ಪಂಚರಾಜ್ಯಗಳ ಚುನಾವಣಾ ಗೆಲುವಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡುತ್ತಿದ್ದು, ಬಿಜೆಪಿ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ, ಅವರು ಆರ್ಟ್ ಆಫ್ ಲಿವಿಂಗ್ ಕೇಂದ್ರದಲ್ಲಿ ಧ್ಯಾನ ಮಂದಿರವನ್ನು ಉದ್ಘಾಟಿಸಲಿದ್ದು

ಬೆಂಗಳೂರು (ಮೇ.10): ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಇಂದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಘಟಕವು ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದೆ.

Add Asianetnews Kannada as a Preferred SourcegooglePreferred

ಎಚ್‌ಎಎಲ್‌ನಲ್ಲಿ ಅಭಿನಂದನಾ ಸಮಾರಂಭ:

ಬೆಂಗಳೂರಿನ ಎಚ್‌ಎಎಲ್ ಮುಖ್ಯದ್ವಾರದ ಬಳಿ ಈ ಬೃಹತ್ ಕಾರ್ಯಕ್ರಮ ಆಯೋಜನೆಯಾಗಿದ್ದು, ರಾಜ್ಯ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ. ಪಂಚರಾಜ್ಯ ಫಲಿತಾಂಶದಿಂದ ಈಗಾಗಲೇ ಜೋಶ್‌ನಲ್ಲಿರುವ ಕರ್ನಾಟಕ ಬಿಜೆಪಿಗೆ ಪ್ರಧಾನಿ ಮೋದಿಯವರ ಆಗಮನ ಮತ್ತಷ್ಟು ಹುರುಪು ನೀಡಿದೆ.

ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಬೆಳಿಗ್ಗೆ 9:45 ರಿಂದ 10:15 ರವರೆಗೆ ಅಂದರೆ ಸುಮಾರು ಅರ್ಧ ತಾಸು ಪ್ರಧಾನಿ ಮೋದಿ ಎಚ್‌ಎಎಲ್ ಕಾರ್ಯಕ್ರಮದ ವೇದಿಕೆಯಲ್ಲಿ ಇರಲಿದ್ದಾರೆ. ಈ ವೇಳೆ ಅಲ್ಲಿ ನೆರೆಯಲಿರುವ ಸುಮಾರು 10 ರಿಂದ 15 ಸಾವಿರ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಭಾಷಣ ಮಾಡಲಿದ್ದಾರೆ.

ಆರು ತಿಂಗಳು.. ಮೂರು ಭೇಟಿ.. ಎಲ್ಲವೂ ಧಾರ್ಮಿಕ ಕೇಂದ್ರಗಳಿಗೆ!

ಕಳೆದ ಆರು ತಿಂಗಳ ಅವಧಿಯಲ್ಲಿ ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ನೀಡುತ್ತಿರುವ ಮೂರನೇ ಭೇಟಿ ಇದಾಗಿದೆ. ವಿಶೇಷವೆಂದರೆ ಈ ಮೂರೂ ಭೇಟಿಗಳ ಸಂದರ್ಭದಲ್ಲಿ ಅವರು ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ:

ಮೊದಲ ಭೇಟಿ (ನವೆಂಬರ್ 28, 2025): ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗಿಯಾಗಿದ್ದರು. ನೂತನ 'ಸುವರ್ಣ ತೀರ್ಥ ಮಂಟಪ' ಹಾಗೂ 'ಕನಕನ ಕಿಂಡಿ'ಯ ಚಿನ್ನದ ಕವಚ ಲೋಕಾರ್ಪಣೆ ಮಾಡಿ ರೋಡ್ ಶೋ ನಡೆಸಿದ್ದರು.

ಎರಡನೇ ಭೇಟಿ (ಏಪ್ರಿಲ್ 15, 2026): ಕಳೆದ ತಿಂಗಳಷ್ಟೇ ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು, ಆದಿಚುಂಚನಗಿರಿ ಮಠದಲ್ಲಿ ​ಗುರು ಭೈರವೈಕ್ಯ ಮಂದಿರ ಉದ್ಘಾಟಿಸಿದ್ದರು. ಒಕ್ಕಲಿಗ ಸಮುದಾಯದ ಪ್ರಮುಖ ಧಾರ್ಮಿಕ ಕೇಂದ್ರದಲ್ಲಿ ಪೂಜೆ ಸಲ್ಲಿಸಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮೂರನೇ ಭೇಟಿ (ಮೇ 10, 2026): ಇಂದು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ.

ಆರ್ಟ್ ಆಫ್ ಲಿವಿಂಗ್‌ನಲ್ಲಿ ಧ್ಯಾನ ಮಂದಿರ ಲೋಕಾರ್ಪಣೆ:

ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಅತ್ಯಾಧುನಿಕವಾಗಿ ನಿರ್ಮಿಸಲಾದ ಬೃಹತ್ ಧ್ಯಾನ ಮಂದಿರವನ್ನು ಅವರು ಲೋಕಾರ್ಪಣೆಗೊಳಿಸಲಿದ್ದಾರೆ.

ವಾಹನ ಸವಾರರ ಗಮನಕ್ಕೆ: ಸಂಚಾರ ಮಾರ್ಗ ಬದಲಾವಣೆ

ಪ್ರಧಾನಿ ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ಬೆಂಗಳೂರು-ಕನಕಪುರ ರಸ್ತೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

ಬೆಂಗಳೂರಿನಿಂದ ಕನಕಪುರಕ್ಕೆ ಹೋಗುವವರು: ಬೆಂಗಳೂರು-ಕೆಂಗೇರಿ-ಬಿಡದಿ-ರಾಮನಗರ ಮೂಲಕ ಕನಕಪುರ ತಲುಪಲು ಸೂಚಿಸಲಾಗಿದೆ.

ಕನಕಪುರದಿಂದ ಬೆಂಗಳೂರಿಗೆ ಬರುವವರು: ಕನಕಪುರ-ಹಾರೋಹಳ್ಳಿ-ಕಗ್ಗಲಿಪುರ ರಸ್ತೆ-ಬನ್ನೇರಘಟ್ಟ ಮಾರ್ಗವಾಗಿ ಬೆಂಗಳೂರು ಪ್ರವೇಶಿಸಲು ಪೊಲೀಸ್ ಇಲಾಖೆ ಮನವಿ ಮಾಡಿದೆ.