Asianet Suvarna News Asianet Suvarna News

ಬಿಎಸ್‌ವೈ ನಾಯಕ ಸಮಾಜದ ಕಿವಿಗೆ ಹೂವು ಇಡ್ತಿದ್ದಾರೆ: ಸಿಎಂಗೆ ಎಚ್ಚರಿಕೆ ಕೊಟ್ಟ ಸ್ವಾಮೀಜಿ

ಶೇ.7.5 ಮೀಸಲಾತಿ ವಿಚಾರವಾಗಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಮುಖ್ಯಮಂತ್ರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Prasannananda Puri Swamiji Unhappy On CM BSY Over 7.5 Percent Reservation For ST rbj
Author
Bengaluru, First Published Apr 9, 2021, 7:38 PM IST

ದಾವಣಗೆರೆ, (ಏ.09): ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಕ್ಕೆ ಅನ್ವಯವಾಗುವಂತೆ ಶೇ.7.5 ಮೀಸಲಾತಿ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಯಕ ಸಮಾಜದ ಕಿವಿಯ ಮೇಲೆ ಹೂವಿಡುವ ಕೆಲಸ ಮಾಡಿದ್ದಾರೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು (ಶುಕ್ರವಾರ) ದಾವಣಗೆರೆಯ ನಾಯಕ ಹಾಸ್ಟೆಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಾತ್ರೆಯ ಯಶಸ್ಸಿಗೆ ಕಾರಣರಾದವರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಾಲ್ಮೀಕಿ ನಾಯಕ ಸಮಾಜಕ್ಕೆ ಶೇ.7.5 ಮೀಸಲಾತಿ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿಗಳು ಅಸಡ್ಡೆ, ಹುಡುಗಾಟಿಕೆ ಮಾಡುತ್ತಿದ್ದಾರೆ ಕಿಡಿಕಾರಿದರು.

ಜಾತಿವಾರು ಮೀಸಲು ತೆಗೆಯಲು ಕೇಂದ್ರ ಚಿಂತನೆ

ವಾಲ್ಮೀಕಿ ನಾಯಕ ಸಮಾಜ ಕಳೆದ ಮೂರು ದಶಕಗಳಿಂದ ಶೇ.7.5 ಮೀಸಲಾತಿಗೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದು ತಮ್ಮ ನೇತೃತ್ವದಲ್ಲಿ ರಾಜನಹಳ್ಳಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿ, ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟಾವಽ ಹೋರಾಟ ಪ್ರಾರಂಭಿಸಿದ ಸಂದರ್ಭದಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ರಚಿಸುವುದಾಗಿ ಹೇಳಲಾಯಿತು. ಮತ್ತೆ ಹೋರಾಟ ನಡೆಸಿದಾಗ ಮೂಗಿಗೆ ತುಪ್ಪ ಸವರುವಂತೆ ಉಪ ಸಮಿತಿ ರಚಿಸಿತು. ಮತ್ತೆ ಹೋರಾಟ ಪ್ರಾರಂಭಿದ ನಂತರ ಈಗ ತ್ರಿಸದಸ್ಯತ ಉನ್ನತ ಸಮಿತಿ ರಚಿಸಿದೆ. ಉನ್ನತ ಸಮಿತಿ ರಚಿಸುವ ಅವಶ್ಯಕತೆ ಇತ್ತೆ ಎಂದು ಪ್ರಶ್ನಿಸಿದ ಸ್ವಾಮೀಜಿ, ಉನ್ನತ ಸಮಿತಿ ರಚನೆಯನ್ನ ಯಾವ ಪ್ರಜ್ಞಾವಂತರು ಒಪ್ಪುವುದಿಲ್ಲ ಎಂದು ತಿಳಿಸಿದರು.

ಎರಡನೇ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನ್ಯಾ. ನಾಗಮೋಹನ್‌ದಾಸ್ ಸಮಿತಿ ವರದಿ ನೀಡಿದ ತಕ್ಷಣ ಮೀಸಲಾತಿ ನೀಡಲಾಗುವುದು ಎಂಬ ಭರವಸೆ ನೀಡಿದ್ದರು. ಕಳೆದ ಜುಲೈನಲ್ಲಿ ನಾಗಮೋಹನ್‌ದಾಸ್ ಸಮಿತಿ ವರದಿ ನೀಡಿದ್ದರೂ ಮೀಸಲಾತಿ ನೀಡಿಲ್ಲ ಎಂದರು.

ನ್ಯಾಯಸಮ್ಮತ ಮೀಸಲಾತಿ ನಮ್ಮ ಉದ್ದೇಶ: ಬೊಮ್ಮಾಯಿ

ಈ ಬಾರಿಯ ಮೂರನೇ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಳ್ಳುವ ಹಿಂದಿನ ದಿನ ಮತ್ತೆ ಕಿವಿಯ ಮೇಲೆ ಹೂವಿಡ್ತುತಾರೆ ಎಂಬುದು ಗೊತ್ತಾಯಿತು. ಹಾಗಾಗಿಯೇ ತಾವು ಮೀಸಲಾತಿ ಘೋಷಣೆ ಮಾಡಲೇಬೇಕು ಎಂದು ಅವರ ಮೂಗು ಹಿಡಿದಂತೆ ಪಟ್ಟು ಹಿಡಿದು ಕೇಳಿದಾಗ ಎಲ್ಲವನ್ನೂ ಬಾಯಿ ಬಿಟ್ಟರು ಎಂದು ತಿಳಿಸಿದರು.

ವಾಲ್ಮೀಕಿ ನಾಯಕ ಸಮಾಜಕ್ಕೆ ದೊರೆಯಬೇಕಾದ ಸಾಮಾಜಿಕ ನ್ಯಾಯನ ಮತ್ತು ಸಾಂವಿಧಾನಿಕ ಹಕ್ಕಿಗಾಗಿ ಸಮಾಜ ಬಾಂಧವರು ಪಕ್ಷಾತೀತವಾಗಿ ಸಂಘಟಿತರಾಗಿ, ಒಗ್ಗಟ್ಟಿನ ಹೋರಾಟ ನಡೆಸಬೇಕು. ರಾಜ್ಯದ 28 ಜಿಲ್ಲೆಯ ಪ್ರವಾಸ ಕಾರ್ಯಕ್ರಮದ ನಂತರ ಮತ್ತೆ ಮೀಸಲಾತಿಗಾಗಿ ಹೋರಾಟ ನಡೆಸಲಾಗುವುದು ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು.

Follow Us:
Download App:
  • android
  • ios