ಬೆಂಗಳೂರು(ಜು.11): ಪಿಎಂ ಮೋದಿ ಶುಕ್ರವಾರ ಮಧ್ಯಪ್ರದೇಶದ ರೇವಾದಲ್ಲಿ ಸ್ಥಾಪಿಸಲಾಗಿರುವ 750 ಮೆಗಾವ್ಯಾಟ್ ಸೌರ ವಿದ್ಯುತ್ ಯೋಜನೆ ಘಟಕವನ್ನು ಉದ್ಘಾಟಿಸಿದ್ದರು. ಹೀಗಿರುವಾಗ ಪಿಎಂಒ ಇದನ್ನು ಏಷ್ಯಾದ ಅತೀ ದೊಡ್ಡ ಸೌರ ವಿದ್ಯುತ್ ಘಟಕ ಎಂದು ಹೇಳಿತ್ತು. ಆದರೀಗ ಈ ವಿಚಾರ ವಿವಾದ ಹುಟ್ಟು ಹಾಕಿದ್ದು, ಕಾಂಗ್ರೆಸ್ ನಾಯಕರು ಮೋದಿ ಸರ್ಕಾರದ ವಿರುದ್ಧ ಮುಗಿ ಬಿದ್ದಿದ್ದಾರೆ. ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್‌ ಕರ್ನಾಟಕದಲ್ಲಿದೆ, ಸುಳ್ಳು ಹೇಳಬೇಡಿ ಎಂದು ಪ್ರಧಾನಿ ಮೋದಿಯನ್ನು ಟೀಕಿಸಿದ್ದಾರೆ.

ಏಷ್ಯಾದ ಅತೀ ದೊಡ್ಡ ಸೋಲಾರ್ ಪ್ಲಾಂಟ್ ಉದ್ಘಾಟಿಸಿದ ಮೋದಿ!

ಇನ್ನು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಈ ಸಂಬಂಧ ಟ್ವೀಟ್ ಮಾಡಿದ್ದು, ಬಿಜೆಪಿ ಸರಕಾರ ಮಧ್ಯಪ್ರದೇಶದ ರೆವಾದಲ್ಲಿ ನಿರ್ಮಾಣವಾದ 750 ಮೆಗಾ ವ್ಯಾಟ್‌ನ ಸೌರ ವಿದ್ಯುತ್‌ ಘಟಕವನ್ನ ಏಷ್ಯಾದ ಅತೀ ದೊಡ್ಡ ಘಟಕ ಎನ್ನುತ್ತಿದೆ. ಹಾಗಾದರೆ ಕರ್ನಾಟಕದ ಪಾವಗಡದಲ್ಲಿ ಮೂರು ವರ್ಷದ ಹಿಂದೆ, 2018ರಲಲ್ಲಿ ಕಾಂಗ್ರೆಸ್‌ ಸರ್ಕಾರ ನಿರ್ಮಿಸಿರುವ 2000 ಮೆಗಾ ವ್ಯಾಟ್‌ನ ಸೌರ ವಿದ್ಯುತ್‌ ಯೋಜನೆ ಯಾವುದು? ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ  2000 ಮೆಗಾ ವ್ಯಾಟ್‌ ಸೌರ ವಿದ್ಯುತ್‌ ಯೋಜನೆಗಾಗಿ 13,000 ಎಕರೆ ಭೂಮಿಯನ್ನ ಉಪಯೋಗಿಸಲಾಗಿದೆ. ವಿಶೇಷವೆಂದರೆ ಇಲ್ಲಿನ ಯಾವುದೇ ಭೂಮಿಯನ್ನ ರೈತರಿಂದ ಒತ್ತುವರಿ ಮಾಡಿಕೊಂಡಿಲ್ಲ. ಇದನ್ನು ರೈತರಿಂದ ಗುತ್ತಿಗೆಗೆ ಪಡೆದಿದ್ದು, ಇದಕ್ಕಾಗಿ ಪ್ರತಿ ವರ್ಷ ರೈತರಿಗೆ ಪ್ರತೀ ವರ್ಷ ಬಾಡಿಗೆ ನೀಡಲಾಗುತ್ತಿದೆ ಎಂದಿದ್ದಾರೆ. 

ಏಷ್ಯಾದ ಅತಿ ದೊಡ್ಡ ಸೌರ ಸ್ಥಾವರ ಉದ್ಘಾಟಿಸಿದ ಮೋದಿ, ಇದ್ರಿಂದಲೇ ಚಲಿಸಲಿದೆ ದೆಹಲಿ ಮೆಟ್ರೋ

ಇನ್ನು ಕೇಂದ್ರ ಇಂಧನ ಸಚಿವ ಆರ್‌. ಕೆ ಸಿಂಗ್‌ಗೆ ಈ ಸಂಬಂಧ ಸ್ಪಷ್ಟನೆ ನೀಡುವಂತೆಯೂ ಡಿಕೆಶಿ ಒತ್ತಾಯಿಸಿದ್ದಾರೆ. ಡಿಕೆಶಿ ಟ್ವೀಟ್‌ಗೆ ಅನೇಕ ಕಾಂಗ್ರೆಸ್‌ ಮುಖಂಡರು ಬೆಂಬಲ ಸೂಚಿಸಿದ್ದು, ಕೇಂದ್ರ ಸರಕಾರ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ. 

ಪಿಎಂಒ ಖಾತೆ ಹೊರತುಪಡಿಸಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್‌ ಎಂದು ಟ್ವೀಟ್‌ ಮಾಡಿದ್ದರು. ಇದಕ್ಕೂ ಹಲವು ಕಾಂಗ್ರೆಸಿಗರು ಟಾಂಗ್‌ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಡಿಕೆಶಿ ಇಂಧನ ಸಚಿವರಾಗಿದ್ದ ಈ ಸೋಲಾರ್‌ ಪಾರ್ಕನ್ನ ನಿರ್ಮಿಸಿದ್ದರು ಎಂದು ದೂರಿದ್ದಾರೆ