ದತ್ತಪೀಠವು ಸಂಪೂರ್ಣವಾಗಿ ಹಿಂದೂಗಳಿಗೆ ಸೇರಿದ್ದು ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಪ್ರತಿಪಾದಿಸಿದ್ದಾರೆ. ಈ ವಿವಾದದ ಕುರಿತು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ, ಸರ್ಕಾರಿ ದಾಖಲೆಗಳ ಆಧಾರದ ಮೇಲೆ ನಿರ್ಣಯ ಕೈಗೊಳ್ಳುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಚಿಕ್ಕಮಗಳೂರು (ಡಿ.3): ದತ್ತಪೀಠ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸಿಟಿ ರವಿ ಅವರು ಮಹತ್ವದ ಹೇಳಿಕೆ ನೀಡಿದ್ದು, ದತ್ತಪೀಠವು ಸಂಪೂರ್ಣವಾಗಿ ಹಿಂದೂಗಳಿಗೆ ಸೇರಿದ್ದು ಎಂದು ಪ್ರತಿಪಾದಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದ ಕುರಿತು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಸರ್ಕಾರಿ ದಾಖಲೆಗಳಿವೆ ತನಿಖೆ ನಡೆಸಲಿ:
ಸರ್ಕಾರಿ ದಾಖಲೆಗಳು ಹಾಗೂ ಮೈಸೂರು ಪತ್ರಾಗಾರದಲ್ಲಿರುವ ದಾಖಲೆಗಳನ್ನು ಸಮಿತಿಯು ಸಂಪೂರ್ಣವಾಗಿ ಪರಿಶೀಲಿಸಬೇಕು. ದತ್ತಪೀಠ ಬೇರೆ, ಬಾಬಾಬುಡನ್ ದರ್ಗಾ ಬೇರೆ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ. ಅಂದು ಸ್ವಾರ್ಥಕ್ಕಾಗಿ ಹರಕೆ-ಕಾಣಿಕೆ, ಭೂಮಿಯನ್ನು ಅತಿಕ್ರಮಿಸಲು ಸಂಚು ಮಾಡಲಾಯಿತು. ಆ ಸಂಚಿಗೆ ಸರ್ಕಾರ ಒತ್ತಾಸೆಯಾಗಿ ನಿಲ್ಲಬಾರದು ಎಂದರು.
ಸರ್ಕಾರಕ್ಕೆ ನ್ಯಾಯ ಕೊಡಿಸಲು ಈಗಲೂ ಅವಕಾಶವಿದೆ:
ನಾವು ಐದು ದಶಕಗಳಿಂದ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದ್ದೇವೆ. ಈಗಲೂ ಸರ್ಕಾರದಿಂದ ನ್ಯಾಯ ಕೊಡಲು ಅವಕಾಶವಿದೆ. ಕೂಡಲೇ ಒಂದು ಸಮಿತಿ ರಚಿಸಿ ದಾಖಲೆಗಳನ್ನು ಪರಿಶೀಲಿಸಿ, ಆಧಾರಗಳ ಮೇಲೆಯೇ ನಿರ್ಣಯ ತೆಗೆದುಕೊಳ್ಳಲಿ ಎಂದು ಸಿ.ಟಿ.ರವಿ ಸರ್ಕಾರವನ್ನು ಆಗ್ರಹಿಸಿದರು.


