ಮದ್ದೂರು (ಮಾ.18):  ಜಾತಿವಾರು ಮೀಸಲಾತಿಯನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದ್ದು, ಏಕರೂಪ ಸಂಹಿತೆ ಜಾರಿಗೆ ತರುವುದಕ್ಕೆ ಆಲೋಚಿಸುತ್ತಿದೆ ಎಂದು ಉಡುಪಿ ಸೋಂದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.

ಪಟ್ಟಣದ ಹೊರ ವಲಯದಲ್ಲಿರುವ ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಜಾತಿವಾರು ಮೀಸಲಾತಿ ನೀಡುವುದನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು. ಜಾತಿಗೊಂದು ಮೀಸಲು ನೀಡುತ್ತಾ ಹೋದರೆ ಎಲ್ಲ ಜಾತಿಗಳಿಗೂ ಮೀಸಲು ನೀಡಬೇಕು. ಇದು ಸಾಧ್ಯವೇ. ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಮಾತ್ರ ಮೀಸಲು ನೀಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಪ್ರತಿಪಾದಿಸಿದರು.

ಯಾವ ಜಾತಿ-ಜನಾಂಗದವರು ಎಷ್ಟೇ ಪ್ರತಿಭಟನೆ, ಪಾದಯಾತ್ರೆ ನಡೆಸಿದರೂ ಮೀಸಲಾತಿ ಪಡೆಯುವುದು ಸುಲಭಸಾಧ್ಯವಿಲ್ಲ. ಕರ್ನಾಟಕದಲ್ಲಿ ಒಂದು ಜಾತಿಯವರಿಗೆ ಮೀಸಲು ನೀಡಿದರೆ ಉಳಿದ ರಾಜ್ಯದಲ್ಲಿರುವವರೂ ಕೇಂದ್ರದ ಮುಂದೆ ಬೇಡಿಕೆ ಇಡುತ್ತಾರೆ. ಇದೆಲ್ಲಾ ಆಗುವ ಕೆಲಸವಲ್ಲ ಎಂದರು.

ಶೇ.50 ಮೀಸಲು ಮಿತಿ ಹೆಚ್ಚಿಸಬೇಕೆ? ಸುಪ್ರೀಂ ವಿಚಾರಣೆ ಶುರು

ಆರ್ಥಿಕವಾಗಿ ಹಿಂದುಳಿದಿರುವವರ ಬೆಳವಣಿಗೆಗೆ ಸಹಕರಿಸಬೇಕು. ಆ ಸಮುದಾಯದ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ವ್ಯವಸ್ಥೆ ಕಲ್ಪಿಸಿ ಕೊಡುವ ವ್ಯವಸ್ಥೆ ಜಾರಿಯಾದರೆ ಮೀಸಲಾತಿ ಏಕೆ ಬೇಕು. ಮೀಸಲಾತಿ ಲಾಭವನ್ನು ಯಾರು ಪಡೆಯುತ್ತಿದ್ದಾರೋ ಅವರವರೇ ಮತ್ತೆ ಪಡೆಯುತ್ತಿದ್ದಾರೆ. ನಿಜವಾಗಿ ಯಾರಿಗೆ ತಲುಪಬೇಕೋ ಅವರಿಗೆ ಸಿಗುತ್ತಿಲ್ಲ ಎಂದರು.

ಗೋಹತ್ಯೆ ನಿಷೇಧ ಜಾರಿಗೆ ತಂದಿರುವ ರಾಜ್ಯ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ತೆರೆಯುವುದಾಗಿ ಬಜೆಟ್‌ನಲ್ಲಿ ಘೋಷಿಸಿದೆ. ಕೂಡಲೇ ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ತೆರೆಯುವುದಕ್ಕೆ ತುರ್ತು ಕ್ರಮ ವಹಿಸಬೇಕು. ಇದರಿಂದ ಬೇರೆ ಗೋಶಾಲೆಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ನುಡಿದರು.