ಬಿ.ಎಸ್. ಯಡಿಯೂರಪ್ಪನವರ 50 ವರ್ಷಗಳ ಸಾರ್ವಜನಿಕ ಜೀವನದ ಕುರಿತು ಚಿತ್ರದುರ್ಗದಲ್ಲಿ ನಡೆದ 'ಅಭಿಮಾನೋತ್ಸವ'ಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂದೇಶ ಕಳುಹಿಸಿದ್ದಾರೆ. ಯಡಿಯೂರಪ್ಪನವರ ಹೋರಾಟ, ಪಕ್ಷ ಸಂಘಟನೆ, ಮತ್ತು ರೈತಪರ ಆಡಳಿತವನ್ನು ಶ್ಲಾಘಿಸಿದ್ದಾರೆ.
ಬಿಎಸ್‌ವೈ ಉತ್ಸವಕ್ಕೆ ಪ್ರಧಾನಿ ಸಂದೇಶ

ನರೇಂದ್ರ ಮೋದಿ, ಪ್ರಧಾನಿ
ಬಿ.ಎಸ್.ಯಡಿಯೂರಪ್ಪ ಅವರ ಸಾರ್ವಜನಿಕ ಜೀವನದ ಐವತ್ತು ವರ್ಷಗಳ ಸಾರ್ಥಕ ಕ್ಷಣಗಳನ್ನು ಸ್ಮರಿಸಲು ಚಿತ್ರದುರ್ಗದಲ್ಲಿ ‘ಅಭಿಮಾನೋತ್ಸವ’ ನಡೆಸುತ್ತಿರುವುದು ಹೃದಯಸ್ಪರ್ಶಿ ಸಂಗತಿ. ಈ 50 ವರ್ಷಗಳ ಅವರ ಸಾರ್ವಜನಿಕ ಬದುಕಿನ ಪ್ರಯಾಣವು ಜನರ ಕಲ್ಯಾಣಕ್ಕೆ ಅವರು ತೋರಿದ ಬದ್ಧತೆ, ಹೋರಾಟ, ತ್ಯಾಗ ಮತ್ತು ಸಮರ್ಪಣೆಯ ಕಥೆಯಾಗಿದೆ. ಇದು ಇಡೀ ಕರ್ನಾಟಕಕ್ಕೆ ಆಚರಣೆಯ ಸಂಭ್ರಮ ಮಾತ್ರವಲ್ಲ, ಭಾರತದಾದ್ಯಂತದ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರಿಗೆ ಅವರಿಂದ ಸ್ಫೂರ್ತಿ ಪಡೆಯಲು ಒದಗಿ ಬಂದ ಒಂದು ಅವಕಾಶವೂ ಆಗಿದೆ.
ಈ ‘ಅಭಿಮಾನೋತ್ಸವ’ಕ್ಕೆ ಖುದ್ದಾಗಿ ಹಾಜರಾಗಲು ನನಗೆ ಸಾಧ್ಯವಾಗದಿದ್ದರೂ, ಸಾರ್ವಜನಿಕ ಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡ ನಮ್ಮ ನಾಯಕನನ್ನು ಗೌರವಿಸಲು ಒಟ್ಟುಗೂಡಿದ ಎಲ್ಲ ನಾಯಕರ ಜೊತೆ ನನ್ನ ಶುಭ ಹಾರೈಕೆ ಇರುತ್ತದೆ.
ಪ್ರೀತಿ, ವಿನಮ್ರತೆಯ ನಾಯಕ
ಯಡಿಯೂರಪ್ಪ ಅವರ ಜೊತೆ ಹಲವು ವರ್ಷಗಳಿಂದ ನಿಕಟವಾಗಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ. ಅವರಲ್ಲಿ ಯಾವಾಗಲೂ ಪ್ರೀತಿ, ವಿನಮ್ರತೆ ಇರುತ್ತದೆ. ಕಠಿಣ ಪರಿಶ್ರಮಪಡುವ ಮನೋಭಾವ ಅವರಲ್ಲಿದೆ. ಸಾರ್ವಜನಿಕ ಬದುಕಿನ ಅವರ ಹೋರಾಟ ಮತ್ತು ಯಶಸ್ಸಿನ ಕ್ಷಣಗಳಲ್ಲಿ ನಾನು ಅವರನ್ನು ನೋಡಿದ್ದೇನೆ. ಕರ್ನಾಟಕದ ಜನರಿಗೆ ಮತ್ತು ನಮ್ಮ ಪಕ್ಷದ ಆದರ್ಶಗಳಿಗೆ ಅವರ ಸಂಪೂರ್ಣ ಬದ್ಧತೆಯನ್ನು ಪ್ರತಿಹಂತದಲ್ಲೂ ಕಂಡಿದ್ದೇನೆ. ಅವರ ರಾಜಕೀಯ ಜೀವನ, ನಮ್ಮ ಪ್ರಜಾಪ್ರಭುತ್ವದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಸಾಧಾರಣ ರೈತ ಕುಟುಂಬದಿಂದ ಬೆಳೆದು ಬೆಳೆದ ಅವರು, ರೈತರು, ಕಾರ್ಮಿಕರು, ಬಡವರ ನಡುವೆ ದಣಿವರಿಯದ ಕೆಲಸದ ಮೂಲಕ ತಮ್ಮ ಸಾರ್ವಜನಿಕ ಜೀವನವನ್ನು ಹಂತ, ಹಂತವಾಗಿ ರೂಪಿಕೊಂಡರು. ಆ ಮೂಲಕ ಜನರ ವಿಶ್ವಾಸ ಮತ್ತು ಪ್ರೀತಿಯನ್ನು ಗಳಿಸಿದರು.
ಇಂದು, ಕರ್ನಾಟಕದಲ್ಲಿ ವ್ಯಾಪಕ ಜನಪ್ರಿಯತೆಯನ್ನು ಹೊಂದಿರುವ ಪಕ್ಷವಾಗಿ ಬಿಜೆಪಿ ಬೆಳೆದಿದೆ. ಇದನ್ನು ನೋಡಿದಾಗ ನಮಗೆಲ್ಲಾ ಸಂತೋಷವಾಗುತ್ತದೆ. ಆದರೆ, ಹಿಂದಿನ ದಶಕಗಳ ಹೋರಾಟವನ್ನು ಕಂಡವರಿಗೆ ಪಕ್ಷಕ್ಕೆ ಈ ಅಡಿಪಾಯವನ್ನು ನಿರ್ಮಿಸಲು ಎಷ್ಟು ತ್ಯಾಗ ಮತ್ತು ಬೆವರು ಹರಿಸಬೇಕಾಯಿತು ಎಂಬುದು ತಿಳಿದಿದೆ. ಯಡಿಯೂರಪ್ಪ ಅವರು ದಶಕಗಳ ಕಾಲ ಪೀಳಿಗೆಯಿಂದ ಪೀಳಿಗೆಗೆ ಪಕ್ಷವನ್ನು ಬಲಪಡಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ರಾಜ್ಯದಲ್ಲಿ ಪಕ್ಷವನ್ನು ಕಟ್ಟುವ ಆರಂಭಿಕ ದಿನಗಳಲ್ಲಿ ಅವರು ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಆ ವೇಳೆ, ರಾಜ್ಯಾದ್ಯಂತ ಓಡಾಡಿ, ಪಕ್ಷ ಬೆಳೆಸಿದರು. ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಪರ್ಕಿಸಿ, ಅವರಲ್ಲಿ ವಿಶ್ವಾಸ ತುಂಬಿದರು. ತಳಮಟ್ಟದಲ್ಲಿ ಆಳವಾಗಿ ಸಂಪರ್ಕ ಸಾಧಿಸುವ ಅವರ ಆ ಸಂಘಟನಾ ಸಾಮರ್ಥ್ಯ, ಅವರಲ್ಲಿ ನಾಯಕತ್ವವನ್ನು ಬೆಳೆಸಿತು. ಜನರ ಪಕ್ಷವಾಗಿ ಬಿಜೆಪಿಯನ್ನು ರೂಪುಗೊಳಿಸಿತು.
ಕರ್ನಾಟಕದ ಮೊದಲ ಬಿಜೆಪಿ ಸಿಎಂ
ಬಿಜೆಪಿಯನ್ನು ಕೆಲವು ಪ್ರದೇಶಗಳ ಸೀಮಿತ ಪಕ್ಷ ಎಂದು ಅನ್ಯಾಯವಾಗಿ ಹಣೆಪಟ್ಟಿ ಕಟ್ಟಲಾಗುತ್ತಿದ್ದ ಸಮಯದಲ್ಲಿ ಯಡಿಯೂರಪ್ಪ ಅವರು ಜನರಲ್ಲಿ ಆ ನಂಬಿಕೆಯನ್ನು ಹೋಗಲಾಡಿಸಲು, ಬಿಜೆಪಿ ಪ್ರತಿಯೊಬ್ಬ ಭಾರತೀಯನ ಪಕ್ಷ ಎಂದು ಪ್ರದರ್ಶಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅದರ ಫಲವಾಗಿ ರಾಜ್ಯದಲ್ಲಿ ಮೊದಲ ಬಿಜೆಪಿ ಮುಖ್ಯಮಂತ್ರಿಯಾದರು. ಮುಖ್ಯಮಂತ್ರಿಯಾಗಿ ಅವರು ಆಡಳಿತಾತ್ಮಕ ಸಾಮರ್ಥ್ಯದೊಂದಿಗೆ ಸಂಘಟನಾ ಬದ್ಧತೆಯನ್ನು ತೋರಿದರು. ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವ ಮೂಲಕ ರೈತರ ಅಭ್ಯುದಯಕ್ಕೆ ಕಾರಣರಾದರು. ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ರೈತ ಕಲ್ಯಾಣ ಕ್ಷೇತ್ರಗಳಲ್ಲಿನ ಅವರ ಸಾಧನೆಗಳು ಕರ್ನಾಟಕ ರಾಜ್ಯದ ಪ್ರಗತಿಗೆ ಕಾರಣವಾದವು. ಆ ಮೂಲಕ ರಾಜ್ಯದ ಪ್ರಮುಖ ರೈತ ನಾಯಕರಲ್ಲಿ ಒಬ್ಬರೆಂದು ಗುರುತಿಸಿಕೊಂಡರು.
ಜನಸಾಮಾನ್ಯರ ಜತೆಗೇ ಉಳಿದವರು
ಯಡಿಯೂರಪ್ಪ ಅವರ ಅಭಿವೃದ್ಧಿ ಯೋಜನೆಗಳು ಎಲ್ಲಾ ವರ್ಗದ ಜನರನ್ನು ತಲುಪಿದವು. ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ವಸತಿ ಯೋಜನೆಗಳ ಮೂಲಕ ದುರ್ಬಲ ಸಮುದಾಯಗಳನ್ನು ಸಬಲೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಮಹಿಳೆಯರ ಕಲ್ಯಾಣಕ್ಕಾಗಿ ಅನೇಕ ಜನಪರ ಯೋಜನೆಗಳನ್ನು ಅವರು ಜಾರಿಗೊಳಿಸಿದರು. ಕರ್ನಾಟಕದ ಜನ ಯಡಿಯೂರಪ್ಪ ಅವರನ್ನು ಅವರ ಸರಳತೆಗಾಗಿ ಮೆಚ್ಚಿದ್ದಾರೆ. ಉನ್ನತ ಹುದ್ದೆಗಳನ್ನು ಅಲಂಕರಿಸಿದ ನಂತರವೂ ಅವರು ಸಾಮಾನ್ಯ ಕಾರ್ಯಕರ್ತರು ಹಾಗೂ ಜನಸಾಮಾನ್ಯರಿಂದ ಎಂದಿಗೂ ದೂರವಾಗಲಿಲ್ಲ.
ಕರ್ನಾಟಕದ ಸಂಸ್ಕೃತಿ, ಸಂಪ್ರದಾಯ ಮತ್ತು ಜನರೊಂದಿಗಿನ ಅವರ ಭಾವನಾತ್ಮಕ ಬಾಂಧವ್ಯವನ್ನು ನಾನು ವೈಯಕ್ತಿಕವಾಗಿ ನೋಡಿದ್ದೇನೆ. ರಾಜ್ಯದ ಮೇಲಿನ ಅವರ ಪ್ರೀತಿ ಯಾವಾಗಲೂ ರಾಜಕೀಯವನ್ನು ಮೀರಿ ನಿಂತಿದೆ. ಅವರು ಕನ್ನಡಿಗರ ಘನತೆ, ಗೌರವಗಳನ್ನು ಎತ್ತಿಹಿಡಿಯುವಲ್ಲಿ ಸದಾ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಯಡಿಯೂರಪ್ಪ ಅವರ ಐವತ್ತು ವರ್ಷಗಳ ಸಾರ್ವಜನಿಕ ಬದುಕಿನ ಪ್ರಯಾಣ ಪಕ್ಷದ ಪ್ರತಿಯೊಬ್ಬ ಯುವ ಕಾರ್ಯಕರ್ತನಿಗೂ ಸ್ಫೂರ್ತಿದಾಯಕವಾಗಿದೆ. ನಾಯಕತ್ವದ ಬದುಕು ರಾತ್ರೋರಾತ್ರಿ ನಿರ್ಮಾಣವಾಗುವುದಿಲ್ಲ, ಬದಲಾಗಿ ಹಲವು ವರ್ಷಗಳ ತ್ಯಾಗ, ತಾಳ್ಮೆ ಮತ್ತು ನಿರಂತರ ಕಠಿಣ ಪರಿಶ್ರಮದ ಮೂಲಕ ನಿರ್ಮಾಣವಾಗುತ್ತದೆ. ಅಸಂಖ್ಯಾತ ಅಭಿಮಾನಿಗಳು, ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಕಾರ್ಯಕರ್ತರು ಅವರನ್ನು ಗೌರವಿಸಲು ಒಟ್ಟುಗೂಡುತ್ತಿರುವ ಇಂದಿನ ಈ ಸುಸಂದರ್ಭದಲ್ಲಿ, ಸಾರ್ವಜನಿಕ ಜೀವನಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಲು, ಹೃತ್ಪೂರ್ವಕ ಮೆಚ್ಚುಗೆಯನ್ನು ವ್ಯಕ್ತಪಡಿಸಲು ನಾನು ಅವರ ಜೊತೆ ನಿಲ್ಲುತ್ತೇನೆ.
ಸಾರ್ವಜನಿಕ ಜೀವನದಲ್ಲಿ ಐವತ್ತು ವರ್ಷಗಳ ಸಾಧನೆ ಒಂದು ಗಮನಾರ್ಹ ಮೈಲಿಗಲ್ಲು. ಈ ಸಂದರ್ಭದಲ್ಲಿ ಅವರಿಗೆ ನನ್ನ ಅಭಿನಂದನೆಗಳು ಮತ್ತು ಶುಭಾಶಯಗಳು. ಯಡಿಯೂರಪ್ಪ ಅವರ ದೀರ್ಘಾಯುಷ್ಯ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಮುಂಬರುವ ವರ್ಷಗಳಲ್ಲಿ ಕಾರ್ಯಕರ್ತರು ಮತ್ತು ಸಾರ್ವಜನಿಕ ಪ್ರತಿನಿಧಿಗಳ ಪೀಳಿಗೆಗೆ ತಮ್ಮ ಮಾರ್ಗದರ್ಶನ ನೀಡುವುದನ್ನು ಅವರು ಮುಂದುವರಿಸಲಿ.


