Asianet Suvarna News Asianet Suvarna News

ಸರ್ಕಾರ ಬದಲು ಬೆನ್ನಲ್ಲೇ ಪ್ರವೀಣ್‌ ನೆಟ್ಟಾರು ಪತ್ನಿಯ ನೌಕರಿ ಖೋತಾ!

ಅನುಕಂಪದ ಆಧಾರದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅಧಿಕಾರದಲ್ಲಿ ಸರ್ಕಾರಿ ಉದ್ಯೋಗಕ್ಕೆ ನೇಮಕಗೊಂಡಿದ್ದ ದ.ಕ. ಬಿಜೆಪಿ ಮುಖಂಡ ದಿ.ಪ್ರವೀಣ್‌ ನೆಟ್ಟಾರ್‌ ಅವರ ಪತ್ನಿ ನೂತನ ಕುಮಾರಿ ಅವರ ಕೆಲಸಕ್ಕೆ ಕುತ್ತುಬಂದಿದೆ. 

Praveen Nettarus wife was fired from her job after the new government came into existence gvd
Author
First Published May 27, 2023, 8:07 AM IST

ಮಂಗಳೂರು (ಮೇ.27): ಅನುಕಂಪದ ಆಧಾರದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅಧಿಕಾರದಲ್ಲಿ ಸರ್ಕಾರಿ ಉದ್ಯೋಗಕ್ಕೆ ನೇಮಕಗೊಂಡಿದ್ದ ದ.ಕ. ಬಿಜೆಪಿ ಮುಖಂಡ ದಿ.ಪ್ರವೀಣ್‌ ನೆಟ್ಟಾರ್‌ ಅವರ ಪತ್ನಿ ನೂತನ ಕುಮಾರಿ ಅವರ ಕೆಲಸಕ್ಕೆ ಕುತ್ತುಬಂದಿದೆ. ರಾಜ್ಯದಲ್ಲಿ ಈಗ ಸರ್ಕಾರ ಬದಲಾಗಿರುವುದರಿಂದ ನೂತನ ಕುಮಾರಿ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಈ ಹಿಂದಿನ ಸರ್ಕಾರ ಮಾಡಿದ ಎಲ್ಲ ರೀತಿಯ ತಾತ್ಕಾಲಿಕ ನೆಲೆಯ ನೇಮಕಾತಿಗಳನ್ನು ರದ್ದುಪಡಿಸುವುದು ವಾಡಿಕೆ. ಅದರಂತೆ ನೂತನ ಕುಮಾರಿ ಅವರ ಉದ್ಯೋಗಕ್ಕೂ ಕತ್ತರಿ ಪ್ರಯೋಗ ಮಾಡಲಾಗಿದೆ. 

ಅವರನ್ನು ಕೂಡ ತಕ್ಷಣದಿಂದಲೇ ಕರ್ತವ್ಯದಿಂದ ತೆಗೆದುಹಾಕಿ ಆದೇಶ ಹೊರಡಿಸಲಾಗಿದೆ. ಇದರಂತೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಾಕೃತಿಕ ವಿಕೋಪ ವಿಭಾಗದಲ್ಲಿ ನಿರ್ವಹಿಸುತ್ತಿದ್ದ ಕರ್ತವ್ಯದಿಂದ ನೂತನ ಕುಮಾರಿ ಶುಕ್ರವಾರ ಹೊರಹೋಗುವಂತಾಗಿದೆ. ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಹತ್ಯೆ ನಡೆಸಿದ ಘಟನೆ ಬಳಿಕ ಕಾರ್ಯಕರ್ತರ ಆಕ್ರೋಶ ಬಿಜೆಪಿ ಮುಖಂಡರ ಕಡೆಗೆ ತಿರುಗಿತ್ತು. ಈ ವೇಳೆ ಘಟನೆಯ ಸಮಗ್ರ ತನಿಖೆಯನ್ನು ಅಂದಿನ ಬಿಜೆಪಿ ಸರ್ಕಾರ ರಾಷ್ಟ್ರೀಯ ತನಿಖಾ ಏಜೆನ್ಸಿಗೆ ವಹಿಸಿತ್ತು. 

ಶಾಲೆ ಆವರಣದಲ್ಲಿ ಆರೆಸ್ಸೆಸ್‌ ನಿಷೇಧಕ್ಕೆ ಚಿಂತನೆ: ಕಾಂಗ್ರೆಸ್‌

ಅಲ್ಲದೆ ಪ್ರವೀಣ್‌ ನೆಟ್ಟಾರು ಕುಟುಂಬಕ್ಕೆ ಬಿಜೆಪಿ ವತಿಯಿಂದ ಕನಸಿನ ಮನೆ ನಿರ್ಮಾಣ ಹಾಗೂ ಪ್ರವೀಣ್‌ ಪತ್ನಿಗೆ ಮಾನವೀಯ ನೆಲೆಯಲ್ಲಿ ಸಿಎಂ ಅವರ ವಿಶೇಷಾಧಿಕಾರ ಬಳಸಿ ಸರ್ಕಾರಿ ಕೆಲಸ ಕೊಡಿಸುವುದಾಗಿ ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಭರವಸೆ ನೀಡಿದ್ದರು. ಅದರಂತೆ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿದ್ದರು. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮುಖ್ಯಮಂತ್ರಿ ಕಚೇರಿಯಲ್ಲೇ ವಿಶೇಷ ನೇಮಕಾತಿ ನಡೆಸಿ 2022ರ ಸೆ.22ರಂದು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದರು. 

ಮುಖ್ಯಮಂತ್ರಿ ಅಧಿಕಾರ ಇರುವವರೆಗೆ ಹುದ್ದೆ: ಮಾಜಿ ಸಿಎಂ ಬೊಮ್ಮಾಯಿ ಅವರು ಆದೇಶದಲ್ಲಿ ಗುತ್ತಿಗೆ ಆಧಾರದಲ್ಲಿ ಹಿರಿಯ ಸಹಾಯಕ ಗ್ರೂಪ್‌ ಸಿ ಹುದ್ದೆಗೆ ನೇಮಕ ಮಾಡಲಾಗಿತ್ತು. ಈ ಹುದ್ದೆ ಮುಖ್ಯಮಂತ್ರಿ ಅಧಿಕಾರ ಇರುವ ತನಕ ಇಲ್ಲವೇ ಮುಂದಿನ ಆದೇಶ ವರೆಗೆ ಎಂದು ನಮೂದಿಸಲಾಗಿತ್ತು. ಆ ಆದೇಶದಲ್ಲಿ ಬೆಂಗಳೂರಿನ ಮುಖ್ಯಮಂತ್ರಿ ಕಚೇರಿಯಲ್ಲಿ ಎಂದಿದ್ದರೂ ನೂತನ ಕುಮಾರಿ ಅವರ ಅಪೇಕ್ಷೆ ಮೇರೆಗೆ ಅವರನ್ನು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಅ.14ರಂದು ನೂತನ ಕುಮಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಈಗ ಸರ್ಕಾರ ಬದಲಾದ್ದರಿಂದ ಕೇವಲ ಏಳು ತಿಂಗಳಲ್ಲೇ ನೂತನ ಕುಮಾರಿ ಅವರು ಕರ್ತವ್ಯವನ್ನು ತ್ಯಜಿಸಬೇಕಾಗಿ ಬಂದಿದೆ.

ಉಚಿತ ವಿದ್ಯುತ್‌ಗೆ ಬೇಕು ತಿಂಗಳಿಗೆ 2000 ಕೋಟಿ: 5 ಗ್ಯಾರಂಟಿ ಜಾರಿಗೆ ಖರ್ಚಿನ ವರದಿ ಕೇಳಿದ ಸರ್ಕಾರ

ಸರ್ಕಾರ ಬದಲಾದ್ದರಿಂದ ಹಿಂದಿನ ತಾತ್ಕಾಲಿಕ ನೇಮಕಾತಿಗಳು ಸಹಜವಾಗಿ ರದ್ದುಗೊಳ್ಳುವುದು ಕ್ರಮ. ಎಲ್ಲರಂತೆ ಇವರದ್ದು ಕೂಡ ಅದೇ ರೀತಿ ಆಗಿದೆ. ಸರ್ಕಾರಿ ಕೆಲಸದಿಂದ ಬಿಡುಗಡೆಗೊಳಿಸಿರುವ ಕುರಿತಂತೆ ಆದೇಶದ ಬಗ್ಗೆ ನೂತನ ಕುಮಾರಿ ಅವರು ಗಮನಕ್ಕೆ ತಂದಿದ್ದಾರೆ. ಅವರನ್ನು ಮತ್ತೆ ಮುಂದುವರಿಸುವ ಬಗ್ಗೆ ತಕ್ಷಣವೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು.
-ರವಿಕುಮಾರ್‌, ಜಿಲ್ಲಾಧಿಕಾರಿ, ದ.ಕ.

Follow Us:
Download App:
  • android
  • ios