ಕರ್ನಾಟಕದ ರಿಯಾಲಿಟಿ ಗೊತ್ತಿಲ್ಲದೇ ರಾಷ್ಟ್ರ ನಾಯಕರಿಗೆ ರಾಜ್ಯ ರಾಜಕೀಯದ ತೇರು ಎಳೆಯೋದು ಕಷ್ಟ!
ದೇವೇಗೌಡ, ಸಿದ್ಧರಾಮಯ್ಯ ಮತ್ತು ಯಡಿಯೂರಪ್ಪ ಕರ್ನಾಟಕದ ಜಾತಿ ರಾಜಕಾರಣದ ರಿಯಾಲಿಟಿಗಳು. ಮೋದಿ ಶಾ ಇರಲಿ, ಗಾಂಧೀ ಪರಿವಾರ ಇರಲಿ ಈ ರಿಯಾಲಿಟಿಗಳನ್ನು ಒಪ್ಪಿಕೊಳ್ಳದೇ ಇಲ್ಲಿ ರಾಜಕೀಯ ತೇರು ಎಳೆಯುವುದು ಸದ್ಯಕ್ಕಂತು ಕಷ್ಟ ಬಿಡಿ.
ಯಡಿಯೂರಪ್ಪನವರ ಆ ಒಂದು ಫೋನ್ ಕರೆ
ಸೆಪ್ಟೆಂಬರ್‌ನಲ್ಲಿ ಯಾವಾಗ ಅಮಿತ್ ಶಾ ದೇವೇಗೌಡರ ಜೊತೆ ಚರ್ಚೆ ನಡೆಸಿದರೋ ಆಗಲೇ ಒಂದು ಕಡೆ ಒಕ್ಕಲಿಗರನ್ನು ಸೆಳೆಯುವ ಜೊತೆಗೆ ಲಿಂಗಾಯಿತರನ್ನು ಮನವೊಲಿಸಿದರೆ ಮಾತ್ರ ಲೋಕಸಭೆಯಲ್ಲಿ ಲಾಭ ಆಗುತ್ತದೆ ಅದಕ್ಕೆ ಯಡಿಯೂರಪ್ಪ ಸುತ್ತ ಮುತ್ತ ಇರುವುದು ಬಹಳ ಅವಶ್ಯಕ ಎನ್ನುವುದನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ದಾ ಮತ್ತು ಪ್ರಧಾನಿ ಮೋದಿ ಇಬ್ಬರಿಗೂ ಗಟ್ಟಿಯಾಗಿ ಹೇಳಿದರು. ಆದರೆ ನಡ್ಡಾ RSS ನಾಯಕರೊಂದಿಗೆ ಮಾತನಾಡಿದಾಗ ತುಂಬಾ ಒಳ್ಳೆ ಪ್ರತಿಕ್ರಿಯೆ ಏನೂ ಬರಲಿ.ಲ್ಲ ಬದಲಾಗಿ ವಿಜಯೇಂದ್ರ ಬೇಡ, ಬೇಕಿದ್ದಲ್ಲಿ ರಾಘವೇಂದ್ರರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿ ಎಂಬ ಸಲಹೆ ಬಂತು. ಆಗ ಅಕ್ಟೋಬರ್ 7ಕ್ಕೆ ಪ್ರಧಾನಿ ಮೋದಿ ಅವರನ್ನು ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಭೇಟಿ ಆದಾಗ 'ಫೈಲ್ ನನ್ನ ಬಳಿ ಇದೆ, ನೋಡೋಣ. ಇನ್ನು ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ,' ಎಂದು ಹೇಳಿ ಕಳುಹಿಸಿದ್ದಾರೆ. ಇದನ್ನು ವಿಜಯೇಂದ್ರರನ್ನು ಮಾಡುವುದಿಲ್ಲ ಎಂಬ ಸೂಚನೆ ಎಂದುಕೊಂಡ ಲೇಹರ್ ಸಿಂಗ್ ಯಡಿಯೂರಪ್ಪ ಬಳಿ ಹೋಗಿ, 'ಹೇಗೂ ನಿಮ್ಮ ಮೊದಲ ಪ್ರಾತಿನಿದ್ಯ ವಿಜಯೇಂದ್ರ ಆಗೋಲ್ಲ. ಶೋಭಾ ಕರಂದ್ಲಾಜೆ ಹೆಸರು ಹೇಳಿ,' ಎಂದಾಗ ಯಡಿಯೂರಪ್ಪ ನೋಡೋಣ ನೋಡೋಣ ಎಂದಿದ್ದಾರೆ. ಇದೇ ವಿಷಯ ಮಾಧ್ಯಮಗಳಲ್ಲಿ ತಿರುಗಾಡಿ ಶೋಭಾ ಮುಂದಿನ ಅಧ್ಯಕ್ಷೆ ಎಂದು ಬಿಂಬಿತ ಆಗಿದೆ. ಆಗ ಕುಟುಂಬದ ಒತ್ತಡದಿಂದ ನೇರವಾಗಿ ಅಮಿತ್ ಶಾ ಮತ್ತು ಜೆಪಿ ನಡ್ದಾ ಅವರಿಗೆ ಕರೆ ಮಾಡಿದ ಯಡಿಯೂರಪ್ಪ ಶೋಭಾ ಹೆಸರು ನಾನು ಹೇಳಿದ್ದಲ್ಲ, ನಾನು ಹೇಳಿದ್ದು ಒಂದೇ ಹೆಸರು ಅದು ಸಣ್ಣ ಮಗ ವಿಜಯೇಂದ್ರರದ್ದು. ಅದನ್ನೇ ಮಾಡಿ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಬೇರೆ ದಾರಿ ಕಾಣದೇ ಮೋದಿ ಶಾ ಮತ್ತು ನಡ್ಡಾ ತಾವೇ ಹೇಳುತ್ತಿದ್ದ ವಂಶ ಪರಂಪರೆಯ ನಿಯಮ ಪಕ್ಕಕ್ಕೆ ಸರಿಸಿ ವಿಜಯೇಂದ್ರ ಹೆಸರು ಘೋಷಿಸಿದೆ. ಅರ್ಥ ಏನಪ್ಪಾ ಅಂದರೆ ಪೊಲಿಟಿಕ್ಸ್‌ನಲ್ಲಿ ಅಂತಿಮವಾಗಿ ಬೇಕಾಗಿರುವುದು ವೋಟುಗಳು ಮತ್ತು ಸೀಟುಗಳು ಬೌದ್ಧಿಕ ಭಾಷಣ ಅಲ್ಲ.
ಪ್ರಯೋಗಗಳಿಂದ ಹೊರ ಗುತ್ತಿಗೆ ತನಕ
ರಾಜ್ಯ ಬಿಜೆಪಿ ಇರಲಿ ಕೇಂದ್ರ ಬಿಜೆಪಿ ಇರಲಿ ಅಧಿಕಾರದಲ್ಲಿದ್ದಾಗ, ಯಡಿಯೂರಪ್ಪ ಒಬ್ಬರೇನಾ ನಾಯಕರು ಅನ್ನಿಸುತ್ತದೆ. ಆದರೆ ಸೋತು ವಿಪಕ್ಷದ ಬೆಂಚುಗಳಲ್ಲಿ ಕುಳಿತುಕೊಂಡ ತಕ್ಷಣ ಯಡಿಯೂರಪ್ಪ ಅನಿವಾರ್ಯ ಅವರಿಲ್ಲದೆ ವೋಟು ಸೀಟು ಆಗಿ ಪರಿವರ್ತನೆ ಆಗುವುದಿಲ್ಲ ಎಂಬುದರ ಅರಿವಾಗುತ್ತದೆ. 2011 ಮತ್ತು 2021ರಲ್ಲಿ ಯಡಿಯೂರಪ್ಪರನ್ನು ಇಳಿಸಿದ್ದು ತಪ್ಪೆಂದು ಬಿಜೆಪಿಗೆ ಅರಿವಾಗಿದ್ದು 2013 ಮತ್ತು 2023ರ ಚುನಾವನೆಗಳಲ್ಲಿ ಸೋತ ನಂತರ. ಹೀಗಾಗಿ 2014ರಲ್ಲಿ ಯಡಿಯೂರಪ್ಪರನ್ನು ವಾಪಾಸ್ ಕರೆದುಕೊಂಡು ಬಂದು 2016ರಲ್ಲಿ RSS ಕಡು ವಿರೋಧದ ನಡುವೆಯೂ ರಾಜ್ಯ ಅಧ್ಯಕ್ಷರನ್ನಾಗಿ ನೇಮಿಸಿದ ಮೋದಿ ಮತ್ತು ಶಾ 2023ರಲ್ಲಿ ಯಡಿಯೂರಪ್ಪ ಇಚ್ಛೆಯಂತೆ ವಿಜಯೇಂದ್ರಗೆ ಅಧ್ಯಕ್ಷ ಮಾಡಿದ್ದಾರೆ. ದೇವೇಗೌಡ, ಸಿದ್ಧರಾಮಯ್ಯ ಮತ್ತು ಯಡಿಯೂರಪ್ಪ ಕರ್ನಾಟಕದ ಜಾತಿ ರಾಜಕಾರಣದ ರಿಯಾಲಿಟಿಗಳು. ಮೋದಿ ಶಾ ಇರಲಿ, ಗಾಂಧೀ ಪರಿವಾರ ಇರಲಿ ಈ ರಿಯಾಲಿಟಿಗಳನ್ನು ಒಪ್ಪಿಕೊಳ್ಳದೇ ಇಲ್ಲಿ ರಾಜಕೀಯ ತೇರು ಎಳೆಯುವುದು ಸದ್ಯಕ್ಕಂತು ಕಷ್ಟ ಬಿಡಿ. ಹೀಗಾಗಿಯೇ ಮೋದಿ ಮತ್ತು ಶಾ ನಮ್ಮ ಎಲ್ಲಾ ಪ್ರಯೋಗಗಳು ವಿಫಲ ವಾಗಿವೆ ಏನು ಮಾಡುತ್ತಿರೋ ಮಾಡಿ 25 ಸೀಟು ಗಳಿಸಿ ಕೊಡಿ ಎಂದು ಯಡಿಯೂರಪ್ಪ ರಿಗೆ ಕರ್ನಾಟಕ ಬಿಜೆಪಿಯನ್ನು ಹೊರ ಗುತ್ತಿಗೆ ಕೊಟ್ಟು ಬಿಟ್ಟಿದಂತೆ ಅನ್ನಿಸುತ್ತಿದೆ.
ಇಸ್ರೇಲ್- ಹಮಾಸ್ ಸಂಘರ್ಷ: ಭೂದಾಳಿಗೆ ಇಸ್ರೇಲ್ ಮೀನಮೇಷ ಏಕೆ?
ಬಿ ಎಲ್ ಸಂತೋಷ್ ನೋ ನೋ
ರಾಜ್ಯ ಬಿಜೆಪಿ ಬಗ್ಗೆ ನಿರ್ಣಯ ತೆಗೆದುಕೊಳ್ಳುವಾಗ ಕೇಂದ್ರ ಬಿಜೆಪಿಯ ಒಂದು ಸಮಸ್ಯೆ ಏನೆಂದರೆ ನಿರ್ಣಯ ತೆಗೆದು ಕೊಳ್ಳುವಾಗ ಕಾಂಗ್ರೆಸ್ ರೀತಿಯಲ್ಲಿ ಬಣಗಳ ನಡುವೆ ಸರಿ ತೂಜಿಸದೆ ಒಬ್ಬರಿಗೆ ಪೂರ್ತಿ ಭೋ ಪರಾಕ್ ಹೇಳುವುದು.1998 ರಿಂದ 2004 ರ ವರೆಗೆ ಪೂರ್ತಿ ಅನಂತ್ ಕುಮಾರ್ ಹೇಳಿದಂತೆ ದಿಲ್ಲಿ ಬಿಜೆಪಿ ಕೇಳುತ್ತಿತ್ತು.2004 ರಿಂದ 2009 ರ ವರೆಗೆ ಅನಂತ್ ರನ್ನು ಪಕ್ಕಕ್ಕೆ ತಳ್ಳಿ ಯಡಿಯೂರಪ್ಪ ಏನು ಹೇಳುತ್ತಿದ್ದರೋ ಅದಕ್ಕೆ ಎಸ್ ಅನ್ನುತ್ತಿದ್ದರು. ಮುಂದೆ 2011 ರಿಂದ 2016 ರ ವರೆಗೆ ಹೆಚ್ಚು ಕಡಿಮೆ ಬಿ ಎಲ್ ಸಂತೋಷ್ ಹೇಳಿದ್ದೆ ನಡೆಯುತ್ತಿತ್ತು.2016 ರಲ್ಲಿ ಎಲ್ಲರೂ ಬೇಡ ಅಂದಾಗಲೂ ಯಡಿಯೂರಪ್ಪ ಪಾರ್ಟಿ ಅಧ್ಯಕ್ಷರಾದರು. ಆಮೇಲೆ 2018 ರಿಂದ 2023ರವರೆಗೆ ಪೂರ್ತಿ ಬಿ.ಎಲ್. ಸಂತೋಷ್ ಅವರು ಹೇಳಿದ ಹಾಗೇ ನಿರ್ಣಯಗಳು ಆಗುತ್ತಿದ್ದವು. ಈಗ ನೋಡಿ ಸಂತೋಷ್ ಅವರನ್ನು ಪೂರ್ತಿ ನಿರ್ಣಯ ಪ್ರಕ್ರಿಯೆಯಿಂದ ದೂರವಿಟ್ಟು, ಯಡಿಯೂರಪ್ಪ ಹೇಳಿದ ಹಾಗೇ ವಿಜಯೇಂದ್ರ ಮತ್ತು ಆರ್ ಅಶೋಕ್‌ಗೆ ಬಹು ಪರಾಕ್ ಹೇಳಲಾಗಿದೆ. ಇಷ್ಟು ದಿನ ಪಾರ್ಟಿ ನಡೆಸಿದ ಸಿ ಟಿ ರವಿ, ನಿರ್ಮಲ ಸುರಾನಾ, ಕೇಶವ್ ಪ್ರಸಾದ್, ಸಿದ್ಧ ರಾಜು ಇವರೆಲ್ಲರ ಭವಿಷ್ಯ ಏನು? ಈಗ ಆ ವಿಜಯೇಂದ್ರರಿಗೆ ಮಾತ್ರ ಗೊತ್ತು.
ಆಗ ಹಾಗೇ ಈಗ ಹೀಗೆ
ಇವತ್ತು ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಉಘೇ ಉಘೇ ಅನ್ನುತ್ತಿರುವ ಬಿಜೆಪಿ ನಾಯಕರು 2018ರಲ್ಲಿ ಏನೋ ಕಾರಣ ನೀಡಿ ವರುಣಾದಿಂದ ವಿಜಯೇಂದ್ರ ನಿಲ್ಲೋದು ಬೇಡ ಎಂದು, ಇನ್ನೇನು ನಾಮಪತ್ರ ಸಲ್ಲಿಸುವಾಗ ಹೇಳಿ ರಾದ್ಧಾಂತ ಎಬ್ಬಿಸಿ ಕೊಂಡಿದ್ದರು. ಮುಂದೆ 2021ರಲ್ಲಿ ಮಗನನ್ನು ಮಂತ್ರಿ ಮಾಡಿ ಎಂದು ಯಡಿಯೂರಪ್ಪ ಪರಿಪರಿಯಾಗಿ ಕೇಳಿಕೊಂಡರು. ವಿಧಾನ ಪರಿಷತ್ ಸದಸ್ಯ ಕೂಡ ಮಾಡಲಿಲ್ಲ. ಎಲ್ಲಿ ಯಡಿಯೂರಪ್ಪ ಮಗನ ಹೆಸರಿಗೆ ಕಟ್ಟು ಬೀಳುತ್ತಾರೋ ಎಂದು ಬೊಮ್ಮಾಯಿ ಸಂಪುಟದ 4 ಸ್ಥಾನ ಖಾಲಿ ಬಿಡಲಾಯಿತು. ಅದೇ ಈಗ ವಿಜಯೇಂದ್ರರನ್ನು ಬಿಜೆಪಿ ಸಾಮ್ರಾಜ್ಯವನ್ನು ಉಳಿಸಲು ಬಂದ ಯುವರಾಜಾ ಎಂದು ಹೇಳಲಾಗುತ್ತಿದೆ. ಇನ್ನು ಆರ್.ಅಶೋಕ್ ಅವರನ್ನು ಬದಿಗೆ ಸರಿಸಿ ಅಶ್ವಥ್ ನಾರಾಯಣ್ ಅವರನ್ನು ಉಪ ಮುಖ್ಯಮಂತ್ರಿ ಮಾಡಲಾಗಿತ್ತು. ಅಷ್ಟೇ ಅಲ್ಲ 2019ರಲ್ಲಿ ಅಶೋಕ್ ಅವರಿಗೆ ಮಂತ್ರಿ ಮಾಡುವುದೇ ಬೇಡ ಎಂದು ತೀರ್ಮಾನ ಆಗಿ, ಕೊನೆಗೆ ಧರ್ಮೇಂದ್ರ ಪ್ರಧಾನ್ ಮತ್ತು ಪ್ರಹ್ಲಾದ ಜೋಶಿ, ಅಮಿತ್ ಶಾ ಮನವೊಲಿಸಿ ಅಶೋಕ ಮಂತ್ರಿ ಆಗಿದ್ದರು. ಈಗ ನೋಡಿದರೆ ಆರ್ ಅಶೋಕ್ ಒಕ್ಕಲಿಗ ಮತ ಸೆಳೆಯುವ ನಾಯಕ ಎಂದು ಬಿಂಬಿಸಲಾಗುತ್ತಿದೆ. ಕಂಪನಿಗಳ ಹಾಗೇ ರಾಜಕೀಯ ಪಾರ್ಟಿಗಳಲ್ಲೂ ಕೂಡ ವ್ಯಕ್ತಿಗಳ ಬೆಳವಣಿಗೆ ಬಗ್ಗೆ ಒಂದು ನಿರಂತರತೆ ಇರಬೇಕು. ಅದು ಇಲ್ಲದಿರುವುದೇ ರಾಜ್ಯ ಬಿಜೆಪಿಯ ಮುಖ್ಯ ಸಮಸ್ಯೆಗಳಲ್ಲಿ ಒಂದು.
ಜೋಡೆತ್ತು ಸವಾಲುಗಳು
ಯಾರು ಏನೇ ಹೇಳಲಿ ವಿಜಯೇಂದ್ರರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಮಾಡಿರುವುದು ಲಿಂಗಾಯಿತರ ವೋಟುಗಳ ಮೇಲೆ ಹಿಡಿತ ಹೊಂದಿರುವ ಯಡಿಯೂರಪ್ಪ ಪುತ್ರ ಅನ್ನುವ ಕಾರಣಕ್ಕೆ. ಹೀಗಾಗಿ ವಿಜಯೇಂದ್ರ ಮುಂದಿರುವ ಮೊದಲ ಸವಾಲು ಪಾರ್ಟಿ ನಾಯಕರು ಕೇಡರ್ ಮತ್ತು ಮತದಾರರಲ್ಲಿ ತನ್ನ ಸ್ವೀಕರಾರ್ಹತೆ ಮತ್ತು ವಿಶ್ವಾಸರ್ಹತೆ ಹೆಚ್ಚಿಸಿ ಕೊಳ್ಳುವುದು. ಹೀಗಾಗಿ ಮುಂದಿನ ಚುನಾವಣೆವರೆಗೆ ವಿಜಯೇಂದ್ರ ನಿರ್ಣಯ ಸಾಮರ್ಥ್ಯ ನಡುವಳಿಕೆ ಮತ್ತು ಓಡಾಟ ಮಾಧ್ಯಮಗಳು ಮತ್ತು ಪಾರ್ಟಿ ಒಳಗಡೆ ಹೆಚ್ಚು ಚರ್ಚೆ ಆಗುತ್ತದೆ. ವಯಸ್ಸು ಅನುಭವ ವೋಟು ತರುವ ಸಾಮರ್ಥ್ಯದ ಕಾರಣದಿಂದ ಯಡಿಯೂರಪ್ಪ ನಿರ್ಣಯಗಳಿಗೆ ದಿಲ್ಲಿಯಿಂದ ಹಳ್ಳಿಯವರೆಗೆ ಒಂದು ಮಾನ್ಯತೆ ಇರುತ್ತಿತ್ತು. ಅದು ಬರಬೇಕಾದರೆ ವಿಜಯೇಂದ್ರ ಏನಕೇನ ಕರ್ನಾಟಕದಲ್ಲಿ ಲೋಕಸಭೆಯಲ್ಲಿ 20ರ ಆಸು ಪಾಸು ಸೀಟು ಗೆಲ್ಲಿಸಿ ಕೊಡಬೇಕು. ಮುಂದಿನ 30 ವರ್ಷ ಸುಲಭವಾಗಿ ರಾಜಕೀಯ ಮಾಡಬಹುದಾದ ವಿಜಯೇಂದ್ರ ತನ್ನದೇ ಆಗಿರುವ ಹೊಸ ತಂಡವನ್ನು ಹೇಗೆ ಕಟ್ಟಿ ಕೊಳ್ಳುತ್ತಾರೆ ಅನ್ನುವುದು ಕೂಡ ಒಂದು ದೊಡ್ಡ ಸವಾಲು. ತನ್ನ ತಂದೆಗೆ ವಿರೋಧವಿದ್ದ, ಆದರೆ ರಾಜಕೀಯ ಶಕ್ತಿ ಸಾಮರ್ಥ್ಯ ಇರುವ ನಾಯಕರನ್ನು ಜೊತೆಗಿಟ್ಟು ಬೆಳಿಸಿ ಪಾರ್ಟಿ ಕಟ್ಟುವ ಪ್ರಯತ್ನ ಮಾಡುತ್ತಾರೋ ಅಥವಾ ಇರುವ ಮೂರು ಬಣಗಳ ಸಂಖ್ಯೆಗೆ ತನ್ನದು ಒಂದು ಬಣ ಇರಬೇಕು ಅನ್ನುವ ರೀತಿಯಲ್ಲಿ ಓಡಾಡುತ್ತಾರೋ ಎನ್ನುವುದು ಕುತೂಹಲಕಾರಿ. ಬಿಜೆಪಿಯ ಯಾವುದೇ ನಾಯಕರಿದ್ದರು ಕೂಡ ಆರ್‌ಎಸ್‌ಎಸ್ ಅನ್ನು ದೂರವಿಟ್ಟು ಯಶಸ್ವಿ ಆಗೋದು ಕಷ್ಟ. ಸ್ವಲ್ಪ ಮಟ್ಟಿಗೆ ರಾಜಕೀಯದಿಂದ ಭ್ರಮ ನಿರಸನಗೊಂಡಿರುವ ಸಂಘ ಪರಿವಾರವನ್ನು ವಿಜಯೇಂದ್ರ ಮನೆಯಿಂದ ಹೊರಗೆ ತಂದು ಹೇಗೆ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸಕ್ಕೆ ಹಚ್ಚುತ್ತಾರೆ ಅನ್ನೋದು ಕೂಡ ಒಂದು ಸವಾಲೇ ಸರಿ. ಕರ್ನಾಟಕದ ರಾಷ್ಟ್ರೀಯ ಪಾರ್ಟಿಗಳ ಇತಿಹಾಸದಲ್ಲಿ ಅಪ್ಪನ ಹಯಾತಿಯಲ್ಲಿಯೇ ಮಗನಿಗೆ ರಾಜ್ಯ ಅಧ್ಯಕ್ಷ ಹುದ್ದೆ ಸಿಕ್ಕಿರೋದು ಇದೇ ಮೊದಲು. ಇದು ಯಡಿಯೂರಪ್ಪ ಕ್ಯಾಪಾಸಿಟಿ. ಆದರೆ ವಿಜಯೇಂದ್ರದ್ದು ಲಕ್ಕು.
ಚೈತ್ರಾ ಬಿಜೆಪಿ ಟಿಕೆಟ್ ಡೀಲ್ ಕೇಸ್: ಎಲೆಕ್ಷನ್ ಟಿಕೆಟ್ ಪಡೆಯಲು ಹೀಗೂ ಉಂಟೇ, ಪ್ರಶಾಂತ್ ನಾತು
ಕರ್ನಾಟಕ ಬಿಜೆಪಿ ಯ ಹೊಸ "ಜಿ "
ರಾಜ್ಯ ಬಿಜೆಪಿ ಯಲ್ಲಿ ಜಿ ಎಂದರೆ ಸಂಘ ಪರಿವಾರದಿಂದ ಬಿಜೆಪಿಗೆ ಕಳುಹಿಸಲ್ಪಟ್ಟ ಪ್ರಚಾರಕರು ಅಂದರೆ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು. ಅನಂತ ಕುಮಾರ ಲಿಂಬಾವಳಿ, ವಾಮಾನಾಚಾರ್ಯ, ಬಿ ಎಲ್ ಸಂತೋಷ್, ಅರುಣ್ ಕುಮಾರ ನಂತರ ಈಗ ರಾಜ್ಯ ಬಿಜೆಪಿಗೆ ರಾಜೇಶ್ ಎಂಬ 32 ವರ್ಷದ ಅತ್ಯಂತ ಹಿಂದುಳಿದ ಸಮುದಾಯದ ಹಿನ್ನೆಲೆಯ ಯುವ ಪ್ರಚಾರಕರನ್ನು ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ಕಳುಹಿಸಲಾಗಿದೆ. ಅನಂತ್ ಕುಮಾರ್, ಯಡಿಯೂರಪ್ಪ, ಲಿಂಬಾವಳಿ, ಯಡಿಯೂರಪ್ಪ, ಅರುಣ್ ಕುಮಾರ ಯಡಿಯೂರಪ್ಪ ಸಂಬಂಧಗಳು ಸ್ಥಿತ್ಯಂತರದಿಂದ ಕೂಡಿದ್ದವು. ಈಗ ವಿಜಯೇಂದ್ರ ಮತ್ತು ರಾಜೇಶ್ ಎಷ್ಟು ಸುಸೂತ್ರ ವಾಗಿ ಪಾರ್ಟಿ ನಡೆಸುತ್ತಾರೆ ಎಂಬ ಬಗ್ಗೆ ಕೂಡ ಅತೀವ ಕುತೂಹಲವಿದೆ. ರಾಜ್ಯ ಬಿಜೆಪಿಗೆ ಕೇಶವ ಕೃಪಾದ ದೈನಂದಿನ ಹಸ್ತಕ್ಷೇಪ ಸಾಮರ್ಥ್ಯವು ಹೌದು ದೌರ್ಬಲ್ಯವು ಹೌದು
ಬಿಜೆಪಿಯೊಳಗೆ 3 ವೋಟ್ ಬ್ಯಾಂಕ್‌ಗಳು
ಯಾವುದೇ ರಾಜ್ಯದ ಬಿಜೆಪಿಗೆ 3 ವೋಟ್ ಬ್ಯಾಂಕ್ ಸೇರಿ ಕೊಂಡಾಗ ಮಾತ್ರ ಗೆಲುವಿನ ದಡ ಸೇರುತ್ತದೆ. ಅದು ಪಿತ್ರಾರ್ಜಿತ ವೋಟ್ ಬ್ಯಾಂಕ್ ಅಂದರೆ ಪರಂಪರಾಗತ RSS ಹಿಂದುತ್ವ ಬ್ರಾಹ್ಮಣರು, ಬನಿಯ ಜಾತಿಗಳು ಇತ್ಯಾದಿ ಇತ್ಯಾದಿ. ಇನ್ನು ಮೋದಿ ಅರ್ಜಿತ ಅಂದರೆ ಮೋದಿ ಇಷ್ಟಪಡುವವರು. ಯುವಕ ಯುವತಿಯರು ಸಣ್ಣ ಹಿಂದುಳಿದ ಸಮುದಾಯಗಳು ಇತ್ಯಾದಿ ಇತ್ಯಾದಿ. ಈ ವೋಟು ಬ್ಯಾಂಕು ಸೀಟು ಆಗಿ ಪರಿವರ್ತನೆ ಆಗಬೇಕಾದರೆ ಸ್ಥಳೀಯ ಜಾತಿ ನಾಯಕರ ಸ್ವಯಾರ್ಜಿತ ವೋಟು ಬ್ಯಾಂಕು ಬೇಕು. ಕರ್ನಾಟಕದಲ್ಲೇ ನೋಡಿ ಬಿಜೆಪಿ ಬರೀ ಪರಂಪರಾಗತ ವೋಟು ಪಡೆದಾಗ 2013ರಲ್ಲಿ 40 ಸೀಟು ಪಡೆದಿತ್ತು. ಬರೀ RSS ವೋಟ್ ಬ್ಯಾಂಕ್ ಮತ್ತು ಮೋದಿ ಸೇರಿಕೊಂಡು 66 ಸೀಟು ಪಡೆಯಿತು. ಇದಕ್ಕೆ ಯಡಿಯೂರಪ್ಪನವರ ಲಿಂಗಾಯಿತ ಜಾತಿ ವೋಟ್ ಬ್ಯಾಂಕ್ ಸೇರಿದಾಗ 2008 ರಲ್ಲಿ 110 ಮತ್ತು 2018 ರಲ್ಲಿ 104 ಸೀಟು ಪಡೆದಿತ್ತು. ಯಾವತ್ತಿಗೂ ಪಿತ್ರಾರ್ಜಿತ ಆಸ್ತಿಗೆ ನಿಮಗೆ ಯಾರಿಗೆ ಬೇಕೋ ಅವರನ್ನು ನೇಮಿಸುವ ಅಧಿಕಾರ ಇರುವುದಿಲ್ಲ. ಆದರೆ ಸ್ವಯಾರ್ಜಿತ ಆಸ್ತಿ ನಿಮಗೆ ಯಾರಿಗೆ ಬೇಕೋ ಅವರಿಗೆ ಕೊಡಬಹುದು. ಈಗ ಯಡಿಯೂರಪ್ಪ ಮಾಡಿರುವುದು ಅದನ್ನೇ. ಹೀಗಾಗಿ ಯಡಿಯೂರಪ್ಪ ಪುತ್ರನನ್ನು ಒಪ್ಪಿಕೊಳ್ಳುವ ಅನಿವಾರ್ಯತೆಯಲ್ಲಿ ಬಿಜೆಪಿ ದಿಲ್ಲಿ ನಾಯಕರು ಮತ್ತು ಆರ್‌ಎಸ್‌ಎಸ್ ಇರುವಂತೆ ಕಾಣುತ್ತಿದೆ.
ಬಿಜೆಪಿ ಜತೆ ಮೈತ್ರಿಗೆ ಸಿದ್ಧರಾದ್ರಾ ದೊಡ್ಡಗೌಡರು? ಮೋದಿ ಕರೆ ಬಂದ ಬೆನ್ನಲ್ಲೇ ದಿಲ್ಲಿಗೆ ಹೋಗಿದ್ದೇಕೆ?
ಹೀಗೂ ಆಗುವುದುಟೆ?
2021ರ ಆಸು ಪಾಸು. ಯಡಿಯೂರಪ್ಪನವರು ಮುಖ್ಯಮಂತ್ರಿ ಗಾದಿಯಿಂದ ಕೆಳಗೆ ಇಳಿದ ಸ್ವಲ್ಪ ದಿನಗಳ ನಂತರ ವಿಜಯೇಂದ್ರ ಮಲ್ಲೇಶ್ವರಮ್‌ನಲ್ಲಿರುವ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನಕ್ಕೆ ಹೋಗಿದ್ದರಂತೆ. ಮೊದಲನೇ ಮಹಡಿಯಲ್ಲಿ ವಿಐಪಿಗಳಿಗೆ ಇರುವ ಕೋಣೆಯಲ್ಲಿ ಹೋಗಿ ಕುಳಿತು ಕೊಂಡಿದ್ದರಂತೆ. ಯಾರದೋ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದರು. ಕೂಡಲೇ ಅಲ್ಲಿಗೆ ಬಂದ ಬಿಜೆಪಿ ಕಾರ್ಯಾಲಯದ ಮೇಲ್ವಿಚಾರಕ ಒಬ್ಬ ಟವಿಜಯೇಂದ್ರ ನೀವು ಇಲ್ಲಿ ಕೂರುವ ಹಾಗಿಲ್ಲ.ಇದು ದೊಡ್ಡ ನಾಯಕರು ಬಂದರೆ ಮಾತ್ರ ಕೂರುವ ಕೋಣೆ. ನೀವು ಹೊರಗೆ ಹೋಗಿ, ಅಂದಾಗ ವಿಜಯೇಂದ್ರ ಮುಜುಗರ ಉಂಟಾಗಿ ಅಲ್ಲಿಂದ ಹೊರಗೆ ಹೋಗಿ ಬಿಟ್ಟರಂತೆ. ಆದರೆ ಈಗ ನೋಡಿ ಮೂರೇ ವರ್ಷದಲ್ಲಿ ವಿಜಯೇಂದ್ರ ಅದೇ ಕಚೇರಿಯಲ್ಲಿ ಅಧ್ಯಕ್ಷರಾಗಿ ಕೂರುವ ಹಾಗೇ ಆಗಿದೆ. ರಾಜಕಾರಣ ಎಂದರೆ ಬರೀ ಹಾರ, ತುರಾಯಿ, ಆಧಿಕಾರ, ಸನ್ಮಾನ ಅಷ್ಟೇ ಅಲ್ಲ ಅಲ್ಲಿ ತೆರೆಯ ಹಿಂದೆ ಅವಮಾನ ಮುಜುಗರ ಅವಹೇಳನದ ಕಥೆಗಳು ಇರುತ್ತವೆ ನೋಡಿ.