Asianet Suvarna News Asianet Suvarna News

ಸೋಲಾರ್‌ ಪಾರ್ಕ್‌ಗೆ ಭೂಮಿ ಕೊಟ್ಟ ರೈತರ ಕಲ್ಯಾಣಕ್ಕೆ ಆದ್ಯತೆ: ಸಚಿವ ಸುನಿಲ್‌ ಕುಮಾರ್‌

*   ಪಾವಗಡದಲ್ಲಿರುವ ದೇಶದ ಅತಿದೊಡ್ಡ ಸೌರ ವಿದ್ಯುತ್‌ ಪಾರ್ಕ್‌ನಲ್ಲಿ ಸಚಿವ ಸುನೀಲ್‌ ಪರಿಶೀಲನೆ
*   ಸಿಎಸ್‌ಆರ್‌ ನಿಧಿ ಬಳಸಿ ಮೂಲಸೌಕರ್ಯ ಅಭಿವೃದ್ಧಿಗೆ ಸೂಚನೆ
*   ಸೋಲಾರ್‌ ಪಾರ್ಕ್‌ನಿಂದ 1,850 ಮೆಗಾ ವ್ಯಾಟ್‌ ವಿದ್ಯುತ್‌ ರಾಜ್ಯಕ್ಕೆ ಲಭ್ಯ

Priority for the welfare of Farmers Who Given Land to Solar Park Says Sunil Kumar grg
Author
Bengaluru, First Published Sep 30, 2021, 7:12 AM IST
  • Facebook
  • Twitter
  • Whatsapp

ಬೆಂಗಳೂರು(ಸೆ.30): ದೇಶದ ಅತಿ ದೊಡ್ಡ ಸೋಲಾರ್‌ ಪಾರ್ಕ್(Solar Park) ನಿರ್ಮಾಣಕ್ಕಾಗಿ ಭೂಮಿ ನೀಡಿದ ಪಾವಗಡ ರೈತರ ಕುಟುಂಬಗಳ ಕಲ್ಯಾಣ ಹಾಗೂ ಆ ಭಾಗದ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌(Sunil Kumar) ಹೇಳಿದ್ದಾರೆ.

ಪಾವಗಡದ ನಾಗಲಮಡಿಕೆಯಲ್ಲಿ 2,050 ಮೆಗಾವ್ಯಾಟ್‌ ಸಾಮರ್ಥ್ಯದ ಸೋಲಾರ್‌ ಪಾರ್ಕ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಯೋಜನೆಗಾಗಿ 12,718 ಎಕರೆ ಜಮೀನನ್ನು ರೈತರು ಗುತ್ತಿಗೆಗೆ ನೀಡಿದ್ದು, ಅವರಿಗೆ ವಾರ್ಷಿಕ 21 ಸಾವಿರ ರು. ನೀಡಲಾಗುತ್ತಿದೆ. ಆದರೆ ಶಾಲೆ, ಕುಡಿಯುವ ನೀರು ಮೊದಲಾದ ಮೂಲಸೌಕರ್ಯ ಅಭಿವೃದ್ಧಿ ಮಾಡಬೇಕೆಂದು ಸ್ಥಳೀಯ ರೈತರು ಮನವಿ ಮಾಡಿದ್ದಾರೆ. ಹೀಗಾಗಿ, ಸೋಲಾರ್‌ ವಿದ್ಯುತ್‌ ಉತ್ಪಾದಕ ಕಂಪನಿಗಳ ಸಿಎಸ್‌ಆರ್‌ ನಿಧಿ ಬಳಸಿ ಮೂಲಸೌಕರ್ಯ ಅಭಿವೃದ್ಧಿ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.

ವಿದ್ಯುತ್‌ ಉತ್ಪಾದಕ ಕಂಪನಿಗಳ ಸಿಎಸ್‌ಆರ್‌ ನಿಧಿಯಿಂದ 67.5 ಕೋಟಿ ರು. ಸಂಗ್ರಹವಾಗಿದೆ. ಈ ಹಣ ಬಳಸಿ ಶಾಲೆ, ರಸ್ತೆಗಳ ನಿರ್ಮಾಣ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಈ ಭಾಗದ ರೈತರು ನೀರಾವರಿ ಇಲ್ಲದೆ ಬರಡಾಗಿದ್ದ ಜಮೀನನ್ನು ಸರ್ಕಾರಕ್ಕೆ ನೀಡಿ ದೇಶದ ಇಂಧನ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಆದ್ದರಿಂದ ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ, ಭೂಮಿ ನೀಡಿದ ರೈತರ(Farmers) ಕುಟುಂಬಗಳ ಕಲ್ಯಾಣಕ್ಕೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಸಚಿವರು ಹೇಳಿದರು.

ಏಷ್ಯಾದ ಅತೀ ದೊಡ್ಡ ಸೌರ ಪಾರ್ಕ್ ವಿವಾದ: ಮೋದಿಗೆ ಡಿಕೆಶಿ ಟಾಂಗ್!

ಈ ಭಾಗದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಜೊತೆಗೆ ತುರ್ತು ಪರಿಸ್ಥಿತಿಯಲ್ಲಿ ಅಗ್ನಿಶಾಮಕ ವಾಹನದ ಅಗತ್ಯವಿದೆ ಎಂದು ಸ್ಥಳೀಯರು ಸಮಸ್ಯೆ ಹೇಳಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವರು, ಈ ಬಗ್ಗೆ ಶಿಕ್ಷಣ ಸಚಿವರು ಹಾಗೂ ಗೃಹ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಕನ್ನಡ ನಾಮಫಲಕ ಅಳವಡಿಕೆಗೆ ತಾಕೀತು:

ಸೋಲಾರ್‌ ಪಾರ್ಕ್ನಲ್ಲಿ ಇಂಗ್ಲಿಷ್‌ ನಾಮಫಲಕಗಳ ಅಳವಡಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ಕೂಡಲೇ ಈ ನಾಮಫಲಕಗಳನ್ನು ತೆರವುಗೊಳಿಸಿ ಕನ್ನಡದ(Kannada) ಫಲಕಗಳನ್ನು ಅಳವಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನವೀಕರಿಸಬಹುದಾದ ಇಂಧನ ನೀತಿ ಜಾರಿ

ರಾಜ್ಯದಲ್ಲಿ 10 ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿಯೊಂದಿಗೆ ನೂತನ ನವೀಕರಿಸಬಹುದಾದ ಇಂಧನ ನೀತಿ ತರಲಾಗುವುದು ಎಂದು ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

ಸೋಲಾರ್‌ ಪಾರ್ಕ್ನಿಂದ 1,850 ಮೆಗಾ ವ್ಯಾಟ್‌ ವಿದ್ಯುತ್‌ ರಾಜ್ಯಕ್ಕೆ ಲಭ್ಯವಾಗುತ್ತಿದ್ದು, 200 ಮೆಗಾವ್ಯಾಟ್‌ ಅನ್ನು ಹೊರರಾಜ್ಯಕ್ಕೆ ಪೂರೈಸಲಾಗುತ್ತಿದೆ. 2020-21 ನೇ ಸಾಲಿನಲ್ಲಿ ತಿಂಗಳಿಗೆ 377.43 ದಶಲಕ್ಷ ಯುನಿಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು, 2022 ರ ವೇಳೆಗೆ 175 ಗಿಗಾ ವ್ಯಾಟ್‌ಗೆ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಮಾಡುವ ಗುರಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ 10,000 ಮೆಗಾ ವ್ಯಾಟ್‌ ಉತ್ಪಾದಿಸುವ ಗುರಿಯೊಂದಿಗೆ ನೂತನ ನವೀಕರಿಸಬಹುದಾದ ಇಂಧನ ನೀತಿ ತರಲಾಗುವುದು ಎಂದು ಹೇಳಿದರು.
 

Follow Us:
Download App:
  • android
  • ios