ಸಚಿವ ಸತೀಶ್ ಜಾರಕಿಹೊಳಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳ ಪೂರ್ಣಾವಧಿ ಪೂರೈಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ನಿರ್ಧಾರ ಹೈಕಮಾಂಡ್‌ಗೆ ಸೇರಿದ್ದು ಎಂದ ಅವರು, ಅರಸು ದಾಖಲೆ ಮುರಿದ ಸಿದ್ದರಾಮಯ್ಯರ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ದಾವಣಗೆರೆ(ಜ.6): ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರ ಅಧಿಕಾರಾವಧಿ ಕುರಿತ ಚರ್ಚೆಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಅವರು ದಾವಣಗೆರೆಯ ಜಗಳೂರಿನಲ್ಲಿ ತೆರೆ ಎಳೆದಿದ್ದಾರೆ.
ಅರ್ಧ ಅವಧಿಯ ಲೆಕ್ಕಾಚಾರಕ್ಕೆ ಸಚಿವರ ಗರಂ
ಸಿದ್ದರಾಮಯ್ಯ ಅವರು ಐದು ವರ್ಷ ಪೂರೈಸುತ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ 'ಅರ್ಧ ಅಂತ ಯಾರು ಹೇಳಿದ್ದಾರೆ? ಎಲ್ಲಿದೆ ಅಂತಹ ದಾಖಲೆ? 100 ದಿನ, 200 ದಿನ ಅಥವಾ 300 ದಿನ ಅಂತ ಎಲ್ಲಿಯಾದರೂ ಬರೆದಿದ್ದಾರಾ? ಮುಖ್ಯಮಂತ್ರಿಯಾಗಿದ್ದಾರೆ ಅಂದರೆ ಅದು ಐದು ವರ್ಷ ಅಂತಾನೇ ಅರ್ಥ' ಎಂದು ಅವರು ಪ್ರಶ್ನಿಸುವ ಮೂಲಕ ಗರಂ ಆದರು.
ಅರಸು ದಾಖಲೆ ಮುರಿದಿದ್ದಕ್ಕೆ ನಮಗೆಲ್ಲ ಹೆಮ್ಮೆ
ಮುಂದುವರಿದು ಮಾತನಾಡಿದ ಅವರು, ಸಿದ್ದರಾಮಯ್ಯ(Siddaramaiah) ಅವರ ಆಡಳಿತದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಸಿದ್ದರಾಮಯ್ಯ ಅವರು ಅರಸು ಅವರ ದಾಖಲೆ ಮುರಿದಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಅವರು ದೀರ್ಘಕಾಲದ ಮುಖ್ಯಮಂತ್ರಿಯಾಗಿ ಹೊರಹೊಮ್ಮಿರುವುದು ಶೋಷಿತ ಮತ್ತು ಹಿಂದುಳಿದ ವರ್ಗಗಳಿಗೆ ಅತ್ಯಂತ ಸಂತೋಷದ ಸಂಗತಿಯಾಗಿದೆ. ಅವರು ಇನ್ನೂ ಹೆಚ್ಚಿನ ಒಳ್ಳೆಯ ಕೆಲಸ ಮಾಡಲಿ ಎಂದು ಶುಭ ಹಾರೈಸುತ್ತೇನೆ, ಎಂದರು.
ಸಿಎಂ ಸ್ಥಾನ ಬದಲಾವಣೆ ಬಗ್ಗೆ ಮಾರ್ಮಿಕ ನುಡಿ
ಡಿಕೆ ಶಿವಕುಮಾರ್(DK Shivakumar) ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಅವರ ಅಭಿಮಾನಿಗಳ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಯಾರನ್ನು ಅಧಿಕಾರದಲ್ಲಿ ಕೂರಿಸಬೇಕು ಅಥವಾ ಯಾರನ್ನು ಇಳಿಸಬೇಕು ಎಂಬುದು ನಮ್ಮ ಕೈಯಲ್ಲಿ ಇಲ್ಲ. ಹೈಕಮಾಂಡ್ ತೀರ್ಮಾನ ಮಾಡಿದರೆ ಅದು ಅವರಿಗೆ ಬಿಟ್ಟ ವಿಚಾರ ಎಂದು ಪರೋಕ್ಷವಾಗಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದರು.
ಉಪಚುನಾವಣೆ ಟಿಕೆಟ್ ಹಂಚಿಕೆ ಕುರಿತು ಜಾರಕಿಹೊಳಿ ಹೇಳಿದ್ದೇನು?
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಆಗ್ರಹದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಯಾರಿಗೆ ಟಿಕೆಟ್ ನೀಡಬೇಕು ಎಂಬ ನಿರ್ಧಾರವನ್ನು ಪಕ್ಷದ ವರಿಷ್ಠರು ತೆಗೆದುಕೊಳ್ಳುತ್ತಾರೆ. ನಾವು ಕೇವಲ ಪಕ್ಷಕ್ಕಾಗಿ ಕೆಲಸ ಮಾಡುವವರು ಅಷ್ಟೇ, ಎಂದು ಸ್ಪಷ್ಟಪಡಿಸಿದರು.
ಬಳ್ಳಾರಿ ಫ್ಲೆಕ್ಸ್ ವಿವಾದ ಮತ್ತು ಇಲಾಖಾ ಜಾಗ
ಬಳ್ಳಾರಿಯಲ್ಲಿ ಫ್ಲೆಕ್ಸ್(Ballari Banner fight) ಹಾಕಿದ ಜಾಗವು ಲೋಕೋಪಯೋಗಿ ಇಲಾಖೆಗೆ ಸೇರಿದ್ದೇ ಎಂಬ ವಿಚಾರವಾಗಿ ಮಾತನಾಡುತ್ತಾ, ಸಾಮಾನ್ಯವಾಗಿ ವಿದ್ಯುತ್ ಕಂಬಗಳು ಇರುವ ಕಡೆ ಪಿಡಬ್ಲ್ಯೂಡಿ ಇಲಾಖೆ ಜಾಗ ಇರುತ್ತದೆ. ಆದರೆ ಆ ಘಟನೆ ನಡೆಯಬಾರದಿತ್ತು, ಎಂದು ಸತೀಶ್ ಜಾರಕಿಹೊಳಿ ವಿಷಾದ ವ್ಯಕ್ತಪಡಿಸಿದರು.


