ಕೆಲವರಿಗೆ ಸರ್ಕಾರದ ನೆಗೆಟಿವ್ ಹುಡುಕೋದೇ ಕೆಲಸ: ಅಶೋಕ್
* ಪಠ್ಯ ಪರಿಷ್ಕರಣೆ ವಿಚಾರದಲ್ಲಿ ವಿಪಕ್ಷದ ರಾಜಕಾರಣ
* ಮೊಸರಲ್ಲಿ ಕಲ್ಲು ಹುಡುಕುವುದು, ಟೀಕೆ ಮಾಡುವುದೇ ವಿರೋಧ ಪಕ್ಷಗಳ ಕೆಲಸವಾಗಿದೆ
* ವಿಪಕ್ಷಗಳ ವಿರುದ್ಧ ಹರಿಹಾಯ್ದ ಆರ್. ಅಶೋಕ್
ತುಮಕೂರು(ಜೂ.20): ಕೆಲವರಿಗೆ ಸರ್ಕಾರದ ನೆಗೆಟಿವ್ ಹುಡುಕುವುದೇ ಕಾಯಕವಾಗಿದ್ದು, ಪಠ್ಯ ಪುಸ್ತಕಗಳ ಪರಿಷ್ಕರಣೆ ವಿಚಾರದಲ್ಲಿ ನೂರಕ್ಕೆ ನೂರರಷ್ಟು ರಾಜಕಾರಣ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ ಆರೋಪಿಸಿದ್ದಾರೆ.
ಪಠ್ಯ ಪುಸ್ತಕಗಳ ಪರಿಷ್ಕರಣೆ ಬಗ್ಗೆ ಪ್ರತಿಪಕ್ಷಗಳ ಟೀಕೆಗೆ ಸಂಬಂಧಿಸಿ ತುಮಕೂರು ಜಿಲ್ಲೆಯ ಮಾಯಸಂದ್ರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮೊಸರಲ್ಲಿ ಕಲ್ಲು ಹುಡುಕುವುದು, ಟೀಕೆ ಮಾಡುವುದೇ ವಿರೋಧ ಪಕ್ಷಗಳ ಕೆಲಸವಾಗಿದೆ. ಕೆಲವರಿಗೆ ಸರ್ಕಾರದ ನೆಗೆಟಿವ್ ಹುಡುಕುವುದೇ ಕಾಯಕವಾಗಿದೆ. ಅವರಿಗೆ ಬೇರೆ ಕೆಲಸ ಇಲ್ಲ. ಸರ್ಕಾರ ಮಾಡಿರುವ ಒಳ್ಳೆಯ ಕೆಲಸಗಳನ್ನು ಅವರು ನೋಡುವುದೇ ಇಲ್ಲ ಎಂದು ವಿಪಕ್ಷಗಳ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್, ಜೆಡಿಎಸ್‌ನ 10-12 ಶಾಸಕರು ಬಿಜೆಪಿಗೆ ಶೀಘ್ರ: ಅಶೋಕ್
ಹೊಸ ಪಠ್ಯ ಪುಸ್ತಕವನ್ನು ಇನ್ನು ಯಾರು ಓದೇ ಇಲ್ಲ. ಆದರೂ ಕುವೆಂಪುರವರ ವಿಚಾರವನ್ನು ಮುಂದಿಟ್ಟುಕೊಂಡು ದೊಡ್ಡ ಸದ್ದು ಮಾಡುತ್ತಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಕುವೆಂಪು ಅವರ ವಿಚಾರಕ್ಕೆ ಸಂಬಂಧಪಟ್ಟಪಠ್ಯವನ್ನು 8 ಪ್ಯಾರಾಕ್ಕೆ ಮಾಡಿದ್ದೆವು. ಆದರೆ ಸಿದ್ದರಾಮಯ್ಯ ಸರ್ಕಾರ ಬಂದು ಅದರಲ್ಲಿ ಒಂದು ಪ್ಯಾರ ಕಡಿತ ಮಾಡಿ 7 ಪ್ಯಾರಕ್ಕೆ ಇಳಿಸಿದ್ದರು. ಆಗ ಯಾರೂ ಹೋರಾಟ ಮಾಡಲಿಲ್ಲ. ಆದರೆ ಮತ್ತೆ ಬಿಜೆಪಿಯ ಬಿ.ಸಿ.ನಾಗೇಶ್ ಶಿಕ್ಷಣ ಸಚಿವರಾದ ಮೇಲೆ ಕುವೆಂಪುರವರ ಪಠ್ಯವನ್ನು 10 ಪ್ಯಾರಕ್ಕೆ ಹೆಚ್ಚಿಸಿದ್ದೇವೆ. ಇದು ಯಾರಿಗೂ ಗೊತ್ತೇ ಇಲ್ಲ, ಈ ಬಗ್ಗೆ ಯಾರು ಮಾತನಾಡುತ್ತಲೇ ಇಲ್ಲ ಎಂದರು.