ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಆರೋಪದ ಮೇಲೆ ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಬಳಿಕ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ತಾನು ಕಾನೂನಿಗೆ ಸಹಕರಿಸಿದ್ದೇನೆ ಮತ್ತು ಸತ್ಯಕ್ಕೆ ಜಯ ಸಿಗಲಿದೆ ಎಂದು ಶ್ರೀಗಳು ಹೇಳಿದ್ದಾರೆ.

 ಹರಿಹರ (ಮೇ.15): ಮಕ್ಕಳ ಮೇಲೆ ಲೈಂಗಿಕ ಕಿರುಕುಳದ ದೂರಿನನ್ವಯ ಇಲ್ಲಿನ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಅವರನ್ನು ಹರಿಹರ ಗ್ರಾಮೀಣ ಪೊಲೀಸರು, ಠಾಣೆಗೆ ಕರೆತಂದು ವಿಚಾರಣೆ ನಡೆಸಿ, ನಂತರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ಬಳಿಕ ಮಠಕ್ಕೆ ಕಳುಹಿಸಿ ಕೊಡಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2024ರ ಮಾ.20ರಂದು ಮಠದ ವಿದ್ಯಾರ್ಥಿ ನಿಲಯದಲ್ಲಿ, ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ, ಮಹಿಳೆಯೊಬ್ಬರು ದೂರು ನೀಡಿದ್ದರು. ವಿಚಾರಣೆ ಸಮಯದಲ್ಲಿ ಪೊಲೀಸರು ಕೇಳಿದ 50ಕ್ಕೂ ಅಧಿಕ ಪ್ರಶ್ನೆಗಳಿಗೆ ವಚನ ಶ್ರೀ ಉತ್ತರಿಸಿದ್ದಾರೆಂದು ತಿಳಿದುಬಂದಿದೆ. ನಾನು ಕಾನೂನನ್ನು ಗೌರವಿಸಿ ವಿಚಾರಣೆಗೆ ಸಹಕರಿಸಿದ್ದೇನೆ. ಸತ್ಯಕ್ಕೆ ಯಾವಾಗಲೂ ಜಯ ಎಂದು ವಚನಾನಂದ ಶ್ರೀ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.

ವೈದ್ಯಕೀಯ ತಪಾಸಣೆ:

ವಿಚಾರಣೆ ಮುಗಿದ ನಂತರ, ನಗರದ ದಾಮೋದರ ಮಂಜುನಾಥ ಪೈ ಸಾರ್ವಜನಿಕ ಆಸ್ಪತ್ರೆಯಲ್ಲಿ ಶ್ರೀಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಶ್ರೀಗಳು ದೈಹಿಕವಾಗಿ ಸದೃಢರಾಗಿದ್ದು, ಅವರ ಉಗುರು, ಕೂದಲು ಸೇರಿದಂತೆ ತಪಾಸಣೆಗೆ ಬೇಕಾದ ಮಾದರಿಗಳನ್ನು ಸಂಗ್ರಹಿಸಿ, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಭಕ್ತರ ದಂಡು:

ಠಾಣೆಗೆ ವಿಚಾರಣೆಗಾಗಿ ಶ್ರೀ ಅವರನ್ನು ಕರೆ ತಂದಿರುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಠಾಣೆಯ ಎದುರು ಭಕ್ತರು ಶ್ರೀಗಳ ಪರವಾಗಿ ಜಯಘೋಷ ಹಾಕಿ, ಟ್ರಸ್ಟ್ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.