ಬೆಂಗಳೂರಿನ ಮೇಲ್ಸೇತುವೆ ಬಳಸುವ ಮುನ್ನ ಎಚ್ಚರ, ನಗರದಲ್ಲಿವೆ 47 ಮೇಲ್ಸೇತುವೆ, ಇನ್ಫ್ರಾ ಸಪೋರ್ಟ್‌ನಿಂದ 27 ಸೇತುವೆಗಳ ಸದೃಢತೆ ಪರೀಕ್ಷೆ

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಸೆ.23): ‘ಸಿರ್ಸಿ ಮೇಲ್ಸೇತುವೆ’ ಮತ್ತು ‘ಸುಮನಹಳ್ಳಿ ಮೇಲ್ಸೇತುವೆ’ ನಿಜಕ್ಕೂ ಸಂಚಾರ ಯೋಗ್ಯವೇ? ಪ್ರಯಾಣಿಕರ ಜೀವ ಸುರಕ್ಷಿತವೇ? ಇಂತಹದೊಂದು ಪ್ರಶ್ನೆ ಉದ್ಬವಿಸಲು ಕಾರಣ ನಗರದ ಮೇಲ್ಸೇತುವೆಗಳ ಸದೃಢತೆ ಪರೀಕ್ಷೆಗೆ ಬಿಬಿಎಂಪಿ ನಿಯುಕ್ತಿ ಮಾಡಿದ್ದ ಇನ್ಫ್ರಾ ಸಪೋರ್ಟ್‌ ಎಂಬ ಸಂಸ್ಥೆ ನೀಡಿರುವ ವರದಿ. ಈ ವರದಿ ಪ್ರಕಾರ ಕೆ.ಆರ್‌.ಮಾರುಕಟ್ಟೆಯ ‘ಶ್ರೀ ಬಾಲ ಗಂಗಾಧರ ಸ್ವಾಮಿ ಮೇಲ್ಸೇತುವೆ’ಯಲ್ಲಿ (ಸಿರ್ಸಿ ಫ್ಲೈಓವರ್‌) ಬಿರುಕುಗಳಿವೆ. ಹಾಗೆಯೇ ಹೊರ ವರ್ತುಲ ರಸ್ತೆಯಲ್ಲಿರುವ ಸುಮ್ಮನಹಳ್ಳಿ ಫ್ಲೈಓವರ್‌ನ ಸ್ಲಾಬ್‌ಗಳಲ್ಲಿ ವೈಟ್‌ ಪ್ಯಾಚಸ್‌ (ನೆಲ ಹಾಸು ಕಾಂಕ್ರಿಟ್‌ನಲ್ಲಿ ದೋಷ) ಇವೆ. ಈ ವರದಿ ಇದೀಗ ಬಹಿರಂಗಗೊಂಡಿದ್ದು, ಮೇಲ್ಸೇತುವೆ ಬಳಸುವ ವಾಹನ ಸವಾರರು ಮತ್ತು ನಾಗರಿಕರಲ್ಲಿ ಆತಂಕ ಹೆಚ್ಚಿಸಿದೆ.

ಬೆಂಗಳೂರಿನ ಫ್ಲೈಓವರ್‌ಗಳ ಸುರಕ್ಷತೆ ಬಗ್ಗೆ ಪದೇ ಪದೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಅವುಗಳ ಸದೃಢತೆ ಪರೀಕ್ಷೆಗೆ ಸಂಸ್ಥೆಯನ್ನು ಬಿಬಿಎಂಪಿ ನೇಮಿಸಿದೆ. ಈ ಸಂಸ್ಥೆಯು ನಗರದ 47 ಫ್ಲೈಓವರ್‌ಗಳ ಪೈಕಿ 27 ಫ್ಲೈಓವರ್‌ಗಳ ಸದೃಢತೆ ಪರೀಕ್ಷೆ ನಡೆಸಿ ಪಾಲಿಕೆಗೆ ಅಂತಿಮ ವರದಿ ಸಲ್ಲಿಸಿದೆ. ಅದರಲ್ಲಿ ಈ ಮೂರು ಫ್ಲೈಓವರ್‌ನಲ್ಲಿ ದೋಷವಿರುವುದು ದೃಢಪಟ್ಟಿದೆ.

ಕೊನೆಗೂ ಎಚ್ಚೆತ್ತ ಬಿಬಿಎಂಪಿ, ರಂಧ್ರ ಬಿದ್ದ ಸುಮನಹಳ್ಳಿ ಫ್ಲೈಓವರ್‌ ದುರಸ್ತಿ ಆರಂಭ

ಅವು- ಗೊರಗುಂಟೆಪಾಳ್ಯದಿಂದ ಬಿಇಎಲ್‌ ಸರ್ಕಲ್‌ ಕಡೆ ಸಾಗುವ ಮಾರ್ಗದಲ್ಲಿರುವ ಎಂಇಎಸ್‌ ರೈಲ್ವೆ ಫ್ಲೈಓವರ್‌. ಸಿರ್ಸಿ ಮೇಲ್ಸೆತುವೆ ಮತ್ತು ಸುಮನಹಳ್ಳಿ ಮೇಲ್ಸೇತುವೆ.

ಸಿರ್ಸಿ ಫ್ಲೈಓವರ್‌

ಮೈಸೂರು ರಸ್ತೆಯನ್ನು ಸಂಪರ್ಕಿಸಿರುವ ಸಿರ್ಸಿ ಸರ್ಕಲ್‌ ಫ್ಲೈಓವರ್‌, ಬೆಂಗಳೂರು ನಗರದ ಮಧ್ಯ ಭಾಗದಲ್ಲಿರೋ ಅತಿ ಉದ್ದದ ಮೇಲ್ಸೇತುವೆ. ದಿನವೊಂದಕ್ಕೆ ಲಕ್ಷಾಂತರ ಮಂದಿ ಈ ಫ್ಲೈಓವರ್‌ ಮೇಲೆ ಪ್ರಯಾಣಿಸುತ್ತಾರೆ. 30 ವರ್ಷದ ಹಿಂದೆ 1998ರಲ್ಲಿ ಬಿಬಿಎಂಪಿಯು 2.68 ಕಿ.ಮೀ ಉದ್ದದ ಫ್ಲೈಓವರ್‌ ನಿರ್ಮಿಸಿದ್ದು, ಕಂಬಗಳು, ಗರ್ಡರ್‌ ಹಾಗೂ ಕಾಲಂಗಳಲ್ಲಿ ಬಿರುಕುಗಳು ಗಂಭೀರವಾದ ಕಾಣಿಸಿಕೊಂಡಿದೆ. ಕೂಡಲೇ ಸರಿಪಡಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ದುರಸ್ತಿ ಕಾಮಗಾರಿಗೆ ಬರೋಬ್ಬರಿ 15 ರಿಂದ 20 ಕೋಟಿ ರು.ಗಳು ಬೇಕಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುಮ್ಮನಹಳ್ಳಿ ಮೇಲ್ಸೇತುವೆ

ಕಳೆದ 2004-06ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 910 ಮೀಟರ್‌ ಉದ್ದದ ಸುಮ್ಮನಹಳ್ಳಿ ಮೇಲ್ಸೇತುವೆ ನಿರ್ಮಿಸಿ 2014-15ರಲ್ಲಿ ಬಿಬಿಎಂಪಿಗೆ ಹಸ್ತಾಂತರಿಸಲಾಗಿತ್ತು. ನಿರ್ವಹಣೆ ದೋಷದಿಂದ 2019ರಲ್ಲಿ ನಾಗರಬಾವಿಯಿಂದ ಗೊರಗುಂಟೆಪಾಳ್ಯ ಮಾರ್ಗದಲ್ಲಿ ಗುಂಡಿ ಬಿದ್ದಿತ್ತು. ಇದೀಗ ಮತ್ತೆ ಅದೇ ಮಾರ್ಗದಲ್ಲಿ ಗುಂಡಿ ಸೃಷ್ಟಿಯಾಗಿದೆ.

ಇಡೀ ಮೇಲ್ಸೇತುವೆ ದುರಸ್ತಿಯೇ?

ಮುಂದಿನ 15 ದಿನದಲ್ಲಿ ಮತ್ತೆ ಪರೀಕ್ಷೆ ನಡೆಸಿ ಒಂದು ವೇಳೆ ಹೆಚ್ಚಿನ ಪ್ರಮಾಣ ವೈಟ್‌ ಪ್ಯಾಚಸ್‌ ದೋಷಗಳು ಕಂಡು ಬಂದರೆ ಇಡೀ ಮೇಲ್ಸೇತುವೆಯ ಪ್ಯಾನಲ್‌ ಸ್ಲಾ್ಯಬ್‌ಗಳನ್ನು ಬದಲಾವಣೆ ಮಾಡುವ ಅನಿವಾರ್ಯತೆ ಎದುರಾಗಲಿದೆ. ಅದಕ್ಕೆ ಸುಮಾರು 5 ಕೋಟಿ ರು. ಬೇಕಾಗಲಿದೆ ಎಂದು ಬಿಬಿಎಂಪಿ ಅಂದಾಜಿಸಿದೆ.

ಬೆಂಗಳೂರು: ಮತ್ತೆ ಸುಮ್ಮನಹಳ್ಳಿ ಫ್ಲೈಓವರ್‌ನಲ್ಲಿ ಗುಂಡಿ..!

ಮತ್ತೊಮ್ಮೆ ಫ್ಲೈಓವರ್‌ ಸದೃಢತೆ ಪರೀಕ್ಷೆ

ನಗರದಲ್ಲಿನ 47 ಮೇಲ್ಸೇತುವೆಗಳಿವೆ. ಇನ್ಫ್ರಾ ಸಪೋರ್ಟ್‌ ಸಂಸ್ಥೆಯು ಈ ಹಿಂದೆಯೂ ಮೇಲ್ಸೇತುವೆಗಳ ಸದೃಢತೆ ಪರೀಕ್ಷಿಸಿ ವರದಿ ನೀಡಿತ್ತು. ಇದೀಗ ಮತ್ತೊಮ್ಮೆ ಎಲ್ಲ ಮೇಲ್ಸೇತುವೆಗಳ ಪರೀಕ್ಷೆಗೆ ಸೂಚಿಸಿ, ಡಿಸೆಂಬರ್‌ ಒಳಗೆ ವರದಿ ನೀಡುವಂತೆ ತಿಳಿಸಲಾಗುವುದು ಅಂತ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ. 

ಸುರಕ್ಷಿತ ಫ್ಲೈಓವರ್‌ಗಳಿವು

ಸದೃಢತೆ ವರದಿಯಲ್ಲಿ ರಿಚ್‌ಮಂಡ್‌ ಸರ್ಕಲ್‌ ಫ್ಲೈಓವರ್‌, ಬಾಣಸವಾಡಿ ಮುಖ್ಯ ರಸ್ತೆಯ ಐಟಿಸಿ ಸರ್ಕಲ್‌, ಲಿಂಗರಾಜಪುರ, ಯಶವಂತಪುರ, ಮತ್ತಿಕೆರೆ, ನ್ಯಾಷನಲ್‌ ಕಾಲೇಜ್‌, ಹೆಬ್ಬಾಳ ಜಂಕ್ಷನ್‌, ಆನಂದರ್‌ ರಾವ್‌ ಸರ್ಕಲ್‌, ಆರ್‌ಎಂವಿ ಎಕ್ಸ್‌ಟೆನ್ಷನ್‌, ಡೈರಿ ಸರ್ಕಲ್‌, ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌, ದೊಮ್ಮಲೂರು, ನಾಯಂಡನಹಳ್ಳಿ, ರಿಂಗ್‌ ರಸ್ತೆಯಲ್ಲಿರುವ ಎಚ್‌ಎಸ್‌ಆರ್‌ ಲೇಔಟ್‌, ಅಗರ ( ರಿಂಗ್‌ ರಸ್ತೆ), ಬೆಳ್ಳಂದೂರು, ದೇವರಬೀಸನಹಳ್ಳಿ ಹಾಗೂ ಕಲ್ಕೆರೆ ಫ್ಲೈಓವರ್‌ ಸುರಕ್ಷಿತವಾಗಿವೆ ಎಂದು ಇನ್ಫ್ರಾ ಸಪೋರ್ಟ್‌ ಸಂಸ್ಥೆ ದೃಢಪಡಿಸಿದೆ.