ಬೆಂಗಳೂರಿಗೆ ಭೇಟಿ ನೀಡಿದ್ದ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತೊಡಿಸಿದ್ದ ಮೈಸೂರು ಪೇಟ ಧರಿಸಿ ಪೋಲೆಂಡ್‌ ಪ್ರಧಾನಿ ಡೊನಾಲ್ಡ್‌ ಟಸ್ಕ್‌ ಅವರು ಆಗ್ರಾದ ತಾಜ್‌ಮಹಲ್‌ ಮುಂದೆ ರೀಲ್ಸ್‌ ಮಾಡಿ ಗಮನಸೆಳೆದಿದ್ದಾರೆ. ಪ್ರಧಾನಿ ಮೋದಿ ಜೊತೆಗಿನ ಮಾತುಕತೆಯಲ್ಲಿ 13 ಒಪ್ಪಂದಗಳ ಬಗ್ಗೆ ಮಾಹಿತಿ ನೀಡಿದ್ದು, 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರ ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ.

ವಾರ್ಸಾ: ಇತ್ತೀಚಿನ ಬೆಂಗಳೂರು ಭೇಟಿ ವೇಳೆ ತಮಗೆ ತೊಡಿಸಲಾಗಿದ್ದ ಮೈಸೂರು ಪೇಟಾ ಧರಿಸಿ ಪೋಲೆಂಡ್‌ ಪ್ರಧಾನಿ ಡೊನಾಲ್ಡ್‌ ಟಸ್ಕ್‌ ಆಗ್ರಾದ ತಾಜ್‌ ಮಹಲ್‌ ಮುಂದೆ ರೀಲ್‌ ಮಾಡಿದ್ದಾರೆ. ಜೊತೆಗೆ ಈ ಕುರಿತ ವಿಡಿಯೋವನ್ನು ಸ್ವತಃ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಸಂಭ್ರಮಿಸಿದ್ದಾರೆ. ವಿಮಾನದಲ್ಲಿ ಕುಳಿತು ವಿಡಿಯೋ ಮಾಡಿರುವ ಟಸ್ಕ್‌, ತಮ್ಮ ಭಾರತ ಪ್ರವಾಸವು ಯಶಸ್ವಿಯಾಯಿತು ಎಂದಿದ್ದು, ಉಭಯ ದೇಶಗಳ ನಡುವೆ ಏರ್ಪಟ್ಟ 13 ಒಪ್ಪಂದಗಳ ಬಗ್ಗೆ ಮಾಹಿತಿ ನೀಡಿದರು. ಇದರ ಜತೆಗೇ, ಅ.23ರಂದು ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಅವರು ತೊಡಿಸಿದ್ದ ಮೈಸೂರು ಪೇಟವನ್ನು ತೊಟ್ಟು ಪ್ರೇಮಸೌಧವೆಂದೇ ಖ್ಯಾತಿ ಪಡೆದ ತಾಜ್‌ ಮಹಲ್‌ ಎದುರು ಬಿಸ್ಕೆಟ್‌ ತಿಂದು ನೃತ್ಯ ಮಾಡುತ್ತಾ ಚಿತ್ರೀಕರಿಸಿದ ರೀಲ್‌ ಅನ್ನೂ ಹಂಚಿಕೊಂಡಿದ್ದಾರೆ.

ನೀವು ನಮ್ಮ ಮಹಾರಾಜ ಎಂದು ತಮಾಷೆ ಮಾಡಿದ್ದ ಡಿಕೆಶಿ

ಸಿಎಂ ಡಿಕೆ ಶಿವಕುಮಾರ್ ಟಸ್ಕ್‌ನ ತಲೆಯ ಮೇಲೆ ರಾಜ ಪೇಟವನ್ನು ಇಡುತ್ತಿದ್ದಂತೆ, ಈಗ, ನೀವು ನಮ್ಮ ಮಹಾರಾಜ ಎಂದು ತಮಾಷೆಯಾಗಿ ಹೇಳಿದ್ದರು. ಇದನ್ನು ಟ್ವೀಟ್ ಮಾಡಿ ಡೊನಾಲ್ಡ್‌ ಟಸ್ಕ್‌ ಹಂಚಿಕೊಂಡಿದ್ದಾರೆ. ವಿಯೆಟ್ನಾಂನಲ್ಲಿ ಸೇರಿದಂತೆ ಹಲವು ದೇಶಗಳ ಪ್ರವಾಸದ ನಂತರ, ಟಸ್ಕ್ ತಮ್ಮ ಅಧಿಕೃತ ವಿಮಾನದಲ್ಲಿಯೇ ಮೈಸೂರು ಪೇಟಾ ಮತ್ತು ವಿಯೆಟ್ನಾಮೀಸ್ ನಾನ್ ಲಾ (ಶಂಕುವಿನಾಕಾರದ ಟೋಪಿ) ಸೇರಿದಂತೆ ತಮಗೆ ಸಿಕ್ಕಿರುವ ಸಾಂಸ್ಕೃತಿಕ ಸಾಧನ, ಉಡುಗೊರೆಗಳನ್ನು ದ್ವಿಪಕ್ಷೀಯ ಸ್ನೇಹದ ಸಂಕೇತಗಳಾಗಿ ತೋರಿಸುವ ವೀಡಿಯೊ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.

ಭಾರತ-ಪೊಲೆಂಡ್ ದ್ವಿಪಕ್ಷಿಯ ಮಾತುಕತೆ

ಟಸ್ಕ್ ಅವರ ಭಾರತ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಸಭೆಗಳು ಮತ್ತು ವ್ಯಾಪಾರ, ರಕ್ಷಣೆ ಮತ್ತು ತಂತ್ರಜ್ಞಾನದ ಮೇಲೆ ಕೇಂದ್ರೀಕೃತವಾದ ಮಾತುಕತೆಗಳು ನಡೆದವು. ಅಕ್ಟೋಬರ್ 21 ರಿಂದ 23 ರಂದು ಭಾರತಕ್ಕೆ ಭೇಟಿ ನೀಡಿದ್ದ ಪೋಲಿಷ್ ಪ್ರಧಾನಿ ಡೊನಾಲ್ಡ್ ಟಸ್ಕ್ ಮೋದಿ ಜೊತೆಗಿನ ಮಾತುಕತೆ ನಂತರ, 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ಪೋಲೆಂಡ್ ಪ್ರಧಾನಿಗೆ ಸಚಿವ ಕೃಷ್ಣಭೈರೇಗೌಡ ಬೀಳ್ಕೊಡುಗೆ

ಬೆಂಗಳೂರಿನ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಆಗಮಿಸಿದ್ದ ಪೋಲೆಂಡ್ ದೇಶದ ಪ್ರಧಾನಿ ಡೊನಾಲ್ಡ್ ಟಸ್ಕ್ ಹಾಗೂ ಅವರ ನಿಯೋಗ ಭೇಟಿ ಮುಗಿಸಿ ಅಕ್ಟೋಬರ್ 23 ರಂದು ಸ್ವದೇಶಕ್ಕೆ ಹಿಂತಿರುಗಿತು. ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ವಿಶೇಷ ವಿಮಾನದ ಮೂಲಕ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಪಸ್ಸಾದರು. ಈ ವೇಳೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ, ಪೋಲೆಂಡ್ ದೇಶದ ಪ್ರಧಾನಿ ಡೊನಾಲ್ಡ್ ಟಸ್ಕ್ ಹಾಗೂ ಅವರ ನಿಯೋಗವನ್ನು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬೀಳ್ಕೊಟ್ಟರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಕೆ.ಜಿ. ಜಗದೀಶ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.