India Gate: ಕಾಂಗ್ರೆಸ್ ಶಿಥಿಲ ಸಾಮ್ರಾಜ್ಯಕ್ಕೆ ಮುತ್ಸದ್ಧಿ ದೊರೆ!

ಸಿದ್ದು ಮತ್ತು ಖರ್ಗೆ ನಡುವೆ 2008ರಿಂದ ಕೂಡ ಸಂಬಂಧಗಳು ಅಷ್ಟಕಷ್ಟೆ. ಡಿ.ಕೆ.ಶಿವಕುಮಾರ್‌ ಜೊತೆಗೂ ಕೂಡ ಖರ್ಗೆ ಅವರದು ಹೇಳಿಕೊಳ್ಳುವಂಥ ಸಂಬಂಧ ಇಲ್ಲ. ಆದರೆ ಇನ್ನುಮುಂದೆ ಸ್ವತಃ ಖರ್ಗೆ ಅವರೇ ಹೈಕಮಾಂಡ್‌. ಟಿಕೆಟ್‌ ಹಂಚಿಕೆ ಇರಲಿ, ರಾಜ್ಯ ಕಾಂಗ್ರೆಸ್‌ಗೆ ಸಂಬಂಧಿಸಿದ ಯಾವುದೇ ನಿರ್ಣಯ ಇರಲಿ ವಿಟೋ ಅಧಿಕಾರ ಈಗ ಖರ್ಗೆಗೆ ಬಂದಿದೆ.

AICC president Mallikarjun Kharge expected to revamp congress bring changes in KPCC rav

- India Gate Column by Prashant Natu

ಇತಿಹಾಸದ ಪುಟಗಳಲ್ಲಿ ಹಳೆ ಸಾಮ್ರಾಜ್ಯಗಳು ಶಿಥಿಲಗೊಂಡು ಹೊಸ ಚಕ್ರವರ್ತಿಗಳು ಉದಯಿಸಿದ ಅಸಂಖ್ಯಾತ ಘಟನೆಗಳಿವೆ. ಸಾಮ್ರಾಜ್ಯಗಳು ವಿಸ್ತರಣೆ ಆದ ಮೇಲೆ ರಾಜ ಮದಿರೆ ಮತ್ತು ಮಾನಿನಿಯರಲ್ಲೇ ಮುಳುಗಿಹೋದಾಗ ಮಂತ್ರಿಗಳು, ಸೇನಾಧಿಪತಿಗಳು ರಾಜ್ಯ ಲಪಟಾಯಿಸಿ ತಾನೇ ಗದ್ದುಗೆ ಹಿಡಿದ ಉದಾಹರಣೆಗಳಿವೆ. ಆದರೆ ರಾಜಪ್ರಭುತ್ವ ಮತ್ತು ಪ್ರಜಾಪ್ರಭುತ್ವದಲ್ಲಿ ಸಾಮ್ರಾಜ್ಯ ಶಿಥಿಲಗೊಂಡು ಪ್ರಭಾವ ಕುಂಠಿತವಾಗಿ ದಶಕಗಳ ಕಾಲ ದೇಶವನ್ನು ಆಳಿದ ಮನೆತನವೊಂದು ನಿಷ್ಠಾವಂತನಿಗೆ ಕುರ್ಚಿ ನೀಡಿದ ಪ್ರಸಂಗಗಳು ಅಪರೂಪ. ಪ್ರಾಯಶಃ 80 ವರ್ಷದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್‌ ಪಾರ್ಟಿ ಅಧ್ಯಕ್ಷರಾಗಿ ನೇಮಕ ಮಾಡಿದ್ದನ್ನು ಅದೇ ಪರಿಪ್ರೇಕ್ಷ್ಯದಲ್ಲಿ ನೋಡಬೇಕಾಗುತ್ತದೆ. ಖರ್ಗೆ ಅವರನ್ನು ಗಾಂಧಿ ಕುಟುಂಬ ಅಧ್ಯಕ್ಷರಾಗಿ ಮಾಡಿದ್ದು ಬರೀ ಗಾಂಧಿ ಕುಟುಂಬದ ಹೊರಗೆ ಇದ್ದವರನ್ನು ತಂದು ಕುರ್ಚಿ ಕೊಟ್ಟಿದ್ದೇವೆ ಎಂದು ತೋರಿಸಲು ಮಾತ್ರವೋ ಅಥವಾ ಖರ್ಗೆ ಕೈಗೆ ಸೋನಿಯಾ, ರಾಹುಲ…ರಿಗೆ ಇದ್ದಷ್ಟೇ ಅಧಿಕಾರ ಸಿಗುತ್ತದೆಯೋ ಎಂಬುದರ ಮೇಲೆ ಖರ್ಗೆ ಅವರ ವೈಯಕ್ತಿಕ ಮತ್ತು ಕಾಂಗ್ರೆಸ್‌ ಪಾರ್ಟಿಯ ಭವಿಷ್ಯ ನಿರ್ಭರವಾಗಲಿದೆ. ಯಾರು ಎಷ್ಟೇ ಹೇಳಿದರೂ ಕೂಡ ಆರ್‌ಎಸ್‌ಎಸ್‌ ಇಲ್ಲದೆ ಬಿಜೆಪಿ ಮತ್ತು ಗಾಂಧಿ ಕುಟುಂಬ ಇಲ್ಲದೆ ಕಾಂಗ್ರೆಸ್‌ ಒಂದು ಶಿಲೆಯಂತೆ ಉಳಿದುಕೊಳ್ಳುವುದು ಬಲು ಕಠಿಣ. ಹೀಗಿರುವಾಗ ಗಾಂಧಿ ಕುಟುಂಬದ ರಬ್ಬರ್‌ ಸ್ಟ್ಯಾಂಪ್‌ ಆಗದೆ, ಇನ್ನೊಂದು ಕಡೆ ಗಾಂಧಿಗಳ ಜೊತೆ ಸಂಘರ್ಷಕ್ಕೂ ಇಳಿಯದೆ ಕಾಂಗ್ರೆಸ್‌ ಪಾರ್ಟಿಯನ್ನು ಮರಳಿ ಅಧಿಕಾರಕ್ಕೆ ತರುವುದು ಖರ್ಗೆ ಮುಂದಿರುವ ಅತಿ ದೊಡ್ಡ ಸವಾಲುಗಳಲ್ಲಿ ಒಂದು.

Gujarat Politics: 25 ವರ್ಷದ ನಂತರ ಮೋದಿ ತವರಲ್ಲಿ ರಾಜಕೀಯ ಸಮೀಕರಣ ಬದಲಾವಣೆ: ಹೇಗಿದೆ ಚುನಾವಣಾ ಕಣ?

ಖರ್ಗೆಗಿರುವ ಮೊದಲ ಟೆಸ್ಟ್‌

ಗಾಂಧಿ ಕುಟುಂಬದ ಕೃಪಾಕಟಾಕ್ಷ ಮತ್ತು ಸಹಕಾರದಿಂದ ಖರ್ಗೆ ಅನಾಯಾಸವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 15 ದಿನಗಳ ಹಿಂದೆಯಷ್ಟೇ ರಾಜಸ್ಥಾನದಲ್ಲಿ ಗೆಹಲೋಟ್‌ ಮತ್ತು ಪೈಲಟ್‌ ನಡುವೆ ಕಿತ್ತಾಟ ತಾರಕಕ್ಕೆ ಏರಿತ್ತು. ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಬೇಕಾದರೆ ಬಿಟ್ಟೇನು, ಆದರೆ ಯಾವುದೇ ಕಾರಣಕ್ಕೂ ಸಚಿನ್‌ ಪೈಲಟ್‌ರನ್ನು ಮುಖ್ಯಮಂತ್ರಿ ಮಾಡಲು ಬಿಡುವುದಿಲ್ಲ ಎಂಬ ಮನಸ್ಥಿತಿಯಲ್ಲಿ ಗೆಹಲೋಟ್‌ ಇದ್ದರು. ಆದರೆ, ಈ ಬಾರಿ ಮುಖ್ಯಮಂತ್ರಿ ಮಾಡದೆ ಇದ್ದರೆ ಒಂದು ಕಾಲು ಹೊರಗೆ ಎಂದು ಸಚಿನ್‌ ಪೈಲಟ್‌ ಓಡಾಡುತ್ತಿದ್ದಾರೆ. ಹೀಗಿರುವಾಗ ರಾಜಸ್ಥಾನದ ಸಂಕಟವನ್ನು ಖರ್ಗೆ ಹೇಗೆ ನಿಭಾಯಿಸುತ್ತಾರೆ ಅನ್ನುವುದು ಮೊದಲ ಸವಾಲು. 2024ರ ಲೋಕಸಭೆಗೂ ಮೊದಲು ಒಟ್ಟು 6 ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ವರ್ಷದ ಅಂತ್ಯದಲ್ಲಿ ಗುಜರಾತ್‌ ಮತ್ತು ಹಿಮಾಚಲ, 2023ರ ಮೇ ತಿಂಗಳಲ್ಲಿ ಕರ್ನಾಟಕ ಮತ್ತು 2023ರ ಅಂತ್ಯದಲ್ಲಿ ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗಳಿವೆ. ಈ 6 ರಾಜ್ಯಗಳಲ್ಲಿ ಬಿಜೆಪಿಗೆ ಮುಖ್ಯ ಎದುರಾಳಿ ಕಾಂಗ್ರೆಸ್‌ ಪಕ್ಷ. ಒಂದು ವೇಳೆ 2024ಕ್ಕೆ ಲೋಕಸಭೆಯಲ್ಲಿ ಕಾಂಗ್ರೆಸ್‌ನ ಸ್ಥಿತಿ ಸುಧಾರಿಸಬೇಕಾದರೆ ಈ 6 ರಾಜ್ಯಗಳಲ್ಲಿ ಕಾಂಗ್ರೆಸ್‌ ಗೆಲ್ಲಬೇಕು ಅರ್ಥಾತ್‌ ಬಿಜೆಪಿ ಸೋಲಬೇಕು. ಒಂದು ವೇಳೆ 2024ರಲ್ಲಿ ರಾಷ್ಟ್ರೀಯ ರಾಜಕಾರಣದ ಸಮೀಕರಣಗಳು ಬದಲಾಗಬೇಕಾದರೆ ಕಾಂಗ್ರೆಸ್‌ ಸೀಟುಗಳ ಸಂಖ್ಯೆ ಲೋಕಸಭೆಯಲ್ಲಿ 100ರ ಗಡಿ ದಾಟಬೇಕು. ಖರ್ಗೆ ನೇತೃತ್ವದಲ್ಲಿ ಇದೆಲ್ಲ ಸಾರ್ಥಕ ಆಗುತ್ತಾ ಅನ್ನುವುದು ಅವರ ಯಶಸ್ಸು ಮತ್ತು ವೈಫಲ್ಯದ ಷರಾ ಬರೆಯಲಿದೆ.

ಕರ್ನಾಟಕದ ಮೇಲೆ ಪರಿಣಾಮ

ಈಗಾಗಲೇ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಡುವೆ ಕಳೆದ 4 ತಿಂಗಳಿನಿಂದ ಜಟಾಪಟಿ ನಡೆದಿರುವಾಗ ಏಕಾಏಕಿ ಖರ್ಗೆ ಸಾಹೇಬರು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಾಗಿರುವುದು ಕಾಂಗ್ರೆಸ್‌ನ ರಾಜ್ಯದ ಒಳಜಗಳಗಳನ್ನು ಪರಿಹರಿಸುತ್ತಾ ಅಥವಾ ಇನ್ನೂ ಉಲ್ಬಣ ಮಾಡುತ್ತಾ ಅನ್ನುವ ಬಗ್ಗೆ ಸ್ಪಷ್ಟತೆ ಬರಲು ಇನ್ನು ಒಂದೆರಡು ತಿಂಗಳು ಬೇಕಾಗ ಬಹುದು. ಹಾಗೆ ನೋಡಿದರೆ ಸಿದ್ದು ಮತ್ತು ಖರ್ಗೆ ನಡುವೆ 2008ರಿಂದ ಕೂಡ ಸಂಬಂಧಗಳು ಅಷ್ಟಕಷ್ಟೇ. ಸಿದ್ದು ಅವರದು ಹಟ ಹಿಡಿದು ಪಟ್ಟು ಹಾಕಿ ತನಗೆ ಬೇಕಾದ್ದನ್ನು ಪಡೆಯುವ ಸ್ವಭಾವವಾದರೆ ಖರ್ಗೆ ಆ ವಿಷಯದಲ್ಲಿ ಅಲ್ಪತೃಪ್ತರು. ಬೆಂಬಲಿಗರ ಅಹವಾಲು ದಿಲ್ಲಿ ಎದುರುಗಡೆ ಇಡುತ್ತಿದ್ದರಾದರೂ ಹೈಕಮಾಂಡ್‌ ಬೇಡ ಎಂದರೆ ಪ್ರಶ್ನೆ ಕೇಳುವ ಜಾಯ ಮಾನದವರಲ್ಲ. ಒಂದು ರೀತಿಯಲ್ಲಿ ಅದೇ ಅವರ ತಾಕತ್ತು ಮತ್ತು ದೌರ್ಬಲ್ಯ ಕೂಡ ಹೌದು. ಡಿ.ಕೆ.ಶಿವಕುಮಾರ್‌ ಜೊತೆಗೂ ಕೂಡ ಖರ್ಗೆ ಅವರದು ಹೇಳಿಕೊಳ್ಳುವಂಥ ಸಂಬಂಧ ಇಲ್ಲ. ಡಿ.ಕೆ.ಶಿವಕುಮಾರ್‌ರ ಆಕ್ರಮಣಕಾರಿ ಸ್ವಭಾವದ ಬಗ್ಗೆ ದಿಲ್ಲಿ ಪತ್ರಕರ್ತರ ಎದುರು ಆಗಾಗ ಕಿಡಿ ಕಾರುತ್ತಿದ್ದ ಖರ್ಗೆ ಯಾವತ್ತೂ ಕೂಡ ದಿಲ್ಲಿ ಎಳೆದ ಲೈನ್‌ ಕ್ರಾಸ್‌ ಮಾಡುತ್ತಿರಲಿಲ್ಲ. ಆದರೆ ಇನ್ನುಮುಂದೆ ಸ್ವತಃ ಖರ್ಗೆ ಅವರೇ ಹೈಕಮಾಂಡ್‌. ಟಿಕೆಟ್‌ ಹಂಚಿಕೆ ಇರಲಿ, ರಾಜ್ಯ ಕಾಂಗ್ರೆಸ್‌ಗೆ ಸಂಬಂಧಿಸಿದ ಯಾವುದೇ ನಿರ್ಣಯ ಇರಲಿ ವಿಟೋ ಅಧಿಕಾರ ಈಗ ಖರ್ಗೆ ಅವರಿಗೆ ಬಂದಿದೆ. ಆದರೆ ಖರ್ಗೆ ಸ್ವಭಾವದ ಇತಿಹಾಸ ನೋಡಿದರೆ ಅವರ ಉಚ್ಛ್ರಾಯದಿಂದ ರಾಜ್ಯದಲ್ಲಿ ಮೂರನೇ ಬಣ ಹುಟ್ಟುಹಾಕುವ ರೀತಿ ನಡೆದುಕೊಳ್ಳುತ್ತಾರೆ ಎಂದು ಅನ್ನಿಸುವುದಿಲ್ಲ. ಆದರೆ ಸಿದ್ದರಾಮೋತ್ಸವದ ನಂತರ ಸಿದ್ದು ಹೇಗೆ ನಡೆದುಕೊಂಡರೂ ನಡೆಯುತ್ತದೆ ಎಂಬ ಸ್ಥಿತಿ ಬಂದಿತ್ತು. ಅದು ಖರ್ಗೆ ಅಧ್ಯಕ್ಷರಾಗುವುದರಿಂದ ಸ್ವಲ್ಪ ಕಡಿಮೆ ಆಗುತ್ತದೆ. ಅದರ ಜೊತೆಗೆ ಎಲ್ಲ ಬಣಗಳನ್ನು ಒಟ್ಟುಗೂಡಿಸಿ ಅಧಿಕಾರ ಹಿಡಿಯುವ ರೀತಿ ಪ್ರಯತ್ನ ಮಾಡಬೇಕು ಎಂಬ ಜವಾಬ್ದಾರಿ ಸಹಜವಾಗಿ ಖರ್ಗೆ ಮೇಲೂ ಕೂಡ ಬೀಳುತ್ತದೆ. ಖರ್ಗೆ ಅವರನ್ನು ರಾಷ್ಟ್ರೀಯ ಅಧ್ಯಕ್ಷ ಮಾಡುವುದರಿಂದ ರಾಜ್ಯ ಕಾಂಗ್ರೆಸ್‌ ಮೇಲಾಗಬಹುದಾದ ಒಂದು ಪಾಸಿಟಿವ್‌ ಪರಿಣಾಮ ಎಂದರೆ ಮೊದಲೇ ಕಾಂಗ್ರೆಸ್‌ ಜೊತೆ ಇರುವ ದಲಿತ ಬಲಗೈ ಮತಗಳು ಇನ್ನಷ್ಟುಕ್ರೋಡೀಕರಣಗೊಳ್ಳಬಹುದು.

ಬಾರದು ಬಪ್ಪುದು ಬಪ್ಪುದು ತಪ್ಪದು

2004ರಲ್ಲಿ ಮುಖ್ಯಮಂತ್ರಿ ಖರ್ಗೆಯೋ ಅಥವಾ ಧರ್ಮಸಿಂಗ್‌ ಅವರೋ ಎಂದು ಪೈಪೋಟಿ ನಡೆಯುತ್ತಿದ್ದಾಗ ಸಂಜೆ ದಿಲ್ಲಿ ಪತ್ರಕರ್ತರು ಕರ್ನಾಟಕ ಭವನಕ್ಕೆ ಹೋದರಂತೆ. ನೆಲಮಹಡಿಯ ಮೊದಲನೇ ಕೋಣೆಯಲ್ಲಿ ಧರ್ಮಸಿಂಗ್‌ ಇದ್ದರೆ ಪಕ್ಕದಲ್ಲಿ ಖರ್ಗೆ ಇದ್ದರಂತೆ. ಪತ್ರಕರ್ತರ ಎದುರು ಧರ್ಮಸಿಂಗ್‌ ನಾನೇಕೆ ಮುಖ್ಯಮಂತ್ರಿ ಆಗಬಾರದು? 1999ರಲ್ಲಿ ಎಸ್‌.ಎಂ.ಕೃಷ್ಣಗೆ ಬಿಟ್ಟುಕೊಟ್ಟಿದ್ದೇನೆ, ಈ ಬಾರಿ ನಾನೇ ಆಗುತ್ತೇನೆ ಎಂದು ತುಸು ಜೋರಾಗಿಯೇ 20 ವರ್ಷ ಏನೇನು ಆಗಿತ್ತು ಎಂದು ಹೇಳಿದರಂತೆ. ಪತ್ರಕರ್ತರು ನಂತರ ಖರ್ಗೆ ಬಳಿ ಹೋದರೆ ಏನನ್ನೂ ಮಾತನಾಡಲು ಒಲ್ಲೆ ಅಂದ ಖರ್ಗೆ, ‘ಸೋನಿಯಾ ಮೇಡಂ ಏನು ಹೇಳುತ್ತಾರೋ ಅದು. ಸರ್‌ ಅಂಖೋ ಪರ್‌ ನನಗೂ ಮುಖ್ಯಮಂತ್ರಿ ಮಾಡಿ’ ಎಂದು ಕೇಳಿದ್ದೇನೆ ಎಂದು ಹೇಳಿ ಚಹಾ ಕುಡಿಸಿ ಕಳುಹಿಸಿದರಂತೆ. ಇದಾಗಿ ತುಂಬಾ ವರ್ಷಗಳ ನಂತರ ದಿಲ್ಲಿಯ ಸಫ್ದರ್‌ ಜಂಗ್‌ ರಸ್ತೆಯಲ್ಲಿದ್ದ ಖರ್ಗೆ ಸಾಹೇಬರನ್ನು ಯಾಕೆ ನೀವು ಮುಖ್ಯಮಂತ್ರಿ ಹುದ್ದೆ ಹತ್ತಿರ ಬರುತ್ತೀರಿ, ಆಮೇಲೆ ತಪ್ಪಿಸಿಕೊಳ್ಳುತ್ತೀರಿ ಎಂದು ಕೇಳಿದರೆ, ‘ನೋಡಪ್ಪ ನಾತು. ಒಂದು ತಿಳ್ಕೊ, ಜೀವನದಾಗ ಬಾರದು ಬಪ್ಪುದು ಬಪ್ಪುದು ತಪ್ಪದು’ ಎಂದು ಹೇಳಿ ಬೇಸರದ ಮುಖದಲ್ಲೇ ಬಲವಂತದ ನಗು ತಂದುಕೊಳ್ಳಲು ಪ್ರಯತ್ನಿಸಿದರು.

ಮೋದಿ ಎದುರು ಖರ್ಗೆ

2007ರಲ್ಲಿ ಸಿದ್ದು ಕಾಂಗ್ರೆಸ್‌ಗೆ ಬಂದ ನಂತರ 2008ರಲ್ಲಿಯೇ ಸಿದ್ದು ಮತ್ತು ಖರ್ಗೆ ನಡುವೆ ತಿಕ್ಕಾಟಗಳು ನಡೆಯತೊಡಗಿದವು. ಹೀಗಾಗಿ 2009ರಲ್ಲಿ ಖರ್ಗೆ ಅವರನ್ನು ಅಹ್ಮದ್‌ ಪಟೇಲ… ಒತ್ತಾಯದಿಂದ ಸೋನಿಯಾ ದಿಲ್ಲಿ ರಾಜಕಾರಣಕ್ಕೆ ಕರೆಸಿಕೊಂಡರು. ಒಂದು ರೀತಿಯಲ್ಲಿ ಖರ್ಗೆ ಪ್ರತಿಭೆ ದಿಲ್ಲಿ ನಾಯಕರ ಎದುರು ಅನಾವರಣಗೊಂಡಿದ್ದೇ ಆಗ. ಕಾರ್ಮಿಕ, ರೈಲ್ವೆ ತರಹದ ಕ್ಯಾಬಿನೆಟ್‌ ಖಾತೆಗಳನ್ನು ನಿಭಾಯಿಸಿದ ರೀತಿಯಿಂದ ಖರ್ಗೆ ಸೋನಿಯಾ ಮತ್ತು ರಾಹುಲ… ಗಾಂಧಿಯವರ ಇಷ್ಟದ ಸೀನಿಯರ್‌ಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಸೋನಿಯಾ ತುಂಬಾ ಇಷ್ಟಪಡುತ್ತಿದ್ದ ಎಸ್‌.ಎಂ.ಕೃಷ್ಣ ಅವರು ರಾಹುಲ… ಅವಕೃಪೆಗೆ ಒಳಗಾದರೆ, ಖರ್ಗೆ ದಿಲ್ಲಿಗೆ, ಸಿದ್ದು ರಾಜ್ಯಕ್ಕೆ ಅನ್ನುವುದು ರಾಹುಲ… ಮತ್ತವರ ತಂಡದ ತಲೆಯಲ್ಲಿ ಅಚ್ಚು ಹೊಡೆದು ಕುಳಿತಿತ್ತು. 2013ರಲ್ಲಿ ಇದೇ ಕಾರಣದಿಂದಲೇ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನ ಕೂಡ ತಪ್ಪಿಸಿಕೊಂಡರು. ಆದರೆ 2014ರಲ್ಲಿ ಖರ್ಗೆ ಅವರನ್ನು ಮೋದಿ ಎದುರು ಲೋಕಸಭೆಯ ಕಾಂಗ್ರೆಸ್‌ ನಾಯಕರಾಗಿ ಆಯ್ಕೆ ಮಾಡಿದಾಗ ಉತ್ತರ ಭಾರತದ ಪತ್ರಕರ್ತರಿಗೆ ಇವರು ನಿಭಾಯಿಸುತ್ತಾರಾ ಅನ್ನುವುದು ಪ್ರಶ್ನೆ ಆಗಿತ್ತು. ಚುನಾವಣಾ ರಾಜಕೀಯ ಏನೇ ಇರಲಿ, ಲೋಕಸಭೆಯಲ್ಲಿ ತಮ್ಮ ಕಾಲು ನೋವಿನ ಮಧ್ಯೆಯೂ ಬೆಳಿಗ್ಗೆ 11ಕ್ಕೆ ಸದನಕ್ಕೆ ಬಂದರೆ ಮನೆಗೆ ಹೋಗುತ್ತಿದ್ದದ್ದು ಸಂಜೆ 7 ಗಂಟೆ ಸುಮಾರಿಗೆ. ಉರ್ದು ಚೆನ್ನಾಗಿ ಗೊತ್ತಿದ್ದರಿಂದ ಖರ್ಗೆ ಶಾಯರಿಗಳನ್ನು ಬರೆದುಕೊಂಡು ಭಾಷಣ ತಯಾರು ಮಾಡಿ ಬರುತ್ತಿದ್ದರು. ಇವರ ಜೊತೆ ಉಪ ನಾಯಕರಾಗಿದ್ದವರು ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ. ಇಬ್ಬರೂ ಮಹಾರಾಜರ ವಂಶದವರು. ಬರೀ ತಮ್ಮ ಭಾಷಣ ಇದ್ದಾಗ ಬಂದು ಹೋಗಿ ಬಿಡುವವರು. ವಿಪರ್ಯಾಸ ನೋಡಿ, ಇವತ್ತು ಅಮರಿಂದರ್‌ ಮತ್ತು ಸಿಂಧಿಯಾ ಇಬ್ಬರೂ ಬಿಜೆಪಿ ಜೊತೆಗೆ ಇದ್ದಾರೆ. ಖರ್ಗೆ ಮಾತ್ರ ಕಾಂಗ್ರೆಸ್‌ನ ಶೀರ್ಷ ಸ್ಥಾನ ತಲುಪಿದ್ದಾರೆ.

India Gate: ಕೈ ಬಿಟ್ಟು ಹೋಗದಂತೆ ಗಾಂಧಿಗಳ ಕಸರತ್ತು

ಇದು ಖರ್ಗೆ ಸ್ಟೈಲ್

2013ರಲ್ಲಿ ಖರ್ಗೆ ಜೊತೆ ದಿಲ್ಲಿ ಪತ್ರಕರ್ತರು ಕಲಬುರಗಿ ಜಿಲ್ಲೆಯ ಕ್ಷೇತ್ರಗಳ ಪ್ರಚಾರ ಕವರ್‌ ಮಾಡಲು ಹೋಗಿದ್ದರು. ಅವರನ್ನು ಕರೆದುಕೊಂಡು ಖರ್ಗೆ ಮುಸ್ಲಿಂ ಸಮುದಾಯದ ಖಮರುಲ… ಇಸ್ಲಾಮ…, ಈಡಿಗ ಸಮುದಾಯದ ಮಾಲೀಕಯ್ಯ ಗುತ್ತೇದಾರ ಮತ್ತು ದಲಿತ ಎಡಗೈ ಸಮುದಾಯದ ರಾಮಕೃಷ್ಣ ಕ್ಷೇತ್ರಕ್ಕೆ ಹೋಗಿ ಬಂದರಂತೆ. ಸಂಜೆ ಬರುವಾಗ ನೋಡಿ ಈ ಮೂವರು ನನ್ನ ವಿರುದ್ಧ 2009ರಲ್ಲಿ ಇದ್ದವರು ಅಂದರಂತೆ. ಆಗ ಪತ್ರಕರ್ತರು ಮತ್ತೆ ಯಾಕೆ ಗೆಲ್ಲಿಸಲು ಓಡಾಡುತ್ತೀರಿ, ಸೋಲಿಸಿ ಎಂದಾಗ ಖರ್ಗೆ ಒಮ್ಮೆ ಇವರನ್ನು ಸೋಲಿಸಿಬಿಟ್ಟರೆ ಕಾಂಗ್ರೆಸ್ಸನ್ನು ಮತ್ತೆ ಗೆಲ್ಲಿಸೋದು ಕಷ್ಟ. ಮರಳಿ ಮತದಾರರು ಮುಂದಿನ ಚುನಾವಣೆಗೆ ವಾಪಸು ಬರುತ್ತಾರೆ ಅನ್ನೋ ಗ್ಯಾರಂಟಿ ಇರೋದಿಲ್ಲ ಎಂದು ಸೂಕ್ಷ್ಮವಾಗಿ ಹೇಳಿದರಂತೆ. ಒಮ್ಮೆ ದಲಿತ ಸಿಎಂ ಎಂದು ಜೋರು ಚರ್ಚೆ ಇದ್ದಾಗ ನಾನು ಟೀವಿಯಲ್ಲಿ ಖರ್ಗೆ ದಲಿತ ನಾಯಕ ಹಾಗೆ ಹೀಗೆ ಎಂದೆಲ್ಲ ಮಾತನಾಡಿದ್ದೆ. ರಾತ್ರಿ ಫೋನ್‌ ಮಾಡಿದ ಖರ್ಗೆ, ‘1972ರಿಂದ ಸತತ ಆರಿಸಿ ಬಂದೇನಿ. ದಲಿತ ಅನ್ನೋದು ಬಿಟ್ರ ನನ್ನ ಮೆರಿಟ್‌ ಏನೂ ಇಲ್ಲವೇನು? ನಾ ಏನ್‌ ಪಾರ್ಟಿ ಕಟ್ಟಿಲ್ಲ, ನಾ ಏನ್‌ ಛಲೋ ಆಡಳಿತ ಕೊಟ್ಟಿಲ್ಲ. ಭಾಳ ಬೇಜಾರಾಗ್ತಾದ ನಿಮ್ಮ ಮಾತು ಕೇಳಿ’ ಎಂದು ಹೇಳಿ ಫೋನ್‌ ಇಟ್ಟರು. ಖರ್ಗೆ ಮುಂದೆ ಕಾಂಗ್ರೆಸ್‌ಗೆ ಆಮ್ಲಜನಕ ಕೊಡುತ್ತಾರೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ವರವಟ್ಟಿಯ ಅತ್ಯಂತ ಸಾಮಾನ್ಯ ಶೋಷಿತ ಸಮುದಾಯದ ವ್ಯಕ್ತಿ ಇಷ್ಟುದೂರದ ಹಾದಿಯನ್ನು ತನ್ನ ಪ್ರತಿಭೆ, ನಿಷ್ಠೆ ಮತ್ತು ಪರಿಶ್ರಮದಿಂದ ಕ್ರಮಿಸಿದ್ದಕ್ಕೆ ಮೆಚ್ಚುಗೆ ಸಲ್ಲಲೇಬೇಕು.

Latest Videos
Follow Us:
Download App:
  • android
  • ios