ಸುಮನಹಳ್ಳಿ ಮೇಲ್ಸೇತುವೆ ಅಧ್ಯಯನಕ್ಕೆ ಇನ್ಫ್ರಾಸಪೋರ್ಚ್‌ ಸಂಸ್ಥೆ ನೇಮಕ  ಆಗಾಗ ಗುಂಡಿ ರಿಪೇರಿ ಬದಲು ಇಡೀ ಮೇಲ್ಸೇತುವೆಯ ಸಾಮರ್ಥ್ಯ ಪರೀಕ್ಷೆಗೆ ನಿರ್ಧಾರ

ಬೆಂಗಳೂರು (ಸೆ.27) : ಸುಮನಹಳ್ಳಿ ಮೇಲ್ಸೇತುವೆ ದೃಢತೆ ಕುರಿತು ಅಧ್ಯಯನಕ್ಕೆ ಇನ್ಫ್ರಾಸಪೋರ್ಚ್‌ ಎಂಬ ಸಂಸ್ಥೆಯನ್ನು ಬಿಬಿಎಂಪಿ ನೇಮಕ ಮಾಡಿದ್ದು, ತಿಂಗಳೊಳಗೆ ವರದಿ ನೀಡುವಂತೆ ಸೂಚನೆ ನೀಡಿದೆ. ಕಳೆದ ಮೂರು ವರ್ಷಗಳ ಹಿಂದೆ ಸುಮನಹಳ್ಳಿ ಮೇಲ್ಸೇತುವೆಯ ಒಂದು ಭಾಗದಲ್ಲಿ ಗುಂಡಿ ಬಿದ್ದಿತ್ತು. ಈಗ ಮತ್ತೆ ಗುಂಡಿ ಬಿದ್ದಿದ್ದು ಮೇಲ್ಸೇತುವೆಯ ಸಾಮರ್ಥ್ಯವನ್ನು ಸಂಶಯದಿಂದ ನೋಡುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಹಿನ್ನೆಲೆಯಲ್ಲಿ 2010ರಲ್ಲಿ ಬಿಡಿಎಯಿಂದ ನಿರ್ಮಾಣಗೊಂಡಿರುವ ಈ ಮೇಲ್ಸೇತುವೆಯ ದೃಢತೆಯ ಅಧ್ಯಯನಕ್ಕೆ ಬಿಬಿಎಂಪಿ ‘ಇನ್ಫ್ರಾಸಪೋರ್ಚ್‌’ ಸಂಸ್ಥೆಯನ್ನು ನೇಮಕ ಮಾಡಿದೆ.

ಪಾದಾಚಾರಿ ಮೇಲ್ಸೇತುವೆ ಮೇಲೆಯೂ ರಿಕ್ಷಾ ಓಡಾಟ: ವಿಡಿಯೋ ವೈರಲ್

ಕೇವಲ ಮೂರು ವರ್ಷಗಳಲ್ಲಿ ಈ ಮೇಲ್ಸೇತುವೆಯ ಎರಡು ಕಡೆಗಳಲ್ಲಿ ಕಾಂಕ್ರೀಟ್‌ ಕುಸಿದು ಕಬ್ಬಿಣದ ಸರಳುಗಳು ಮೇಲೆದ್ದವು. ಇದೇ ರೀತಿಯಲ್ಲಿ ಮೇಲ್ಸೇತುವೆಯ ಇತರ ಭಾಗದಲ್ಲಿಯೂ ಕಾಂಕ್ರೀಟ್‌ ಗುಣಮಟ್ಟಕಳೆದುಕೊಂಡು ಕುಸಿಯಲಿದೆಯೇ ಅಥವಾ ಮೇಲ್ಸೇತುವೆ ಸಾಮರ್ಥ್ಯ ಹೊಂದಿದೆಯೇ ಎಂಬುದನ್ನು ಅಧ್ಯಯನ ಮಾಡಿ ಮುಂದಿನ ಕ್ರಮಕೈಗೊಳ್ಳಲು ಬಿಬಿಎಂಪಿ ನಿರ್ಧರಿಸಿದೆ. ಆಗಾಗ ಗುಂಡಿ ಬಿದ್ದ ರಸ್ತೆಯನ್ನು ರಿಪೇರಿ ಮಾಡುವ ಬದಲು ಇಡೀ ಮೇಲ್ಸೇತುವೆಯ ಸಾಮರ್ಥ್ಯ ಪರೀಕ್ಷೆ ಮಾಡಿಸುವುದು ಉತ್ತಮ ಎನ್ನುವ ತೀರ್ಮಾನಕ್ಕೆ ಬರಲಾಗಿದೆ ಎಂದು ಬಿಬಿಎಂಪಿ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಬಾಲಾಜಿ ಅವರು ಮಾಹಿತಿ ನೀಡಿದರು.

ನಾಗರಬಾವಿಯಿಂದ ಗೊರಗುಂಟೆಪಾಳ್ಯ ಸಂಪರ್ಕಿಸುವ ಈ ರಸ್ತೆ ಇದಾಗಿದೆ. ಸದ್ಯ ರಂಧ್ರದ ದುರಸ್ತಿ ಕಾರ್ಯ ನಡೆಯುತ್ತಿದೆ. ರಂಧ್ರವನ್ನು ಸರಿಪಡಿಸಲು ರಾರ‍ಯಪಿಡ್‌ ಸಿಮೆಂಟ್‌ ಅಳವಡಿಸುವ ಕಾಮಗಾರಿ ಆರಂಭಿಸಿದ್ದೇವೆ. ಸರಳುಗಳನ್ನು ಬದಲಾಯಿಸಬೇಕು. ಕಾಂಕ್ರೀಟ್‌ ಹಾಕಲು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಕೆಲಸ ಪೂರ್ಣಗೊಳ್ಳಲು ಒಂದು ವಾರ ಹಿಡಿಯಬಹುದು. ದುರಸ್ತಿಗಾಗಿ ಉನ್ನತ ದರ್ಜೆಯ ಕಾಂಕ್ರೀಟ್‌ ಬಳಸಲಾಗುತ್ತಿದೆ ಎಂದರು.

ಬೆಂಗ್ಳೂರಿನ ಈ ಮೂರು ಫ್ಲೈಓವರ್‌ಗಳು ಭಾರೀ ಡೇಂಜರಸ್‌..!

ಸಂಚಾರ ದಟ್ಟಣೆ: ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಗುಂಡಿ ಬಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಲಗ್ಗೆರೆ ಮತ್ತು ನಾಗರಬಾವಿ ಮೂಲಕ ಮೈಸೂರು ರಸ್ತೆ, ನೈಸ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಸಂಚಾರ ದಟ್ಟಣೆ ಹೆಚ್ಚು. ಅದರಲ್ಲೂ ಮುಖ್ಯವಾಗಿ ಸರಕು ಸಾಗಣೆ ಲಾರಿಗಳು ಓಡಾಟವೂ ಅಧಿಕ. ಸದ್ಯ ಒಂದು ಮಾರ್ಗದಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ವಾಹನ ದಟ್ಟಣೆ ನಿವಾರಣೆಗೆ ಸಂಚಾರಿ ಪೊಲೀಸರನ್ನು ನೇಮಕ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.