ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತ್ತಿಕೆರೆಯ ನೇತಾಜಿ ವೃತ್ತದಲ್ಲಿ ನೂತನವಾಗಿ ನಿರ್ಮಿಸಿರುವ ಅತ್ಯಾಧುನಿಕ ಸೌಲಭ್ಯಗಳ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಭಾನುವಾರ ಕೇಂದ್ರ ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್‌ ಉದ್ಘಾಟಿಸಿದರು.

ಬೆಂಗಳೂರು (ಡಿ.19) : ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತ್ತಿಕೆರೆಯ ನೇತಾಜಿ ವೃತ್ತದಲ್ಲಿ ನೂತನವಾಗಿ ನಿರ್ಮಿಸಿರುವ ಅತ್ಯಾಧುನಿಕ ಸೌಲಭ್ಯಗಳ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಭಾನುವಾರ ಕೇಂದ್ರ ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್‌ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಕ್ಷೇತ್ರದ ಶಾಸಕ, ಸಚಿವ ಡಾ ಸಿ.ಎನ್‌.ಅಶ್ವತ್ಥನಾರಾಯಣ, ‘ಬೆಂಗಳೂರು ವಿಜ್ಞಾನ-ತಂತ್ರಜ್ಞಾನಗಳ ರಾಜಧಾನಿಯಾಗಿದೆ. ಇದರ ಲಾಭವು ಜನಸಾಮಾನ್ಯರಿಗೆ ಸಿಗಬೇಕೆಂಬ ಉದ್ದೇಶದಿಂದ ಈ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಸ್ಮಾರ್ಚ್‌ ಕ್ಲಿನಿಕ್‌ ಇದಾಗಿದೆ. ಕಣ್ಣಿನ ಪರೀಕ್ಷೆ, ಫಿಸಿಯೋಥೆರಪಿ, ದಂತ ತಪಾಸಣೆ, ಎಕ್ಸ್‌ರೇ, ಉಚಿತ ಔಷಧಾಲಯ, ಪ್ರಧಾನಮಂತ್ರಿ ಜನೌಷಧ ಕೇಂದ್ರ, ಇ-ಆಸ್ಪತ್ರೆ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ವ್ಯಾಪ್ತಿಯಲ್ಲಿರುವ ಸೇವೆಗಳು ಲಭ್ಯವಿದೆ. ತಜ್ಞ ವೈದ್ಯರು ಕೂಡ ಇರಲಿದ್ದು, ಒಟ್ಟು 220 ಪ್ರಯೋಗಾಲಯ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುವುದು’ ಎಂದರು.

Assembly Session: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಿಸುತ್ತಾರಾ ಸಿಎಂ?

ಸಪ್ತಗಿರಿ ವೈದ್ಯಕೀಯ ಕಾಲೇಜಿನ ಐವರು ವೈದ್ಯರು ಕೂಡ ಈ ಕೇಂದ್ರದಲ್ಲಿ ಸೇವೆ ಒದಗಿಸಲಿದ್ದಾರೆ. ಈ ಕೇಂದ್ರಕ್ಕಾಗಿ ಕೆಪಿಟಿಸಿಎಲ್‌ ಭೂಮಿ ಕೊಟ್ಟಿದೆ. ಮಧುಮೇಹ, ರಕ್ತದ ಒತ್ತಡ, ಚರ್ಮದ ಕಾಯಿಲೆ, ಬೆನ್ನುನೋವು ಮುಂತಾದ ಕಾಯಿಲೆಗಳಿಗೆ ಸಮರ್ಪಕ ಚಿಕಿತ್ಸೆ ದೊರೆಯಲಿದೆ. ಒಂದು ವೇಳೆ ಇಲ್ಲಿ ಚಿಕಿತ್ಸೆ ದೊರೆಯದೆ ಇರುವ ಕಾಯಿಲೆಗಳ ಮಾಹಿತಿಯನ್ನು ಕಮಾಂಡ್‌ ಸೆಂಟರ್‌ ಮೂಲಕ ಮಿಂಟೋ ಸೇರಿದಂತೆ ರೆಫೆರಲ್‌ ಆಸ್ಪತ್ರೆಗಳಿಗೆ ರವಾನಿಸಿ, ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಮಲ್ಲೇಶ್ವರನಲ್ಲಿರುವ ಇಂತಹ ಆರೋಗ್ಯ ಕೇಂದ್ರಗಳು ಇಡೀ ದೇಶಕ್ಕೇ ಮಾದರಿಯಾಗಿವೆ. ಕೇಂದ್ರ ಸಚಿವ ಅಶ್ವಿನ್‌ ವೈಷ್ಣವ್‌ ತಾವು ರಾಜ್ಯಸಭೆಯಲ್ಲಿ ಪ್ರತಿನಿಧಿಸುವ ಒಡಿಶಾದಲ್ಲಿ ಕೂಡ ಇಂಥ ಉಪಕ್ರಮ ಆರಂಭಿಸಲು ಆಸಕ್ತಿ ತೋರಿದ್ದಾರೆ. ಜನವರಿಯಲ್ಲಿ ಮತ್ತಿಕೆರೆಯ ಎ.ಕೆ.ಕಾಲೋನಿಯಲ್ಲಿ ‘ನಮ್ಮ ಕ್ಲಿನಿಕ್‌’ಗೆ ಕೂಡ ಚಾಲನೆ ನೀಡಲಾಗುವುದು. ಜತೆಗೆ ಸ್ಯಾಂಕಿ ಕೆರೆಯ ಆವರಣದಲ್ಲಿ ಕೂಡ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ಸಚಿವ ಡಾ ಸಿ.ಎನ್‌.ಅಶ್ವತ್ಥನಾರಾಯಣ ಎಂದು ಮಾಹಿತಿ ನೀಡಿದರು.

ಮೋದಿ ಸರ್ಕಾರದಿಂದ 1.25 ಲಕ್ಷ ಕೋಟಿ ರೂ. ಕಪ್ಪುಹಣ ವಶಕ್ಕೆ: ಕೇಂದ್ರ ಸಚಿವ

ಕಾರ್ಯಕ್ರಮದಲ್ಲಿ ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ಡಾ ದೀಪಕ್‌, ಡಾಗಿರೀಶ್‌, ಡಾಪ್ರಕಾಶ್‌, ಡಾ ಸುಚೇತಾ, ಸ್ಟಾರ್ಟಪ್‌ ವಿಷನ್‌ ಗ್ರೂಪ್‌ ಅಧ್ಯಕ್ಷ ಪ್ರಶಾಂತ್‌ ಪ್ರಕಾಶ್‌ ಸೇರಿದಂತೆ ಸ್ಥಳೀಯ ಮುಖಂಡರು ಭಾಗಿಯಾಗಿದ್ದರು.