಯಾಲಿಸಿಸ್ ಯಂತ್ರ, ಆರ್‌ಒ ಪ್ಲಾಂಟ್, ಬೆಡ್ ವ್ಯವಸ್ಥೆ ಹಾಗೂ ಇತರೆ ಸಾಮಗ್ರಿ ಅಳವಡಿಕೆ ಕಾರ್ಯ ಪೂರ್ಣಗೊಳಿಸಿ ಜನರಿಗೆ ಉಪಯುಕ್ತ ಆರೋಗ್ಯ ಸೇವೆ ನೀಡಲು ಮುಂದಾಗಬೇಕು. ನ್ಯೂರಾಲಜಿ ಸೇರಿದಂತೆ ಆಸ್ಪತ್ರೆಯಲ್ಲಿ ಖಾಲಿಯಿರುವ ವಿವಿಧ ವಿಭಾಗಗಳ ವೈದ್ಯರು ಮತ್ತು ಗ್ರೂಪ್-ಬಿ, ಸಿ ಹುದ್ದೆಗಳನ್ನು ಗುತ್ತಿಗೆ ಆಧಾರದಡಿ ಪಡೆಯಲು ಕೂಡಲೇ ಕ್ರಮ ವಹಿಸಬೇಕು. ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಆಸ್ಪತ್ರೆಯು ಅನುದಾನದ ಕೊರತೆಯಾದಲ್ಲಿ ಡಿಎಂಎಫ್, ಕೆಎಂಇಆರ್ಸಿ ಹಾಗೂ ಸಿಎಸ್ಆರ್ ಅನುದಾನಕ್ಕಾಗಿ ಜಿಲ್ಲಾಧಿಕಾರಿ ಗಮನಕ್ಕೆ ತರಬೇಕು ಎಂದು ನಿರ್ದೇಶಕರಿಗೆ ಸೂಚನೆ ನೀಡಿದರು.
