ನೀಟ್‌ ಪರೀಕ್ಷೆ ರದ್ದುಪಡಿಸಿರುವ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸಚಿವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪರೀಕ್ಷಾ ವೈಫಲ್ಯದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಮತ್ತು ಈ ಹಿಂದೆ ಇದ್ದಂತೆ ರಾಜ್ಯಗಳಿಗೇ ಪರೀಕ್ಷೆ ನಡೆಸುವ ಅಧಿಕಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

 ಬೆಂಗಳೂರು (ಮೇ.13): ನೀಟ್‌ ಪರೀಕ್ಷೆ ರದ್ದುಪಡಿಸಿರುವ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರದ ಸಚಿವರಾದ ಡಾ.ಶರಣ್‌ ಪ್ರಕಾಶ್‌ ಪಾಟೀಲ್‌, ಡಾ.ಎಂ.ಸಿ.ಸುಧಾಕರ್‌, ಮಧು ಬಂಗಾರಪ್ಪ, ಲಕ್ಷ್ಮೀ ಹೆಬ್ಬಾಳ್ಕರ್‌ ಮತ್ತಿತರ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದು, ಕೇಂದ್ರ ಶಿಕ್ಷಣ ಸಚಿವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

Add Asianetnews Kannada as a Preferred SourcegooglePreferred

ಅಲ್ಲದೆ, ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಈ ಮೊದಲು ಇದ್ದಂತೆ ಪರೀಕ್ಷೆ ನಡೆಸುವ ಅವಕಾಶವನ್ನು ಆಯಾ ರಾಜ್ಯಗಳಿಗೇ ನೀಡಬೇಕೆಂದು ಒತ್ತಾಯಿಸಿದ್ದಾರೆ.

ನೀಟ್ ಪರೀಕ್ಷೆ ರದ್ದು: ಕೇಂದ್ರ ಸರ್ಕಾರವೇ ಹೊಣೆ

ಈ ಸಂಬಂಧ ಕೆಲ ಸಚಿವರು ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಪತ್ರಿಕಾ ಪ್ರಕಟಣೆ ನೀಡಿ ನೀಟ್‌ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸಲು ವಿಫಲವಾಗಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಇದರ ಹೊಣೆ ಹೊರಬೇಕೆಂದು ಒತ್ತಾಯಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ। ಶರಣ ಪ್ರಕಾಶ ಪಾಟೀಲ ಅವರು ಮಾತನಾಡಿ, ನೀಟ್‌ ಎನ್ನುವುದು ಕೇಂದ್ರ ಸರ್ಕಾರದ ಬಹುದೊಡ್ಡ ಹಗರಣ. ಕಳೆದ ನಾಲ್ಕೈದು ವರ್ಷಗಳಿಂದ ನೀಟ್‌ನಲ್ಲಿ ಒಂದಲ್ಲ, ಒಂದು ಗೊಂದಲಗಳು, ಅಕ್ರಮಗಳು ನಡೆಯುತ್ತಲೇ ಇವೆ. ಇದಕ್ಕೆ ಕೊನೆಯೇ ಇಲ್ಲದಂತಾಗಿದೆ. ರಾಜಸ್ಥಾನ, ಹರಿಯಾಣದಲ್ಲಿರುವ ಕೋಚಿಂಗ್‌ ಸೆಂಟರ್‌ಗಳು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿಸಿ ತಮ್ಮ ಇಮೇಜ್‌ ಹೆಚ್ಚಿಸಿಕೊಳ್ಳುತ್ತಿವೆ. ಕೇಂದ್ರ ಸರ್ಕಾರದವರು ಕೂಡ ಇದರಲ್ಲಿ ಪಾಲುದಾರರಾಗಿದ್ದಾರೆ. ಸಂಬಂಧಪಟ್ಟ ಸಚಿವರು ಕೂಡಲೇ ರಾಜೀನಾಮೆ ಕೊಡಬೇಕು. ಅಕ್ರಮದಲ್ಲಿ ತೊಡಗುವ ಇಂಥ ಕೋಚಿಂಗ್‌ ಸೆಂಟರ್‌ಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ರಾಜ್ಯಗಳಿಗೇ ಪರೀಕ್ಷೆಗೆ ಅವಕಾಶ ನೀಡಿ:

ಉನ್ನತ ಶಿಕ್ಷಣ ಸಚಿವ ಡಾ। ಎಂ.ಸಿ.ಸುಧಾಕರ್‌ ಮಾತನಾಡಿ, ನೀಟ್‌ ಪರೀಕ್ಷಾ ವೈಫಲ್ಯ ಇದೇ ಮೊದಲಲ್ಲ. ಸಾಕಷ್ಟು ಭಾರಿ ನೀಟ್ ಪರೀಕ್ಷೆ ಸಮರ್ಪಕವಾಗಿ ನಡೆಸಲು ‌ನ್ಯಾಷನ್‌ ಟೆಸ್ಟಿಂಗ್‌ ಏಜೆನ್ಸಿ(ಎನ್‌ಟಿಎ) ವಿಫಲವಾಗಿದೆ. ಹಾಗಾಗಿ ರಾಜ್ಯಗಳಿಗೆ ರಾಷ್ಟ್ರೀಯ ಟೆಸ್ಟಿಂಗ್‌ ಏಜೆನ್ಸಿ ನಡೆಸುವ ನೀಟ್‌ ಮೇಲೆ ನಂಬಿಕೆ ಹೋಗಿದೆ. ಹಾಗಾಗಿ ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆ ನಡೆಸುವ ಅವಕಾಶವನ್ನು ಈ ಮೊದಲಿದ್ದಂತೆ ರಾಜ್ಯಗಳಿಗೇ ನೀಡಬೇಕೆಂದು ಒತ್ತಾಯಿಸಿದರು.

ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಬರೆದಿದ್ದ ನೀಟ್‌ ಪರೀಕ್ಷೆಯನ್ನು ಕೆಲವೆಡೆ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ರದ್ದುಮಾಡಿ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ಮತ್ತೊಮ್ಮೆ ಪರೀಕ್ಷೆ ನಡೆಸುವುದರಿಂದ ಪ್ರಾಮಾಣಿಕವಾಗಿ ಕಷ್ಟಪಟ್ಟು ಓದಿರುವ ವಿದ್ಯಾರ್ಥಿಗಳಿಗೆ ಅನ್ಯಾಯವಾದಂತಾಗುತ್ತದೆ. ವಿದ್ಯಾರ್ಥಿಗಳು, ಕುಟುಂಬದವರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತದೆ. ಮಾನಸಿಕ ಒತ್ತಡವೂ ಹೆಚ್ಚಾಗಲಿದೆ. ಇದು ಕೇಂದ್ರ ಸರ್ಕಾರ ಅಮರ್ಥತತೆಗೆ ಸಾಕ್ಷಿಯಾಗಿದೆ. ಇದರ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು. ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದವರಿಗೆ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದರು.

--

ರಾಜ್ಯ ಬಿಜೆಪಿ ನಾಯಕರ ಮೌನವೇಕೆ?

ಕೇಂದ್ರ ಸರ್ಕಾರದ ಬೇಜವಾಬ್ದಾರಿಯುತ ನಿರ್ಧಾರಗಳು ಮಕ್ಕಳನ್ನು ಮತ್ತು ಪೋಷಕರನ್ನು ಹತಾಶೆಯ ಕೂಪಕ್ಕೆ ತಳ್ಳುತ್ತಿವೆ. ರಾಜ್ಯದಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ರಾಷ್ಟ್ರೀಯ ಹಿತಾಸಕ್ತಿ ಬಗ್ಗೆ ಭಾಷಣ ಮಾಡುವ ಸ್ಥಳೀಯ ಬಿಜೆಪಿ ನಾಯಕರು, ಕೇಂದ್ರದ ಈ ಬೃಹತ್ ವೈಫಲ್ಯದ ಬಗ್ಗೆ ಈಗೇಕೆ ದನಿ ಎತ್ತುತ್ತಿಲ್ಲ? ಪ್ರಶ್ನೆಪತ್ರಿಕೆ ಸೋರಿಕೆಯಂಥ ಹಗರಣಗಳು ಪದೇ ಪದೆ ಸರಣಿಯಂತೆ ನಡೆಯುತ್ತಿದ್ದರೂ, ಕೇಂದ್ರದ ಮೇಲೆ ಒತ್ತಡ ತರುವಲ್ಲಿ ಸ್ಥಳೀಯ ಬಿಜೆಪಿ ನಾಯಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ.

- ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಸಚಿವ

----

ದುರದೃಷ್ಟಕರ, ಖಂಡನೀಯ

ನೀಟ್‌ ಪ್ರಶ್ನೆ ಪತ್ರಿಕೆ ಕೋರಿಕೆ ಅತ್ಯಂತ ದುರದೃಷ್ಟಕರ ಮತ್ತು ಖಂಡನೀಯ. ದೇಶದ ಒಂದು ದೊಡ್ಡ ಪ್ರವೇಶ ಪರೀಕ್ಷೆಯನ್ನೂ ಪಾರದರ್ಶಕವಾಗಿ ನಾಡೆಸಲಾಗದ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ. ಪರೀಕ್ಷಾ ಅಕ್ರಮ ಮತ್ತು ಆಡಳಿತ ವೈಫಲ್ಯದಿಂದ ಹಗಲಿರುಳು ಶ್ರಮಿಸಿ ನೀಟ್‌ ಪರೀಕ್ಷೆ ಬರೆದಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅಂತಂತ್ರವಾಗಿದೆ. ಕೇಂದ್ರವೇ ಇದರ ಹೊಣೆ ಹೊರಬೇಕು.

- ಲಕ್ಷ್ಮಿ ಹೆಬ್ಬಾಳ್ಕರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ