ಚೀನಾದಲ್ಲಿ ಮತ್ತೆ ಕೊರೋನಾರ್ಭಟ: ಕರ್ನಾಟಕದಲ್ಲೂ ಮುಂಜಾಗ್ರತಾ ಕ್ರಮ
* ನಿತ್ಯ 30 ಸಾವಿರ ಪರೀಕ್ಷೆ ಗುರಿ: ಸಚಿವ ಡಾ. ಸುಧಾಕರ್
* ಸದ್ಯ ರಾಜ್ಯದಲ್ಲಿ ಕೋವಿಡ್ 3ನೇ ಅಲೆ ಮುಕ್ತಾಯ
* ಪಾಸಿಟಿವಿಟಿ ದರ ಶೇ.0.39ರಷ್ಟು ದಾಖಲು
ಬೆಂಗಳೂರು(ಮಾ.30): ಚೀನಾ(China) ಹಾಗೂ ಮತ್ತಿತರ ದೇಶಗಳಲ್ಲಿ ಕೋವಿಡ್(Covid-19) ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ(Karnataka) ನಿತ್ಯ 30 ಸಾವಿರ ಪರೀಕ್ಷೆ ಗುರಿ ನಿಗದಿಪಡಿಸಿರುವುದು ಸೇರಿದಂತೆ ಈಗಾಗಲೇ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಸೋಂಕಿಗೆ ಚಿಕಿತ್ಸೆ ನೀಡಲು ಬೇಕಾದ ಸೌಲಭ್ಯಗಳನ್ನು ಉನ್ನತೀಕರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್(Dr K Sudhakar) ತಿಳಿಸಿದ್ದಾರೆ.
ಬಿಜೆಪಿಯ ಶಶಿಲ್ ಜಿ.ನಮೋಶಿ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿರುವ ಅವರು, ಸದ್ಯ ರಾಜ್ಯದಲ್ಲಿ ಕೋವಿಡ್ 3ನೇ ಅಲೆ ಮುಕ್ತಾಯಗೊಂಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಿತ್ಯ ಸರಾಸರಿ 100-150 ಪ್ರಕರಣಗಳು ವರದಿಯಾಗುತ್ತಿದೆ. ಪರೀಕ್ಷೆ ಪಾಸಿಟಿವಿಟಿ ದರ(Positivity Rate) ಶೇ.0.39ರಷ್ಟು ಇದೆ ಎಂದರು.
Covid Crisis: ಚೀನಾದ ಶಾಂಘೈ ಸಂಪೂರ್ಣ ಲಾಕ್‌ಡೌನ್: ಎಲ್ಲ 2.6 ಕೋಟಿ ಜನಕ್ಕೆ ಕೋವಿಡ್ ಟೆಸ್ಟ್
ಚೀನಾ ಮತ್ತಿತರ ದೇಶಗಳಲ್ಲಿ ಸೋಂಕಿನ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಚಾಲ್ತಿಯಲ್ಲಿರುವ ‘ಪರೀಕ್ಷೆ,(Covid Test) ತರಬೇತಿ, ಚಿಕಿತ್ಸೆ, ನಿಗಾ, ತಂತ್ರಜ್ಞಾನವನ್ನು ಬಳಸುವಿಕೆ’ ಮಾನದಂಡವನ್ನು ಕಟ್ಟು ನಿಟ್ಟಾಗಿ ಮುಂದುವರೆಸಲಾಗುತ್ತಿದೆ. 5 ಅಥವಾ ಅದಕ್ಕಿಂತ ಹೆಚ್ಚಿನ ಪ್ರಕರಣಗಳು ಒಂದೇ ಸ್ಥಳದಲ್ಲಿ ವರದಿಯಾದ ಪಕ್ಷದಲ್ಲಿ ‘ಕ್ಲಸ್ಟರ್’ ಎಂದು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
ಕೋವಿಡ್ ನಿರ್ವಹಣೆಗೆ ಬೇಕಾದ ಆಮ್ಲಜನಕವನ್ನು ಆಯಾ ಆಸ್ಪತ್ರೆಗಳಲ್ಲಿ ಉತ್ಪಾದಿಸಿ ಪೂರೈಸುವ ನಿಟ್ಟಿನಲ್ಲಿ ಪಿಎಸ್‌ಎ ಪ್ಲಾಂಟ್, ಎಲ್‌ಎಂಒ ಟ್ಯಾಂಕ್ ಕಾರ್ಯನಿರ್ವಹಿಸುತ್ತಿದೆ, ಚಿಕಿತ್ಸೆಗೆ ಅಗತ್ಯ ಪ್ರಮಾಣದ ಔಷಧಿ ಹಾಗೂ ಉಪಕರಣಗಳನ್ನು ಖರೀದಿಸಿ ಪೂರೈಕೆ ಮಾಡಲಾಗಿದೆ. ಖಾಲಿ ಇರುವ ವೈದ್ಯ ಹಾಗೂ ವೈದ್ಯೇತರ ಸಿಬ್ಬಂದಿಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಸೇವೆಯನ್ನು ಕಡ್ಡಾಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಸಚಿವರು ವಿವರಿಸಿದರು.
ಶಾಂಘೈ ಲಾಕ್‌ಡೌನ್: ನಾಯಿ ಜತೆಗೂ ಹೊರಬರುವಂತಿಲ್ಲ..!
ಶಾಂಘೈ: ಚೀನಾದ ಶಾಂಘೈ ನಗರದಲ್ಲಿ ಕೋವಿಡ್ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ. ಚೀನಾದಲ್ಲಿ ಮಂಗಳವಾರ ಒಂದೇ ದಿನ 6,886 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಶಾಂಘೈಯಲ್ಲೇ 4,477 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಸೋಂಕಿನ ಹರಡುವಿಕೆ ತಡೆಗಟ್ಟಲು ಎಲ್ಲ ನಾಗರಿಕರನ್ನು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಅಲ್ಲದೇ ಸಾಕುನಾಯಿಯನ್ನು(Dog) ಹೊರಗಡೆ ಕರೆದೊಯ್ಯುವುದರ ಮೇಲೂ ನಿರ್ಬಂಧ ವಿಧಿಸಲಾಗಿದೆ.
‘ಸುಮಾರು 2.6 ಕೋಟಿ ಜನಸಂಖ್ಯೆಯಿರುವ ಚೀನಾದ ಅತ್ಯಂತ ದೊಡ್ಡ ನಗರಗಳಲ್ಲಿ ಒಂದಾದ ಶಾಂಘೈನಲ್ಲಿ(Shanghai) ಎರಡು ಹಂತದಲ್ಲಿ ಲಾಕ್‌ಡೌನ್(Lockdown) ಘೋಷಿಸಲಾಗಿದೆ. ಮೊದಲನೇ ಹಂತದಲ್ಲಿ 4 ದಿನಗಳ ಕಾಲ ನಗರದ ಒಂದು ಭಾಗವನ್ನು ಲಾಕ್‌ಡೌನ್ ಮಾಡಿದರೆ, ಎರಡನೇ ಹಂತದಲ್ಲಿ ಇನ್ನರ್ಧ ನಗರದಲ್ಲಿ ಲಾಕ್‌ಡೌನ್ ಘೋಷಿಸಲಾಗುವುದು. ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಮನೆಯಲ್ಲೇ ಕಡ್ಡಾಯವಾಗಿ ಕ್ವಾರಂಟೈನ್(Quarantine) ಆಗಬೇಕು. ನಾಗರಿಕರು ಕೇವಲ ಕೋವಿಡ್ ಪರೀಕ್ಷೆಯನ್ನು(Covid Test) ಮಾಡಿಸಿಕೊಳ್ಳಲು ಮನೆಯಿಂದ ಹೊರಗಡೆ ಹೋಗಬಹುದಾಗಿದೆ. ತಮ್ಮ ಮನೆಯ ಆವರಣ, ತೆರೆದ ಬಯಲುಗಳಲ್ಲೂ ಜನರ ಓಡಾಟದ ಮೇಲೆ ನಿರ್ಬಂಧ ಹೇರಲಾಗಿದೆ. ಈ ವೇಳೆ ಸಾಕುನಾಯಿಯನ್ನು ಹೊರಗಡೆ ಸಂಚಾರಕ್ಕೆ ಕರೆದೊಯ್ಯುವಂತಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Covid Crisis: ಫ್ರಾನ್ಸ್, ಜರ್ಮನಿ, ಬ್ರಿಟನ್‌ನಲ್ಲಿ ಕೊರೋನಾ ಸೋಂಕು ಏರಿಕೆ
ವಾಣಿಜ್ಯ ನಗರಿಯಾದ ಶಾಂಘೈನಲ್ಲಿ ಲಾಕ್‌ಡೌನ್ ಹೇರಿಕೆಯಿಂದಾಗಿ ಉದ್ಯಮಕ್ಕೆ ತೀವ್ರ ಪೆಟ್ಟಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರವು ಉದ್ಯಮಿಗಳು ಹಾಗೂ ಸಣ್ಣ ವ್ಯಾಪಾರಸ್ಥರಿಗೆ ತೆರಿಗೆ ವಿನಾಯಿತಿ, ಬಾಡಿಗೆಯಲ್ಲಿ ಕಡಿತ, ಹಾಗೂ ಉದ್ಯಮಿಗಳಿಗೆ ಸಾಲದ ನೆರವನ್ನು ಘೋಷಿಸಲು ಮುಂದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಾಂಘೈ ಲಾಕ್‌ಡೌನ್: ಕಚೇರಿಯಲ್ಲೇ ನೆಲೆಸಿದ ಬ್ಯಾಂಕರ್, ಸಿಬ್ಬಂದಿ!
ಶಾಂಘೈ: ವಾಣಿಜ್ಯ ನಗರಿಯಾದ ಶಾಂಘೈನಲ್ಲಿ ಸೋಮವಾರ ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ 20,000ಕ್ಕೂ ಹೆಚ್ಚಿನ ಬ್ಯಾಂಕರ್‌ಗಳು, ವ್ಯಾಪಾರಿ ಹಾಗೂ ಇನ್ನಿತರ ಸಿಬ್ಬಂದಿ ಕಚೇರಿಯಲ್ಲೇ ತಂಗಿದ್ದಾರೆ ಎಂದು ಸ್ಥಳೀಯ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.