ಬೆಂಗಳೂರು(ಮಾ.27): ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟವು ಏ.7ರಿಂದ ಸಾರಿಗೆ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಾರಿಗೆ ಸೌಲಭ್ಯ ಒದಗಿಸಲು ಒಪ್ಪಂದದ ವಾಹನಗಳು, ಮಿನಿ ಬಸ್‌ ಹಾಗೂ ಮ್ಯಾಕ್ಸಿ ಕ್ಯಾಬ್‌ಗಳಿಗೆ ತಾತ್ಕಾಲಿಕ ರಹದಾರಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. 

ಈ ಸಂಬಂಧ ಆಸಕ್ತ ಮಿನಿ ಬಸ್‌, ಮ್ಯಾಕ್ಸಿ ಕ್ಯಾಬ್‌ ಹಾಗೂ ಬಸ್‌ ಮಾಲಿಕರು ಸಂಬಂಧಪಟ್ಟಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಅವರನ್ನು ಸಂಪರ್ಕಿಸಿ ರಹದಾರಿಗಳಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ಕೊಟ್ಟು ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಯೋಜನೆ ರೂಪಿಸುತ್ತಿರುವ ಹೊತ್ತಿನಲ್ಲಿ ರಾಜ್ಯ ಸರ್ಕಾರವೂ ಸಹ ಮುಷ್ಕರದ ವೇಳೆ ಪರ್ಯಾಯ ವ್ಯವಸ್ಥೆ ಮೂಲಕ ಸಾರ್ವಜನಿಕರಿಗೆ ಸಾರಿಗೆ ಸೌಲಭ್ಯ ಕಲ್ಪಿಸಲು ಸಿದ್ಧತೆ ಆರಂಭಿಸಿದೆ.

ಏಪ್ರಿಲ್ 7 ರಿಂದ KSRTC ಬಸ್ ಸೇವೆ ಬಂದ್ : ಹಿಂದೆಯೇ ಕಾರ್ಯತಂತ್ರ

ಕಳೆದ ಡಿಸೆಂಬರ್‌ನಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಿದ ವೇಳೆ ಸಾರಿಗೆ ನೌಕರರೊಂದಿಗೆ ಸಂಧಾನಕ್ಕೆ ಮುಂದಾದ ಸರ್ಕಾರ ಒಂಬತ್ತು ಬೇಡಿಕೆ ಈಡೇರಿಸುವ ಲಿಖಿತ ಭರವಸೆ ನೀಡಿತ್ತು. ಇದೀಗ ಸರ್ಕಾರ ಒಂಬತ್ತು ಬೇಡಿಕೆ ಪೈಕಿ ಎಂಟು ಈಡೇರಿಸಲಾಗಿದೆ ಎಂದು ಹೇಳುತ್ತಿದೆ. ಆದರೆ, ಸಾರಿಗೆ ನೌಕರರ ಕೂಟವು ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದು, ಇದರಿಂದ ನೌಕರರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು ಹೇಳುತ್ತಿದೆ. ಈ ನಡುವೆ ಬೇಡಿಕೆ ಈಡೇರಿಕೆಗೆ ನೀಡಿದ್ದ ಆರು ತಿಂಗಳ ಗಡುವು ಮಾ.15ಕ್ಕೆ ಅಂತ್ಯಗೊಂಡಿದೆ.

ಈ ಹಿನ್ನೆಲೆಯಲ್ಲಿ ಮಾ.16ರಂದು ಕಾರ್ಮಿಕ ಇಲಾಖೆ, ರಾಜ್ಯ ರಸ್ತೆ ಸಾರಿಗೆ ನಿಗಮಗಳು ಹಾಗೂ ಸಾರಿಗೆ ಸಚಿವರಿಗೆ ಮುಷ್ಕರದ ನೋಟಿಸ್‌ ನೀಡಿದೆ. ಈ ನೋಟಿಸ್‌ಗೆ 22 ದಿನಗಳ ಕಾಲಾವಕಾಶವಿದ್ದು, ಅದರೊಳಗೆ ಬೇಡಿಕೆ ಈಡೇರಿಸಬೇಕು. ಇಲ್ಲವೇ ಏ.7ರಿಂದ ಮುಷ್ಕರ ಅನಿವಾರ್ಯ ಎಂದು ನೌಕರರ ಕೂಟ ಹೇಳಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕರಿಗೆ ತೊಂದೆಯಾಗದಂತೆ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿರ್ಧಾರ ಕೈಗೊಂಡಿದೆ.