ತೆಲಂಗಾಣದಲ್ಲಿ 'ನಂದಿನಿ' ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸಲು ಕೆಎಂಎಫ್‌ಗೆ ಇದ್ದ ಕಾನೂನು ತೊಡಕನ್ನು ಹೈಕೋರ್ಟ್ ನಿವಾರಿಸಿದೆ. ಹೈದರಾಬಾದ್ ಮಾರುಕಟ್ಟೆ ಹಕ್ಕಿನ ಆಧಾರದ ಮೇಲೆ ಇಡೀ ರಾಜ್ಯದ ಏಕಸ್ವಾಮ್ಯವನ್ನು ಪ್ರತಿಪಾದಿಸಿದ್ದ ಅರ್ಜಿದಾರರ ವಾದವನ್ನು ನ್ಯಾಯಾಲಯ ತಳ್ಳಿಹಾಕಿದ್ದು, ಕೆಎಂಎಫ್‌ಗೆ ಹೊಸ ಏಜೆನ್ಸಿಗಳನ್ನು ನೇಮಿಸುವ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದೆ.
ಬೆಂಗಳೂರು: ತೆಲಂಗಾಣ ರಾಜ್ಯದಲ್ಲಿ ‘ನಂದಿನಿ’ ಹಾಲು ಮತ್ತು ಡೈರಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸಲು ರಾಯಚೂರು ಹಾಲು ಒಕ್ಕೂಟಕ್ಕೆ ಅನುಮತಿಸಿರುವ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ(ಕೆಎಂಎಫ್) ನಿರ್ಧಾರದಲ್ಲಿ ಕಾನೂನಿನ ದೋಷವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಕೆಎಂಎಫ್ ಕೈಗೊಂಡ ನಿರ್ಧಾರ ರದ್ದು ಮಾಡಬೇಕು ಎಂದು ಕೋರಿ ಮೆ.ಶ್ರೀ ಎಸ್ಎಸ್ಆರ್ ಎಂಟರ್ಪ್ರೈಸಸ್ ಮತ್ತು ಮೆಸರ್ಸ್ ಶ್ರೀ ರಾಜೇಶ್ವರಿ ಡೈರಿ ಪ್ರಾಡಕ್ಟ್ ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರ ಏಕ ಸದಸ್ಯ ಪೀಠವು ಈ ಆದೇಶ ನೀಡಿದೆ.
ಕಾನೂನು ತೊಡಕು ನಿವಾರಣೆ
ಈ ಆದೇಶದಿಂದ ತೆಲಂಗಾಣದ ವಿವಿಧ ಜಿಲ್ಲೆಗಳಲ್ಲಿ ನಂದಿನಿ ಬ್ರ್ಯಾಂಡ್‌ಗಳಿಗೆ ಮತ್ತಷ್ಟು ಪ್ರಚಾರ ಮತ್ತು ಮಾರುಕಟ್ಟೆ ವ್ಯವಸ್ಥೆ ವಿಸ್ತರಿಸಲು ಕೆಎಂಎಫ್‌ಗೆ ಇದ್ದ ದೊಡ್ಡ ಕಾನೂನು ತೊಡಕು ನಿವಾರಣೆಯಾದಂತಾಗಿದೆ.
ಅರ್ಜಿದಾರರ ಸಂಸ್ಥೆಗಳಿಗೆ ಹೈದರಾಬಾದ್ ಮಾರುಕಟ್ಟೆ ವ್ಯಾಪ್ತಿಯ ಹಕ್ಕನ್ನು ಆಧಾರವನ್ನಾಗಿ ಮಾಡಿಕೊಂಡು ಸಂಪೂರ್ಣ ತೆಲಂಗಾಣ ರಾಜ್ಯದ ಮೇಲೆ ಏಕಸ್ವಾಮ್ಯ ಹಕ್ಕು ಪ್ರತಿಪಾದಿಸಲು ಸಾಧ್ಯವಿಲ್ಲ. ಕೆಎಂಎಫ್ ಹೊಸ ಏಜೆನ್ಸಿಗಳನ್ನು ನೇಮಿಸುವ ಅಧಿಕಾರ ಹೊಂದಿದೆ ಎಂದು ಸ್ಪಷ್ಟಪಡಿಸಿದೆ. ಜತೆಗೆ, ಅರ್ಜಿದಾರರ ಸಂಸ್ಥೆಗಳ ವಾದದಲ್ಲಿ ಯಾವುದೇ ಕಾನೂನಾತ್ಮಕ ಆಧಾರವಿಲ್ಲ. ಕರಾರಿನ ನಿಯಮಗಳ ಪ್ರಕಾರ ಮಾರುಕಟ್ಟೆ ವಿಸ್ತರಣೆ ಮಾಡುವ ಹಕ್ಕು ಕೆಎಂಎಫ್‌ಗೆ ಇದೆ ಎಂದು ಪೀಠ ತಿಳಿಸಿದೆ.
ಪ್ರಕರಣವೇನು?:
ಕೆಎಂಎಫ್ ಉತ್ಪನ್ನಗಳನ್ನು ತೆಲಂಗಾಣದ ಹೈದ್ರಾಬಾದ್‌ನ ಮೂಲಕ ಮಾರುಕಟ್ಟೆ ಮಾಡುವುದು, ಗೋದಾಮು ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗಾಗಿ ಅರ್ಜಿದಾರ ಸಂಸ್ಥೆಗಳಾದ ಮೆಸರ್ಸ್ ಶ್ರೀ ಎಸ್ಎಸ್ಆರ್ ಎಂಟರ್ಪ್ರೈಸಸ್ ಮತ್ತು ಮೆಸರ್ಸ್ ಶ್ರೀ ರಾಜೇಶ್ವರಿ ಡೈರಿ ಪ್ರಾಡಕ್ಟ್ಸ್‌ಗಳೊಂದಿಗೆ 2015ರಿಂದ ಒಡಂಬಡಿಕೆ ಮಾಡಿಕೊಂಡಿತ್ತು. ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘದ ಮೂಲಕ ನಿರ್ವಹಣೆ ಮಾಡುತ್ತಿತ್ತು.
ಈ ನಡವೆ 2024ರ ಆ.7ರಂದು ಕೆಎಂಎಫ್ ಸಂಸ್ಥೆಯು ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ (ಆರ್‌ಬಿಕೆಎಂಯುಎಲ್) ತೆಲಂಗಾಣದ ವರಂಗಲ್, ಆದಿಲಾಬಾದ್, ನಿಜಾಮಾಬಾದ್ ಸೇರಿದಂತೆ ಪ್ರಮುಖ ಜಿಲ್ಲೆಗಳಲ್ಲಿ ತನ್ನ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ ಅನುಮತಿ ನೀಡಿತ್ತು. ಈ ಸಂಬಂಧ ಹೈದ್ರಾಬಾದ್‌ನಲ್ಲಿ ಮಾರುಕಟ್ಟೆ ಜವಾಬ್ದಾರಿ ವಹಿಸಿಕೊಂಡಿದ್ದ ಮೆಸರ್ಸ್ ಶ್ರೀ ಎಸ್ಎಸ್ಆರ್ ಎಂಟರ್ಪ್ರೈಸಸ್‌ಗೆ ತಿಳಿಸಿತ್ತು ಅಲ್ಲದೆ, ಅರ್ಜಿದಾರರ ಮಾರುಕಟ್ಟೆ ವ್ಯಾಪ್ತಿಯನ್ನು ಹೊರತುಪಡಿಸಿ ಇತರೆ ಭಾಗಗಳಲ್ಲಿ ನಂದಿನ ಉತ್ಪನ್ನಗಳ ಪ್ಯಾಕಿಂಗ್ ಮಾಡುವುದಕ್ಕಾಗಿ ಟೆಂಡರ್ ಕರೆದಿತ್ತು. ಇದನ್ನು ಪ್ರಶ್ನಿಸಿ ಪ್ಯಾಕಿಂಗ್ ಒಡಂಬಡಿಕೆ ಮಾಡಿಕೊಂಡಿದ್ದ ಅರ್ಜಿದಾರ ಕಂಪನಿಗಳು ಹೈಕೋರ್ಟ್ ಮೆಟ್ಟಿಲೇರಿ, ಹೈದರಾಬಾದ್ ಮಾರುಕಟ್ಟೆ ವ್ಯಾಪ್ತಿಯ ಹಕ್ಕನ್ನು ತಮಗೆ ನೀಡಲಾಗಿದೆ. ತೆಲಂಗಾಣ ರಾಜ್ಯಾದ್ಯಂತ ಏಕಸ್ವಾಮ್ಯದ ಹಕ್ಕು ನಮಗೆ ಇದೆ ಎಂದು ವಾದಿಸಿದ್ದವು.
ಈ ವಾದ ಒಪ್ಪದ ಹೈಕೋರ್ಟ್, ಅರ್ಜಿದಾರರು ಕೆಎಂಎಫ್ 2024ರಲ್ಲಿ ಆಹ್ವಾನಿಸಿದ್ದ ಟೆಂಡರ್‌ನಲ್ಲಿ ಭಾಗಿಯಾಗಿಲ್ಲ. ಆದ್ದರಿಂದ ಟೆಂಡರ್ ಪ್ರಕ್ರಿಯೆ ಫಲಿತಾಂಶವನ್ನು ಪ್ರಶ್ನಿಸುವ ಹಕ್ಕು ಹೊಂದಿಲ್ಲ. ಟೆಂಡರ್‌ನಲ್ಲಿ ಭಾಗವಹಿಸದೇ ನಂತರ ಅದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವುದು ಕಾನೂನುಬದ್ಧವಾಗಿ ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.
ತೆಲಂಗಾಣದ ಕೆಲವು ಜಿಲ್ಲೆಗಳಲ್ಲಿ ನಂದಿನಿ ಉತ್ಪನ್ನಗಳ ವಿತರಣೆಗೆ ರಾಯಚೂರು ಹಾಲು ಒಕ್ಕೂಟಕ್ಕೆ ನೀಡಿರುವ ಅಧಿಕಾರ ಮತ್ತು ಕೋ-ಪ್ಯಾಕಿಂಗ್ ಸೇವೆಗಾಗಿ ಟೆಂಡರ್ ಆಹ್ವಾನಿಸಿರುವ ಕ್ರಮಗಳು ಸಾರ್ವಜನಿಕ ಹಿತಾಸಕ್ತಿ ಹಾಗೂ ವ್ಯಾಪಾರ ವಿಸ್ತರಣೆಯ ಉದ್ದೇಶದಿಂದ ಕೈಗೊಳ್ಳಲಾದ ಸಮಂಜಸ ಕ್ರಮಗಳಾಗಿವೆ. ಇನ್ನೂ ಅರ್ಜಿದಾರ ಸಂಸ್ಥೆಗಳು ಈಗಾಗಲೇ ಹೊಂದಿರುವ ಹೈದರಾಬಾದ್ ಮಹಾನಗರ ಪ್ರದೇಶದ ವಿತರಣಾ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೆಎಂಎಫ್ ಹಾಗೂ ಸಂಬಂಧಿತ ಹಾಲು ಒಕ್ಕೂಟಗಳಿಗೆ ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.


