Asianet Suvarna News Asianet Suvarna News

ಇನ್ಮುಂದೆ ರಾಜ್ಯ ಸರ್ಕಾರಿ ಕಚೇರಿಗಳಿಗೆ ಪ್ರಿಪೇಯ್ಡ್‌ ವಿದ್ಯುತ್‌ ಮೀಟರ್‌

*   ಇಂಧನ ಸಚಿವ ಸುನೀಲ್‌ ಕುಮಾರ್‌ ಘೋಷಣೆ
*   ಮನೆಗಳಲ್ಲೂ ಪ್ರಿಪೇಯ್ಡ್‌ ಮೀಟರ್‌ಗೆ ಮುನ್ನುಡಿ?
*   ವಿದ್ಯುತ್‌ ಬಿಲ್‌ ಪಾವತಿಸದ ಕಚೇರಿಗಳಿಗೆ ಬಿಸಿ
 

Prepaid Electricity Meter for State Government Offices in Karnataka grg
Author
Bengaluru, First Published Sep 8, 2021, 11:10 AM IST

ಬೆಂಗಳೂರು(ಸೆ.08): ಇನ್ನು ಮುಂದೆ ಸರ್ಕಾರಿ ಕಚೇರಿಗಳಲ್ಲಿ ಪ್ರಿಪೇಯ್ಡ್‌ ವಿದ್ಯುತ್‌ ಮೀಟರ್‌ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಇಂಧನ ಸಚಿವ ವಿ.ಸುನೀಲ್‌ ಕುಮಾರ್‌ ಹೇಳುವ ಮೂಲಕ ಮುಂದಿನ ದಿನಗಳಲ್ಲಿ ಎಲ್ಲ ಕಡೆ ಪ್ರಿಪೇಯ್ಡ್‌ ವಿದ್ಯುತ್‌ ಮೀಟರ್‌ ಅಳವಡಿಕೆಗೆ ಮುನ್ನುಡಿ ಬರೆದಿದ್ದಾರೆ.

ಸರ್ಕಾರಿ ಕಚೇರಿಗಳು ವಿದ್ಯುತ್‌ ಬಿಲ್‌ ಬಾಕಿ ಪಾವತಿ ಮಾಡದೇ ಇರುವುದು ಸಹ ವಿದ್ಯುತ್‌ ಸರಬರಾಜು ಕಂಪನಿಗಳ ನಷ್ಟಕ್ಕೆ ಕಾರಣವಾಗಿದೆ. ಅಲ್ಲದೇ ಪ್ರಿಪೇಯ್ಡ್‌ ಮೀಟರ್‌ ಅಳವಡಿಕೆಯಿಂದ ವಿದ್ಯುತ್‌ ಬಾಕಿಗೆ ಅಲೆದಾಡುವುದು ತಪ್ಪಲಿದೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಾವು ಇಂಧನ ಸಚಿವರಾದ ನಂತರ ಕೈಗಾರಿಕಾ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಬಂದು ಪ್ರಿಪೇಯ್ಡ್‌ ಮೀಟರ್‌ ಅಳವಡಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ ಇಂತಹ ಮೀಟರ್‌ ಅಳವಡಿಸಲು ತೀರ್ಮಾನಿಸಲಾಗಿದೆ ಎಂದರು.

ಎನ್‌ಒಸಿ ಇಲ್ಲದೆ ವಿದ್ಯುತ್‌ ಸಂಪರ್ಕ:

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮನೆ ಕಟ್ಟಿ ವಿದ್ಯುತ್‌ ಸಂಪರ್ಕ ಪಡೆಯಲಾಗದವರಿಗೆ ನೂರು ದಿನದೊಳಗೆ ಎನ್‌ಒಸಿ (ನಿರಾಕ್ಷೇಪಣಾ ಪತ್ರ) ಇಲ್ಲದೆ ವಿದ್ಯುತ್‌ ನೀಡಲಾಗುವುದು. ಈ ಸಂಬಂಧ ಟ್ರಾನ್ಸ್‌ಫಾರ್ಮರ್‌ ಬ್ಯಾಂಕ್‌ ಮಾಡಲು ನಿರ್ಧರಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕಷ್ಟಪಟ್ಟು ಮನೆ ಕಟ್ಟಿಕೊಂಡಿರುವ ಬಡವರು ವಿದ್ಯುತ್‌ ಪಡೆಯಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ತಪ್ಪಿಸಲು ‘ಬೆಳಕು’ ಯೋಜನೆಯಡಿ ನೂರು ದಿನದೊಳಗೆ ಎನ್‌ಒಸಿ ಇಲ್ಲದೆ ವಿದ್ಯುತ್‌ ಸಂಪರ್ಕ ನೀಡಲಾಗುವುದು. ಇದಕ್ಕಾಗಿ ಟ್ರಾನ್ಸ್‌ಫಾರ್ಮರ್‌ ಬ್ಯಾಂಕ್‌ ಪ್ರಾರಂಭಿಸುತ್ತೇವೆ. ರಾಜ್ಯದ ಯಾವುದೇ ಭಾಗದಲ್ಲಿ ಟ್ರಾನ್ಸ್‌ಫಾರ್ಮರ್‌ ಕೆಟ್ಟು ಹೋದರೆ 24 ಗಂಟೆಯೊಳಗೆ ಬದಲಾಯಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಕೃಷಿ ಪಂಪ್‌ಸೆಟ್‌ಗೂ ಬರಲಿದೆ ಪ್ರಿಪೇಯ್ಡ್‌ ಮೀಟರ್‌

ಗಂಗಾಕಲ್ಯಾಣ ಯೋಜನೆಯಡಿ ಕೊರೆದಿರುವ ಕೊಳವೆ ಬಾವಿಗಳಿಗೆ ತುಂಬಾ ಕಡೆಗಳಲ್ಲಿ ವಿದ್ಯುತ್‌ ಸಂಪರ್ಕ ನೀಡುವಲ್ಲಿ ವಿಳಂಬವಾಗುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಹೀಗಾಗಿ ಕೊಳವೆಬಾವಿ ಸಿದ್ಧವಾದ 30 ದಿನಗಳ ಒಳಗಾಗಿ ವಿದ್ಯುತ್‌ ಸಂಪರ್ಕ ನೀಡಲಾಗುವುದು. ಉತ್ತರ ಕರ್ನಾಟಕದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ಏಳು ಗಂಟೆ ವಿದ್ಯುತ್‌ ನೀಡಬೇಕೆಂಬ ಬೇಡಿಕೆ ಇತ್ತು. ಇದಕ್ಕಾಗಿ ವಿವಿಧೆಡೆ 60ಕ್ಕೂ ಹೆಚ್ಚು ಸಬ್‌ ಸ್ಟೇಷನ್‌ಗಳನ್ನು ಇನ್ನು 100 ದಿನಗಳ ಒಳಗೆ ಕೆಪಿಟಿಸಿಎಲ್‌ ಮೂಲಕ ನಿರ್ಮಿಸಲಾಗುವುದು. ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ಏಳು ಗಂಟೆ ವಿದ್ಯುತ್‌ ನೀಡಲು ಇದರಿಂದ ಸಾಧ್ಯವಾಗಲಿದೆ. ಇನ್ನು ಜೆಇ, ಲೈನ್‌ಮ್ಯಾನ್‌ ನೇಮಕಾತಿ ಹಾಗೂ ಜೆಇ ಹುದ್ದೆಯ ಬಡ್ತಿ ಸಮಸ್ಯೆಯನ್ನು ಬಗೆಹರಿಸಲಾಗುವುದು. ವರ್ಗಾವಣೆ ದಂಧೆ ನಿಯಂತ್ರಿಸಲು ತೀರ್ಮಾನಿಸಲಾಗಿದೆ. ಅಗತ್ಯತೆ ನೋಡಿಕೊಂಡು ಅಧಿಕಾರಿಗಳ ವರ್ಗಾವಣೆ ಮಾಡಲಾಗುವುದು ಎಂದು ಸಚಿವರು ವಿವರಿಸಿದರು.

ರೀಚಾರ್ಜ್‌ ಕೇಂದ್ರ ಸ್ಥಾಪನೆ:

ವಿದ್ಯುತ್‌ ಚಾಲಿತ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಎಲೆಕ್ಟ್ರಿಕ್‌ ರೀಚಾರ್ಜ್‌ ಸೆಂಟರ್‌ಗಳನ್ನು ತೆರೆಯಲಾಗುವುದು. ಎಲ್ಲ ಜಿಲ್ಲಾ ಕೇಂದ್ರಗಳು, ಪ್ರವಾಸೋದ್ಯಮ ಕೇಂದ್ರಗಳಲ್ಲಿ ರೀಚಾರ್ಜ್‌  ಸೆಂಟರ್‌ ತೆರೆಯಲು ಎಸ್ಕಾಂಗಳಿಗೆ ಗುರಿ ನೀಡಲಾಗುವುದು ಎಂದು ತಿಳಿಸಿದರು.

100 ದಿನದಲ್ಲಿ ಕಲಾವಿದರ ಡೇಟಾ ಬ್ಯಾಂಕ್‌

ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಹಾಕುವುದು ನಿಧಾನವಾಗಿ ಕಡಿಮೆ ಆಗಬೇಕೆಂಬ ಚಿಂತನೆ ಇದೆ. ಸಾಧಕರನ್ನು ಗುರುತಿಸುವ ಪರಂಪರೆ ನಾಡಿನಾದ್ಯಂತ ನಿರ್ಮಾಣವಾಗಬೇಕು. ಎಲೆ ಮರೆಯ, ತೆರೆಯ ಮರೆಯಲ್ಲಿರುವ ಸಾಧಕರನ್ನು ಗುರುತಿಸುವ ಯೋಜನೆ ಇದೆ. ಹಾಗಾಗಿ ಕಲಾವಿದರ ಡೇಟಾ ಬ್ಯಾಂಕ್‌ ಹೊಂದಬೇಕೆಂಬ ಯೋಜನೆ ಇದೆ. ಈ ವಿವರ ಸಂಗ್ರಹ ಕಾರ್ಯ ಮುಂದಿನ 100 ದಿನಗಳಲ್ಲಿ ಅನುಷ್ಠಾನಗೊಳ್ಳಲಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಚೆನ್ನಾಗಿ ಆಗಬೇಕು. ಸ್ವಾತಂತ್ರ್ಯ ಚಳವಳಿಗೆ ಕರ್ನಾಟಕದ ಕೊಡುಗೆ ಎಲ್ಲರಿಗೂ ತಿಳಿಯಬೇಕು. ನೂರಾರು ಜನರ ಬಲಿದಾನ ಆಗಿದ್ದು, ನೂರಾರು ಗ್ರಾಮಗಳು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಆದ ಶೌರ್ಯ ಪ್ರದರ್ಶನ ಮಾಡಿವೆ. ಇಂತಹ ಗ್ರಾಮಗಳನ್ನು ಗುರುತಿಸಿ ಅದನ್ನು ನಾಡಿಗೆ ಪರಿಚಯಿಸಲಾಗುವುದು ಎಂದು ಸಚಿವ ಸುನೀಲ್‌ ಕುಮಾರ್‌ ತಿಳಿಸಿದರು.
 

Follow Us:
Download App:
  • android
  • ios