*  ತುಮಕೂರಿನ ಜಗ್ಗೇಶ್‌ ತವರೂರಿನಲ್ಲಿ ಗ್ರಾಮ ವಾಸ್ತವ್ಯ ಸಂಪನ್ನ*  ಬೆಳಿಗ್ಗೆ ಗೂಡಂಗಡಿಯಲ್ಲಿ ಚಹಾ ಸೇವನೆ*  ಗ್ರಾಮವಾಸ್ತವ್ಯ ನನಗೆ ಪಾಠ  

ತುಮ​ಕೂರು(ಜೂ.20): ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಿಮಿತ್ತ ಜಿಲ್ಲೆಯ ಮಾಯಸಂದ್ರ ಗ್ರಾಮದಲ್ಲಿ ಶನಿವಾರ ರಾತ್ರಿ ವಾಸ್ತವ್ಯ ಹೂಡಿದ್ದ ಕಂದಾಯ ಸಚಿವ ಆರ್‌.ಅಶೋಕ್‌ ಅವರು ​ಭಾ​ನು​ವಾ​ರ ಬೆಳಗ್ಗೆ ದಲಿತರ ಮನೆಯಲ್ಲಿ ಉಪಾಹಾರ ಸೇವಿಸಿದರು.

ರಾತ್ರಿ ಮಾಯಸಂದ್ರದ ಆದಿಚುಂಚಗಿರಿಯ ಮಠದ ಶಾಲೆಯ ಆಶ್ರಮದಲ್ಲಿ ಶಾಸಕ ಮಸಾಲೆ ಜಯರಾಂ, ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್‌ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ವಾಸ್ತವ್ಯ ಹೂಡಿದ್ದರು. ಬೆಳಗ್ಗೆ ಅಧಿಕಾರಿಗಳೊಂದಿಗೆ ಗ್ರಾಮದ ಸುತ್ತಾಟ ನಡೆಸಿದ ಸಚಿವ ಅಶೋಕ್‌ ಗೂಡಂಗಡಿಗೆ ತೆರಳಿ ಚಹಾ ಸೇವಿಸಿದರು. ನಂತರ ದಲಿತ ಕೇರಿಗೆ ತೆರಳಿದ ಸಚಿವರು ದಲಿತ ಕುಟುಂಬದ ವಿನೋದ್‌ ಎಂಬುವರ ಮನೆಗೆ ತೆರಳಿ ಅವರ ಮನೆಯಲ್ಲಿ ಸಿದ್ದಪಡಿಸಿದ್ದ ಅಕ್ಕಿರೊಟ್ಟಿ, ಹುಚ್ಚೆಳ್ಳು ಚಟ್ನಿ, ಕೇಸರಿಬಾತ್‌, ಉಪ್ಪಿಟ್ಟು ಹಾಗೂ ಚಿತ್ರಾನ್ನ ಸವಿದರು.

ಕಾಂಗ್ರೆಸ್‌, ಜೆಡಿಎಸ್‌ನ 10-12 ಶಾಸ​ಕರು ಬಿಜೆ​ಪಿಗೆ ಶೀಘ್ರ: ಅಶೋಕ್‌

ದಲಿತರ ಕೇರಿಗೆ ರಸ್ತೆ ನಿರ್ಮಾಣ:

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶೋಕ್‌, ಈ ದಲಿತ ಕೇರಿಯಲ್ಲಿ ಸುಮಾರು 80 ಮನೆಗಳಿದ್ದು, ರಸ್ತೆ ಅಭಿವೃದ್ಧಿಯಾಗದಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಈ ದಲಿತ ಕೇರಿಗಳ ರಸ್ತೆ ನಿರ್ಮಾಣಕ್ಕೆ 15 ದಿನದಲ್ಲಿ ನಮ್ಮ ಇಲಾಖೆಯಿಂದ 25 ಲಕ್ಷ ರು. ಹಾಗೂ ಉಳಿದ ಹಣವನ್ನು ನರೇಗಾದಡಿ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಇಂದು ನಾನು ದಲಿತ ಕೇರಿಗೆ ಬಂದಿದ್ದೇನೆ. ಅವರು ತಯಾರಿಸಿರುವ ಉಪಾಹಾರವನ್ನು ಅವರ ಜತೆಯಲ್ಲೆ ಸೇವಿಸಿದ್ದೇನೆ. ಒಳ್ಳೆಯ ರುಚಿಕ​ರ ತಿಂಡಿ ಕೊಟ್ಟಿದ್ದಾರೆ. ಈ ಮನೆಯ ಹುಡುಗ ಬಾಡಿಗೆ ಆಟೋ ಓಡಿಸುತ್ತಿದ್ದು, ಈತನಿಗೆ ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಸಬ್ಸಿಡಿಯಲ್ಲಿ ಆಟೋ ಖರೀದಿಸಲು ಸೌಲ ಸೌಲಭ್ಯ ಕಲ್ಪಿಸಿ ಆತನ ಸ್ವಂತ ಕಾಲ ಮೇಲೆ ನಿಲ್ಲಲು ಅವಕಾಶ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಗ್ರಾಮ ವಾಸ್ತವ್ಯ ನನಗೆ ಪಾಠ:

ದಲಿತ, ಸವರ್ಣೀಯ ಹೀಗೆ ಎಲ್ಲ ಜಾತಿಗಳೂ ಒಂದೇ. ಹಾಗಾಗಿ ಗ್ರಾಮ ವಾಸ್ತವ್ಯದಲ್ಲಿ ದಲಿತ ಕೇರಿಗಳು ಸಮಾಜಮುಖಿಯಾಗಿ ಬಾಳುವ ಕೆಲಸವಾಗಬೇಕು. ಎಲ್ಲರೂ ಒಂದೇ ಎಂಬ ಸಂದೇಶ ಸಾರಲು ದಲಿತರ ಕೇರಿಗೆ ಬಂದು ಅವರ ಮಾಡಿರುವ ತಿಂಡಿ ಸವಿಯುತ್ತೇನೆ. ಎಲ್ಲರಲ್ಲೂ ಸಮಾನತೆ, ಸೌಹಾರ್ದತೆ ಬೆಳೆಯಬೇಕು ಎಂಬುದು ನನ್ನ ಆಶಯವಾಗಿದೆ ಎಂದರು. ಗ್ರಾಮ ವಾಸ್ತವ್ಯ ಕಾರ್ಯಕ್ರಮ ನನಗೆ ಬಹಳ ತೃಪ್ತಿ ತಂದಿದೆ. ಗ್ರಾಮ ವಾಸ್ತವ್ಯ ನನಗೆ ಒಂದು ಪಾಠಶಾಲೆ ಇದ್ದಂತೆ. ಇದರಿಂದ ಹಳ್ಳಿ ಜನರ ಬಹುತೇಕ ಸಮಸ್ಯೆಗಳು ನನ್ನ ಅರಿವಿಗೆ ಬರುತ್ತಿವೆ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಸಚಿವರು ಸಾರ್ವಜನಿಕರ ಅಹವಾಲು ಆಲಿಸಿ, ಅರ್ಜಿಗಳನ್ನು ಪರಿಶೀಲಿಸಿ ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ತಹಸೀಲ್ದಾರ್‌ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.