ಜು.16ರಿಂದ ಪೌತಿಖಾತೆ ಅಭಿಯಾನ: ಸಚಿವ ಅಶೋಕ್
ಮೃತರ ಹೆಸರಲ್ಲಿನ ಭೂದಾಖಲೆಗಳನ್ನು ಜೀವಂತವಾಗಿರುವ ವಾರಸುದಾರರಿಗೆ ವರ್ಗಾಯಿಸುವ ಪೌತಿಖಾತೆ ಅಭಿಯಾನವನ್ನು ಜು.16ರಿಂದ ಆರಂಭಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಬೆಂಗಳೂರು (ಜೂ.23): ಮೃತರ ಹೆಸರಲ್ಲಿನ ಭೂದಾಖಲೆಗಳನ್ನು ಜೀವಂತವಾಗಿರುವ ವಾರಸುದಾರರಿಗೆ ವರ್ಗಾಯಿಸುವ ಪೌತಿಖಾತೆ ಅಭಿಯಾನವನ್ನು ಜು.16ರಿಂದ ಆರಂಭಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಲಕ್ಷಾಂತರ ಪೌತಿ ಖಾತೆಗಳಿವೆ. ಕಾಲಾನುಕಾಲಕ್ಕೆ ವಾರಸುದಾರರಿಗೆ ವರ್ಗಾವಣೆಯಾಗದೆ ಸಮಸ್ಯೆಯಾಗುತ್ತಿದೆ. ಪೌತಿ ಖಾತೆಗಳನ್ನು ಜೀವಂತವಾಗಿರುವ ವಾರಸುದಾರರಿಗೆ ವರ್ಗಾವಣೆ ಮಾಡುವ ಕೆಲಸ ಸಮರ್ಪಕವಾಗಿ ಆಗದಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಲಭ್ಯವಾಗುವ ಹಣಕಾಸು ನೆರವನ್ನು ಬಹುತೇಕ ರೈತರು ಪಡೆಯಲಾಗುತ್ತಿಲ್ಲ ಎಂದರು.
ಹೀಗಾಗಿ ಸಾಲ ಪಡೆಯುವುದಕ್ಕೂ ಅಡ್ಡಿಯಾಗುತ್ತಿದೆ. ಗ್ರಾಮವಾಸ್ತವ್ಯ ಮಾಡುವ ವೇಳೆಯಲ್ಲಿ ಪೌತಿ ಖಾತೆಗಳನ್ನು ಇತ್ಯರ್ಥಪಡಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಲ್ಲಿ ನಡೆಸುವ ಗ್ರಾಮ ವಾಸ್ತವ್ಯದ ವೇಳೆ ಈ ಯೋಜನೆಗೆ ಚಾಲನೆ ನೀಡಲಾಗುವುದು. ಸುಮಾರು 10 ಸಾವಿರ ಪೌತಿ ಖಾತೆಗಳನ್ನು ಪ್ರಸ್ತುತ ಇರುವ ವಾರಸುದಾರರಿಗೆ ವರ್ಗಾಯಿಸುವ ಕೆಲಸವಾಗಲಿದೆ. ಗ್ರಾಮ ವಾಸ್ತವ್ಯದ ವೇಳೆ ನೂರಾರು ಮಂದಿ ಹಾಜರಿರುವುದರಿಂದ ಅವರ ಸಮ್ಮುಖದಲ್ಲಿ ಪೌತಿ ಖಾತೆಯ ದಾಖಲೆಗಳನ್ನು ಸ್ಪಷ್ಟಪಡಿಸಿಕೊಳ್ಳಬಹುದಾಗಿದೆ ಎಂದರು.
ತುಮಕೂರು: ದಲಿತರ ಕೇರಿಯಲ್ಲಿ ಸಚಿವ ಅಶೋಕ್ ಉಪಾಹಾರ
ಶೀಘ್ರ ಭೂ ಪರಿವರ್ತನೆ ಕಾಯ್ದೆ ತಿದ್ದುಪಡಿ: ಮುಂಬರುವ ದಿನಗಳಲ್ಲಿ ಭೂ ಪರಿವರ್ತನೆ ಕಾಯ್ದೆ (ಎನ್‌ಎ) ತಿದ್ದುಪಡಿ ಮಾಡಿ ಜನಸ್ನೇಹಿಯಾಗಿಸಿ ದಲ್ಲಾಳಿ ಮುಕ್ತವಾಗಿಸುವ ಸ್ವಯಂ ಘೋಷಣಾ ಕಾನೂನು ಜಾರಿಗೆ ಜಾರಿಗೆ ತರುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ ಘೋಷಿಸಿದ್ದಾರೆ. ಆಡಳಿತ ಯಂತ್ರವನ್ನು ಜನರ ಬಳಿಗೆ ಕೊಂಡೊಯ್ಯುವ ಸಲುವಾಗಿ ತಾವೇ ಪ್ರಾರಂಭಿಸಿರುವ ಮಹತ್ವಾಕಾಂಕ್ಷಿ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಗೆ’ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಬೀದರ್ ಜಿಲ್ಲೆಯ ವಡಗಾಂವ ದೇಶಮುಖ ಗ್ರಾಮದಲ್ಲಿ ಚಾಲನೆ ನೀಡಿದ ಅವರು ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಕೆಲವರಿಗೆ ಸರ್ಕಾರದ ನೆಗೆಟಿವ್ ಹುಡುಕೋದೇ ಕೆಲಸ: ಅಶೋಕ್
ಕಂದಾಯ ಇಲಾಖೆಯ ಕಾಯ್ದೆಗಳನ್ನು ಸರಳೀಕರಣಗೊಳಿಸುವ ಪ್ರಕ್ರಿಯೆ ನಡೆಸುತ್ತಿದ್ದು, ಈಗಾಗಲೇ ಜನರ ಮನೆ ಬಾಗಿಲಿಗೆ ಸರ್ಕಾರದ ಯೋಜನೆ ನೀಡುತ್ತಿದೆ. ಹಾಗೇ ಸ್ವಯಂ ಪೋಡಿ (11ಇ ಸ್ಕೆಚ್) ಕಾನೂನು ಸರಳೀಕರಣ ಮಾಡಿದಂತೆ ಕೃಷಿಯೇತರ ಜಮೀನಿಗೆ ಅರ್ಜಿ ಸಲ್ಲಿಸುವವರು ಅಧಿಕಾರಿಗಳ ಅನುಮೋದನೆಗಾಗಿ ವರ್ಷಗಟ್ಟಲೆ ಕಾಯುವ ವ್ಯವಸ್ಥೆಯಿಂದ ಮುಕ್ತಗೊಳಿಸಲು ಯೋಜಿಸಿದ್ದೇವೆ ಎಂದರು. ಕೃಷಿಯೇತರ ಜಮೀನಿಗೆ ಅರ್ಜಿ ಸಲ್ಲಿಸುವವರು ಕೇವಲ ಸ್ವಯಂ ಘೋಷಣಾ ಪತ್ರ ನೀಡಬೇಕು. ಅದನ್ನು ಪರಿಶೀಲಿಸುವ ಜಿಲ್ಲಾಧಿಕಾರಿಗಳು ಈ ಜಮೀನು ಸರ್ಕಾರದ ಸ್ವತ್ತಲ್ಲ ಎಂದು ಭೂಪರಿವರ್ತನೆ ಆದೇಶ ನೀಡಬೇಕು. ಒಂದು ವೇಳೆ ಸ್ವಯಂ ಘೋಷಣಾ ಪತ್ರ ಸುಳ್ಳಾಗಿದ್ದು ಕಂಡುಬಂದಲ್ಲಿ ಆದೇಶ ರದ್ದಾಗಿ ಸರ್ಕಾರಕ್ಕೆ ಕಟ್ಟಿರುವ ಶುಲ್ಕ ಮುಟ್ಟುಗೋಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.