ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ದೇವರಾಜು ಅರಸು ಅವರಿಗೆ ಹೋಲಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅರಸು ಅವರು ಭೂ ಸುಧಾರಣೆ ಮತ್ತು ಸಣ್ಣ ಸಮುದಾಯಗಳ ನಾಯಕರನ್ನು ಬೆಳೆಸಿದರೆ, ಸಿದ್ದರಾಮಯ್ಯನವರು ರಾಜ್ಯವನ್ನು ಸಾಲದ ಸುಳಿಗೆ ತಳ್ಳಿ,  ಜನರಿಗೆ ಟೋಪಿ ಹಾಕುತ್ತಿದ್ದಾರೆ.

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು(ಜ.8) : ದೇವರಾಜು ಅರಸು ಅವರು ಮೃತಪಟ್ಟು ನಾಲ್ಕು ದಶಕಗಳೇ ಕಳೆಯುತ್ತಾ ಬರುತ್ತಿವೆ. ಆದರೆ ಇಂದಿಗೂ ದೇವರಾಜು ಅರಸು ಅವರನ್ನು ಜನರು ಗುಣಗಾನ ಮಾಡುತ್ತಾರೆ. ಅಂದರೆ ಅವರ ವ್ಯಕ್ತಿತ್ವ ಅಂತಹದ್ದು, ಅವರ ಕೊಡುಗೆ ಎಂತಹದ್ದು ಇರಬಹುದು. ಆದರೆ ನೀವು ಅವರ ಅತ್ತಿರವೂ ಬರಲಾಗಲ್ಲ ಸರ್ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯನವರಿಗೆ ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯ ಸುಮ್ಮನೆ ಕುರ್ಚಿ ಮೇಲೆ ಕುಳಿತಿದ್ದಾರೆ ಅಷ್ಟೇ

ದೇವರಾಜು ಅವರಿಗಿಂತಲೂ ಅತೀ ಹೆಚ್ಚು ಸಮಯ ಸಿಎಂ ಆದ ಕೀರ್ತಿಯನ್ನು ಸಿದ್ದರಾಮಯ್ಯನವರು ಪಡೆದರಲ್ಲ ಎಂಬ ಪ್ರಶ್ನೆ ಪ್ರತಾಪ್ ಸಿಂಹ ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿದರು. ದೇವರಾಜು ಅರಸು ಅವರನ್ನು ದೇವರು ಅಂತ ಹೇಳ್ತಾರೆ. ಅಂದರೆ ಅವರ ಕೊಡುಗೆ ಎಂತಹದ್ದು ಎಂದು ಅರ್ಥ ಮಾಡಿಕೊಳ್ಳಬಹುದು. ಆದರೆ ಸುಮ್ಮನೆ ಕುಂತರೂ ಟೈಮ್ ಆಗಿಬಿಡುತ್ತವೆ, ಇವರು ಸುಮ್ಮನೆ ಆ ಕುರ್ಚಿಯಲ್ಲಿ ಕುಳಿತಿದ್ದಾರೆ ಅಷ್ಟೇ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ದೇವರಾಜು ಅರಸು ಅವರು ಸಣ್ಣ ಸಣ್ಣ ಸಮುದಾಯದ ಜನರನ್ನು ಕರೆತಂದು ನಾಯಕರನ್ನಾಗಿ ಮಾಡಿದರು. ಜೀತದ ಆಳಾಗಿ ದುಡಿಯುತ್ತಿದ್ದವರಿಗೆ ಭೂಮಿಯ ಒಡೆಯನನ್ನಾಗಿ ಮಾಡಿದರು. ಹಾಗಾಗಿ ಜನರು ಇಂದಿಗೂ ದೇವರಾಜು ಅರಸು ಅವರನ್ನು ನೆನಪಿಸಿಕೊಳ್ಳುತ್ತಾರೆ. ದೇವರಾಜು ಅರಸು ಅವರು ಸಾಮಾನ್ಯ ಹೋಲಿಕೆಗಳಿವೆ ಮೀರಿದವರು. ಅವರಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ ಎಂದು ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದರು.

ರಾಜ್ಯಕ್ಕೆ ನಿಮ್ಮದೇನು ಕೊಡುಗೆ ಹೇಳಿ ಸರ್?: ಪ್ರತಾಪ್ ಸಿಂಹ ಪ್ರಶ್ನೆ

ರಾಜ್ಯಕ್ಕೆ ನಿಮ್ಮದೇನು ಕೊಡುಗೆ ಹೇಳಿ ಸರ್, ಮೊದಲ ಬಾರಿ ಸಿಎಂ ಆಗಿ ಐದು ವರ್ಷ ಪೂರೈಸಿದ್ರಿ. ಆಗ ಕರ್ನಾಟಕದ ಇತಿಹಾಸದಲ್ಲೇ ಅತೀ ಹೆಚ್ಚು ಸಾಲ ಮಾಡಿದವರು ನೀವು. ಈಗಲೂ ಎರಡನೆಯ ಬಾರಿಯೂ ಅತೀ ಹೆಚ್ಚು ಸಾಲ ಮಾಡುತ್ತಿದ್ದೀರಿ. ಇದು ನಿಮ್ಮ ಕೊಡುಗೆ ಎಂದು ಜರಿದರು. ಅನ್ನ ಭಾಗ್ಯ ಕೂಡ ನಿಮ್ಮದಲ್ಲ ನಿಮ್ಮ ಯುಪಿಎಯದು ಅಲ್ಲ. ಇನ್ನು ಈಗ ರಾಜ್ಯಕ್ಕೆ ದಿವಾಳಿ ಭಾಗ್ಯ ಕೊಟ್ಠಿದ್ದೀರಾ. ಶಕ್ತಿ ಯೋಜನೆ ಮೂಲಕ ಕೆಎಸ್ಆರ್ ಟಿಸಿಗೆ ದಿವಾಳಿ ಭಾಗ್ಯ ಸಿಕ್ಕಿದೆ. 200 ಯುನಿಟ್ ವಿದ್ಯುತ್ ಕೊಡುತ್ತೇವೆ ಎಂದು ಕೊಡುತ್ತಿಲ್ಲ, ಗೃಹಲಕ್ಷ್ಮಿ ಎಂದು ಹೇಳಿ ಎರಡು ತಿಂಗಳು ಮುಳುಗಿಸಿದ್ದೀರಾ. ಅಕ್ಕಿ ಕೊಡುವ ಬದಲು ದುಡ್ಡು ಕೊಡ್ತೇನೆ ಎಂದ್ರಿ, ಆ ದುಡ್ಡೇ ಬರಲಿಲ್ಲ. ಈಗ ಕೇಂದ್ರ ಅಕ್ಕಿ ಕೊಡುತ್ತೇನೆ ಎಂದರು ಖರೀದಿಸಲು ನೀವು ರೆಡಿ ಇಲ್ಲ. ಯುವ ನಿಧಿ ಕೊಡುತ್ತೇವೆ ಎಂದು ಎರಡುವರೆ ವರ್ಷವಾದರೂ ಇಂದಿಗೂ ಕೊಟ್ಟಿಲ್ಲ. ನಿಮ್ಮದೇನಿದ್ದರೂ ಈ ರೀತಿ ಟೋಪಿ ಹಾಕುವ ಭಾಗ್ಯ ಅಷ್ಟೇ. ಕರ್ನಾಟಕದ ಅರ್ಥ ವ್ಯವಸ್ಥೆಯನ್ನು ಹಾಳು ಮಾಡಿದ ಕೀರ್ತಿ ನಿಮಗೆ ಸಿಗುತ್ತದೆ ಅಷ್ಟೇ. ದೇವರಾಜು ಅರಸು ಅವರು ಎಲ್ಲರನ್ನು ಪ್ರೀತಿಸುತ್ತಿದ್ದರು. ನೀವು ಒಬ್ಬ ಹುಟ್ಟು ಜಾತಿವಾದಿ, ಬರೀ ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳುತ್ತಾ ಇರುವವರು. ನೀವೆನಿದ್ದರೂ ಬಿಟ್ಟಿಭಾಗ್ಯಗಳ ಹೆಸರು ಹೇಳುತ್ತಾ, ನಿಮಗೆ ಖುರ್ಚಿ ಭಾಗ್ಯ ಮಾಡಿಕೊಂಡಿದ್ದೀರಿ ಎಂದು ವ್ಯಂಗ್ಯವಾಡಿದರು.