ಬೆಂಗಳೂರಿಗೆ ಬೆಲೆ ಏರಿಕೆ ಶಾಕ್, ಹೊಟೆಲ್‌ಗಳಲ್ಲಿ ಕಾಫಿ ತಿಂಡಿಗಳ ಬೆಲೆ ಹೆಚ್ಚಳ, ಹಲವು ಹೊಟೆಲ್‌ಗಳಲ್ಲಿ ಈಗಾಗಲೇ ಹೊಸ ದರ ಜಾರಿಗೆ ಬಂದಿದೆ. ಟೀ ಹಾಗೂ ಕಾಫಿ ದರ ಇದೀಗ ಬಲು ದುಬಾರಿಯಾಗಿದೆ.
ಬೆಂಗಳೂರು (ಮೇ.03) ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ದೇಶದಲ್ಲಿ ಹೊಟೆಲ್‌ಗಳಲ್ಲಿ ತಿಂಡಿ ತಿನಿಸುಗಳ ಬೆಲೆ ಗಗನಕ್ಕೇರಿದೆ. ಬೆಂಗಳೂರಿನಲ್ಲಿ ಈಗಾಗಲೇ ಹೊಸ ದರ ಜಾರಿಗೆ ಬಂದಿದೆ. ಬೆಂಗಳೂರಿನ ಹಲವು ಹೊಟೆಲ್‌ಗಳಲ್ಲಿ ಟೀ, ಕಾಫಿ, ತಿಂಡಿಗಳ ಬೆಲೆ ಏರಿಕೆಯಾಗಿದೆ. ದಿನ ಬಳಕೆ ವಸ್ತುಗಳು, ಹೊಟೆಲ್ ತಿನಿಸುಗಳು ಇದೀಗ ದುಬಾರಿಯಾಗಿರುವುದು ಜನಸಾಮಾನ್ಯರ ನಿದ್ದೆಗೆಡಿಸಿದೆ. ಟೀ ಹಾಗೂ ಕಾಫಿ ಬೆಲೆ 25 ರೂಪಾಯಿಗೆ ಏರಿಕೆಯಾಗಿದೆ.
ಬೆಂಗಳೂರಿನ ಕೆಲ ಹೋಟೆಲ್ ಗಳಲ್ಲಿ ಹೊಸ ದರ
ಮೊದಲು ಎಲ್‌ಪಿಜಿ ಸಿಲಿಂಡರ್ ಕೊರತೆ ಕಾರಣ ಬೆಲೆ ಏರಿಕೆ ಮಾಡಿದ್ದ ಹೊಟೆಲ್‌ಗಳು ಇದೀಗ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ತಿನಿಸುಗಳ ಬೆಲೆ ಏರಿಕೆ ಮಾಡಿದೆ. ಟೀ ಹಾಗೂ ಕಾಫಿ ದರದಲ್ಲಿ 5 ರೂಪಾಯಿ ಏರಿಕೆ ಮಾಡಲಾಗಿದೆ. ತಿಂಡಿಯ ದರದಲ್ಲೂ 5 ರೂಪಾಯಿ ಏರಿಕೆ ಮಾಡಲಾಗಿದೆ. ಬೆಂಗಳೂರಿನ ಅಶೋಕ ಪಿಲ್ಲರ್ ಬಳಿಯ ಶಿವಳ್ಳಿ ಹೋಟೆಲ್ ನಲ್ಲಿ ಪರಿಷ್ಕೃತ ದರ ಜಾರಿಗೆ ಬಂದಿದೆ. ಬೆಂಗಳೂರಿನ ಹಲವು ಹೊಟೆಲ್‌ಗಳಲ್ಲಿ ಹೊಸ ದರ ಪಟ್ಟಿ ಜಾರಿಗೆ ಬಂದಿದೆ.
ಸಿಲಿಂಡರ್ ಕೊರತೆ ಸಂದರ್ಭದಲ್ಲೇ ಟೀ ಹಾಗೂ ಕಾಫಿ ಬೆಲೆ 20 ರೂಪಾಯಿಗೆ ಏರಿಕೆಯಾಗಿತ್ತು. ಇದೀಗ ಮತ್ತೆ ಐದು ರೂಪಾಯಿ ಹೆಚ್ಚಳವಾಗಿದೆ. ಇದರಿಂದ ಬೆಂಗಳೂರಿನಲ್ಲಿ ನಾರ್ಮಲ್ ಕಾಫಿ ಹಾಗೂ ಟೀ ಬೆಲೆ 25 ರೂಪಾಯಿಗೆ ಏರಿಕೆಯಾಗಿದೆ.ಸಿಂಗಲ್ ಇಡ್ಲಿ ಬೆಲೆ 30 ರೂಪಾಯಿಯಿಂದ ಇದೀಗ 35 ರೂಪಾಯಿಗೆ ಏರಿಕೆಯಾಗಿದೆ. ಬೆಲೆ ಏರಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ವೇತನ ಹೆಚ್ಚಳ ಸೇರಿದಂತೆ ಹಲವು ಕಾರಣಗಳಿಂದ ಹೊಟೆಲ್ ಉದ್ಯಮಕ್ಕೆ ತೀವ್ರ ಸವಾಲು ಎದುರಾಗಿದೆ. ಹೀಗಾಗಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಹೊಟೆಲ್ ಮಾಲೀಕ ಗಿರೀಶ್ ಹೇಳಿದ್ದಾರೆ.
ವಾಣಿಜ್ಯ ಸಿಲಿಂಡರ್ ಏರಿಕೆ ವಿರುದ್ದ ಪ್ರತಿಪಕ್ಷಗಳು ಗರಂ
ಮಧ್ಯಪ್ರಾಚ್ಯ ಯುದ್ಧದ ಸಂದರ್ಭದಲ್ಲಿ ಭಾರತದ ಗಟ್ಟಿಯಾದ ರಾಜತಾಂತ್ರಿಕತೆಯಿಂದ ತೈಲ ಹಡಗುಗಳು ಭಾರತಕ್ಕೆ ತೈಲ ಪೂರೈಕೆ ಮಾಡಿದೆ ಎಂದು ಕೇಂದ್ರ ಸರ್ಕಾರವೇ ಹೇಳುತ್ತಿದೆ. ಇದೀಗ ತೈಲ , ಗ್ಯಾಸ್ ಕೊರತೆ ಎಂದು ಬೆಲೆ ಏರಿಕೆ ಮಾಡುತ್ತಿದೆ ಎಂದು ವಿಪಕ್ಷಗಳು ಆರೋಪಿಸಿದೆ. ಪಂಚ ರಾಜ್ಯಗಳ ಚುನಾವಣೆ ಮುಗಿದ ಬೆನ್ನಲ್ಲೇ ಬೆಲೆ ಏರಿಕೆ ಮಾಡಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರದ ನಡೆ ಅನುಮಾನ ಮೂಡಿಸಿದೆ ಎಂದು ವಿಪಕ್ಷಗಳು ಆರೋಪಿಸಿದೆ.
ಪಿಜಿಗಳಲ್ಲೂ ಬೆಲೆ ಏರಿಕೆ ಬಿಸಿ
ಹೋಟೆಲ್ ತಿಂಡಿ ಕಾಪೀ ದರ ಏರಿಕೆ ಬೆನ್ನಲ್ಲೇ ಇದೀಗ PGಗಳಲ್ಲಿ ಬೆಲೆ ಏರಿಕೆಯಾಗುತ್ತಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಿಂದ ಬೆಂಗಳೂರಿನಲ್ಲಿರುವ ಪೇಯಿಂಗ್ ಗೆಸ್ಟ್(ಪಿಜಿ)ಗಳಲ್ಲಿ ಬೆಲೆ ಏರಿಕೆಯಾಗುತ್ತಿದೆ. ಪಿಜಿಗಳ ದರದಲ್ಲಿ ಶೇಕಡಾ 5 ರಿಂದ 10ರಷ್ಟು ಬೆಲೆ ಏರಿಕೆಯಾಗುತ್ತಿದೆ. ಇದೇ ತಿಂಗಳಲ್ಲಿ ಪಿಜಿ ಬೆಲೆ ಏರಿಕೆ ಮಾಡಲು ಮಾಲೀಕರು ನಿರ್ಧರಿಸಿದ್ದಾರೆ. ಈ ಕುರಿತು ಪಿಜಿ ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಹೇಳಿದ್ದಾರೆ.

