ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ರಾಜ್ಯ ಸರ್ಕಾರ ಜಾಹೀರಾತು ನೀಡಿರುವುದನ್ನು ಸಚಿವ ಪ್ರಿಯಾಂಕ್ ಖರ್ಗೆ ಸಂಪೂರ್ಣವಾಗಿ ಕಾನೂನುಬದ್ಧ ಎಂದು ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ ಆರ್‌ಎಸ್‌ಎಸ್ ನ 'ಆರ್ಗನೈಸರ್' ಪತ್ರಿಕೆಯ ಹಣಕಾಸಿನ ಮೂಲದ ಬಗ್ಗೆ ಉತ್ತರಿಸುವಂತೆ ಬಿಜೆಪಿಗೆ ಸವಾಲು ಹಾಕಿದರು.
ಬೆಂಗಳೂರು (ಜ.8): ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ರಾಜ್ಯ ಸರ್ಕಾರ ಜಾಹೀರಾತು ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿರುವ ವಿವಾದಕ್ಕೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ಸಂಪೂರ್ಣವಾಗಿ ಕಾನೂನುಬದ್ಧವಾದ ಪ್ರಕ್ರಿಯೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಇದು ಸಂಪೂರ್ಣ ಲೀಗಲ್ ಟ್ರಾನ್ಸಾಕ್ಷನ್
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸರ್ಕಾರ ನೀಡಿರುವ ಜಾಹೀರಾತು ಹಣದ ವರ್ಗಾವಣೆ ಬಗ್ಗೆ ಮಾತನಾಡಿದ ಸಚಿವರು, ಇದು ಸಂಪೂರ್ಣವಾಗಿ ಕಾನೂನುಬದ್ಧವಾಗಿ ನಡೆದ ವ್ಯವಹಾರವಾಗಿದೆ (Legal Transaction). ಖಾಸಗಿ ಸುದ್ದಿ ವಾಹಿನಿಗಳಿಗೆ ಮತ್ತು ಇತರ ಪತ್ರಿಕೆಗಳಿಗೆ ಸರ್ಕಾರ ಹೇಗೆ ಜಾಹೀರಾತು ನೀಡುತ್ತದೆಯೋ, ಅದೇ ರೀತಿ ನ್ಯಾಷನಲ್ ಹೆರಾಲ್ಡ್‌ಗೂ ನೀಡಲಾಗಿದೆ. ಇದರಲ್ಲಿ ಯಾವುದೇ ನಿಯಮಗಳ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಗೆ ಏನು ತೊಂದರೆ?
ಜಾಹೀರಾತು ಹಂಚಿಕೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಬಿಜೆಪಿ ವಿರುದ್ಧ ಹರಿಹಾಯ್ದ ಪ್ರಿಯಾಂಕ್ ಖರ್ಗೆ, 'ಮಾಧ್ಯಮ ಸಂಸ್ಥೆಗಳಿಗೆ ಜಾಹೀರಾತು ನೀಡುವಾಗ ಕೆಲವರಿಗೆ ಹೆಚ್ಚು, ಇನ್ನು ಕೆಲವರಿಗೆ ಕಡಿಮೆ ಆಗಿರಬಹುದು. ಇದು ಸಾಮಾನ್ಯ ಪ್ರಕ್ರಿಯೆ. ಇದರಿಂದ ಬಿಜೆಪಿ ಅವರಿಗೆ ಏನು ತೊಂದರೆ? ಕೇವಲ ರಾಜಕೀಯ ಉದ್ದೇಶಕ್ಕೆ ಈ ವಿಚಾರವನ್ನು ದೊಡ್ಡದು ಮಾಡಲಾಗುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್‌ಎಸ್‌ಎಸ್ 'ಆರ್ಗನೈಸರ್' ಹೇಗೆ ಪಬ್ಲಿಶ್ ಆಗುತ್ತೆ? ಮೊದಲು ಉತ್ತರಿಸಲಿ
ಬಿಜೆಪಿಯವರ ಪ್ರಶ್ನೆಗಳಿಗೆ ತಿರುಗೇಟು ನೀಡಿದ ಸಚಿವರು, ಆರ್.ಎಸ್.ಎಸ್ ವಿಚಾರವನ್ನು ಪ್ರಸ್ತಾಪಿಸಿದರು. ಬಿಜೆಪಿಯವರು ನಮ್ಮನ್ನು ಪ್ರಶ್ನಿಸುವ ಮೊದಲು ಒಂದು ವಿಷಯಕ್ಕೆ ಉತ್ತರ ಕೊಡಲಿ. ಆರ್.ಎಸ್.ಎಸ್ ಅವರ 'ಆರ್ಗನೈಸರ್' (Organizer) ಎಂಬ ಮ್ಯಾಗಜೀನ್ ಇದೆ. ಅದು ಹೇಗೆ ಪಬ್ಲಿಷ್ ಆಗುತ್ತದೆ? ಅದಕ್ಕೆ ಯಾರು ಹಣ ಕೊಡುತ್ತಾರೆ? ಆ ಹಣ ಎಲ್ಲಿಂದ ಬರುತ್ತದೆ ಎಂಬ ಬಗ್ಗೆ ಅವರು ಮೊದಲು ಮಾಹಿತಿ ನೀಡಲಿ' ಎಂದು ಸವಾಲು ಹಾಕಿದರು.
ಹಿಟ್ ಅಂಡ್ ರನ್ ತಂತ್ರ ನಡೆಯಲ್ಲ
ನಾವು ಯಾವ ಬ್ಯಾಂಕ್ ಖಾತೆಗೆ ಹಣ ನೀಡಿದ್ದೇವೆ, ಯಾರು ಕೊಟ್ಟಿದ್ದಾರೆ ಎಂಬ ಎಲ್ಲಾ ದಾಖಲೆಗಳು ಪಾರದರ್ಶಕವಾಗಿವೆ. ನಾವು ಯಾವ ನಿಯಮವನ್ನು ಉಲ್ಲಂಘಿಸಿದ್ದೇವೆ ಎಂದು ಬಿಜೆಪಿ ಮೊದಲು ತೋರಿಸಲಿ. ಅದನ್ನು ಬಿಟ್ಟು ಕೇವಲ ಗಾಳಿಯಲ್ಲಿ ಗುಂಡು ಹೊಡೆಯುವ 'ಹಿಟ್ ಅಂಡ್ ರನ್' (Hit and Run) ತಂತ್ರ ಮಾಡಿದರೆ ಪ್ರಯೋಜನವಿಲ್ಲ. 'ಆರ್ಗನೈಸರ್' ಪತ್ರಿಕೆಯ ಬಗ್ಗೆ ಅವರು ಉತ್ತರ ನೀಡಿದರೆ, ನಮ್ಮ ಉತ್ತರ ಅವರಿಗೆ ಸರಿಯಾಗಿ ಅರ್ಥವಾಗುತ್ತದೆ' ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

