Asianet Suvarna News Asianet Suvarna News

ಕ್ರಿಮಿನಲ್ಸ್‌ ಜತೆ ಪೊಲೀಸರ ಒಡನಾಟ ಇಲಾಖೆ ಗೌರವಕ್ಕೆ ಧಕ್ಕೆ: ನಗರ ಪೊಲೀಸ್ ಆಯುಕ್ತ ದಯಾನಂದ್ ಬೇಸರ

 ಭ್ರಷ್ಟಾಚಾರ, ಅಪರಾಧಿಗಳೊಂದಿಗೆ ಶಾಮೀಲು ಹಾಗೂ ಸಿವಿಲ್ ವ್ಯಾಜ್ಯಗಳಲ್ಲಿ ಹಸ್ತಕ್ಷೇಪ ಪ್ರವೃತ್ತಿ ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತರುತ್ತಿವೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

Police companionship with criminals Bengaluru City Police Commissioner reaction rav
Author
First Published Jan 6, 2024, 7:03 AM IST

ಬೆಂಗಳೂರು (ಜ.6) :  ಭ್ರಷ್ಟಾಚಾರ, ಅಪರಾಧಿಗಳೊಂದಿಗೆ ಶಾಮೀಲು ಹಾಗೂ ಸಿವಿಲ್ ವ್ಯಾಜ್ಯಗಳಲ್ಲಿ ಹಸ್ತಕ್ಷೇಪ ಪ್ರವೃತ್ತಿ ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತರುತ್ತಿವೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ನಗರ ಸಶಸ್ತ್ರ ಮೀಸಲು ಪಡೆಯ (ಉತ್ತರ) ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ ಹೊಸ ವರ್ಷದ ಮೊದಲ ಕವಾಯತಿನಲ್ಲಿ ಗೌರವ ರಕ್ಷೆ ಸ್ವೀಕರಿಸಿದ ಬಳಿಕ ಅವರು ಅಧಿಕಾರಿ-ಸಿಬ್ಬಂದಿಗೆ ಸಂದೇಶ ನೀಡಿದರು.

ಬೆಂಗಳೂರು ನಗರ ಪೊಲೀಸ್ ಘಟಕವು 60 ವಸಂತಗಳನ್ನು ತುಂಬಿ 61ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಹೆಮ್ಮೆ ಸಂಗತಿಯಾಗಿದೆ. ಕಳೆದ ವರ್ಷ ನಗರ ಪೊಲೀಸರು ಎಲ್ಲ ಸ್ತರಗಳಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಮುಖವಾಗಿ ವಿಧಾನಸಭಾ ಚುನಾವಣೆಯನ್ನು ಸಣ್ಣ ಅಹಿತಕರ ಘಟನೆಯೂ ಇಲ್ಲದಂತೆ ಶಾಂತಿಯುತವಾಗಿ ನಡೆಸುವ ಮೂಲಕ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಕರಸೇವಕ ಶ್ರೀಕಾಂತ್ ಪೂಜಾರಿಗೆ ಕೋರ್ಟ್‌ ಜಾಮೀನು, ನ್ಯಾಯಾಲಯದ ಷರತ್ತುಗಳೇನು?

ಅದೇ ರೀತಿ ಮಾದಕ ವಸ್ತು ಮಾರಾಟ ಹಾಗೂ ಸಾಗಾಣಿಕೆ ವಿರುದ್ಧದ ಹೋರಾಟವು ಕಳೆದ ವರ್ಷ ನಿರೀಕ್ಷೆಗೂ ಮೀರಿದ ಫಲಿತಾಂಶ ಕೊಟ್ಟಿದೆ. ಸೈಬರ್‌ ಕ್ರೈಂ, ಮಹಿಳೆಯರ ಸುರಕ್ಷತೆ, ದೀನದಲಿತರ ಸಂರಕ್ಷಣೆ ಇತ್ಯಾದಿ ವಿಷಯಗಳಲ್ಲಿ ಸಹ ಗುರುತರ ಸಾಧನೆಯಾಗಿದೆ. ತಮ್ಮ ಕರ್ತವ್ಯ ಮತ್ತು ಸಮಯ ಪ್ರಜ್ಞೆ ಹಾಗೂ ವಿವೇಚನಾಯುತ ವರ್ತನೆಯಲ್ಲಿ ನಗರ ಪೊಲೀಸರು ಮುಂಚೂಣಿಯಲ್ಲಿದ್ದು, ರಾಜ್ಯದ ಇತರೆ ಜಿಲ್ಲೆಗಳಿಗೆ ಮಾದರಿಯಾಗಿದ್ದಾರೆ ಎಂದು ಹೊಗಳಿದರು.

ನಮ್ಮಲ್ಲಿ ಆನೇಕ ದೋಷಗಳೂ ಕೂಡ ಇವೆ. ಮುಖ್ಯವಾಗಿ ಪೊಲೀಸ್ ಠಾಣೆಗಳು ದೀನರು, ದುರ್ಬಲರು, ಅಮಾಯಕರಿಗೆ ರಕ್ಷಣೆ ಒದಗಿಸದೆ ಕೇವಲ ಬಲಿಷ್ಠರು, ಹಣವಂತರಿಗೆ ಮಾತ್ರ ಮಣೆ ಹಾಕುತ್ತಾರೆ ಎನ್ನುವ ಅಪಾದನೆ ಇದೆ. ಜೊತೆಗೆ ಭ್ರಷ್ಟಾಚಾರ, ಅಪರಾಧಿಗಳೊಂದಿಗೆ ಪೊಲೀಸರ ಶಾಮೀಲು, ಸಿವಿಲ್ ವ್ಯಾಜ್ಯಗಳಲ್ಲಿ ಹಸ್ತಕ್ಷೇಪ ಪ್ರವೃತ್ತಿ ಇವು ಸಹ ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತರುತ್ತಿವೆ ಎಂದು ಆಯುಕ್ತರು ಅಸಮಾಧಾನ ವ್ಯಕ್ತಪಡಿಸಿದರು.

ವಿಕ್ರಂ ಸಿಂಹ ಜಾಗದಲ್ಲಿ ಮರ ಕಡಿಸಿ ಹಾಕಿಸಿದ್ದೇ ಸಿಎಂ: ಎಚ್‌ಡಿಕೆ ಆರೋಪ

ಠಾಣೆಗಳು ದೇಗುಲಗಳಿದ್ದಂತೆ

ಪೊಲೀಸ್ ಠಾಣೆಗಳು ನ್ಯಾಯ ದೇಗುಲಗಳಿದ್ದಂತೆ, ಅವುಗಳ ಗೌರವಕ್ಕೆ ಚ್ಯುತಿ ಬಾರದ ಹಾಗೆ ಈ ವರ್ಷ ಕರ್ತವ್ಯ ನಿರ್ವಹಿಸಿ ಜನರ ನಂಬಿಕೆ ವಿಶ್ವಾಸವನ್ನು ಇಮ್ಮಡಿಗೊಳಿಸೋಣ.

-ಬಿ.ದಯಾನಂದ್, ಪೊಲೀಸ್‌ ಆಯುಕ್ತ

Latest Videos
Follow Us:
Download App:
  • android
  • ios