ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ದತ್ತಪೀಠವನ್ನು ಸಂಪೂರ್ಣವಾಗಿ ಹಿಂದೂಗಳಿಗೆ ವಶಪಡಿಸಿಕೊಳ್ಳಲು ಅಯೋಧ್ಯೆ ಮಾದರಿಯ ಕರಸೇವೆ ನಡೆಸಬೇಕಾಗಬಹುದು ಎಂದು ಎಚ್ಚರಿಸಿದ್ದಾರೆ. ದತ್ತಪೀಠವು ಐತಿಹಾಸಿಕವಾಗಿ ಹಿಂದೂಗಳ ಪುಣ್ಯಕ್ಷೇತ್ರವಾಗಿದ್ದು, ಅದನ್ನು ಇಸ್ಲಾಮೀಕರಣಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.
ಬಾಳೆಹೊನ್ನೂರು (ಡಿ.4): ದತ್ತಪೀಠವನ್ನು ಸಂಪೂರ್ಣ ಹಿಂದೂಗಳ ಪೀಠವಾಗಿ ವಶಕ್ಕೆ ತೆಗೆದುಕೊಳ್ಳಲು ಅಯೋಧ್ಯೆಯಲ್ಲಿ ಈ ಹಿಂದೆ ನಡೆದ ಡಿ.6ರ ಕರಸೇವೆಯನ್ನು ಮತ್ತೆ ಹಿಂದೂಗಳಿಗೆ ನೆನಪಿಸಬೇಕಿದ್ದು, ಶೀಘ್ರದಲ್ಲಿ ದತ್ತಪೀಠಕ್ಕಾಗಿ ಕರಸೇವೆ ನಡೆಸಬೇಕಾಗುತ್ತದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಶೋಭಾಯಾತ್ರೆ, ಧಾರ್ಮಿಕ ಸಭೆಯಲ್ಲಿ ಮಾತನಾಡಿ, ದತ್ತಪೀಠಕ್ಕೆ ಪೌರಾಣಿಕ ಇತಿಹಾಸ ಹಾಗೂ ದಾಖಲೆಗಳ ಆಧಾರವಿದೆ. ಇಷ್ಟಿದ್ದರೂ ಹೋರಾಟ ಮಾಡಿ ತೆಗೆದುಕೊಳ್ಳುವ ಪರಿಸ್ಥಿತಿ ಬಂದಿರುವುದು ದುರ್ದೈವದ ಸಂಗತಿ. ದತ್ತಪೀಠವನ್ನು ಬಾಬಾ ಬುಡನ್‌ಗಿರಿ ಎಂದು ಬುಡಬುಡಿಕೆ ಬಾರಿಸಲಾಗುತ್ತಿದೆ. ಆದರೆ, ದತ್ತಪೀಠದ ಬಗ್ಗೆ ಹಲವಾರು ದಾಖಲೆಗಳಿದ್ದು, ನೂರಾರು ವರ್ಷಗಳ ಹಿಂದೆ ದತ್ತ ಜಯಂತಿಗೆ ಬಾಳೆಹೊನ್ನೂರು ರಂಭಾಪುರಿ ಪೀಠದಿಂದ ಕಪ್ಪ ಕಾಣಿಕೆ, ದವಸ ಧಾನ್ಯಗಳನ್ನು ಕಳುಹಿಸಲಾಗುತ್ತಿತ್ತು. ಮೈಸೂರು ರಾಜಮನೆತದ ಜಯಚಾಮರಾಜ ಒಡೆಯರ್ ದತ್ತ ಜಯಂತಿಗೆ 3 ದಿನಗಳ ಕಾಲ ಇಲ್ಲಿಗೆ ಬಂದು ವಾಸ್ತವ್ಯ ಮಾಡುತ್ತಿದ್ದರು ಎಂದು ವಿವರಿಸಿದರು.
ದತ್ತಪೀಠ ಇಸ್ಲಾಮೀಕರಣ:
ದತ್ತಪೀಠದಲ್ಲಿ ಆಧ್ಯಾತ್ಮಿಕ ಶಕ್ತಿಯಿದ್ದು, ಇದೊಂದು ಪುಣ್ಯಕ್ಷೇತ್ರ. ಆದರೆ, ಇದನ್ನು ಇಸ್ಲಾಮೀಕರಣ ಮಾಡಲಾಗುತ್ತಿದೆ. ಗುಹೆ ಒಳಗೆ ಹೆಣವಿಲ್ಲದ ಗೋರಿಗಳನ್ನು ನಿರ್ಮಾಣ ಮಾಡಲಾಗಿದೆ. ತಂತ್ರಗಳಿಗೆ ದತ್ತಪೀಠ ಬಲಿಯಾಗಿದೆ. ಇಸ್ಲಾಮಿನಲ್ಲಿ ಮೂರ್ತಿ ಪೂಜೆ, ಆರತಿ, ಅಭಿಷೇಕ ಇವುಗಳಿಗೆಲ್ಲ ನಿಷೇಧವಿದ್ದರೂ, ಶಾಖಾದ್ರಿ ವಂಶಸ್ಥರು ಇಸ್ಲಾಂ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ದತ್ತಪೀಠದ ಹೋರಾಟಕ್ಕೆ ಶಾಖಾದ್ರಿ ಕುಟುಂಬ ಕಳೆದ 30 ವರ್ಷಗಳಿಂದ ಪ್ರಚೋದನೆ ಮಾಡುತ್ತಾ ಶಾಂತಿ ಕದಡುತ್ತಿದ್ದಾರೆ ಎಂದು ಆರೋಪಿಸಿದರು.
ದತ್ತಪೀಠ ಹಿಂದೂಗಳಿಗೆ ಸೇರಿದ್ದು:
ಸುಪ್ರೀಂ ಕೋರ್ಟ್ ದತ್ತಪೀಠ ಧಾರ್ಮಿಕ ದತ್ತಿ ಇಲಾಖೆ ಎಂದು ಹೇಳಿದ್ದು, ಇದು ಹಿಂದೂಗಳಿಗೆ ಸೇರಿದ್ದಾಗಿದೆ. ಮುಸ್ಲಿಮರಿಗಾಗಿ, ಮಸೀದಿ, ಗೋರಿಗಳಾಗಿ ವಕ್ಫ್ ಬೋರ್ಡ್ ಇದೆ. ಶಾಖಾದ್ರಿ ಕುಟುಂಬದ ಗೋರಿಗಳು ಇರುವುದು ನಾಗೇನಹಳ್ಳಿಯಲ್ಲಿ. ಆದರೆ ದತ್ತಪೀಠಕ್ಕೆ ಬಂದು ಇಲ್ಲಿನ ಪಾವಿತ್ರ್ಯತೆ ಹಾಳು ಮಾಡಿದ್ದಾರೆ. ಶಾಖಾದ್ರಿ ಕುಟುಂಬ, ಮುಸ್ಲಿಂ ಸಮಾಜ ಗೌರವಯುತವಾಗಿ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಿದರೆ ಹಿಂದೂ-ಮುಸಲ್ಮಾನರು ಅಣ್ಣ ತಮ್ಮಂದಿರಂತೆ ಇರಬಹುದು. ಇಲ್ಲದಿದ್ದರೆ ಡಿ.6ರ ಅಯೋಧ್ಯೆ ಕರಸೇವೆ ನೆನಪಿಸಬೇಕಾಗುತ್ತದೆ. ಜೈ ದತ್ತಾತ್ರೇಯ ಎಂದು ಕರಸೇವೆಗಾಗಿ ದತ್ತಪೀಠಕ್ಕೆ ಹೊರಡಬೇಕಾಗುತ್ತದೆ ಎಂದು ಎಚ್ಚರಿಸಿದರು.


