ಬೆಂಗಳೂರಿನಲ್ಲಿ ನಡೆದ ಭಾರತ-ಪೋಲೆಂಡ್ ಬ್ಯುಸಿನೆಸ್ ಮೀಟಿಂಗ್‌ನಲ್ಲಿ ಡಿ.ಕೆ.ಶಿವಕುಮಾರ್ ಅವರು 2027ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಪೋಲೆಂಡ್ ಅನ್ನು ಆಹ್ವಾನಿಸಿದ್ದಾರೆ. ತಂತ್ರಜ್ಞಾನ ಮತ್ತು ಹಸಿರು ಇಂಧನ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರದ ಬಗ್ಗೆಯೂ ಚರ್ಚಿಸಲಾಯಿತು.
ಬೆಂಗಳೂರು: ರಾಜ್ಯದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ 2027ರ ಪಾಲುದಾರ ರಾಷ್ಟ್ರವಾಗಿ ಭಾಗವಹಿಸಲು ಪೋಲೆಂಡ್ ದೇಶವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಹ್ವಾನಿಸಿದ್ದಾರೆ. ಜತೆಗೆ ರಾಜ್ಯ ಮತ್ತು ಪೋಲೆಂಡ್ ನಡುವೆ ತಂತ್ರಜ್ಞಾನ, ನಾವೀನ್ಯತೆ, ಉದ್ಯೋಗ ಸೃಷ್ಟಿಯಲ್ಲಿ ದ್ವಿಪಕ್ಷೀಯ ಸಹಕಾರದ ಪ್ರಸ್ತಾಪ ಮಾಡಿದರು.
ಭಾರತ-ಪೋಲೆಂಡ್ ಬ್ಯುಸಿನೆಸ್ ಮೀಟಿಂಗ್
ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಭಾರತ-ಪೋಲೆಂಡ್ ಬ್ಯುಸಿನೆಸ್ ಮೀಟಿಂಗ್‌ನಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ತಂತ್ರಜ್ಞಾನ, ನಾವೀನ್ಯತೆ ಮತ್ತು ಉದ್ಯಮಶೀಲತೆಯಲ್ಲಿ ಜಾಗತಿಕ ಮಟ್ಟದಲ್ಲಿ ಬೆಂಗಳೂರು ಕೇಂದ್ರವಾಗುತ್ತಿದೆ. ಬೆಂಗಳೂರಿನ ತಂತ್ರಜ್ಞಾನ, ಸುಧಾರಿತ ಉತ್ಪಾದನಾ ವ್ಯವಸ್ಥೆ, ಕೃತಕ ಬುದ್ಧಿಮತ್ತೆ ಹಾಗೂ ಪೋಲೆಂಡಿನ ಹಸಿರು ಇಂಧನದಲ್ಲಿ ಪರಿಣತಿಯು ಒಂದುಗೂಡಬೇಕು. ಆ ಮೂಲಕ ಹೂಡಿಕೆ, ತಂತ್ರಜ್ಞಾನ, ನಾವಿನ್ಯತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ದ್ವಿಪಕ್ಷೀಯ ಸಹಕಾರ ನೀಡಬೇಕು ಎಂದರು.
80 ಕೋಟಿ ರು. ಹೂಡಿಕೆ ಮೂಲಕ 1 ಸಾವಿರ ಉದ್ಯೋಗ ಸೃಷ್ಟಿ
ಕೋಲಾರದ ವೇಮಗಲ್ ಕೈಗಾರಿಕಾ ಪ್ರದೇಶದ ಐದು ಎಕರೆ ಪ್ರದೇಶದಲ್ಲಿ ಪೋಲೆಂಡ್‌ನ ಟಿಝಡ್‌ಎಂಒ ಗ್ರೂಪ್ 80 ಕೋಟಿ ರು. ಹೂಡಿಕೆ ಮೂಲಕ 1 ಸಾವಿರ ಉದ್ಯೋಗ ಸೃಷ್ಟಿಯ ಪ್ರಸ್ತಾವನೆ ನೀಡಿದೆ. ಅದನ್ನು ಸ್ವಾಗತಿಸುತ್ತೇನೆ. ಈ ಹೂಡಿಕೆಯಿಂದ ಭಾರತದಲ್ಲಿ ಮೊದಲ ಬಾರಿಗೆ ಸ್ಮಾರ್ಟ್ ಅಡಲ್ಟ್ ಇನ್ಕಾಂಟಿನೆನ್ಸ್ ಪ್ಯಾಡ್‌ಗಳ ತಯಾರಿಕೆಯನ್ನು ಪರಿಚಯಿಸಿದಂತಾಗಲಿದೆ.
ಪೋಲೆಂಡ್ ಪ್ರಧಾನಿ ಡೋನಾಲ್ಡ್ ಟಸ್ಕ್ ಮಾತನಾಡಿದರು. ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಇತರರಿದ್ದರು.
ಪೋಲೆಂಡ್ ಪ್ರಧಾನಿ ಜತೆ ಸಿಎಂ ಚರ್ಚೆ
ಭಾರತ ಪೋಲೆಂಡ್ ಬ್ಯುಸಿನೆಸ್ ಮೀಟಿಂಗ್‌ಗೂ ಮುನ್ನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರ ಜತೆ ಹೂಡಿಕೆ, ವಾಣಿಜ್ಯ ಮತ್ತು ತಂತ್ರಜ್ಞಾನ ಅವಕಾಶಗಳ ಕುರಿತು ಪ್ರತ್ಯೇಕ ಚರ್ಚೆ ನಡೆಸಿದರು.







