ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ದಿ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರವು ಶ್ರೀ ಶ್ರೀ ರವಿಶಂಕರ ಗುರೂಜಿಯವರಿಂದ ಸ್ಥಾಪಿತವಾದ ಒಂದು ಪ್ರಶಾಂತ ತಾಣವಾಗಿದೆ. ಯೋಗ, ಧ್ಯಾನ, ಸತ್ಸಂಗಗಳ ಜೊತೆಗೆ, ಅಪಾರ ಜೀವವೈವಿಧ್ಯದಿಂದ ಕೂಡಿರುವ ಈ ಆಶ್ರಮ ಆತ್ಮಶೋಧನೆಗೆ, ನೆಮ್ಮದಿಗೆ ಪ್ರಸಿದ್ಧವಾಗಿದೆ.
ಬೆಂಗಳೂರಿನಿಂದ ಕನಕಪುರ ರಸ್ತೆಯಲ್ಲಿ ಸಾಗಿದರೆ ನಿಮಗೊಂದು ಅಚ್ಚರಿ ಕಾದಿರುತ್ತದೆ. ನಗರದ ಜಂಜಾಟದಿಂದ ಬೇಸತ್ತ ಜನರಿಗೆ ಇಲ್ಲೊಂದು ನೆಮ್ಮದಿ ನೀಡುವ, ನಿಮ್ಮನ್ನು ಪುನಶ್ಚೇತನಗೊಳಿಸುವ ಕೇಂದ್ರವಿದೆ. ಅದೇ ದಿ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರ.

ಗುರುದೇವರು ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಆಸಕ್ತಿಯಿಂದ ರೂಪುಗೊಂಡು ಈ ಕೇಂದ್ರ ಒಂದು ಕಾಲದಲ್ಲಿ ಬಂಡೆಗಳಿಂದ ತುಂಬಿದ್ದ ಬಂಜರು ಭೂಮಿ ಆಗಿತ್ತು. ಈಗ ನಳನಳಿಸುತ್ತಿರುವ ಪರಿಸರ ವ್ಯವಸ್ಥೆಯಾಗಿ ರೂಪುಗೊಂಡಿದೆ. 108 ಅಡಿ ಎತ್ತರದ, 81 ಸ್ತಂಭಗಳ, ಐದು ಮಹಡಿಗಳಲ್ಲಿ 1008 ಕಮಲ ಅಲಂಕಾರಗಳನ್ನು ಹೊಂದಿದ ಪ್ರಸಿದ್ಧ ವಿಶಾಲಾಕ್ಷಿ ಮಂಟಪ ಇರುವ ಸ್ಥಳವಾಗಿದೆ.
ಸಾವಿರಾರು ಜನರು ಇಲ್ಲಿ ಆತ್ಮೋನ್ನತಿಗಾಗಿ ಧ್ಯಾನ, ಯೋಗ ಮತ್ತು ಸುದರ್ಶನ ಕ್ರಿಯೆಗಳಲ್ಲಿ ನಿರತರಾಗಲು ಜಗತ್ತಿನ ಮೂಲೆ ಮೂಲೆಗಳಿಂದ ವರ್ಷದ ಎಲ್ಲಾ ದಿನಗಳಲ್ಲಿಯೂ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಪ್ರತಿದಿನ ನಡೆಯುವ ಸತ್ಸಂಗವು ಆಶ್ರಮಜೀವನದ ದಿನಚರಿಯ ಪ್ರಮುಖ ಕಾರ್ಯಕ್ರಮವಾಗಿದೆ. ಇದು ಜನರು ಒಟ್ಟಿಗೆ ಕಲೆತು ಗಾಯನ, ಧ್ಯಾನ ಮತ್ತು ಜ್ಞಾನಗಳ ಮೂಲಕ ಉಲ್ಲಾಸಮಯ, ಪ್ರಶಾಂತ ಮತ್ತು ಅಂತರಂಗದ ಪಯಣದಲ್ಲಿ ನಿರತರಾಗುತ್ತಾರೆ.
ರಾಧಾಕುಂಜ, ಕೆರೆಯ ತೀರದ ಉದ್ಯಾನವನ, ಧ್ಯಾನಕ್ಕೆ ಪೂರಕವಾದ ನಡೆಹಾದಿಗಳು ಆಶ್ರಮದ ವಿಶೇಷಗಳಾಗಿವೆ.
ಭಾರತೀಯ ದೇವಾಲಯಗಳ ಸಂಪ್ರದಾಯವನ್ನು ಮತ್ತು ವೇದಪಠಣದ ಕ್ರಮವನ್ನು ಉಳಿಸುವ ದಿಸೆಯಲ್ಲಿ ವೇದ ಆಗಮ ಶಾಲೆ ಆಶ್ರಮವು ಈ ಪರಿಸರದಲ್ಲಿದೆ. ಗುರುಕುಲದಲ್ಲಿ ತರಬೇತಿ ಪಡೆದ 510ಕ್ಕೂ ಹೆಚ್ಚು ಅರ್ಚಕರು ಈಗ ಅಮೆರಿಕ, ಕೆನಡಾ, ಮಾರಿಷಸ್ ಸೇರಿದಂತೆ ವಿಶ್ವದಾದ್ಯಂತ ಇನ್ನೂ ಅನೇಕ ದೇಶಗಳ ದೇವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವೇದಗಳು ಮತ್ತು ಆಗಮಗಳ ಜೊತೆಗೆ, ವಿದ್ಯಾರ್ಥಿಗಳಿಗೆ ಶಿಲ್ಪಶಾಸ್ತ್ರ, ಯೋಗ, ಸಂಗೀತ, ತೇವಾರಂ, ಭಾರತೀಯ ಭಾಷೆಗಳು ಮತ್ತು ಕಂಪ್ಯೂಟರ್ ಶಿಕ್ಷಣದಲ್ಲಿಯೂ ತರಬೇತಿ ನೀಡಲಾಗುತ್ತದೆ. ಇಲ್ಲಿನ ಅನೇಕ ಹಳೆ ವಿದ್ಯಾರ್ಥಿಗಳು ಭಾರತೀಯ ಜ್ಞಾನ ಪರಂಪರೆ ವ್ಯವಸ್ಥೆಗಳ ಕುರಿತು ಉನ್ನತ ಮಟ್ಟದ ಸಂಶೋಧನೆ ನಡೆಸಿ ಪಿಎಚ್‌ಡಿ ಪದವಿಗಳನ್ನು ಪಡೆದಿದ್ದಾರೆ.
1008 ಕಿರು ಶಿವಲಿಂಗಗಳನ್ನು ಕೆತ್ತಲಾಗಿರುವ ಸಹಸ್ರಲಿಂಗವಿರುವ ಸಾಂಬ ಪರಮೇಶ್ವರ ದೇವಾಲಯವೂ ಇಲ್ಲಿದೆ. ಸುಮಾರು ಒಂದು ಲಕ್ಷ ಜನರು ಕುಳಿತು ಧ್ಯಾನ ಮಾಡುವಷ್ಟು ವಿಶಾಲವಾದ ಬಯಲು ರಂಗಮಂದಿರ ‘ಗುರು ಪಾದುಕಾ ವನ’ ಇಲ್ಲಿದೆ.
ಸುಮಾರು 600ಕ್ಕೂ ಹೆಚ್ಚು ಸಸ್ಯತಳಿಗಳು, 137ಕ್ಕೂ ಹೆಚ್ಚು ಪಕ್ಷಿಜಾತಿಗಳು, 102 ಜಾತಿಯ ಚಿಟ್ಟೆಗಳು, ಔಷಧಿ ಸಸ್ಯಗಳು, ಸಮೃದ್ಧವಾಗಿರುವ ವನ್ಯಜೀವಿಗಳು ಇವೆಲ್ಲವನ್ನೂ ಹೊಂದಿರುವ ಜೀವವೈವಿಧ್ಯ ಪ್ರದೇಶವಾಗಿದೆ. 27 ನಕ್ಷತ್ರಗಳಿಗೆ ಸಂಯೋಜಿತವಾಗಿರುವ 27 ವೃಕ್ಷಗಳನ್ನು ಒಳಗೊಂಡ ಪವಿತ್ರ ನಕ್ಷತ್ರವನ ಇಲ್ಲಿದೆ. ಪ್ರತಿದಿನ 30,000 ಜನರಿಗೆ ಮತ್ತು ವಿಶೇಷ ದಿನಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಸಾತ್ವಿಕ ಆಹಾರವನ್ನು ತಯಾರಿಸುವ ಬೃಹತ್ ಅಡುಗೆ ಮನೆ ‘ಅನ್ನಪೂರ್ಣ’ ಇಲ್ಲಿನ ಇಲ್ಲಿನ ಇನ್ನೊಂದು ವಿಶೇಷತೆ ಆಗಿದೆ.
ಆಶ್ರಮದಲ್ಲಿ ಜೈವಿಕ ಇಂಧನ ಸ್ಥಾವರಗಳು, ಕಾಂಪೋಸ್ಟಿಂಗ್, ಸೌರಶಕ್ತಿ ಮತ್ತು ಸಹಜಕೃಷಿಯ ಮೂಲಕ ಸುಸ್ಥಿರ ಬದುಕಿನ ಮೇಲೆ ಒತ್ತು ನೀಡಲಾಗುತ್ತಿದೆ. ಕಾಸರಗೋಡು, ಒಂಗೋಲ್, ಹಳ್ಳಿಕಾರ್, ಅಲಂಬಾಡಿ ಸೇರಿದಂತೆ, 19 ತಳಿಗಳ 1600 ಗೋವುಗಳನ್ನು ಹೊಂದಿರುವ ವಿಶಾಲವಾದ ಗೋಶಾಲೆಯು ಇಲ್ಲಿದೆ. ನೆಮ್ಮದಿಯಿಂದ ಪ್ರಕೃತಿ ನಡಿಗೆ, ಸುಂದರವಾದ ಸೂರ್ಯಾಸ್ತ, ಹಕ್ಕಿಗಳ ಕಲರವ, ಚಿಟ್ಟೆಗಳ ಆವಾಸ ಸ್ಥಾನ, ಮತ್ತು ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ನಿರತರಾಗುವ ಮುಕ್ತ ಅವಕಾಶ ಆಶ್ರಮದಲ್ಲಿ ದೊರೆಯುತ್ತದೆ.


