ಪ್ರಧಾನಿ ಮೋದಿ ಕಲಬುರಗಿಗೆ ಬಂದ್ರೂ ಸ್ವಾಗತಕ್ಕೆ ಬಾರದ ಪ್ರಿಯಾಂಕ್ ಖರ್ಗೆ!
ಕಲಬುರಗಿಗೆ ಶುಕ್ರವಾರದ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸದೆ ದೂರ ಉಳಿದಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರ ನಡೆ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದಾರೆ.
ಶೇಷಮೂರ್ತಿ ಅವಧಾನಿ
ಕಲಬುರಗಿ (ಜ.20): ಕಲಬುರಗಿಗೆ ಶುಕ್ರವಾರದ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸದೆ ದೂರ ಉಳಿದಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರ ನಡೆ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದಾರೆ.
ಮೋದಿ ಸ್ವಾಗತಕ್ಕೆ ಗೈರಾಗುವ ಮೂಲಕ ಪ್ರಿಯಾಂಕ್ ಖರ್ಗೆ ಶಿಷ್ಟಾಚಾರ ಉಲ್ಲಂಘನೆ ಮಾಡಿದರೆ? ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ಮೋದಿ ಸೋಲಾಪೂರಕ್ಕೆ ಹೋಗುವ ನಿಮಿತ್ತ ಕಲಬುರಗಿ ದಾರಿಯನ್ನು ಆಯ್ಕೆ ಮಾಡಿಕೊಂಡದ್ದೇಕೆಂದು ಕಳೆದ 2 ದಿನದಿಂದ ರಾಜಕೀಯ ಪಡಸಾಲೆಯಲ್ಲಿ ನಾನಾ ರೀತಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ, ಪ್ರಿಯಾಂಕ್ ಗೈರು ರಾಜಕೀಯ ಚರ್ಚೆಯ ಮಗ್ಗಲು ಬದಲಾಯಿಸಿದೆ. ಪ್ರಿಯಾಂಕ್ ಸಾರಾ ಸಾಗಾಟಾಗಿ ಶಿಷ್ಟಾಚಾಕ ಉಲ್ಲಂಘಿಸಿದ್ದಾರೆಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ನಕಲಿ ಸೋಪ್ ತಯಾರಕರ ಜತೆ ಬಿಜೆಪಿಗರ ನಂಟು: ಸಚಿವ ಪ್ರಿಯಾಂಕ್ ಖರ್ಗೆ
ಮೋದಿ ಅವರು ಕಲಬುರಗಿಗೆ ಬಂದಿಳಿದು ಕೆಲಕಾಲ ತಂಗಿ ಸೋಲಾಪೂರಕ್ಕೆ ಹೋಗಿ ಬಂದು ಕಲಬುರಗಿಯಿಂದಲೇ ಬೆಂಗಳೂರಿಗೆ ವಿಮಾನದಲ್ಲಿ ತೆರಳಿದರು. ಪ್ರಿಯಾಂಕ್ ಖರ್ಗೆ ಅನುಪಸ್ಥಿತಿ ಹಿನ್ನೆಲೆ ಜಿಲ್ಲೆಯವರೇ ಆದ ಸಚಿವ ಡಾ. ಶರಣಪ್ರಕಾಶ ಪಾಟೀಲರು ಬೆಂಗಳೂರಿನಿಂದ ರೈಲಿನ ಮೂಲಕ ಕಲಬುರಗಿಗೆ ಬಂದು ವಿಮಾನ ನಿಲ್ದಾಣದಲ್ಲಿ ಹಾಜರಿದ್ದು ಪ್ರಧಾನಿ ಮೋದಿಗೆ ರಾಜ್ಯ ಸರ್ಕಾರದ ಪರವಾಗಿ ಸ್ವಾಗತಿಸಿದರು.
ಕನ್ನಡಪ್ರಭ ಜಿಲ್ಲಾಡಳಿತದ ಶಿಷ್ಟಾಚಾರ ವಿಭಾಗಕ್ಕೆ ಈ ಕುರಿತಂತೆ ಮಾಹಿತಿ ಕೋರಿದಾಗ, ಪ್ರಧಾನಿ ಸ್ವಾಗತಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಇರುತ್ತಾರೆ. ಆದರೆ ಇಲ್ಲಿ ಉಸ್ತುವಾರಿ ಸಚಿವರ ಅನುಪಸ್ಥಿತಿಯಲ್ಲಿ ನಮ್ಮವರೇ ಆದ ಸಚಿವ ಡಾ. ಶರಣಪ್ರಕಾಶ ಪಾಟೀಲರು ರಾಜ್ಯದ ಪರವಾಗಿ ಪ್ರಧಾನಿಗೆ ಗೌರವ ಸಲ್ಲಿಸಿ ಸ್ವಾಗತಿಸಿದ್ದಾರೆ. ಡಾ. ಶರಣಪ್ರಕಾಶರನ್ನು ರಾಜ್ಯ ಸರ್ಕಾರದ ಪ್ರತಿನಿಧಿ ಎಂದು ಪ್ರಧಾನಿ ಸ್ವಾಗತಕ್ಕೆ ನಿಯೋಜಿಸಿರುವ ಯಾವುದೇ ರೀತಿ ಲಿಖಿತ ರಾಜ್ಯ ಸರ್ಕಾರದ ಸೂಚನೆಗಳಾಗಲಿ, ಆದೇಶಗಳಾಗಲಿ ತಮಗೆ ಬಂದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಪ್ರಿಯಾಂಕ್ ಈ ಕಾರಣಗಳಿಂದ ದೂರ ಉಳಿದರೆ?
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಎಐಸಿಸಿ ಅಧ್ಯಕ್ಷ, ಇಂಡಿಯಾ ಕೂಟದ ಪ್ರಧಾನಿ ಅಭ್ಯರ್ಥಿ ಡಾ. ಮಲ್ಲಿಕಾರ್ಜುನ ಖರ್ಗೆ ಪುತ್ರ, ಜೊತೆಗೆ ಮೋದಿಯವರನ್ನು ಕಟುವಾಗಿ ಟೀಕಿಸುವವರಲ್ಲಿ ಮೊದಲಿಗರು, ಸ್ವಾಗತಿಸೋವಾಗ ಏನಾದರೂ ಮುಜುಗರದ ಸನ್ನಿವೇಶಗಳು ಘಟಿಸಿದರೆ ಹೇಗೆಂದು ಸಂಪುಟ ಸಹೋದ್ಯೋಗಿ ಡಾ. ಶರಣಪ್ರಕಾಶರಿಗೆ ಈ ಕೆಲಸ ಬಿಟ್ಟುಕೊಟ್ಟಿರಬಹುದು ಎಂದು ಹೇಳಲಾಗುತ್ತಿದೆ.
ಪ್ರಧಾನಿ ಸ್ವಾಗತಕ್ಕೆ ಬಾರದೆ ದೂರ ಉಳಿದಿರುವ ಪ್ರಿಯಾಂಕ್ ಧೋರಣೆ ಟೀಕೆಗೆ ಗುರಿಯಾಗಿದೆ. ಪ್ರಿಯಾಂಕ್ ತಪ್ಪು ಮಾಡಿದ್ದಾರೆ. ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ತಕ್ಷಣ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನ ಖಾಲಿ ಮಾಡಬೇಕು ಎಂದು ಸಂಸದ ಉಮೇಶ್ ಜಾಧವ್ ಆಗ್ರಹಿಸಿದ್ದಾರೆ.
ಮೋದಿಗೆ ಕಮಲದ ಹೂವು ನೀಡಿ ಸ್ವಾಗತಿಸಿದ ಜಿಲ್ಲಾಧಿಕಾರಿ ಫೌಜಿಯಾ
ಕಲಬುರಗಿ ವಿಮಾನ ನಿಲ್ದಾಣದಲ್ಲಿ ನರೇಂದ್ರ ಮೋದಿಯವರನ್ನು ಜಿಲ್ಲಾಡಳಿತದ ಅಧಿಕಾರಿಗಳು, ಪಕ್ಷದ ಮುಖಂಡರೆಲ್ಲರೂ ಕಮಲದ ಹೂವು ನೀಡಿ ಸ್ವಾಗತಿಸಿದರು. ಮಹಾರಾಷ್ಟ್ರದ ಸೋಲಾಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ನವದೆಹಲಿಯಿಂದ ಇಂಡಿಯನ್ ಏರ್ ಪೋರ್ಸ್ ವಿಶೇಷ ವಿಮಾನದ ಮೂಲಕ ಶುಕ್ರವಾರ ಬೆಳಗ್ಗೆ 9.30 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದ ನರೇಂದ್ರ ಮೋದಿ ಅವರನ್ನು ರಾಜ್ಯ ಸರ್ಕಾರದ ಶಿಷ್ಠಾಚಾರದಂತೆ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಲಾಯಿತು.
ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಸಂಸದ ಡಾ. ಉಮೇಶ ಜಾಧವ್, ಶಾಸಕರಾದ ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ, ಶಶಿಲ್ ಜಿ. ನಮೋಶಿ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರರಾದ ವಿಶಾಲ ಧರ್ಗಿ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್. ಚೇತನ ಕುಮಾರ, ಎಸ್.ಪಿ. ಅಡ್ಡೂರು ಶ್ರೀನಿವಾಸಲು ಹೂಗುಚ್ಚ ನೀಡಿ ಬರಮಾಡಿಕೊಂಡರು.
ಲೋಕ ಸಮರಕ್ಕೂ ಮುನ್ನ ಸಿಡಿದೆದ್ದ ಅನಂತ್ ಕುಮಾರ್ ಹೆಗಡೆ; ಫೈರ್ ಬ್ರಾಂಡ್ ಜೊತೆ ನಿಲ್ಲದ ಕೇಸರಿ ಪಡೆ!
ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ, ಸುಭಾಷ ಗುತ್ತೇದಾರ, ಮಾಲಿಕಯ್ಯ ಗುತ್ತೇದಾರ, ಅಮರನಾಥ ಪಾಟೀಲ, ಬಿಜೆಪಿ ಪಕ್ಷದ ಕಲಬುರಗಿ ನಗರಾಧ್ಯಕ್ಷ ಚಂದು ಪಾಟೀಲ, ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ ಸೇರಿ ಜಿಲ್ಲೆ ಅನೇಕ ಮುಖಂಡರು ಇದ್ದರು.
ಸೊಲ್ಲಾಪುರದಲ್ಲಿನ ಸಮಾರಂಭ ಮುಗಿಸಿಕೊಂಡು ಬೆಂಗಳೂರಿಗೆ ತೆರಳಲು ಮತ್ತೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 12.40ಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಶಿಷ್ಟಾಚಾರದಂತೆ ಬೀಳ್ಕೊಡಲಾಯಿತು.