Asianet Suvarna News Asianet Suvarna News

ದಕ್ಷಿಣದ ಮೊದಲ ವಂದೇ ಭಾರತ್‌ ರೈಲಿಗೆ ಇಂದು ಮೋದಿ ಚಾಲನೆ

ದೇಶದ ಐದನೇ ಮತ್ತು ದಕ್ಷಿಣ ಭಾರತದ ಮೊದಲ ಹೈಸ್ಪೀಡ್‌ ವಂದೇ ಭಾರತ್‌ ರೈಲಿಗೆ ಪ್ರಧಾನಿ ಮೋದಿ, ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ನಿಲ್ದಾಣದಲ್ಲಿ ಶುಕ್ರವಾರ ಚಾಲನೆ ನೀಡಲಿದ್ದಾರೆ. 

PM Narendra Modi to flag off South Indias first Vande Bharat train on November 11th gvd
Author
First Published Nov 11, 2022, 6:44 AM IST

ಬೆಂಗಳೂರು (ನ.11): ದೇಶದ ಐದನೇ ಮತ್ತು ದಕ್ಷಿಣ ಭಾರತದ ಮೊದಲ ಹೈಸ್ಪೀಡ್‌ ವಂದೇ ಭಾರತ್‌ ರೈಲಿಗೆ ಪ್ರಧಾನಿ ಮೋದಿ, ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ನಿಲ್ದಾಣದಲ್ಲಿ ಶುಕ್ರವಾರ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 10.20ಕ್ಕೆ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ, ಪ್ಲಾಟ್‌ಫಾರಂ 8ರಲ್ಲಿ ಈ ನೂತನ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಈ ರೈಲು ನಿತ್ಯ ಚೆನ್ನೈ- ಬೆಂಗಳೂರು - ಮೈಸೂರು ನಡುವೆ ಓಡಾಟ ನಡೆಸಲಿದೆ. ಸದ್ಯದ ಶತಾಬ್ದಿ ರೈಲಿಗಿಂತಲೂ ವೇಗವಾಗಿ ಸಂಚರಿಸಲಿದ್ದು, 6 ಗಂಟೆ 30 ನಿಮಿಷಗಳಲ್ಲಿ ಚೆನ್ನೈನಿಂದ ಮೈಸೂರು ತಲುಪಲಿದೆ. 

ಇನ್ನು ಬೆಂಗಳೂರು - ಮೈಸೂರು ನಿಲ್ದಾಣಗಳ ನಡುವೆ ಕೇವಲ 1.40 ಗಂಟೆ ಗಮ್ಯ ಮುಟ್ಟಲಿದೆ. ಕಳೆದ ಸೋಮವಾರ ಈ ರೈಲಿನ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಪ್ರಧಾನಿ ಚಾಲನೆ ಬಳಿಕ ವಿಶೇಷ ಪ್ರಯಾಣ ಬೆಂಗಳೂರಿನಿಂದ ಹೊರಟು ಸಂಜೆ 5.20ಕ್ಕೆ ಚೆನ್ನೈ ನಿಲ್ದಾಣಕ್ಕೆ ತಲುಪಲಿದೆ. ಮಾರ್ಗ ಮಧ್ಯೆ ಬೆಂಗಳೂರು ದಂಡು, ಬೈಯಪ್ಪನಹಳ್ಳಿ, ಕೆ.ಆರ್‌.ಪುರಂ, ವೈಟ್‌ಫೀಲ್ಡ್‌ ಸೇರಿದಂತೆ ಮಾರ್ಗದ 15ಕ್ಕೂ ಅಧಿಕ ನಿಲ್ದಾಣಗಳಲ್ಲಿ ಕೆಲ ನಿಮಿಷ ನಿಲುಗಡೆಯಾಗಲಿದೆ. ಶನಿವಾರದಿಂದ ಅಧಿಕೃತವಾಗಿ ಪ್ರಯಾಣಿಕರ ಸೇವೆ ಆರಂಭಗೊಳ್ಳಲಿದೆ. ಭದ್ರತಾ ದೃಷ್ಟಿಯಿಂದ ಪ್ರಧಾನಿ ಚಾಲನೆ ನೀಡುವ ದಿನ ಪ್ರಯಾಣಿಕರ ಸಂಚಾರಕ್ಕೆ ಅನುಮತಿ ನೀಡಿಲ್ಲ.

ಬೆಂಗಳೂರಿಗೆ ಮೋದಿ ಆಗಮನ: ಸಂಚಾರದಲ್ಲಿ ವ್ಯತ್ಯಯ, ಮನೆಯಿಂದ ಹೊರಡುವಾಗ ಹುಷಾರು!

ಶತಾಬ್ದಿಗಿಂತ ದರ, ವೇಗ ತುಸು ಹೆಚ್ಚು; ಮೈಸೂರಿನಿಂದ ಚೆನ್ನೈಗೆ ಶತಾಬ್ದಿ ರೈಲಿಗೆ ಹೋಲಿಸಿದರೆ ವಂದೇ ಭಾರತ್‌ ರೈಲಿನ ದರ ಸಿಸಿ ಎಸಿ ಚೇರ್‌ ಕಾರ್‌ನಲ್ಲಿ 10 ರಿಂದ 20 ರು., ಎಕ್ಸಿಕ್ಯೂಟಿವ್‌ ಕ್ಲಾಸ್‌ ದರ 200 ರು. ಹೆಚ್ಚಿದೆ. ಆದರೆ, ಚೆನ್ನೈನಿಂದ ಮೈಸೂರು ಮಾರ್ಗದಲ್ಲಿ ಮಾತ್ರ ಶತಾಬ್ದಿ ರೈಲಿಗೆ ಹೋಲಿಸಿದರೆ ಸಿಸಿ ಎಸಿ ಚೇರ್‌ ಕಾರ್‌ನಲ್ಲಿ 75 ರು., ಎಕ್ಸಿಕ್ಯೂಟಿವ್‌ ಕ್ಲಾಸ್‌ನಲ್ಲಿ 275 ರು. ಕಡಿಮೆ ದರವಿದೆ.

ವಂದೇ ಭಾರತ್‌ ವೈಶಿಷ್ಟ್ಯ: ಮೇಕ್‌ ಇನ್‌ ಇಂಡಿಯಾ ಯೋಜನೆಯಲ್ಲಿ ನಿರ್ಮಾಣವಾಗಿರುವ ದೇಶದ ಅತಿವೇಗದ ರೈಲು ಎಂಬ ಹೆಗ್ಗಳಿಕೆ ಹೊಂದಿದ್ದು, ಗಂಟೆಗೆ ಗರಿಷ್ಠ 160.ಕಿ.ಮೀ ವೇಗದಲ್ಲಿ ಸಂಚರಿಸಲ್ಲ ಸಾಮರ್ಥ್ಯ ಹೊಂದಿದೆ. ಈ ರೈಲು ಶೂನ್ಯದಿಂದ 100 ಕಿ.ಮೀ ವೇಗ ತಲುಪಲು ಕೇವಲ 52 ಸೆಕೆಂಡ್‌ ಸಮಯ ತೆಗೆದುಕೊಳ್ಳಲಿದೆ. ಏರೋ ಡೈನಾಮಿಕ್ಸ್‌ ಮಾದರಿಯಲ್ಲಿ ನಿರ್ಮಾಣ ಮಾಡಿದ್ದು, ಗಾಳಿಯಲ್ಲಿ ವೇಗವಾಗಿ ನುಗ್ಗುವ ಸಾಮರ್ಥ್ಯ ಹೊಂದಿದೆ. ಐಷಾರಾಮಿ ಆಸನ ವ್ಯವಸ್ಥೆ ಇದೆ. ಇದಕ್ಕೆ ಎಂಜಿನ್‌ ಇರುವುದಿಲ್ಲ. ಬದಲಾಗಿ ಮೆಟ್ರೋ ರೀತಿಯಲ್ಲಿ ಪ್ರತಿ ಬೋಗಿ ಕೂಡಾ ಪ್ರತ್ಯೇಕ ವ್ಯವಸ್ಥೆ ಹೊಂದಿರುತ್ತದೆ

ವಾರದಲ್ಲಿ ಆರು ದಿನ ಸಂಚಾರ: ವಂದೇ ಭಾರತ್‌ ರೈಲಿನ ಅಧಿಕೃತ ವೇಳಾಪಟ್ಟಿಪ್ರಕಟವಾಗಿದ್ದು, ಶನಿವಾರದಿಂದ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈಗಾಗಲೇ ಐಆರ್‌ಸಿಟಿಸಿ ವೆಬ್‌ಸೈಟ್‌, ಆ್ಯಪ್‌ಗಳಲ್ಲಿ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿದೆ. ಈ ರೈಲು ಬುಧವಾರ ಹೊರತು ಪಡಿಸಿ ಉಳಿದ ಆರು ದಿನಗಳ ಕಾಲ ಚೆನ್ನೈ- ಮೈಸೂರು ನಡುವೆ ಓಡಾಟ ನಡೆಸಲಿದೆ. ಮಾರ್ಗ ಮಧ್ಯೆ ಕಟ್ಪಾಡಿ ಜಂಕ್ಷನ್‌ ಮತ್ತು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಂಕ್ಷನ್‌ನಲ್ಲಿ ನಿಲುಗಡೆಯಾಗಲಿದೆ.

ಮೈಸೂರು ವಂದೇ ಭಾರತ್‌ ರೈಲು (20607) ಬೆಳಿಗ್ಗೆ 5.50ಕ್ಕೆ ಚೆನ್ನೈ ಸೆಂಟ್ರಲ್‌ ನಿಲ್ದಾಣದಿಂದ ಹೊರಟು ಕಟ್ಪಾಡಿ ಜಂಕ್ಷನ್‌ (7.21 ರಿಂದ 7.25ವರೆಗೂ), ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಂಕ್ಷನ್‌ (10.20 ರಿಂದ 10.30ವರೆಗೂ) ಮೂಲಕ ಮೈಸೂರು ಜಂಕ್ಷನ್‌ಗೆ 12.20ಕ್ಕೆ ತಲುಪಲಿದೆ. ಚೆನ್ನೈಸೆಂಟ್ರಲ್‌ ವಂದೇ ಭಾರತ್‌ ರೈಲು (20608) ಮಧ್ಯಾಹ್ನ 1.05ಕ್ಕೆ ಮೈಸೂರಿನಿಂದ ಹೊರಟು ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಂಕ್ಷನ್‌ (ಮಧ್ಯಾಹ್ನ 2.55 ರಿಂದ 3ವರೆಗೂ) , ಕಟ್ಪಾಡಿ ಜಂಕ್ಷನ್‌ (5.36 ರಿಂದ 5.40ವರೆಗೂ) ರಾತ್ರಿ 7.30ಕ್ಕೆ ಚೆನ್ನೈ ಸೆಂಟ್ರಲ್‌ ತಲುಪಲಿದೆ.

ಕಾಶಿಯಾತ್ರೆ ರೈಲು ಸೇವೆಗೂ ನಿಶಾನೆ: ರಾಜ್ಯದ ಮೊದಲ ಭಾರತ್‌ ಗೌರವ್‌ ಕಾಶಿಯಾತ್ರೆ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ಶುಕ್ರವಾರ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ನಿಲ್ದಾಣದಲ್ಲಿ ಬೆಳಗ್ಗೆ 10.30ಕ್ಕೆ ಚಾಲನೆ ನೀಡಲಿದ್ದಾರೆ. ಈ ರೈಲಿನಲ್ಲಿ ಕಾಶಿ ಯಾತ್ರೆಗೆ ತೆರಳುವವರಿಗೆ ರಾಜ್ಯದ ಮುಜರಾಯಿ ಇಲಾಖೆಯಿಂದ ತಲಾ 5000 ರು. ಸಹಾಯಧನ ನೀಡಲಾಗುತ್ತದೆ.

ನ.11ರಂದು ಬೆಂಗಳೂರಲ್ಲಿ ಪ್ರಧಾನಿ ಮೋದಿ ಮಿಂಚಿನ ಸಂಚಾರ

ದರ ಎಷ್ಟು?
ಎಸಿ ಚೇರ್‌ - ಎಕ್ಸಿಕ್ಯೂಟಿವ್‌ ಕ್ಲಾಸ್‌ (ರು.ಗಳಲ್ಲಿ)

ಮೈಸೂರು - ಚೆನ್ನೈ - 1365 - 2,485
ಚೆನ್ನೈ - ಮೈಸೂರು - 1200 - 2295
ಮೈಸೂರು - ಬೆಂಗಳೂರು - 720 - 1,215
ಬೆಂಗಳೂರು - ಮೈಸೂರು - 515 - 985
ಬೆಂಗಳೂರು - ಚೆನ್ನೈ - 940 - 1,835
ಚೆನ್ನೈ - ಬೆಂಗಳೂರು - 995 - 1885

Follow Us:
Download App:
  • android
  • ios