Asianet Suvarna News Asianet Suvarna News

ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ಸಿನ ಪುರಾತನ ದ್ವಂದ್ವ; ನೆಹರುವಿನಿಂದ ಸೋನಿಯಾ ಗಾಂಧಿವರೆಗೆ ಸ್ಪಷ್ಟ ನಿಲುವಿಲ್ಲ!

ರಾಜೀವ್ ಗಾಂಧಿ 1989ರ ಚುನಾವಣಾ ಪ್ರಚಾರದ ಮೊದಲ ಭಾಷಣವನ್ನು ಅಯೋಧ್ಯೆಯಿಂದ ಮಾಡಿ, ‘1987ರಲ್ಲಿ ದೇಶಕ್ಕೆ ರಾಮಾಯಣ ತೋರಿಸಿದ್ದು ನಾವು, 1986ರಲ್ಲಿ ಮಂದಿರದ ಬೀಗ ತೆಗೆಸಿದ್ದು ನಾವು. ಇನ್ನುಮುಂದೆ ಅಲ್ಲಿ ಸರ್ವಸಮ್ಮತಿಯಿಂದ ಮಂದಿರ ನಿರ್ಮಿಸಿ ರಾಮರಾಜ್ಯ ತರುವವರೂ ನಾವೇ’ ಎಂದು ಹೇಳಿ, ಪ್ರಣಾಳಿಕೆಯಲ್ಲೂ ಅದನ್ನು ಸೇರಿಸಿದ್ದರು.

Prashant Natu column India Gate  Congress does not have a clear stance on Ram Mandir issue rav
Author
First Published Jan 20, 2024, 6:08 AM IST

- ಪ್ರಶಾಂತ್‌ ನಾತು

ಸುಪ್ರೀಂಕೋರ್ಟ್ ತೀರ್ಪಿನ ನಂತರ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮ ಮಂದಿರದ ಉದ್ಘಾಟನೆಗೆ ಹೋಗಬೇಕೋ ಬೇಡವೋ ಎಂಬ ಬಗ್ಗೆ ಕಾಂಗ್ರೆಸ್ಸಿಗರು ಇನ್ನೂ ದ್ವಂದ್ವದಲ್ಲಿದ್ದಾರೆ. ಒಮ್ಮೆ ದಿಗ್ವಿಜಯ ಸಿಂಗ್ ಅವರು ಸೋನಿಯಾ ಗಾಂಧಿ ಉದ್ಘಾಟನೆಗೆ ಹೋಗುತ್ತಾರೆ ಎಂದರೆ, ಸಿದ್ದರಾಮಯ್ಯ ನನಗೆ ಎಲ್ಲಿ ಆಮಂತ್ರಣ ಕೊಟ್ಟಿದ್ದಾರೆ ಎಂದು ಕೇಳಿದ್ದರು. ಒಂದು ಕಡೆ ಜೈರಾಂ ರಮೇಶ್ ಅವರು ಖರ್ಗೆ ಯಾಕೆ ಹೋಗಬೇಕು ಎಂದು ಕೇಳಿದರೆ, ಡಿ.ಕೆ.ಶಿವಕುಮಾರ್‌ ನಾನು ಕೂಡ ರಾಮಭಕ್ತ ಎಂದರು. ಸೋನಿಯಾ ಆಮಂತ್ರಣ ತಿರಸ್ಕರಿಸಿದ ಮರುದಿನ 10 ಕಾಂಗ್ರೆಸ್ ನಾಯಕರು ಸರಯೂ ನದಿಯಲ್ಲಿ ಮಿಂದು ಹೋಮ ಹವನ ನಡೆಸಿದರು. ಆದರೆ ಇನ್ನೊಂದು ಕಡೆ ಕಾಂಗ್ರೆಸ್‌ನಲ್ಲಿರುವ ಎಡ ವಿಚಾರದ ನಾಯಕರು ರಾಮ ಕಾಲ್ಪನಿಕ ಪುರುಷ, ಆತನ ಮಂದಿರ ನಿರ್ಮಿಸಿದರೆ ಹೊಟ್ಟೆ ತುಂಬುತ್ತಾ ಎಂದು ಕೇಳುತ್ತಾರೆ. ಕಾಂಗ್ರೆಸ್ ನಾಯಕರು ಸ್ವತಃ ದ್ವಂದ್ವದಲ್ಲಿದ್ದಾರೆ. ಜೊತೆಗೆ ಜನರನ್ನೂ ಕನ್ಫ್ಯೂಸ್ ಮಾಡುತ್ತಿದ್ದಾರೆ. If you cannot convince go and confuse them ಎಂಬ ಮಾತಿಲ್ಲವೇ? ಮಂದಿರದ ವಿಷಯದಲ್ಲಿ ಕಾಂಗ್ರೆಸ್‌ನ ದ್ವಂದ್ವಗಳು ಇವತ್ತು ನಿನ್ನೆಯದಲ್ಲ.

1949ರಲ್ಲಿ ಏನು ನಡೆದಿತ್ತು?

1949 ಡಿಸೆಂಬರ್ 22ರ ರಾತ್ರಿ 12 ಗಂಟೆಗೆ ಆಗ ಉತ್ತರ ಪ್ರದೇಶದಲ್ಲಿ ಆರೆಸ್ಸೆಸ್‌ ಪ್ರಚಾರಕ ಆಗಿದ್ದ ನಾನಾಜಿ ದೇಶಮುಖ್ ಅವರ ಬೆಂಬಲದಿಂದ ರಾಮಚಂದ್ರ ಪರಮಹಂಸ ಅಭಿರಾಮ್ ದಾಸ್ ಮತ್ತು ಆಗಿನ ಫೈಜಾಬಾದ್ ಜಿಲ್ಲಾಧಿಕಾರಿ ಕೆ.ಕೆ.ನಾಯರ್‌ ಅವರ ಪತ್ನಿ ಶಕುಂತಲಾ ನಾಯರ್‌ ನೇತೃತ್ವದಲ್ಲಿ ಬೆರಳೆಣಿಕೆಯಷ್ಟು ಸಂತರು ರಾತ್ರಿ 12 ಗಂಟೆಗೆ ಸರಯೂದಲ್ಲಿ ಬಾಲರಾಮನ ಮೂರ್ತಿಯನ್ನು ತೊಳೆದು ತಲೆ ಮೇಲೆ ಇಟ್ಟುಕೊಂಡು ಬಂದು ಮಸೀದಿಯ ಮುಖ್ಯ ಗುಂಬಜದ ಕೆಳಗೆ ಪ್ರತಿಷ್ಠಾಪನೆ ಮಾಡಿ ಬೆಳಿಗ್ಗೆ 6 ಗಂಟೆಗೆ ಕಾಕಾಡಾ ಆರತಿ ಮಾಡಿದ ನಂತರ ಇಡೀ ಅಯೋಧ್ಯೆಯಲ್ಲಿ ರಾತ್ರೋರಾತ್ರಿ ಶ್ರೀರಾಮ ಪ್ರತ್ಯಕ್ಷನಾದ ಸುದ್ದಿ ಹಬ್ಬಿತ್ತು. ಅದು ದಿಲ್ಲಿವರೆಗೆ ತಲುಪಿ ಪ್ರಧಾನಿ ಪಂಡಿತ್‌ ನೆಹರೂ ಕಿವಿಗೂ ಬಿತ್ತು. ವ್ಯಗ್ರರಾದ ನೆಹರು ಆಗಿನ ಯುಪಿ ಮುಖ್ಯಮಂತ್ರಿ ಗೋವಿಂದ ವಲ್ಲಭ ಪಂತರಿಗೆ ಪತ್ರ ಬರೆದು ಕೂಡಲೇ ಮೂರ್ತಿಗಳನ್ನು ತೆಗೆಯಿರಿ ಎಂದರು. ಆದರೆ ಸರ್ದಾರ್‌ ವಲ್ಲಭಭಾಯಿ ಪಟೇಲರ ಕಟ್ಟಾ ಶಿಷ್ಯನಾದ ಪಂತರಿಗೆ ಇದು ಸರಿ ಕಾಣಲಿಲ್ಲ. ಮುಸ್ಲಿಮರ ಬೇಡಿಕೆಯಂತೆ ಪ್ರತ್ಯೇಕ ರಾಷ್ಟ್ರವನ್ನೇ ಕೊಟ್ಟ ಗಾಂಧಿ ಮತ್ತು ನೆಹರೂ ಅವರು ಹಿಂದೂಗಳ ದೇವರ ವಿಷಯದಲ್ಲಿ ಹೀಗೇಕೆ ನಡೆದುಕೊಳ್ಳುತ್ತಾರೆ ಎಂಬುದು ಪಂತರ ನಿಲುವಾಗಿತ್ತು. ಕೂಡಲೇ ನೆಹರು ಪತ್ರವನ್ನು ಗೋವಿಂದ ಪಂತರು ಜಿಲ್ಲಾಧಿಕಾರಿ ಕೆ.ಕೆ.ನಾಯರ್‌ಗೆ ಕಳುಹಿಸುತ್ತಾರೆ. ಪ್ರಧಾನಿ ಬರೆದ ಪತ್ರಕ್ಕೆ ಉತ್ತರ ಬರೆದ ನಾಯರ್‌ ಮೂರ್ತಿಗಳನ್ನು ತೆಗೆಯಲು ಹೋದರೆ ಅಯೋಧ್ಯೆ ಜನ ಉರಿದು ಬೀಳಬಹುದು, ಯಥಾಸ್ಥಿತಿ ಕಾಯ್ದುಕೊಳ್ಳೋಣ ಎಂದು ಹೇಳಿ ಮೂರ್ತಿ ಇಟ್ಟ ಬಾಗಿಲುಗಳಿಗೆ ಬೇಗ ಹಾಕಿಸುತ್ತಾರೆ. ಆದರೆ ಕಟಾಂಜನದ ಹೊರಗಡೆಯಿಂದ ಅರ್ಚಕರು ಪೂಜೆ ಮಾಡಲು ಅವಕಾಶ ಕೊಡುತ್ತಾರೆ. ಮೂರ್ತಿ ಪೂಜೆಗೆ ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ಸ್ಥಳೀಯ ಮುಸ್ಲಿಮರು ಶುಕ್ರವಾರದ ನಮಾಜು ನಿಲ್ಲಿಸುತ್ತಾರೆ.

 

ಕರ್ನಾಟಕದ ರಿಯಾಲಿಟಿ ಗೊತ್ತಿಲ್ಲದೇ ರಾಷ್ಟ್ರ ನಾಯಕರಿಗೆ ರಾಜ್ಯ ರಾಜಕೀಯದ ತೇರು ಎಳೆಯೋದು ಕಷ್ಟ!

ರಾಮನಿಗೆ ಶಾಬಾನೋ ನಂಟು

ತಂದೆಯ ಆಳ್ವಿಕೆಯಲ್ಲಿ ರಾಮನ ಮೂರ್ತಿಗಳಿಗೆ ಹಾಕಿಸಿದ ಬಾಗಿಲು ತೆರೆಸಬೇಕು ಎಂಬ ನೆನಪು ಇಂದಿರಾ ಗಾಂಧಿಗೂ ಬರುವುದಿಲ್ಲ, ಮೊಮ್ಮಗ ರಾಜೀವ್ ಗಾಂಧಿಗೂ ಬರುವುದಿಲ್ಲ. ಅದು ಬಂದಿದ್ದು ಇಂದೋರ್‌ನ 72 ವರ್ಷದ ವೃದ್ಧ ಮಹಿಳೆ ಶಾಬಾನೋ ಅವರಿಂದ. ಯಾವಾಗ ಶಾಬಾನೋಗೆ ಜೀವನಾಂಶ ಕೊಡಬೇಕೆಂದು ಸುಪ್ರೀಂಕೋರ್ಟ್ ತೀರ್ಪು ಕೊಡುತ್ತದೋ ಮೌಲ್ವಿಗಳ ಕಣ್ಣು ಕೆಂಪಗಾಗುತ್ತದೆ. ಇದು ಶರಿಯತ್‌ಗೆ ವಿರುದ್ಧ ಎಂಬ ಹೋರಾಟ ಶುರುವಾಗುತ್ತದೆ. ಆಗ ಕೇಂದ್ರ ಸಚಿವರಾಗಿದ್ದ ಆರಿಫ್ ಮೊಹಮ್ಮದ್‌ರನ್ನು ಕರೆಸಿಕೊಂಡ ರಾಜೀವ್ ಗಾಂಧಿ, ನೀವು ಸಂಸತ್‌ನಲ್ಲಿ ಮೌಲ್ವಿ ವಿರುದ್ಧ ಭಾಷಣ ಮಾಡಿ ಎಂದು ಹೇಳುತ್ತಾರೆ. ರಾಜೀವ್‌ರನ್ನು ನಂಬಿ ಆರಿಫ್ ಮೊಹಮ್ಮದ್ ಖಾನ್ ಸಂಸತ್‌ನಲ್ಲಿ ಭಾಷಣ ಮಾಡುತ್ತಾರೆ. ಆದರೆ ಅದಾದ ಮೇಲೆ ಏಕಾಏಕಿ ಬದಲಾದ ರಾಜೀವ್ ಗಾಂಧಿ, ಸುಪ್ರೀಂಕೋರ್ಟ್‌ ತೀರ್ಪಿನ ವಿರುದ್ಧ ಕಾನೂನು ತರಲು ನಿರ್ಧರಿಸಿ, ಆರಿಫ್ ಮೊಹಮ್ಮದ್‌ ಖಾನ್‌ರ ರಾಜೀನಾಮೆ ತೆಗೆದುಕೊಂಡು ಮೌಲ್ವಿಗಳನ್ನು ಸಮಾಧಾನಪಡಿಸುತ್ತಾರೆ. ಆಗ ಹಿಂದೂಗಳಲ್ಲಿ ಒಂದು ತಳಮಳ ಶುರುವಾಗುತ್ತದೆ. ಆ ತಳಮಳ ಎಲ್ಲಿ ಹಿಂದೂ ವೋಟ್ ಬ್ಯಾಂಕ್ ಅನ್ನು ಕಾಂಗ್ರೆಸ್‌ನಿಂದ ದೂರ ಒಯ್ಯುತ್ತದೋ ಎಂದು ರಾಜೀವ್ ಗಾಂಧಿ ಅರುಣ್‌ ನೆಹರು ಜೊತೆ ಸಮಾಲೋಚಿಸಿ ಹಿಂದೂಗಳನ್ನು ಖುಷಿಪಡಿಸಲು ಅಯೋಧ್ಯೆ ಮಂದಿರದ ಬಾಗಿಲು ತೆರೆಸಲು ನಿರ್ಧಾರ ಮಾಡುತ್ತಾರೆ. ಅಂದರೆ ಒಂದು ಕಡೆ ಸಿಖ್ಖರು, ಇನ್ನೊಂದು ಕಡೆ ಮುಸ್ಲಿಮರು, ಮಗದೊಂದು ಕಡೆ ಹಿಂದೂಗಳು ಎಲ್ಲರನ್ನೂ ಮೆಚ್ಚಿಸಲು ರಾಜೀವ್‌ ಯತ್ನಿಸುತ್ತಾರೆ.

ಬಾಗಿಲು ತೆರೆದದ್ದು ಹೇಗೆ?

ಅಯೋಧ್ಯೆಯ ಮುಚ್ಚಿರುವ ಬಾಗಿಲುಗಳನ್ನು ತೆರೆಯಲು ಸ್ವತಃ ರಾಜೀವ್ ಗಾಂಧಿ ಯುಪಿ ಮುಖ್ಯಮಂತ್ರಿ ವೀರಭದ್ರ ಸಿಂಗ್‌ರಿಗೆ ಮೌಖಿಕವಾಗಿ ಹೇಳುತ್ತಾರೆ. ಕೂಡಲೇ ಗೋರಖಪುರದ ಮಹಾಂತ ಅವೈದ್ಯನಾಥ್‌ರ ಜೊತೆಗೆ ಮಾತನಾಡಿದ ವೀರಭದ್ರ ಸಿಂಗ್ ವಿಶ್ವ ಹಿಂದೂ ಪರಿಷತ್‌ಗೆ ಅಯೋಧ್ಯೆಯ ಕೋರ್ಟ್‌ನಲ್ಲಿ ಬಾಗಿಲು ತೆರೆಯಲು ಕೋರಿ ಅರ್ಜಿ ಸಲ್ಲಿಸಲು ಹೇಳಿ, ಸರ್ಕಾರಕ್ಕೆ ಅಭ್ಯಂತರ ಇಲ್ಲ ಎಂದು ಕೋರ್ಟ್‌ನಲ್ಲಿ ಅಧಿಕಾರಿಗಳು ಹೇಳುತ್ತಾರೆ ಎಂದು ತಿಳಿಸುತ್ತಾರೆ. ಆದರೆ ಇದಕ್ಕೆ ಅಶೋಕ್ ಸಿಂಘಲ್ ಒಪ್ಪುವುದಿಲ್ಲ. ಕೊನೆಗೆ ಉಮೇಶ್ ಚಂದ್ರ ಪಾಂಡೆ ಎನ್ನುವ ಕಾಂಗ್ರೆಸ್ ಕಾರ್ಯಕರ್ತನಿಂದ ಸೆಷನ್ಸ್ ಕೋರ್ಟ್‌ನಲ್ಲಿ ಅರ್ಜಿ ಹಾಕಿಸುತ್ತಾರೆ ಕಾಂಗ್ರೆಸ್ ಮುಖ್ಯಮಂತ್ರಿ. ಸೆಷನ್ಸ್‌ ಕೋರ್ಟ್ ಒಪ್ಪುವುದಿಲ್ಲ. ಆಗ ಫೈಜಾಬಾದ್‌ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ, ಸ್ವತಃ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ಜಿಲ್ಲಾ ವರಿಷ್ಠಾಧಿಕಾರಿಗಳನ್ನು ಕರೆಸಿ ‘ಯಾವುದೇ ಕಾನೂನು ಸಮಸ್ಯೆ ಇಲ್ಲ’ ಎಂದು ಹೇಳಿಸುತ್ತಾರೆ. ನಂತರ 1986ರ ಜನವರಿ 31ರಂದು ಸಂಜೆ 4.40ಕ್ಕೆ ಬಾಗಿಲು ತೆರೆಯಿರಿ ಎಂದು ಆದೇಶ ಬರುತ್ತದೆ. ಸಂಜೆ 5.15ಕ್ಕೆ ಬಾಗಿಲಿಗೆ ಹಾಕಿದ ಬೀಗ ಒಡೆಯಲಾಗುತ್ತದೆ. ದಿಲ್ಲಿಯಿಂದ ಹೋದ ಎರಡು ದೂರದರ್ಶನದ ತಂಡಗಳು ಪೂರ್ತಿ ದೇಶಕ್ಕೆ ಬಾಗಿಲಿನ ಬೀಗ ತೆಗೆದ ಘಟನೆ ತೋರಿಸುತ್ತವೆ. ಅಷ್ಟೇ ಅಲ್ಲ ರಾಜೀವ್ ಗಾಂಧಿ 1989ರ ಚುನಾವಣಾ ಪ್ರಚಾರದ ಮೊದಲ ಭಾಷಣವನ್ನು ಅಯೋಧ್ಯೆಯಿಂದ ಶುರು ಮಾಡಿ, ‘1987ರಲ್ಲಿ ದೇಶಕ್ಕೆ ರಾಮಾಯಣ ತೋರಿಸಿದ್ದು ನಾವು, 1986ರಲ್ಲಿ ಮಂದಿರದ ಬೀಗ ತೆಗೆಸಿದ್ದು ನಾವು. ಇನ್ನು ಮುಂದೆ ಅಲ್ಲಿ ಸರ್ವಸಮ್ಮತಿಯಿಂದ ಮಂದಿರ ನಿರ್ಮಿಸಿ ರಾಮರಾಜ್ಯ ತರುವವರೂ ನಾವೇ’ ಎಂದು ಹೇಳಿ, ಪ್ರಣಾಳಿಕೆಯಲ್ಲೂ ಅದನ್ನು ಸೇರಿಸುತ್ತಾರೆ.

1992ರಲ್ಲಿ ಪಿವಿಎನ್ ಮೌನ ಸಮ್ಮತಿ?

1991ರಲ್ಲಿ ಪಿ.ವಿ.ನರಸಿಂಹ ರಾಯರು ಪ್ರಧಾನಿ ಆದ ನಂತರ 1992ರ ಡಿಸೆಂಬರ್ 6ರಂದು ಕರಸೇವೆ ನಿಗದಿ ಆಯಿತು. ಆಗ ಕಲ್ಯಾಣ ಸಿಂಗ್ ಯುಪಿ ಮುಖ್ಯಮಂತ್ರಿ. 2 ಲಕ್ಷ ಕರಸೇವಕರು ಸೇರುವ ಜಾಗದಲ್ಲಿ ವಿವಾದಿತ ಕಟ್ಟಡಕ್ಕೆ ಧಕ್ಕೆ ಆಗಬಹುದು, ನೀವು ರಾಜ್ಯ ಸರ್ಕಾರವನ್ನು 356ನೇ ವಿಧಿ ಬಳಸಿ ಬರಖಾಸ್ತು ಮಾಡಿ ಎಂಬ ಸಲಹೆಗೆ ನರಸಿಂಹ ರಾಯರು ಒಪ್ಪುವುದಿಲ್ಲ. ಆಗ ಕೇಂದ್ರ ಗೃಹ ಕಾರ್ಯದರ್ಶಿ ಮಾಧವ ಗೋಡಬೋಲೆ ಪ್ರಧಾನಿಗೆ ‘ಅಯೋಧ್ಯೆ ಮತ್ತು ಫೈಜಾಬಾದನ್ನು ಮಾತ್ರ ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡಿ’ ಎಂದು ಸಲಹೆ ಕೊಟ್ಟರು. ಅದಕ್ಕೂ ನರಸಿಂಹ ರಾಯರು ಮನಸ್ಸು ಮಾಡಲಿಲ್ಲ. ಸ್ವತಃ ಬಿಜೆಪಿ ನಾಯಕರು ಬಂದು ಅಲಹಾಬಾದ್‌ ಹೈಕೋರ್ಟ್‌ಗೆ ಆರ್ಟಿಕಲ್ 138ರ ಪ್ರಕಾರ ಕೇಂದ್ರ ಮನವಿ ಮಾಡಿಕೊಂಡರೆ ಒಳ್ಳೆಯದು ಎಂದಾಗ ಅದನ್ನು ಕೂಡ ನರಸಿಂಹರಾಯರು ಒಪ್ಪಲಿಲ್ಲ. ಸೋನಿಯಾ ಆಪ್ತ ಎಂ.ಎಲ್. ಪೋತದಾರ್‌ ಹೋಗಿ ‘ರಾಜ್ಯಪಾಲ ಸತ್ಯನಾರಾಯಣ ರೆಡ್ಡಿಯಿಂದ 355ರ ಪ್ರಕಾರ ಒಂದು ವರದಿ ಪಡೆದುಕೊಂಡು ತಾತ್ಕಾಲಿಕವಾಗಿ ವಿಧಾನಸಭೆ ಅಮಾನತು ಮಾಡಿ. ಬೇಕಿದ್ದರೆ ಡಿಸೆಂಬರ್ 6ರ ನಂತರ ಕಲ್ಯಾಣ ಸಿಂಗ್‌ರಿಗೆ ಮರಳಿ ಅಧಿಕಾರ ಕೊಡಿ’ ಎಂದು ಹೇಳುತ್ತಾರೆ. ಇದನ್ನು ನಾನು ಮಾಡಲು ಸಾಧ್ಯವಿಲ್ಲ ಎಂದಿದ್ದರು ನರಸಿಂಹರಾವ್‌. ಅಲ್ಲಿಯವರೆಗೂ ಸುಮ್ಮನಿದ್ದ ಪ್ರಧಾನಿ ನರಸಿಂಹರಾವ್‌ ಡಿ.6ರ ಮಧ್ಯಾಹ್ನ 12.15ಕ್ಕೆ ಕರಸೇವಕರು ಮೊದಲ ಗುಂಬಜ್ ಒಡೆದು 4.30ಕ್ಕೆ ವಿವಾದಿತ ಕಟ್ಟಡ ಧ್ವಂಸವಾಗಿ ಮಣ್ಣು ಸಮತಟ್ಟುಗೊಳಿಸುವವರೆಗೂ ಕೂಡ ಒಂದು ಫೋನು ತೆಗೆದುಕೊಂಡಿಲ್ಲವಂತೆ. ಸಂಜೆ 5.15ಕ್ಕೆ ಕಲ್ಯಾಣ ಸಿಂಗ್ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ನಂತರ ರಾತ್ರಿ 9ಕ್ಕೆ ಕೇಂದ್ರದ ಸಂಪುಟ ಸಭೆ ಕರೆದು, ‘ನನಗೆ ಬಿಜೆಪಿಯವರು ದ್ರೋಹ ಮಾಡಿದರು’ ಎಂದು ಹೇಳಿ ಕಲ್ಯಾಣ ಸಿಂಗ್ ಸರ್ಕಾರವನ್ನು ವಜಾಗೊಳಿಸುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ನರಸಿಂಹರಾಯರ ಮನಸ್ಸಿನಲ್ಲಿ ಏನಿತ್ತು? ಕಲ್ಯಾಣ ಸಿಂಗ್ ಮೇಲೆ ನಂಬಿಕೆ ಇತ್ತಾ? ಅಥವಾ ದ್ವಂದ್ವ ಇತ್ತಾ? ಅಥವಾ ವಿವಾದಿತ ಕಟ್ಟಡ ಬಿದ್ದರೆ ಬೀಳಲಿ, ಒಮ್ಮೆ ವಿಷಯ ಮುಗಿದುಹೋಗುತ್ತದೆ ಎಂಬ ಭಾವನೆ ಇತ್ತಾ? ಇವತ್ತಿಗೂ ನಿಗೂಢ.

India Gate: ಕಾಂಗ್ರೆಸ್ ಶಿಥಿಲ ಸಾಮ್ರಾಜ್ಯಕ್ಕೆ ಮುತ್ಸದ್ಧಿ ದೊರೆ!

ಎರಡು ದೋಣಿಯ ಪಯಣ

ಅಯೋಧ್ಯೆ ವಿಷಯ ಅಷ್ಟೇ ಏಕೆ ಪಂಜಾಬ್‌ನಲ್ಲಿ ಕೂಡ ಕಾಂಗ್ರೆಸ್ ದ್ವಂದ್ವ ರಾಜಕಾರಣವನ್ನೇ ಮಾಡಿದೆ. ಅಕಾಲಿದಳ ತುರ್ತು ಪರಿಸ್ಥಿತಿಯನ್ನು ವಿರೋಧ ಮಾಡಿತು ಅನ್ನುವ ಸಿಟ್ಟಿನಿಂದ ಸಂಜಯ ಗಾಂಧಿ ಅದ್ಭುತ ಗುರುಬಾನಿ ಹಾಡುತ್ತಿದ್ದ ಯುವಕ ಜರ್ನೇಲ್ ಸಿಂಗ್ ಭಿಂದ್ರನ್ ವಾಲೆಯನ್ನು ಪರ್ಯಾಯವಾಗಿ ಬೆಳೆಸಲು ಶುರು ಮಾಡಿದ್ದರು. ನೋಡ ನೋಡುತ್ತಾ ಭಿಂದ್ರನ್ ವಾಲೆ ಪಂಜಾಬ್‌ನ ಹಳ್ಳಿಗಳಲ್ಲಿ ಗುರುವಿನ ಅವತಾರ ಅನ್ನುವ ರೀತಿ ಜನ ಕಾಲಿಗೆ ಬೀಳತೊಡಗಿದರು.1982-83ರಲ್ಲಿ ಒಮ್ಮೆ ಅಕಾಲಿದಳದ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಇಂದಿರಾ ಗಾಂಧಿ ಒಪ್ಪಿಕೊಂಡಿದ್ದರು. ಇನ್ನೇನು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವರು ಒಪ್ಪಂದದ ಬಗ್ಗೆ ಘೋಷಣೆ ಮಾಡಬೇಕು ಅನ್ನುವಾಗ ರಾಜೀವ್ ಗಾಂಧಿ ಬೇಡ ಅಂದಿದ್ದರಿಂದ ಒಪ್ಪಂದ ಮುರಿದು ಬಿತ್ತು. ಆವತ್ತು ಒಪ್ಪಂದ ಆಗಿಬಿಟ್ಟಿದ್ದರೆ ತಾನೇ ಬೆಳೆಸಿದ ಭಿಂದ್ರನ್ ವಾಲೆಯನ್ನು ಮುಗಿಸಲು ಸ್ವರ್ಣ ಮಂದಿರದೊಳಕ್ಕೆ ಸೇನೆಯನ್ನು ಕಳುಹಿಸುವ ಪ್ರಮೇಯ ಬರುತ್ತಿರಲಿಲ್ಲವೇನೋ. ಆಗ ಇಂದಿರಾ ಗಾಂಧಿಯವರ ಜೀವ ಕೂಡ ಉಳಿಯುತ್ತಿತ್ತು. ಆಳ್ವಿಕೆ ನಡೆಸುವ ರಾಜರು ವರ್ತಮಾನದಲ್ಲಿ ತೆಗೆದುಕೊಳ್ಳುವ ನಿರ್ಣಯ ಬಹು ತಲೆಮಾರುಗಳವರೆಗೆ ಪ್ರಭಾವ ಬೀರುತ್ತದೆ.

Follow Us:
Download App:
  • android
  • ios